• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ

ಸಮಾಜದಲ್ಲಿ ಸಾಂಪ್ರದಾಯಿಕ ಪ್ರಾಚೀನ ಮನಸ್ಥಿತಿ ನಿರ್ಮೂಲವಾಗದೆ ಹೆಣ್ಣಿಗೆ ರಕ್ಷಣೆ ಸಿಗದು

ಪ್ರತಿಧ್ವನಿ by ಪ್ರತಿಧ್ವನಿ
September 2, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ
Share on WhatsAppShare on FacebookShare on Telegram

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..

ADVERTISEMENT

ಕಠಿಣ ಕಾನೂನುಗಳು ಅಪರಾಧಗಳ ತಡೆಗೆ ಕಾರಣವಾಗುತ್ತವೆಯೇ ? ಬಹುಶಃ ವಿಶ್ವದ ಕೆಲವೇ ದೇಶಗಳಲ್ಲಿ ಇದಕ್ಕೆ ಹೌದು ಎಂಬ ಉತ್ತರ ಬರಬಹುದು. ಮಾನವ ಹಕ್ಕುಗಳ ದೃಷ್ಟಿಯಿಂದ ನೋಡಿದಾಗ, ಮರಣದಂಡನೆಯಂತಹ ಕಠೋರ ಶಿಕ್ಷೆಯನ್ನು ಸುಲಭವಾಗಿ ಅನುಮೋದಿಸಲಾಗುವುದಿಲ್ಲ. ಪ್ರಭುತ್ವಕ್ಕೆ (State) ಜೀವ ತೆಗೆಯುವ ಹಕ್ಕು ಇಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯದ ಪರಿಣಾಮವಾಗಿ ನೂರಾರು ದೇಶಗಳಲ್ಲಿ ಮರಣದಂಡನೆಯ ಶಿಕ್ಷೆ (Capital Punishment) ನಿಷೇಧಿಸಲಾಗಿದೆ. ಭಾರತದಲ್ಲೂ ಮಾನವ ಹಕ್ಕು ಸಂಘಟನೆಗಳು ಈ ಸಂಹಿತೆಯನ್ನು ಜಾರಿಗೊಳಿಸಲು ಒತ್ತಾಯಿಸುತ್ತಿವೆ. ಇದು ಜೀವಪರ ದೃಷ್ಟಿಯಿಂದ ಅಪ್ಯಾಯಮಾನವಾಗುವುದು ಸಹಜ. ಒಬ್ಬ ಅಪರಾಧಿಯ, ಹಲವು ಅಪರಾಧಿಗಳ ಜೀವ ಹರಣ ಸಮಾಜದಲ್ಲಿ ಅಪರಾಧಗಳನ್ನು ಕಡಿಮೆ ಮಾಡುವುದೇ ? ಇದು ಸಂಶೋಧನಾರ್ಹ ಪ್ರಶ್ನೆ.

Actor Kishore On SIR : ಇದು BJP ಶಾಶ್ವತವಾಗಿ ಅಧಿಕಾರದಲ್ಲಿರಲು ನಡೆಸುತ್ತಿರುವ ದೊಡ್ಡ ಸಂಚು..! | #pratidhvani

ಆದರೂ ಭಾರತೀಯ ಸಮಾಜದಲ್ಲಿ ನಿತ್ಯ ಸಂಭವಿಸುತ್ತಿರುವ ಘೋರ ಅಮಾನುಷ ಅಪರಾಧಗಳನ್ನು ನೋಡಿದಾಗ ʼ ಉಗ್ರ ಶಿಕ್ಷೆ ʼ ಅಪೇಕ್ಷಣೀಯ ಎಂಬ ಭಾವನೆ ಕೆಲವರಲ್ಲಾದರೂ ಮೂಡಬಹುದು. ನಿರ್ದಿಷ್ಟವಾಗಿ ನೋಡಿದಾಗ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಎಳೆಯ ವಯಸ್ಸಿನಿಂದ ವೃದ್ಧಾಪ್ಯದವರೆಗೂ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ-ಹತ್ಯೆಗಳು ಮತ್ತು ಶೋಷಿತ ದಲಿತ ಸಮುದಾಯ ಎದುರಿಸುತ್ತಿರುವ ಅಸ್ಪೃಶ್ಯತೆಯ ಅಪಮಾನ, ಇವೆಲ್ಲವೂ ಸಹ ಯಾವುದೇ ನಾಗರಿಕತೆಯನ್ನು ತಲೆತಗ್ಗಿಸುವಂತೆ ಮಾಡುವ ಬೆಳವಣಿಗೆಗಳು. ಲಜ್ಜೆ-ಸ್ವಾಭಿಮಾನ ಇರುವ ಯಾವುದೇ ಸಮಾಜವಾದರೂ ಈ ದೌರ್ಜನ್ಯಗಳನ್ನು ಮೌನವಾಗಿ ಸಹಿಸಿಕೊಳ್ಳಲಾಗುವುದಿಲ್ಲ. ಆದರೆ ನವ ಭಾರತದಲ್ಲಿ ಇದನ್ನು ಸಹಿಸಿಕೊಳ್ಳುವ ಸಾಮಾಜಿಕ ವರ್ಗಗಳು (Social Classes) ಎಲ್ಲ ಸ್ತರಗಳಲ್ಲೂ ಕಾಣುತ್ತವೆ.

ಮತ್ತೆ ಮತ್ತೆ ಘಟಿಸುವ ದೌರ್ಜನ್ಯಗಳು

ಮತ್ತೆ ಮತ್ತೆ “ ನಾವೆತ್ತ ಸಾಗುತ್ತಿದ್ದೇವೆ, ನಮ್ಮ ಸಮಾಜ ಎತ್ತ ಸಾಗುತ್ತಿದೆ ,,,,,” ಎಂಬ ಜಟಿಲ ಪ್ರಶ್ನೆಗಳಿಗೆ ನಾವು ಮುಖಾಮುಖಿಯಾಗುತ್ತಲೇ ಇದ್ದೇವೆ. ವಿಕಾಸದ ಹಂತದಲ್ಲಿರುವ ದೇಶವೊಂದರಲ್ಲಿ ಈ ಪ್ರಶ್ನೆ ಮರುಕಳಿಸುತ್ತಲೇ ಇರುವುದು ಸಮಾಜದೊಳಗೆ ಆಳವಾಗಿರುವ ಬಹು ಆಯಾಮದ ವ್ಯಾಧಿಯನ್ನು ( Multi dimensional Malaise) ಎತ್ತಿ ತೋರಿಸುತ್ತದೆ. ಸೌಜನ್ಯ, ನಿರ್ಭಯ, ಧಾನಮ್ಮ ಈ ಹೆಸರುಗಳು ಸಮಕಾಲೀನ ಚರಿತ್ರೆಯ ಕರಾಳ ಕುರುಹುಗಳಾಗಿ ಉಳಿಯಬೇಕಿತ್ತು ಆದರೆ ಪುನಃಪುನಃ ಈ ನಿರ್ಭಾಗ್ಯ ಹೆಣ್ಣುಮಕ್ಕಳು ನಮ್ಮ ಸಾರ್ವಜನಿಕ ಸಂಕಥನದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಭಾರತೀಯ ಸಮಾಜದ ಪುರುಷ ವರ್ಗ ಟೈಮ್‌ ಟೇಬಲ್‌ ಹಾಕಿದ ಹಾಗೆ ನಿರ್ಭಯಗಳನ್ನು ಆಗಿಂದಾಗ್ಗೆ ನಮ್ಮ ನಡುವೆ ತಂದು ನಿಲ್ಲಿಸುತ್ತಲೇ ಇದೆ.

What Is Malaise and How Does It Affect Your Body?

