ನೇಪಾಳದಲ್ಲಿನ ಭೀಕರ ಪ್ರವಾಹ ಹಾಗೂ ಜಪಾನ್, ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪಗಳು ನೈಸರ್ಗಿಕ ವಿಕೋಪಗಳ ಬಗ್ಗೆ ಆತಂಕ ಹೆಚ್ಚಿಸಿವೆ. ಈ ನಡುವೆ ಟೆಸ್ಲಾ ಹಾಗೂ ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಭೂಮಿಯ ಭವಿಷ್ಯದ ಕುರಿತು ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ದೀರ್ಘಕಾಲದ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯನ್ನು ರಕ್ಷಿಸಲು ಕೇವಲ ಸುಸ್ಥಿರ ಇಂಧನದ ಬಳಕೆ ಸಾಕಾಗುವುದಿಲ್ಲ. ಭೂಮಿಯನ್ನು ಉಳಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಭಾರಿ ಅಪಾಯ ಎದುರಾಗಬಹುದು ಎಂದು ಮಸ್ಕ್ ಅಭಿಪ್ರಾಯಪಟ್ಟಿದ್ದಾರೆ.

ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ಅತ್ಯಂತ ದೊಡ್ಡ ಪ್ರಮಾಣದ ಅಳಿವಿನ ಘಟನೆಗಳು ದೀರ್ಘಕಾಲದ ಅಂತರದಲ್ಲಿ ಸಂಭವಿಸುತ್ತವೆ ಎಂದು ಹೇಳಿದ್ದಾರೆ. ಇಂತಹ ಅಪಾಯಗಳನ್ನು ಎದುರಿಸಲು ಸುಸ್ಥಿರ ಶಕ್ತಿಯ ಜೊತೆಗೆ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ದೊಡ್ಡ ಪ್ರಮಾಣದ ಭೂ ಎಂಜಿನಿಯರಿಂಗ್ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.ಭೂಮಿಯ ತಾಪಮಾನವನ್ನು ನಿಯಂತ್ರಿಸಲು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಬಳಸುವಂತಹ ತಂತ್ರಜ್ಞಾನಗಳ ಅಗತ್ಯವಿದೆ ಎಂಬುದು ಮಸ್ಕ್ ಅವರ ವಾದವಾಗಿದೆ.
ಚಂದ್ರನಿಂದ ‘ಮಾಸ್ ಡ್ರೈವರ್’ಗಳ ಮೂಲಕ ಉಪಕರಣಗಳನ್ನು ಕಳುಹಿಸಿ, ಸೂರ್ಯ-ಭೂಮಿ ಲ್ಯಾಗ್ರೇಂಜ್ ಬಿಂದುಗಳ ಬಳಿ ಸೂರ್ಯನ ಕಿರಣಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವ ಉಪಗ್ರಹಗಳನ್ನು ಸ್ಥಾಪಿಸುವ ಕಲ್ಪನೆಯನ್ನು ಅವರು ಪ್ರಸ್ತಾಪಿಸಿದ್ದಾರೆ. ಇಂತಹ ವ್ಯವಸ್ಥೆಯಿಂದ ದೀರ್ಘಾವಧಿಯಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು ಎಂದು ಮಸ್ಕ್ ಹೇಳಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಮಟ್ಟ ಏರಿಕೆಯ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಮಸ್ಕ್ ಹೇಳಿದ್ದಾರೆ. ವಿಶೇಷವಾಗಿ ಸಮುದ್ರ ಮಟ್ಟ ಏರಿಕೆಗೆ ಹೆಚ್ಚು ತುತ್ತಾಗಬಹುದಾದ ಪ್ರದೇಶಗಳಲ್ಲಿ ಮುಂದಿನ ದಶಕಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಬಹುದು ಎಂಬುದು ಅವರ ಅಭಿಪ್ರಾಯ.ಮಸ್ಕ್ ಅವರ ಈ ನಿಲುವು ಹವಾಮಾನ ಬದಲಾವಣೆಯನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ದೀರ್ಘಾವಧಿಯ ಪರಿಹಾರಗಳತ್ತ ಗಮನ ಸೆಳೆಯುತ್ತಿದೆ. ಸುಸ್ಥಿರ ಇಂಧನದ ಬಳಕೆ ಅತ್ಯಂತ ಮುಖ್ಯವಾದರೂ, ಅದೊಂದೇ ಜಾಗತಿಕ ಹವಾಮಾನ ಸಮಸ್ಯೆಗೆ ಸಂಪೂರ್ಣ ಪರಿಹಾರವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಮೆರಿಕದಲ್ಲಿ ಹವಾಮಾನ ಸಂಶೋಧನೆಗಳಿಗೆ ನೀಡಲಾಗುತ್ತಿರುವ ಹಣಕಾಸು ನೆರವು ಹಾಗೂ ಸಂಶೋಧನಾ ಕಾರ್ಯಕ್ರಮಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮಸ್ಕ್ ಅವರ ಹೇಳಿಕೆ ಗಮನ ಸೆಳೆದಿದೆ.ಆದರೆ, ‘ಭೂಮಿಯನ್ನು ಉಳಿಸಲು ಕೇವಲ 50 ವರ್ಷ ಮಾತ್ರ’ ಎಂಬುದು ಮಸ್ಕ್ ಅವರ ಎಚ್ಚರಿಕೆ ಮತ್ತು ಅಂದಾಜು ಎಂಬುದನ್ನು ಗಮನಿಸಬೇಕಿದೆ. ಇದು ವೈಜ್ಞಾನಿಕವಾಗಿ ಎಲ್ಲ ತಜ್ಞರೂ ಒಪ್ಪಿಕೊಂಡಿರುವ ನಿಖರ ಗಡುವು ಎಂದು ಪರಿಗಣಿಸಲಾಗುವುದಿಲ್ಲ.






