ಬೆಂಗಳೂರಿನ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc) ತಜ್ಞರ ತಂಡ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರೊ. ಆಶೀಶ್ ವರ್ಮಾ ನೇತೃತ್ವದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಆರು ತಜ್ಞರ ತಂಡ, ಯೋಜನೆಯಿಂದ ಸಂಚಾರ ದಟ್ಟಣೆ, ಪ್ರವಾಹದ ಅಪಾಯ ಹಾಗೂ ಪರಿಸರ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ರಾಜ್ಯಪಾಲರಿಗೆ ವರದಿ ಸಲ್ಲಿಸಿದೆ.
ಹೆಬ್ಬಾಳದಿಂದ ಮೇಕ್ರಿ ಸರ್ಕಲ್ ಹಾಗೂ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿಸಿರುವ ಸುರಂಗ ಮಾರ್ಗದ ಕುರಿತು ಸಮಗ್ರ ಅಧ್ಯಯನ ನಡೆಸಿರುವ ತಜ್ಞರು, ಯೋಜನೆಯಿಂದ ಸಂಚಾರ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಮೇಕ್ರಿ ಸರ್ಕಲ್ ಮತ್ತು ಹೆಬ್ಬಾಳ ಫ್ಲೈಓವರ್ ಅಂತ್ಯಭಾಗಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಹೆಬ್ಬಾಳ ತಗ್ಗು ಪ್ರದೇಶವಾಗಿರುವುದರಿಂದ ಭಾರಿ ಮಳೆಯ ಸಂದರ್ಭದಲ್ಲಿ ಸುರಂಗದಲ್ಲಿ ನೀರು ನುಗ್ಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ. ಅಲ್ಲದೆ, ಯೋಜನೆಯಿಂದ ಹೆಬ್ಬಾಳ ಕೆರೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಉದ್ಯಾನವನಗಳ ಮೇಲೆ ಪರಿಸರ ಪರಿಣಾಮ ಉಂಟಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಯೋಜನೆಯ ಮೂಲ ಅಂದಾಜು ವೆಚ್ಚಕ್ಕೆ ಹೋಲಿಸಿದರೆ ನಿರ್ಮಾಣ ವೆಚ್ಚದಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣದ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ.ಇದರ ಜೊತೆಗೆ ಸುರಂಗ ರಸ್ತೆಯಲ್ಲಿ ವಿಧಿಸಲಾಗುವ ಹೆಚ್ಚಿನ ಟೋಲ್ ಸಾಮಾನ್ಯ ಜನರಿಗೆ ಹೊರೆಯಾಗುವ ಸಾಧ್ಯತೆಯಿದ್ದು, ರಸ್ತೆ ಬಳಕೆ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗುವ ಆತಂಕವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

ತಮ್ಮ ವೈಜ್ಞಾನಿಕ ವಿಶ್ಲೇಷಣೆಯ ಆಧಾರದ ಮೇಲೆ ಯೋಜನೆಗೆ ‘E’ ಮತ್ತು ‘F’ ರೇಟಿಂಗ್‌ಗಳು ಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸಮರ್ಪಕ ತಾಂತ್ರಿಕ ಸಿದ್ಧತೆಗಳಿಲ್ಲದೆ ಟೆಂಡರ್ ಪ್ರಕ್ರಿಯೆ ಆರಂಭಿಸಿರುವುದಕ್ಕೂ ತಜ್ಞರು ಪ್ರಶ್ನೆ ಎತ್ತಿದ್ದಾರೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಹೆಬ್ಬಾಳ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದ ಟೆಂಡರ್ ಸೇರಿದಂತೆ ಸಂಪೂರ್ಣ ಯೋಜನೆಯನ್ನು ರದ್ದುಗೊಳಿಸುವಂತೆ IISc ತಜ್ಞರ ತಂಡ ರಾಜ್ಯಪಾಲರಿಗೆ ಮನವಿ ಮಾಡಿದೆ.