ಈಗ ಮತ್ತೊಮ್ಮೆ ರಾಜಧಾನಿ ದೆಹಲಿ ಸುದ್ದಿಯಲ್ಲಿದೆ. ಜಂತರ್‌ ಮಂತರ್‌, ಪೆಲೆಟ್‌ಗನ್‌, ವಿದ್ಯಾರ್ಥಿಗಳ ಕೂಗು ಇವುಗಳ ನಡುವೆ ಆ ಜೆನ್‌ಝಿ ಅಥವಾ ಯುವ ಜನಸಮೂಹದಲ್ಲಿ ಕಂಡಂತಹ ಸೌಜನ್ಯ, ಸಂಯಮ, ಹೆಣ್ಣು ಮಕ್ಕಳ ಬಗ್ಗೆ ಗೌರವ ಇವೆಲ್ಲವೂ ಆ ಕ್ಷಣಕ್ಕೆ ಮಾತ್ರವೇನೋ ಎನ್ನುವಂತೆ, ರಾಜಧಾನಿಯಲ್ಲಿ ಮತ್ತೋರ್ವ ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ. ಏನೇ ಆಗಲಿ ನಿರ್ಭಯ ಪ್ರಕರಣವನ್ನು ಮರೆಯಲು ಬಿಡುವುದಿಲ್ಲ ಎಂದು ಛಲ ಹಿಡಿದ ರೀತಿಯಲ್ಲಿ, ಚಲಿಸುವ ಬಸ್‌ ಒಂದರಲ್ಲಿ 16 ವರ್ಷದ ಬಾಲಕಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿರುವುದು ವರದಿಯಾಗಿದೆ. ಆಗಸ್ಟ್‌ 4ರಂದು ರಾತ್ರಿ 11.30ರ ವೇಳೆಯಲ್ಲಿ ನಡೆದಿರುವ ಈ ಘಟನೆಯಲ್ಲಿ ಸ್ಲೀಪರ್‌ ಬಸ್‌ನ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಲಾಗಿದೆ.

12 ವರ್ಷಗಳ ದಾಖಲೆ ಮುರಿದ ದೆಹಲಿ ಹೋರಾಟ!...ಸಂಸತ್ ಬಾಗಿಲಿಗೆ ಪ್ರತಿಭಟನಾಕಾರರು ಬಂದಿದ್ದು  ಹೇಗೆ ಗೊತ್ತಾ..? | Delhi Protest - Vijayavani

ಉತ್ತರಪ್ರದೇಶದ ಮಣಿಪುರಿ ಜಿಲ್ಲೆಯ, 11ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿ ಸೆಕ್ಟರ್‌ 63ರಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೊರಟಿದ್ದಾಗ ಆಕಸ್ಮಿಕವಾಗಿ ಗ್ರೇಟರ್‌ ನೊಯ್ಡಾದ ಪಾರಿ ಚೌಕ್‌ನಲ್ಲಿ ಇಳಿದಿದ್ದಾಳೆ. ಈ ಸಮಯದಲ್ಲಿ ಬಂದ ಸ್ಲೀಪರ್‌ ಬಸ್‌ ಒಂದನ್ನು ನಿಲ್ಲಿಸಿ , ಬಾಲಕಿಯನ್ನು ಸೆಕ್ಟರ್‌ 63ಕ್ಕೆ ತಲುಪಿಸುವುದಾಗಿ ಭರವಸೆ ನೀಡಿ ಹತ್ತಿಸಿಕೊಂಡಿದ್ದಾರೆ. ಆದರೆ ಆಕೆ ಇಳಿಯಬೇಕಿದ್ದ ಜಾಗವನ್ನೂ ದಾಟಿ ಹೋಗಿರುವ ಚಾಲಕ ಕಾಶ್ಮೇರಿ ಗೇಟ್‌ ಬಳಿಯ ರಿಂಗ್‌ ರೋಡ್‌ ತಲುಪಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಅಲ್ಲಿಯೇ ಇಳಿಸಿ ಪರಾರಿಯಾಗಿದ್ದಾರೆ. ಸಹಜವಾಗಿ ಈ ಘಟನೆ ದೆಹಲಿಯಲ್ಲಿ ರಾಜಕೀಯ ವಾಗ್ವಾದಗಳಿಗೆ ಕಾರಣವಾಗಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ.

ನಿಲ್ಲದ ದೌರ್ಜನ್ಯ ಪ್ರವಾಹ

ಆದರೆ ಅತ್ಯಾಚಾರ ಪ್ರಕರಣಗಳು ಆಡಳಿತದಲ್ಲಿರುವ ಪಕ್ಷಗಳ ಚಹರೆಯನ್ನು ಅವಲಂಬಿಸುವುದಿಲ್ಲ ಎಂದು ನಮ್ಮ ಸಮಾಜ ಮತ್ತೆ ಮತ್ತೆ ನಿರೂಪಿಸುತ್ತಲೇ ಬಂದಿದೆ. 2005 ರಿಂದ 2026ರವರೆಗಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಗಳನ್ನೇ ಗಮನಿಸಿದರೆ , ರಾಜಧಾನಿಯಲ್ಲಿ 2012ರ ನಿರ್ಭಯ ಪ್ರಕರಣಕ್ಕೂ ಮುನ್ನ ವರ್ಷಕ್ಕೆ ಸರಾಸರಿ 400-600 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದುದು, ತದನಂತರದಲ್ಲಿ ಇದು 2100 ಪ್ರಕರಣಗಳಿಗೆ ತಲುಪಿದೆ. 2024ರಲ್ಲಿ ಕೊಂಚ ಇಳಿಕೆ ಕಂಡಿದ್ದು 1,058 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ 20 ವರ್ಷಗಳಲ್ಲಿ NCRB ಮತ್ತು ಪೊಲೀಸ್‌ ದಾಖಲೆಗಳ ಪ್ರಕಾರ 24,714 ಅತ್ಯಾಚಾರ ಪ್ರಕರಣಗಳು ಸಂಭವಿಸಿವೆ.

ಇದನ್ನೂ ಓದಿ : “MR” ಜಾಕ್ ಟೀಸರ್‌ ಬಂತು

ಕುತೂಹಲಕಾರಿ ಅಂಶವೆಂದರೆ 2012ರ ನಿರ್ಭಯ ಪ್ರಕರಣದ ನಂತರದಲ್ಲಿ ಕಾನೂನು ಸುಧಾರಣೆಗಳು ಹಾಗೂ ಕಡ್ಡಾಯ ಎಫ್‌ಐಆರ್‌ ದಾಖಲಿಸುವ ನಿಯಮಗಳು ಜಾರಿಯಾದ ಮೇಲೆ, ದಾಖಲಿತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವುದು ಕಂಡುಬರುತ್ತದೆ. ಅಂದರೆ ಈ ಕಾನೂನು ಜಾರಿಯಾಗುವುದಕ್ಕೂ ಮುನ್ನ ಅತ್ಯಾಚಾರಗಳ ಪ್ರಮಾಣ ಕಡಿಮೆ ಇತ್ತು ಎಂದರ್ಥವಲ್ಲ, ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರಲಿಲ್ಲ. ಈ ಅವಧಿಯಲ್ಲಿ 2005 ರಿಂದ 2013ರವರೆಗೆ ಕಾಂಗ್ರೆಸ್‌, ತದನಂತರ 2014 ರಿಂದ 2025ರವರೆಗೆ (ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯನ್ನು ಬಿಟ್ಟು) ಆಮ್‌ ಆದ್ಮಿ ಪಕ್ಷ ಮತ್ತು 2025 ರಿಂದ ಈವರೆಗೆ ಬಿಜೆಪಿ ದೆಹಲಿಯ ಆಡಳಿತ ನಿರ್ವಹಿಸಿವೆ. ಹಾಗಾಗಿ ರಾಜಕೀಯ ಕೆಸರೆರಚಾಟಗಳು ಅರ್ಥಹೀನ ಎನಿಸುತ್ತವೆ.

