ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ನಡೆಯುತ್ತಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರ ವಿಂಗಡಣೆ, ಜನಗಣತಿ ಹಾಗೂ ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಚರ್ಚೆ ಬಿರುಸಿನಿಂದ ಮುಂದುವರೆದಿದೆ.

ಲೋಕಸಭೆಯಲ್ಲಿನ ಕಲಾಪದ ಸಂದರ್ಭದಲ್ಲಿ, ಪ್ರತಿಪಕ್ಷಗಳು ಕ್ಷೇತ್ರ ವಿಂಗಡಣೆ ನಿರ್ಣಯ ಮಸೂದೆಯನ್ನು ತೀವ್ರವಾಗಿ ಟೀಕಿಸಿವೆ. ಅಲ್ಲದೆ ಮಹಿಳಾ ಮೀಸಲಾತಿಯನ್ನು ಬೆಂಬಲಿಸುವಾಗ ಅದು ಸಂವಿಧಾನ ವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿವೆ.
ಈ ಕುರಿತು ಸದನದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್, ಕ್ಷೇತ್ರ ಪುನರ್ವಿಂಗಡಣೆಯನ್ನು ಜನಗಣತಿಯಿಂದ ಬೇರ್ಪಡಿಸಲಾಗುತ್ತಿದೆ. ಇದರಿಂದ ತಮ್ಮ ಪಕ್ಷವು ಮೂರು ಮಸೂದೆಗಳನ್ನು ವಿರೋಧಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಜಮ್‌ಗಢ ಕ್ಷೇತ್ರವನ್ನು ಪ್ರತಿನಿಧಿಸುವ ಯಾದವ್, ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮುಸ್ಲಿಮರನ್ನು ಮಹಿಳಾ ಮೀಸಲಾತಿ ಕಾನೂನಿನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!
ಧಮೇಂದ್ರ ಯಾದವ್ ಅವರನ್ನು ಬೆಂಬಲಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಶಾಸಕಾಂಗದಲ್ಲಿ ಮಹಿಳಾ ಕೋಟಾವನ್ನು ಬೆಂಬಲಿಸುತ್ತೇನೆ. ಆದರೆ ಜನಗಣತಿಯನ್ನು ಏಕೆ ನಡೆಸುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಿಲೇಶ್‌ಗೆ ತಿರುಗೇಟು ನೀಡಿ, 2027ರ ಜನಗಣತಿ ನಡೆಯುತ್ತಿದೆ ಮತ್ತು ಸರ್ಕಾರ ಜಾತಿ ಎಣಿಕೆಗೆ ನಿರ್ಧರಿಸಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ಅಸಂವಿಧಾನಿಕ ಎಂದು ಶಾ ಬಲವಾಗಿ ಪ್ರತಿಪಾದಿಸಿದ್ದಾರೆ.
“ಇಡೀ ದೇಶವು ಸಂಸತ್ತಿನ ಕಲಾಪಗಳನ್ನು ವೀಕ್ಷಿಸುತ್ತಿದೆ. ನಾವು ಜನಗಣತಿಯನ್ನು ಏಕೆ ನಡೆಸುತ್ತಿಲ್ಲ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಾ, ಜನಗಣತಿ ನಡೆಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ನಾನು ಇಡೀ ರಾಷ್ಟ್ರಕ್ಕೆ ಭರವಸೆ ನೀಡಲು ಬಯಸುತ್ತೇನೆ. ಜಾತಿ ಜನಗಣತಿಯಲ್ಲಿ, ಸರ್ಕಾರ ಈಗಾಗಲೇ ಅದನ್ನು ಮಾಡುತ್ತಿದೆ. ಇದು ಜಾತಿ ಜನಗಣತಿಯಾಗಲಿದೆ ಎಂದು ಅಮಿತ್ ಶಾ ಪುನರುಚ್ಚರಿಸಿದ್ದಾರೆ.
ಮುಖ್ಯವಾಗಿ ಧರ್ಮೇಂದ್ರ ಯಾದವ್ ಹೇಳಿದ್ದು ಅಸಂವಿಧಾನಿಕ. ನಮ್ಮ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಎಂದಿಗೂ ಅನುಮತಿಸುವುದಿಲ್ಲ. ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಯಾವುದೇ ಮೀಸಲಾತಿ ಅಸಂವಿಧಾನಿಕ. ಸಮಾಜವಾದಿ ಪಕ್ಷವು ತನ್ನ ಎಲ್ಲಾ ಟಿಕೆಟ್‌ಗಳನ್ನು ಮುಸ್ಲಿಮರಿಗೆ ನೀಡಬಹುದು ಎಂದು ಕುಟುಕಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ಅಖಿಲೇಶ್ ಯಾದವ್, ಅಮಿತ್ ಶಾ ಅವರ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿವೆ. ಕೇಂದ್ರ ಗೃಹ ಸಚಿವರು ಹೇಳಿದ್ದು ಪ್ರಜಾಪ್ರಭುತ್ವ ವಿರೋಧಿ. ಹಾಗಾದರೆ, ನಮ್ಮ ಜನಸಂಖ್ಯೆಯ ಅರ್ಧದಷ್ಟು ಮುಸ್ಲಿಂ ಮಹಿಳೆಯರನ್ನು ಸೇರಿಸಲಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಆಗಮಿಸಿದ ಅಮಿತ್ ಶಾ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಹಿಳಾ ಮೀಸಲಾತಿ ಕಾನೂನನ್ನು ತಿದ್ದುಪಡಿ ಮಾಡಲು ಮತ್ತು ಕ್ಷೇತ್ರ ವಿಂಗಡಣೆ ನಿರ್ಣಯ ಆಯೋಗವನ್ನು ಸ್ಥಾಪಿಸಲು ಮೂರು ಮಸೂದೆಗಳನ್ನು ಮಂಡಿಸಿದ್ದಾರೆ. ಆದರೆ ಇದನ್ನು ವಿರೋಧಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ. ನಾವು ಮಹಿಳಾ ಮೀಸಲಾತಿಗೆ ವಿರುದ್ಧವಾಗಿಲ್ಲ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದ್ದರೂ, ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ, ಕ್ಷೇತ್ರ ವಿಂಗಡಣೆ ನಿರ್ಣಯಕ್ಕೆ ವಿರುದ್ಧವಾಗಿದ್ದೇವೆ ಎಂದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಇನ್ನೂ ತಮಿಳುನಾಡಿನ ಡಿಎಂಕೆ ಪಕ್ಷದ ಸಂಸದರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಲೋಕಸಭೆಯ ಕಲಾಪದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ಕ್ಷೇತ್ರ ವಿಂಗಡಣೆ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.






