ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಪ್ರಸಿದ್ಧ ಮ್ಯಾರಿಯೆಟ್ ಹೋಟೆಲ್‌ನ ಮೇಲೆ ಭಯೋತ್ಪಾದಕ ದಾಳಿ ಮಾಡುವ ಆತಂಕ ಇರುವ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರನ್ನು ಜಾಗರೂಕರಾಗಿರುವಂತೆ ಮುನ್ಸೂಚನೆ ನೀಡಿವೆ. ಅಮೆರಿಕದ ಜೊತೆಗೆ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ಕೂಡ ಈ ಎಚ್ಚರಿಕೆ ನೀಡಿವೆ.

ಇಸ್ಲಾಮಾಬಾದ್‌ನಲ್ಲಿ ಪೊಲೀಸ್ ಭದ್ರತೆ
ಇಸ್ಲಾಮಾಬಾದ್‌ನ ಪಂಚತಾರಾ ಹೋಟೆಲ್‌ನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ, ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದೆ. ಇಡೀ ರಾಜಧಾನಿಯನ್ನು ಹೈ ಅಲರ್ಟ್ ಮಾಡಲಾಗಿದೆ. ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಎಚ್ಚರಿಕೆಯ ನಂತರ ಇಸ್ಲಾಮಾಬಾದ್ ಪೊಲೀಸರು ಈ ಟೈಟ್ ಸೆಕ್ಯೂರಿಟಿಯನ್ನು ರೂಪಿಸಿದ್ದಾರೆ.
ತಾನೇ ಸೃಷ್ಟಿಸಿದ ಭಯೋತ್ಪಾದಕರಿಂದ ದಾಳಿಯ ಬೆದರಿಕೆ ಎದುರಿಸುತ್ತಿರುವ ಪಾಕಿಸ್ತಾನ, ರಾಜಧಾನಿಯ ಪ್ರತಿಯೊಂದು ಮೂಲೆ ಮೂಲೆ ಮೇಲೂ ತೀವ್ರ ನಿಗಾ ಇರಿಸುತ್ತಿದೆ. ಪೊಲೀಸರ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ 25 ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳ ಸಹಾಯದಿಂದ ನಿಗಾ ಇರಿಸಲಾಗುತ್ತಿದೆ.
ಕಳೆದ ವಾರ ಡಿಸೆಂಬರ್ 23 ರಂದು ಇಸ್ಲಾಮಾಬಾದ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು. ಪೊಲೀಸರು ಅನುಮಾನದ ಹಿನ್ನೆಲೆಯಲ್ಲಿ ವಾಹನ ನಿಲ್ಲಿಸಲು ಹೇಳಿದಾಗ ಉಗ್ರ ಸ್ಪೋಟಿಸಿಕೊಂಡಿದ್ದಾನೆ. ಇದರೊಂದಿಗೆ ಇಸ್ಲಾಮಾಬಾದ್ ಓರ್ವ ಪೊಲೀಸ್ ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಆತ್ಮಾಹುತಿ ದಾಳಿಯಲ್ಲಿ ಇಬ್ಬರು ಸಾಮಾನ್ಯ ನಾಗರಿಕರೂ ಸಹ ಗಾಯಗೊಂಡಿದ್ದರು.
ಕಳೆದ ಎಂಟು ವರ್ಷಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಆತ್ಮಹತ್ಯಾ ದಾಳಿ ಇದಾಗಿತ್ತು. ದಾಳಿಯ ಮಾಹಿತಿ ಬಂದ ಕೂಡಲೇ ಅಲ್ಲೋಲಕಲ್ಲೋಲ ಉಂಟಾಗಿತ್ತು. ಈ ಆತ್ಮಹತ್ಯಾ ಸ್ಫೋಟ ನಡೆದ ಪ್ರದೇಶದಲ್ಲಿ ಪಾಕಿಸ್ತಾನಿ ಸಂಸತ್ತು ಸೇರಿದಂತೆ ಹಲವು ದೊಡ್ಡ ಸರ್ಕಾರಿ ಕಚೇರಿಗಳಿವೆ. ಈ ಆತ್ಮಾಹುತಿ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯ ನಂತರ, ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಸೌದಿ ಅರೇಬಿಯಾ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ. 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನದಲ್ಲಿರುವ ಯುಎಸ್ ರಾಯಭಾರ ಕಚೇರಿ ತನ್ನ ನಾಗರಿಕರಿಗಾಗಿ ಮೊದಲ ಎಚ್ಚರಿಕೆಯನ್ನು ನೀಡಿತ್ತು. ಪಾಕಿಸ್ತಾನದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿ, ಇಸ್ಲಾಮಾಬಾದ್‌ನಲ್ಲಿರುವ ಐಷಾರಾಮಿ ಹೋಟೆಲ್‌ಗೆ ಹೋಗದಂತೆ ತನ್ನ ಎಲ್ಲಾ ನಾಗರಿಕರಿಗೆ ಸೂಚಿಸಿದೆ.