ಉತ್ತರದಿಂದ ದಕ್ಷಿಣದವರೆಗೂ

ಈ ಘಟನೆ ಅಧಿಕೃತವಾಗಿ ವರದಿಯಾಗುವ ಹೊತ್ತಿನಲ್ಲೇ ಹೈದರಾಬಾದ್‌ ಸಮೀಪದ ತುಕ್ಕುಗುಡಾ ಎಂಬಲ್ಲಿ 21 ವರ್ಷದ ನರ್ಸ್‌ ಒಬ್ಬರ ಮೇಲೆ 34 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ವರದಿಯಾಗಿದೆ. ಆಕೆ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಗೆ ಸಮೀಪದಲ್ಲೇ ವಾಹನ ದುರಸ್ತಿನ ಗ್ಯಾರೇಜ್‌ ನಡೆಸುತ್ತಿದ್ದ ಬಿಹಾರದ ವ್ಯಕ್ತಿ ನಡು ರಾತ್ರಿ 12.30ರ ವೇಳೆಗೆ ಕಿಟಕಿಯಿಂದ ಆಸ್ಪತ್ರೆಯ ಒಳಗೆ ಪ್ರವೇಶಿಸಿ, ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ಜಾರಿಯಲ್ಲಿದೆ. ಇಂತಹ ಘಟನೆಗಳು ಮಾಮೂಲು ಎನ್ನುವಂತಹ ಪರಿಸ್ಥಿತಿ ನವ ಭಾರತದಲ್ಲಿ ಉದ್ಭವಿಸಿದೆ. ಹೆಣ್ಣು ಮಕ್ಕಳ ರಕ್ಷಣೆ ಎನ್ನುವುದು ಕೇವಲ ಘೋಷಣೆಯಾಗಿರುವುದು ವಾಸ್ತವ.

തെലങ്കാനയിൽ നഴ്സ് കൊല്ലപ്പെട്ടു; ബിഹാർ സ്വദേശി പിടിയിൽ: യുവതി  ബലാത്സംഗത്തിനിരയായെന്ന് ബിജെപി നേതാവ് – Telangana | Nurse Murder | Rape |  Arrest | Bihar | Manorama ...

ಆಧುನಿಕ ಭಾರತದಲ್ಲಿ ಹೆಣ್ಣು ಏಕೆ ಈ ರೀತಿಯಾಗಿ ಶೋಷಣೆ, ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ ? ಈ ಪ್ರಶ್ನೆಗೆ ಯಾರು ಉತ್ತರಿಸುವುದು ? ಸರ್ಕಾರಗಳು, ವಿರೋಧ ಪಕ್ಷಗಳು ತಮ್ಮ ಸ್ವ ಹಿತಾಸಕ್ತಿಯ ಚೌಕಟ್ಟಿನಲ್ಲೇ ಈ ಅನ್ಯಾಯಗಳನ್ನೂ ನೋಡುತ್ತವೆ. ಅಂಕಿ ಸಂಖ್ಯೆಗಳು ಸಂತ್ರಸ್ತ ಮಹಿಳೆಯರ ಪ್ರಮಾಣವನ್ನು ಸೂಚಿಸುತ್ತವೆ ಆದರೆ ಸಂತ್ರಸ್ತ ಹೆಣ್ಣು ಮಕ್ಕಳ, ಅವರ ಪೋಷಕರ, ಕುಟುಂಬದವರ ನೋವು ಸಂಕಟಗಳನ್ನು ಹೊರಹಾಕುವುದಿಲ್ಲ. ಮುಖ್ಯವಾಹಿನಿ ಮಾಧ್ಯಮಗಳಿಗೆ ಇದು ಒಂದು ದಿನದ ಹೆಡ್‌ಲೈನ್‌ ಮತ್ತು ಪ್ಯಾನೆಲ್‌ ಚರ್ಚೆಗಳಲ್ಲಿ ಮುಕ್ತಾಯವಾಗುವ ಅಧ್ಯಾಯಗಳಾಗಿ ಕಾಣುತ್ತವೆ. ದೆಹಲಿಯಲ್ಲಿ ನಡೆದಿರುವ ಸಾವಿರಾರು ಅತ್ಯಾಚಾರ ಪ್ರಕರಣಗಳ ಪೈಕಿ ಅತಿ ಕಡಿಮೆ ಘಟನೆಗಳು ದಾಖಲಾಗಿರುವುದು 2019ರ ಕೋವಿದ್‌ ಲಾಕ್‌ಡೌನ್‌ ಸಮಯದಲ್ಲಿ. ಜನರ ಓಡಾಟವೇ ಇಲ್ಲದಿದ್ದ ಈ ಸಮಯದಲ್ಲೂ 967 ಅತ್ಯಾಚಾರಗಳು ನಡೆದಿವೆ. ಇದಕ್ಕೆ ಏನನ್ನೋಣ ?

ಸಾಂಪ್ರದಾಯಿಕ ಪರಿಸರದಲ್ಲಿ ಹೆಣ್ಣು

ಭಾರತದ ಸಾಂಪ್ರದಾಯಿಕ ಸಮಾಜವನ್ನು ಅತಿ ಹೆಚ್ಚು ಪ್ರಭಾವಿಸುವುದು ಧಾರ್ಮಿಕ ಬೋಧನೆಗಳು, ಅಧ್ಯಾತ್ಮಿಕ ಕೇಂದ್ರಗಳು ಹಾಗೂ ತಳಸಮಾಜದಲ್ಲಿ ಸಾಮುದಾಯಿಕ ಸಂಸ್ಥೆಗಳು (Community Institutions). ಈ ಮೂರೂ ನೆಲೆಗಳಲ್ಲಿ ಎದ್ದು ಕಾಣುವ ಸಮಾನ ಎಳೆ ಎಂದರೆ ಹೆಣ್ಣನ್ನು ಅಧೀನಳಾಗಿ ನೋಡುವ ಪ್ರಾಚೀನ ದೃಷ್ಟಿ ( Archaic View ) ಹಾಗೂ ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ನಿರ್ಬಂಧಿಸುವ ಸಂಹಿತೆಗಳು. ವಿಪರ್ಯಾಸ ಎಂದರೆ ಈ ಸಾಂಸ್ಥಿಕ ಪರಿಸರದ ಒಳಗೇ ಹೆಣ್ಣು ಅತ್ಯಾಚಾರಕ್ಕೊಳಗಾಗುತ್ತಿರುವುದನ್ನು ಸಹ ನೋಡುತ್ತಿದ್ದೇವೆ. ಇದಕ್ಕಿಂತಲೂ ಅಪಾಯಕಾರಿಯಾಗಿ ಕಾಣುವುದು ಈ ಧಾರ್ಮಿಕ ನೇತಾರರ ಬೋಧನೆ/ಫತ್ವಾ/ಆದೇಶಗಳು. ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎಂಬ ಜಿಜ್ಞಾಸೆ ಮೂಡುವುದು ಇಂತಹ ಕೆಲವು ಹೇಳಿಕೆಗಳಿಂದ.

ಇತ್ತೀಚೆಗೆ ಕೇರಳದಲ್ಲಿ ಸುನ್ನಿ ಮುಸ್ಲಿಂ ಸಮುದಾಯದ ಹಿರಿಯ ಮುಫ್ತಿ ಕಾಂತಾಪುರಂ ಅಬೂಬಕರ್‌ ಮುಸ್ಲಿಯಾರ್‌ ಸಾರ್ವಜನಿಕ ಸಮಾವೇಶವೊಂದರಲ್ಲಿ ಮಾತನಾಡುತ್ತಾ ಹೆಣ್ಣು ಮಕ್ಕಳು ಮನೆಯೊಳಗೇ ಇರಬೇಕು, ಇಸ್ಲಾಂ ಬೋಧನೆಯ ಅನುಸಾರ ತಮ್ಮ ಘನತೆಯನ್ನು ರಕ್ಷಿಸಿಕೊಳ್ಳಲು ಪರ್ದಾ ಧರಿಸಬೇಕು ಎಂದು ಹೇಳಿದ್ದೇ ಅಲ್ಲದೆ, ಹೆಣ್ಣನ್ನು ಚಿನ್ನದ ಆಭರಣಕ್ಕೆ ಹೋಲಿಸಿ ಪೆಟ್ಟಿಗೆಯಲ್ಲಿ ಭದ್ರವಾಗಿ ಕಾಪಾಡಬೇಕು, ಹೆಣ್ಣು ಮಕ್ಕಳು ಹೊರಗೆ ಬಂದರೆ ವಿನಾಶವಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಮಾತುಗಳಿಗೆ ಸಮರ್ಥನೆಯಾಗಿ ಖುರಾನ್‌ ಗ್ರಂಥದ ಉಲ್ಲೇಖ ಮಾಡಿರುವ ಮುಫ್ತಿ ಅಬೂಬಕರ್‌, ಹೆಣ್ಣಿನ ಘನತೆ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಈ ನಿಯಮ ಪಾಲಿಸುವುದು ಅಗತ್ಯ ಎಂದು ಹೇಳಿದ್ದಾರೆ. ಅಬೂಬಕರ್‌ ಅವರು ಭಾರತೀಯ ಸಂವಿಧಾನ ಕಲ್ಪಿಸಿರುವ ಮಹಿಳಾ ಸಮಾನತೆಯ ಮೌಲ್ಯಗಳನ್ನು ಗಮನಿಸಬೇಕಿದೆ. ಹಾಗೆಯೇ ಖುರಾನ್‌ ಗ್ರಂಥವನ್ನೂ ಪುನರ್‌ಮನನ ಮಾಡಿಕೊಳ್ಳಬೇಕಿದೆ.

ಒಂದು ವೇಳೆ ಶತಮಾನಗಳ ಹಿಂದೆ ಖುರಾನ್‌ ಹೀಗೆ ಹೇಳಿದ್ದರೂ, ಆಧುನಿಕ ತಂತ್ರಜ್ಞಾನ ಯುಗದಲ್ಲೂ, ಒಂದು ಸಾಂವಿಧಾನಿಕ ವಾತಾವರಣದಲ್ಲಿ ಮಹಿಳೆಯರನ್ನು ಅದೇ ರೀತಿಯ ಪ್ರಾಚೀನ ಕಟ್ಟುಪಾಡುಗಳಿಗೆ ಒಳಪಡಿಸಬೇಕು ಎಂದೇನಿಲ್ಲ. ಜಗತ್ತು ಮುಂದುವರೆಯುತ್ತಿದೆ, ನಮ್ಮ ಆಲೋಚನೆಗಳೂ ಮುಂಗಾಣ್ಕೆ ಹೊಂದಿರಬೇಕು. ದುರದೃಷ್ಟವಶಾತ್‌ ಸಾಂಪ್ರದಾಯಿಕ ಸಮಾಜಗಳು ಧರ್ಮನಿಷ್ಠೆಯ ಹೆಸರಿನಲ್ಲಿ ಪ್ರಾಚೀನತೆಯನ್ನೇ ಪೋಷಿಸುತ್ತಾ ಬಂದಿವೆ. ಇತ್ತೀಚೆಗೆ ನಾನೇ ಉದ್ಘಾಟಿಸಿದ ಮುಸ್ಲಿಂ ಸಮುದಾಯದ ಸಾಹಿತ್ಯೋತ್ಸವದ ಸಂದರ್ಭದಲ್ಲಿ, ಹೆಣ್ಣು ಮಕ್ಕಳ ಸುಳಿವೂ ಇಲ್ಲದಿರುವುದನ್ನು ಪ್ರಸ್ತಾಪಿಸಿದಾಗ ಅಲ್ಲಿನ ಆಯೋಜಕರು “ ಬೆಂಕಿ ಇರುವ ಕಡೆ ಪಕ್ಕದಲ್ಲಿ ಪೆಟ್ರೋಲ್‌ ಇಡಬಾರದು ” ಎಂದು ಸಮಜಾಯಿಷಿ ನೀಡಿದ್ದರು.(ಬೆಂಕಿ ಯಾರು ಪೆಟ್ರೋಲ್‌ ಯಾರು ? ) ಈ ಸಾಂಪ್ರದಾಯಿಕ ಮನಸ್ಥಿತಿಯೇ ಜನಸಾಮಾನ್ಯರನ್ನು, ವಿಶೇಷವಾಗಿ ಅಲ್ಪಸಂಖ್ಯಾತ, ತಳಸ್ತರದ ಸಮುದಾಯಗಳ ಹೆಣ್ಣು ಮಕ್ಕಳನ್ನು ಮತ್ತಷ್ಟು ಅಧೀನತೆಗೆ ನೂಕುತ್ತವೆ.

ಧರ್ಮನಿಷ್ಠೆ ಮತ್ತು ಹೆಣ್ಣಿನ ಸ್ಥಾನಮಾನ

ಈ ಧಾರ್ಮಿಕ ನಂಬಿಕೆಗಳು ಏನೇ ಇರಲಿ, ವೈಯುಕ್ತಿಕ-ಸಾಂಸ್ಥಿಕ ನೆಲೆಯಲ್ಲಿ ಅದನ್ನು ಕಾಪಾಡಿಕೊಳ್ಳಬೇಕೇ ಹೊರತು ಜನಸಾಮಾನ್ಯರ ಮೇಲೆ ಹೇರಕೂಡದು. ಹೆಣ್ಣು ಮಕ್ಕಳನ್ನು ನಾಲ್ಕು ಗೋಡೆಗಳ ಒಳಗೆ ಕೂಡಿಹಾಕುವುದರ ಬದಲು, ಇಂತಹ ಪ್ರಾಚೀನ ಆಲೋಚನೆಗಳನ್ನು ಕೂಡಿಹಾಕಿ ಸ್ವತಃ ಅನುಕರಿಸುವವರೇ ಆನಂದಿಸಬಹುದಲ್ಲವೇ ? ಸಮಾಜವನ್ನೇಕೆ ಕೂಪಮಂಡೂಕಗಳ ಆಡುಂಬೊಲವಾಗಿ ಮಾಡಬೇಕು ? ಆಧುನಿಕತೆಗೆ ತೆರೆದುಕೊಂಡ ಯಾವುದೇ ಸಮಾಜವಾದರೂ ನಾಗರಿಕತೆ ಮುನ್ನಡೆ ಸಾಧಿಸಿದಂತೆಲ್ಲಾ ಪ್ರಾಚೀನ ಗ್ರಾಂಥಿಕ ಸಂಹಿತೆಗಳಿಂದ ಆಚೆ ಬರಬೇಕು.

ಹಿಂದೂ ಧರ್ಮದಲ್ಲಿ ತುಳಸಿ - ಭಾರತಪೀಡಿಯಾ

ಇದೇ ರೀತಿಯ ಅಭಿಪ್ರಾಯವನ್ನು ಹಿಂದೂ ಧರ್ಮದ ಕರ್ಮಠ ಸಂಸ್ಥೆಗಳಲ್ಲೂ, ಅಧ್ಯಾತ್ಮ ನಾಯಕರಲ್ಲೂ ಗುರುತಿಸಬಹುದು. ಸಾಮಾಜಿಕ ನೆಲೆಯಲ್ಲಿ ಉತ್ತರ ಭಾರತದ ಖಾಪ್‌ ಪಂಚಾಯತ್‌ಗಳು ಹೆಣ್ಣು ಮಕ್ಕಳ ಮೇಲೆ ಹೀಗೆ ನಿರ್ಬಂಧ ಹೇರುವ ಪ್ರಕರಣಗಳು ಈಗಲೂ ವರದಿಯಾಗುತ್ತಲೇ ಇವೆ. ಹರಿಯಾಣದ ಜಿಂದ್‌ ಜಿಲ್ಲೆಯ ಇಕ್ಕಾಸ್‌ ಗ್ರಾಮದಲ್ಲಿ, ಪಂಚಾಯತ್‌ ಸದಸ್ಯರೊಬ್ಬರು, ಹೆಣ್ಣು ಮಕ್ಕಳು ಅವರ ತಂದೆಯೊಡನೆ ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತಿರುವಾಗ ಎರಡೂ ಬದಿಗೆ ಕಾಲುಗಳನ್ನು ಇಳಿಬಿಟ್ಟು, ಸಮುದಾಯಕ್ಕೆ ಒಪ್ಪಿತವಾಗದ ಉಡುಪು ಧರಿಸಿ, ಕೈಯ್ಯಲ್ಲಿ ಮೊಬೈಲ್‌ ಹಿಡಿದು ಓಡಾಡುವುದು ಸರಿಯಲ್ಲ ಎಂದು ಹೇಳಿರುವುದೇ ಅಲ್ಲದೆ, ಅಂತಹ ಹೆಣ್ಣು ಮಕ್ಕಳ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡು ಒಡೆದುಹಾಕಬೇಕು ಎಂದು ಆದೇಶಿಸಿದ್ದಾರೆ.

ಈ ಆದೇಶಗಳನ್ನು ಆಜ್ಞೆ ಎಂದು ಭಾವಿಸಬೇಕಿಲ್ಲ, ಕುಟುಂಬಗಳ ರಕ್ಷಣೆಗಾಗಿ ನೀಡುವ ಸಲಹೆಗಳಾಗಿದ್ದು , ಸಮುದಾಯದ ಈ ನಿಬಂಧನೆಗಳನ್ನು ಉಲ್ಲಂಘಿಸಿದರೆ ಸಾಮಾಜಿಕ ಬಹಿಷ್ಕಾರ ವಿಧಿಸಬೇಕಾಗಬಹುದು ಎಂದೂ ಹೇಳುತ್ತಾರೆ. ಈ ನಿರ್ಬಂಧಗಳು ಹೆಚ್ಚಾಗಿ ಹೆಣ್ಣು ಮಕ್ಕಳಿಗೇ ಅನ್ವಯವಾಗುವಂತಿರುತ್ತವೆ. ಮಹಿಳೆಯರ ಪ್ರಾತಿನಿಧ್ಯವೇ ಇಲ್ಲದ ಈ ಖಾಪ್‌ ಪಂಚಾಯತ್‌ಗಳ ಪುರುಷಾಧಿಪತ್ಯ ಸಮೂಹ ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಪರಮಾಧಿಕಾರವನ್ನು ತನಗೆ ತಾನೇ ವಿಧಿಸಿಕೊಳ್ಳುತ್ತದೆ. ಈ ಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಕುಟುಂಬಗಳಲ್ಲಿ ಸ್ವ-ಗೋತ್ರ ವಿವಾಹವನ್ನು ನಿಷೇಧಿಸಲಾಗಿದ್ದು, ಈ ನಿಯಮ ಮೀರಿದ ಗಂಡು ಹೆಣ್ಣುಗಳನ್ನು ಗಡೀಪಾರು ಮಾಡಲಾಗುತ್ತದೆ. ಪ್ರೇಮ ವಿವಾಹಗಳನ್ನು ನಿಷೇದಿಸಿಲ್ಲವಾದರೂ, ಪೋಷಕರ ಅನುಮತಿಯೊಂದಿಗೆ ಮತ್ತು ಅಲ್ಲಿನ ಸಾಮಾಜಿಕ ಕಟ್ಟುಪಾಡುಗಳ ಅನುಸಾರ ಮಾತ್ರ ನಡೆಯಬಹುದು ಎಂದು ಆಜ್ಞಾಪಿಸಲಾಗಿದೆ.

ಇತ್ತೀಚೆಗೆ ನಡೆದ ಮಹಿಳಾ ಪಂಚಾಯತ್‌ ಸಭೆಯಲ್ಲೂ ಸಹ ಪ್ರೇಮ ವಿವಾಹಗಳು ಹಾಗೂ ಲಿವ್‌ ಇನ್‌ ಸಂಬಂಧಗಳನ್ನು ನಿಷೇಧಿಸಲಾಗಿದೆ. ವರದಕ್ಷಿಣೆ ವಿರುದ್ಧವೂ ನಿರ್ಣಯ ಕೈಗೊಳ್ಳಲಾಗಿದೆ. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ರಿಂದ 16ರಕ್ಕೆ ಇಳಿಸುವಂತೆಯೂ ಖಾಪ್‌ ಪಂಚಾಯತ್‌ಗಳು ಆಗ್ರಹಿಸುತ್ತಿವೆ. ಯುವ ಸಮುದಾಯದಿಂದ ಈ ತೀರ್ಮಾನಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದರೂ ಸಹ, ಸಾಮಾಜಿಕ ಆಧಿಪತ್ಯ ಮತ್ತು ಆರ್ಥಿಕ ಪ್ರಾಬಲ್ಯ ಹೊಂದಿರುವ ಪುರುಷ ಪ್ರಧಾನ ಪಂಚಾಯತ್‌ಗಳು, ಸಂವಿಧಾನವನ್ನೂ ಮೀರಿ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ನಿರ್ಬಂಧಿಸುತ್ತಿವೆ. ಭಾರತದ ಸಂವಿಧಾನದ ಅಡಿ ಇದು ಸ್ವೀಕಾರಾರ್ಹವೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಖಾಪ್‌ ವಕ್ತಾರರು ತಮ್ಮ ಸಾಮುದಾಯಿಕ ಹಿತಾಸಕ್ತಿಗಳ ರಕ್ಷಣೆಯಷ್ಟೇ ಆದ್ಯತೆ ಎಂದು ಹೇಳುತ್ತಾರೆ.
( ಹರಿಯಾಣ ಖಾಪ್‌ ಪಂಚಾಯತ್‌ , ವಿವರಗಳಿಗೆ ನೋಡಿ : Old Rules New rebels – ಅಶೋಕ್‌ ಕುಮಾರ್‌, ದ ಹಿಂದೂ 29 ಆಗಸ್ಟ್‌ 2026 – https://www.thehindu.com/news/national/haryana/gen-z-vs-haryana-khap-panchayats-old-rules-new-rebels/article71395638.ece )

ಸಮಾಜಗಳ ಮೌನಸಮ್ಮತಿ

ಸಮಸ್ಯೆ ಇರುವುದು ಈ ಧಾರ್ಮಿಕ ಅಥವಾ ಸಾಮುದಾಯಿಕ ನಾಯಕರಲ್ಲಿ ಅಲ್ಲ. ಅವರು ಬಲವಾಗಿ ನಂಬಿರುವ ಪಿತೃಪ್ರಧಾನ ಮೌಲ್ಯಗಳನ್ನು ಸಮಾಜದ ಎಲ್ಲ ಸ್ತರಗಳಲ್ಲೂ ಬಿತ್ತನೆ ಮಾಡುವುದೇ ಅವರ ಆದ್ಯತೆಯಾಗಿರುತ್ತದೆ. ಹಾಗಾಗಿ ಪ್ರಾಚೀನ, ಅಮಾನವೀಯ ಆಚರಣೆ ಮತ್ತು ನಡವಳಿಕೆಗಳನ್ನೂ ಸಹ ಸಾಮಾಜಿಕ ಮೌಲ್ಯಗಳ ರೂಪದಲ್ಲಿ ಹೇರಲು ತಮ್ಮ ಸಾಂಸ್ಥಿಕ ಅಧಿಕಾರ, ಆಧಿಪತ್ಯವನ್ನು ಬಳಸಿಕೊಳ್ಳುತ್ತಾರೆ. ಈ ಪ್ರಾಚೀನ ಚಿಂತನೆಗಳನ್ನು ಪ್ರಶ್ನಿಸದೆ, ವಿರೋಧಿಸದೆ ಮೌನವಾಗಿ ಸಹಿಸಿಕೊಳ್ಳುವ ಮತ್ತು ಅನುಸರಿಸುವ ಆಧುನಿಕೀಕರಣಗೊಂಡ (Modernised) ವರ್ಗಗಳು ಏನು ಮಾಡುತ್ತಿವೆ ? ಧಾರ್ಮಿಕ ಶ್ರದ್ಧೆ ನಂಬಿಕೆಗಳು ವರ್ತಮಾನದ ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿರುವಾಗ ಮೌನ ಪ್ರೇಕ್ಷಕರಾಗಿರುವುದು ಸಾಮಾಜಿಕ ಅಪರಾಧ (Social Crime) ಅಲ್ಲವೇ ? ಈ ಧರ್ಮಗಳನ್ನು ಶ್ರದ್ಧೆಯಿಂದ ಅನುಸರಿಸುವ, ಧರ್ಮಸಂಹಿತೆಗಳನ್ನು ಅನುಕರಿಸುವ ಸಮಾಜವೂ ನಮ್ಮ ನಡುವೆ ಇದೆ. ಆದರೆ ಈ ವರ್ಗಗಳು ಮೌನವಾಗಿರುತ್ತವೆ.

ಧಾರ್ಮಿಕ ನೇತಾರರ ಇಂತಹ ಹೇಳಿಕೆಗಳಿಗೆ ಆಂತರಿಕವಾಗಿ ಸಾಮೂಹಿಕ ವಿರೋಧ ಕಂಡುಬರುವುದಿಲ್ಲ. ಇದು ಹಿಂದೂ ಮತ್ತು ಮುಸ್ಲಿಂ ಸಮಾಜಗಳಲ್ಲಿ ಕಾಣಬಹುದಾದ ಸಮಾನ ಅಂಶ. ಹಿಂದೂ ಸಮಾಜಗಳಲ್ಲಿ ವೈಚಾರಿಕತೆಯನ್ನು ರೂಢಿಸಿಕೊಂಡ ಒಂದು ಸಣ್ಣ ವರ್ಗ ಮಾತ್ರ ಪ್ರತಿರೋಧ ವ್ಯಕ್ತಪಡಿಸುತ್ತದೆ. ಖಾಪ್‌ ಪಂಚಾಯತ್‌ಗಳಲ್ಲೂ ಸಹ ಇದೇ ಲಕ್ಷಣವನ್ನು ಗುರುತಿಸಬಹುದು. ಸಮಾಜಗಳಲ್ಲಿ ವಿದ್ಯಾವಂತ ವರ್ಗಗಳ ಈ ಮೌನ ಕೆಲವೊಮ್ಮೆ ಸಮ್ಮತಿಯೂ, ಉತ್ತೇಜಕವೂ, ಯಥಾಸ್ಥಿತಿವಾದದ ಸಮರ್ಥನೆಯೂ ಆಗುವ ಸಾಧ್ಯತೆಗಳಿವೆ. ಹಾಗಾಗಿಯೇ ಸಮಾಜದಲ್ಲಿ ಮಹಿಳಾ ಸಂವೇದನೆ, ಲಿಂಗತ್ವ ಸೂಕ್ಷ್ಮಸಂವೇದನೆಯನ್ನು (Gender Sensitivity) ಬೆಳೆಸುವುದು ಕಷ್ಟವಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಸಮಾಜವಾದರೂ ಇಂತಹ ನಿಷ್ಕ್ರಿಯತೆಯ ಪರಿಣಾಮವಾಗಿಯೇ ಬೌದ್ಧಿಕ ಹಿಂಚಲನೆಗೆ (Intellectual Backward march) ಗುರಿಯಾಗುತ್ತದೆ.

Dr. C S Dwarakanath On BJP / RSS : ನಾಗಪುರ ಲ್ಯಾಬೋರೇಟರಿಯಲ್ಲಿನ ಷಡ್ಯಂತ್ರಗಳನ್ನು ಸರ್ಕಾರದ ಮೂಲಕ ತರ್ತಿದ್ದಾರೆ

ಈ ಹಿಂಚಲನೆ ಸಮಾಜದ ಮೇಲ್‌ ಸ್ತರದಿಂದ ತಳಸ್ತರದವರೆಗೂ ಸಾಂಸ್ಥಿಕವಾಗಿ ಪ್ರವಹಿಸಿದಾಗ, ಸಮಾಜದಲ್ಲಿ ಹೆಣ್ಣನ್ನು ನೋಡುವ ದೃಷ್ಟಿಯೇ ವಿಕೃತವಾಗುತ್ತದೆ. ಭೋಗದ ವಸ್ತುವಾಗಿ, ಬಳಕೆಯ ಸರಕಿನಂತೆ, ಪುರುಷ ಸಮಾಜದ ಅಧೀನಳಂತೆ ಕಾಣುವ ಪ್ರಾಚೀನ ಮನಸ್ಥಿತಿ (Archaic Mindset) ಸುಶಿಕ್ಷಿತರ ನಡುವೆಯೂ ನೆಲೆ ಮಾಡುತ್ತದೆ. ಹಾಗಾಗಿ ಸುಸಂಸ್ಕೃತರು ಎಂದು ಹೇಳಿಕೊಳ್ಳುವ ಸಮಾಜಗಳಲ್ಲೂ ಇಂತಹ ಪ್ರಾಚೀನ ಮನಸ್ಥಿತಿಯ ವಿರುದ್ಧ, ಸ್ತ್ರೀ ದ್ವೇಷದ ಹೇಳಿಕೆಗಳ ವಿರುದ್ದ, ಮಹಿಳಾ ದೌರ್ಜನ್ಯಗಳ ವಿರುದ್ಧ ಪ್ರತಿರೋಧದ ಕ್ಷೀಣ ಧ್ವನಿಯೂ ಕೇಳಿಬರುವುದಿಲ್ಲ. ಸಮಾಜದ ದುರ್ಬಲ ವರ್ಗಗಳು ಧಾರ್ಮಿಕ ನಾಯಕರಿಗೆ ಹೆದರಿ ಸುಮ್ಮನಾದರೆ, ಬಲಾಢ್ಯರು ಅನುಯಾಯಿಗಳಾಗಿ ಅಥವಾ ಮೌನ ಪ್ರೇಕ್ಷಕರಾಗಿ ನಿಷ್ಕ್ರಿಯರಾಗುತ್ತಾರೆ.

ನೈತಿಕ ಅವನತಿಯ ದಾರಿಯಲ್ಲಿ,,,,

ಆದರೆ ಭಾರತೀಯ ಸಮಾಜ ಅತಿವೇಗವಾಗಿ ನೈತಿಕ ಅವನತಿಯತ್ತ ಸಾಗುತ್ತಿರುವಾಗ, ಮಹಿಳಾ ದೌರ್ಜನ್ಯಗಳು, ಸ್ತ್ರೀ-ದ್ವೇಷ ಮನಸ್ಥಿತಿ (Misoginstic) ಸಮಾಜದ ಎಲ್ಲ ಮಗ್ಗುಲುಗಳಲ್ಲೂ ಪ್ರವಹಿಸುತ್ತಿರುವಾಗ , ನಾಗರಿಕ ಪ್ರಜ್ಞೆ ಇರುವವರು ಕೈಕಟ್ಟಿ ಕೂರುವುದು ಮಹಾಪರಾಧವಾಗುತ್ತದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಸ್ತ್ರೀ ಸಂವೇದನೆ, ಸೂಕ್ಷ್ಮಸಂವೇದನೆ (Sensitivity) ಬೆಳೆಸುವ ಅಭಿಯಾನಕ್ಕೆ ಸಮಾಜ ಮುಂದಾಗಬೇಕಿದೆ. ಸಮಾಜದಲ್ಲಿ ಲಿಂಗತ್ವ ಸೂಕ್ಷ್ಮ ಸಂವೇದನೆಯನ್ನು (Gender Sensitivity) ಬೆಳೆಸುವ ಪ್ರಯತ್ನವನ್ನು ಮಹಿಳಾ ಸಂಘಟನೆಗಳು ಮಾತ್ರ ಮಾಡುತ್ತಿವೆ. ಎಡಪಕ್ಷಗಳ ಸಮೂಹ ಸಂಘಟನೆಗಳಲ್ಲಿ ಈ ಪ್ರಯತ್ನ ಸೀಮಿತವಾಗಿ ನಡೆಯುತ್ತಿದೆ. ಆದರೆ ಮಹಿಳಾ ಸಂಘಟನೆಗಳಿಗೆ ಸಮಾಜದ ಎಲ್ಲ ಸ್ತರಗಳನ್ನು ತಲುಪುವ ಮಾನವ-ಹಣಕಾಸು-ಮೂಲಸೌಕರ್ಯ ಸಂಪನ್ಮೂಲಗಳ ಕೊರತೆ ಇದೆ.

ಮೂಲತಃ ಇದು ಪ್ರಜಾಪ್ರಭುತ್ವೀಯ ಹೋರಾಟಗಳಲ್ಲಿ (Democratic struggles) ಸಕ್ರಿಯವಾಗಿರುವ ದಲಿತ ಚಳುವಳಿ, ಕಾರ್ಮಿಕ ಚಳುವಳಿ, ಸಂಸದೀಯ ಎಡಪಕ್ಷಗಳು, ಸೆಕ್ಯುಲರ್‌ ಎಂದು ಲೇಬಲ್‌ ಅಂಟಿಸಿಕೊಂಡಿರುವ ರಾಜಕೀಯ ಪಕ್ಷ/ಗುಂಪುಗಳು ಹಾಗೂ ಸಂವಿಧಾನದ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾಷಾ-ಸಾಹಿತ್ಯ-ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಆದ್ಯತೆಯಾಗಬೇಕು. ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಈ ಸೂಕ್ಷ್ಮ ಸಂವೇದನೆಯನ್ನು ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಪನ್ಮೂಲ ಸಾಮರ್ಥ್ಯ ಈ ಸಾಂಘಿಕ ನೆಲೆಯಲ್ಲಿರುತ್ತದೆ. ದುರದೃಷ್ಟವಶಾತ್‌ ಯಾವುದೇ ಸಂಘಟನೆಗಳು ಇದನ್ನು ತಮ್ಮ ಆದ್ಯತೆಯಾಗಿ ಕಾಣುತ್ತಿಲ್ಲ. ಇಡೀ ಜವಾಬ್ದಾರಿಯನ್ನು ಸ್ವಾಯತ್ತ ಮಹಿಳಾ ಸಂಘಟನೆಗಳ ಹೆಗಲಿಗೆ ಹೊರಿಸಲಾಗಿದೆ.

ಇದನ್ನೂ ಓದಿ : ಶಿವಣ್ಣನ ‘ಕೂರ್ಮಾವತಾರ’ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ :ಸಿನಿಮಾ ಬಗ್ಗೆ ಹೆಚ್ಚಿದ ನಿರೀಕ್ಷೆ

ಈ ಸಾಂಘಿಕ ಅಸೂಕ್ಷ್ಮತೆಯ ಪರಿಣಾಮವಾಗಿ, ಸಮಾಜದ ಕಿರಿಯ ಪೀಳಿಗೆ ಸೂಕ್ತ ಮಾರ್ಗದರ್ಶನವಿಲ್ಲದೆ, ಹೆಚ್ಚು ಆಕರ್ಷಕವಾಗಿ ಕಾಣುವ ಸಾಂಪ್ರದಾಯಿಕ ಶಕ್ತಿಗಳನ್ನು ಹಿಂಬಾಲಿಸುತ್ತಿದೆ. ಅಲ್ಲಿ ಬೋಧಿಸಲಾಗುವ ಮೌಢ್ಯಗಳನ್ನು, ಪ್ರಾಚೀನ ಆಚರಣೆಗಳನ್ನು (Archaic Rituals) ಶ್ರೇಷ್ಠ ಎಂದು ಭಾವಿಸುತ್ತಿದೆ. ಹೆಣ್ಣಿನ ಘನತೆ, ಗೌರವ ಮುಂತಾದ ಔದಾತ್ಯಗಳನ್ನು ಪಿತೃಪ್ರಧಾನ ವ್ಯವಸ್ಥೆಯಿಂದ ಕೊಡಲ್ಪಡುವ ಸಮ್ಮಾನ ಎಂದು ಭಾವಿಸಲಾಗುತ್ತದೆ. ಸ್ವಯಂ ಘನತೆ, ಸ್ವಾಭಿಮಾನ, ಆತ್ಮಗೌರವ ಹೆಣ್ಣಿನ ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಗೂ ಈ ಸಾಂಪ್ರದಾಯಿಕ ವಾತಾವರಣದಲ್ಲಿ ಅವಕಾಶ ಇರುವುದಿಲ್ಲ. ಹಾಗಾಗಿಯೇ ಮಹಿಳಾ ದೌರ್ಜನ್ಯಗಳು ಸಮಾಜದಲ್ಲಿ ಸಣ್ಣ ಕಂಪನವನ್ನೂ ಸೃಷ್ಟಿಸುತ್ತಿಲ್ಲ. ಅತ್ಯಾಚಾರಗಳು ಅನುಕಂಪ ಹುಟ್ಟಿಸಿದರೂ ಅದರ ಹಿಂದಿನ ಕ್ರೌರ್ಯ, ಹಿಂಸೆ ಮತ್ತು ಅಮಾನುಷ ಲಕ್ಷಣಗಳು ಸಮಾಜಗಳನ್ನು ವಿಚಲಿತಗೊಳಿಸುತ್ತಿಲ್ಲ.

ನಾವು ಮಾಡಬೇಕಿರುವುದೇನು ?

ಬಹುಪಾಲು ಪ್ರಗತಿಪರ ಸಂಘಟನೆಗಳು ಮೇಲ್‌ ಸ್ತರದ ನಿರ್ಣಾಯಕ ಸ್ಥಳಗಳಲ್ಲಿ ಪುರುಷ ಪ್ರಧಾನವಾಗಿರುವುದೂ ಈ ನಕಾರಾತ್ಮಕ ಬೆಳವಣಿಗೆಗಳಿಗೆ ಕಾರಣ. ಲಿಂಗತ್ವ ಸೂಕ್ಷ್ಮ ಸಂವೇದನೆಯನ್ನು (Gender Sensitivity) ಬೆಳೆಸುವ ಅಭಿಯಾನವನ್ನು ಸಾಂಘಿಕ ಕಾರ್ಯಕ್ರಮದ ರೀತಿಯಲ್ಲಿ ಆಯೋಜಿಸಲು ಹಿಂಜರಿಕೆ ಇಲ್ಲವಾದರೂ ಇದು ಆದ್ಯತೆಯಾಗುವುದಿಲ್ಲ. ಭಾರತೀಯ ಸಮಾಜ ಈ ಹಿಡಿತದಿಂದ ಹೊರಬರಬೇಕಿದೆ. ದೆಹಲಿಯಲ್ಲಿ ನಡೆದಂತಹ ಅತ್ಯಾಚಾರದ ಘಟನೆಗಳು ಕೇವಲ ಪ್ರತಿರೋಧ, ನ್ಯಾಯಕ್ಕಾಗಿ ಆಗ್ರಹ, ಘೋಷಣೆಗಳಲ್ಲಿ ಕೊನೆಯಾಗಬಾರದು. ಇವೆಲ್ಲವೂ ಸದ್ದು-ಪ್ರದರ್ಶನದ (Sound & Spectacle) ಚಟುವಟಿಕೆಗಳಾಗುತ್ತವೆ. ಭವಿಷ್ಯದ ಪೀಳಿಗೆಯನ್ನು ಪಿತೃಪ್ರಧಾನ-ಪುರುಷಾಧಿಪತ್ಯ ಮೌಲ್ಯಗಳಿಂದ ಹೊರತರುವ ದೀರ್ಘಕಾಲಿಕ ಹೆಜ್ಜೆಗಳಲ್ಲಿ ದಾಖಲಾಗಬೇಕು. ಕಾನೂನುಗಳಿಂದ ಸರಿಪಡಿಸಲಾಗದ ವ್ಯತ್ಯಯ, ವೈರುಧ್ಯಗಳನ್ನು ಸಾಮಾಜಿಕ ಅರಿವು ಮತ್ತು ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ ಸರಿಪಡಿಸಲು ಸಾಧ್ಯವಿದೆ.

ಈ ವಾಸ್ತವವನ್ನು ಅರಿತು ನಮ್ಮ ನಡುವಿನ ಪ್ರಗತಿಪರ-ಎಡಪಂಥೀಯ ಸಂಘಟನೆಗಳು, ಚಳುವಳಿಗಳು, ಸಾಹಿತ್ಯ-ಸಂಸ್ಕೃತಿಯ ಪರಿಚಾರಕ ಸಂಸ್ಥೆಗಳು ಭಾರತೀಯ ಸಮಾಜವನ್ನು ಮಹಿಳಾ ಸಂವೇದನೆಯ ಕಡೆಗೆ ಕೊಂಡೊಯ್ಯಬೇಕಿದೆ. ಇಲ್ಲಿ ಅಡ್ಡಿಯಾಗುವ ಸಾಂಪ್ರದಾಯಿಕ-ಧಾರ್ಮಿಕ ಶಕ್ತಿಗಳನ್ನು ಬೌದ್ಧಿಕವಾಗಿ ಎದುರಿಸುತ್ತಲೇ ಸಮಾಜವನ್ನು ಮುಕ್ತ ಚಿಂತನೆಯೆಡೆಗೆ, ದೌರ್ಜನ್ಯರಹಿತ ನಾಗರಿಕತೆಯೆಡೆಗೆ ಕೊಂಡೊಯ್ಯಬೇಕಿದೆ. ಕುಸಿಯುತ್ತಿರುವ ಸಮಾಜ ನೈತಿಕ ಪಾತಾಳಕ್ಕೆ ಅಪ್ಪಳಿಸುವ ಮುನ್ನ ನಮ್ಮೊಳಗಿನ ಪ್ರಜ್ಞೆ ಜಾಗೃತವಾದರೆ, ಭಾರತದಲ್ಲಿ ಹೆಣ್ಣು ಮಕ್ಕಳು ತಮ್ಮ ಘನತೆಗಾಗಿ ದಿನನಿತ್ಯ ಹೋರಾಡುವ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಿದೆ. ಈ ಸಾಮೂಹಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನೊಗ ಹೊರಲು ಹೆಗಲುಗಳಿವೆ. ಆದರೆ ಮನಸ್ಸುಗಳು ಬದಲಾಗಬೇಕಿದೆ. ಗುರಿಸಾಧನೆಯ ಹಾದಿಗಳು ಕವಲೊಡೆಯಬೇಕಿದೆ. ಇದು ಅಸಾಧ್ಯವೇನೂ ಅಲ್ಲ. ಅಲ್ಲವೇ ?
-೦-೦-೦-೦-

Tags: #LegacyArchaic RitualsCrimesdevotionDigital IndiaIndian societyLeftist PartiesMurdersNa DivakarPratidhvaniRapesSocil IssuesWomens Life
Previous Post

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?

Next Post

ನೇಪಾಳದ ಭೀಕರ ಪ್ರವಾಹಕ್ಕೆ ‘ಸತಿಯ ಶಾಪ’ವೇ ಕಾರಣವೇ? 17ನೇ ಶತಮಾನದ ಕರಾಳ ಕಥೆ ಇಲ್ಲಿದೆ

Related Posts

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ
Top Story

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ

by ಪ್ರತಿಧ್ವನಿ
September 2, 2026
0

- ಸರ್ಕಾರ, CSR, NRI ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಸಂರಕ್ಷಣೆಗೆ ಹೊಸ ಮಾದರಿ - ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು ಹಾಗೂ ವಸ್ತುಸಂಗ್ರಹಾಲಯಗಳಿಗೆ ಸುಸ್ಥಿರ ಹಣಕಾಸು...

Read moreDetails
ಭೂಮಿಗೆ ಇನ್ನು 50 ವರ್ಷ ಮಾತ್ರ?; ಎಲಾನ್ ಮಸ್ಕ್ ಎಚ್ಚರಿಕೆ! ಪರಿಹಾರವೇನು?

ಭೂಮಿಗೆ ಇನ್ನು 50 ವರ್ಷ ಮಾತ್ರ?; ಎಲಾನ್ ಮಸ್ಕ್ ಎಚ್ಚರಿಕೆ! ಪರಿಹಾರವೇನು?

September 2, 2026
ಈ ಎರಡು ದಿನ ಬೆಂಗಳೂರಲ್ಲಿ ಚಿಕನ್ ಅಂಗಡಿಗಳು ಬಂದ್; ನಾನ್‌ವೆಜ್ ಪ್ರಿಯರಿಗೆ ಬಿಗ್ ಶಾಕ್!

ಈ ಎರಡು ದಿನ ಬೆಂಗಳೂರಲ್ಲಿ ಚಿಕನ್ ಅಂಗಡಿಗಳು ಬಂದ್; ನಾನ್‌ವೆಜ್ ಪ್ರಿಯರಿಗೆ ಬಿಗ್ ಶಾಕ್!

September 2, 2026
2028ರ ಬಳಿಕವೂ ಡಿಕೆ ಶಿವಕುಮಾರ್‌ ಸಿಎಂ?; ನೊಣವಿನಕೆರೆ ಅಜ್ಜಯ್ಯ ಸ್ಫೋಟಕ ಭವಿಷ್ಯ

2028ರ ಬಳಿಕವೂ ಡಿಕೆ ಶಿವಕುಮಾರ್‌ ಸಿಎಂ?; ನೊಣವಿನಕೆರೆ ಅಜ್ಜಯ್ಯ ಸ್ಫೋಟಕ ಭವಿಷ್ಯ

September 2, 2026
ನೇಪಾಳದ ಭೀಕರ ಪ್ರವಾಹಕ್ಕೆ ‘ಸತಿಯ ಶಾಪ’ವೇ ಕಾರಣವೇ? 17ನೇ ಶತಮಾನದ ಕರಾಳ ಕಥೆ ಇಲ್ಲಿದೆ

ನೇಪಾಳದ ಭೀಕರ ಪ್ರವಾಹಕ್ಕೆ ‘ಸತಿಯ ಶಾಪ’ವೇ ಕಾರಣವೇ? 17ನೇ ಶತಮಾನದ ಕರಾಳ ಕಥೆ ಇಲ್ಲಿದೆ

September 2, 2026
Next Post
ನೇಪಾಳದ ಭೀಕರ ಪ್ರವಾಹಕ್ಕೆ ‘ಸತಿಯ ಶಾಪ’ವೇ ಕಾರಣವೇ? 17ನೇ ಶತಮಾನದ ಕರಾಳ ಕಥೆ ಇಲ್ಲಿದೆ

ನೇಪಾಳದ ಭೀಕರ ಪ್ರವಾಹಕ್ಕೆ ‘ಸತಿಯ ಶಾಪ’ವೇ ಕಾರಣವೇ? 17ನೇ ಶತಮಾನದ ಕರಾಳ ಕಥೆ ಇಲ್ಲಿದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada