ನಾ ದಿವಾಕರ
ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಉಳಿವಿಗಾಗಿ ಅಥವಾ ತನ್ನ ಸಂಪತ್ತಿನ ವೃದ್ಧಿಗಾಗಿ ಎಂತಹ ಹೀನ ಕೃತ್ಯವನ್ನು ಎಸಗಲೂ ಹಿಂಜರಿಯಲಾರ. ನೂರಾರು ಧರ್ಮಸಂಹಿತೆಗಳು, ತತ್ವಶಾಸ್ತ್ರಗಳು ಜಗತ್ತಿನ ಇತಿಹಾಸವನ್ನು ಅಲಂಕರಿಸಿದ್ದರೂ, ಮಾನವ ಸಮಾಜದಲ್ಲಿ ಅಂತರ್ಗತವಾಗಿರುವ ಈ ದುಷ್ಟತನವನ್ನು ಸಂಪೂರ್ಣವಾಗಿ ಹೋಗಲಾಡಿಸಲಾಗಿಲ್ಲ. ಏಕೆಂದರೆ ಅಂತಿಮವಾಗಿ ಹುಲು ಮಾನವನ ಅಭಿಲಾಷೆ ತನ್ನ ಏಳಿಗೆ ಮತ್ತು ಸಮೃದ್ಧಿಯಾಗಿರುತ್ತದೆ. ಈ ಸ್ವಾಭಾವಿಕ ಮನೋಭಾವವೇ ಸಮಾಜದ ನರನಾಡಿಗಳಲ್ಲೂ ಪ್ರವಹಿಸುತ್ತಿರುವುದರಿಂದ, ಈ ಸಮಾಜಗಳನ್ನು ಸಮಗ್ರ ನೆಲೆಯಲ್ಲಿ ಪ್ರತಿನಿಧಿಸುವ ಸರ್ಕಾರ ಅಥವಾ ಪ್ರಭುತ್ವಗಳು ತಮ್ಮ ಆಳ್ವಿಕೆಯ ದೇಶ ಹಾಗೂ ಅರ್ಥವ್ಯವಸ್ಥೆಯ ಸಮೃದ್ಧಿಗಾಗಿ, ಹೀನಾತಿಹೀನ ಕೃತ್ಯಗಳಿಗೆ ಮುಂದಾಗುವುದು ಸಾಮಾನ್ಯ ಸಂಗತಿಯಾಗಿದೆ.
ಈ ಮನೋಭಾವವೇ ಸಣ್ಣ ಪ್ರಮಾಣದ ಮತಾಂಧ ದಾಳಿಯಿಂದ ವಿಶ್ವಯುದ್ಧದವರೆಗೂ ವ್ಯಾಪಿಸುವುದನ್ನು ಮಾನವ ಇತಿಹಾಸದ ವಿವಿಧ ಹಂತಗಳಲ್ಲಿ ಗುರುತಿಸಬಹುದು. ಸಮಾಜದಲ್ಲಿ ಆಧಿಪತ್ಯ ಸಾಧಿಸುವ, ಪ್ರಾಬಲ್ಯ ಸ್ಥಾಪಿಸುವ ಮತ್ತು ಯಜಮಾನಿಕೆಯನ್ನು ಕಾಪಾಡುವ ದೃಷ್ಟಿಯಿಂದ, ಹಾದಿಗೆ ಅಡ್ಡ ಬರುವವರನ್ನು ಮತ್ತು ವಿರೋಧಿಸುವವರನ್ನು ಕೊಲೆ ಮಾಡಲೂ ಹೇಸದ ಒಂದು ಊಳಿಗಮಾನ್ಯ ಮನಸ್ಥಿತಿಯನ್ನು ಭಾರತವನ್ನೂ ಒಳಗೊಂಡಂತೆ ಎಲ್ಲ ದೇಶಗಳಲ್ಲೂ, ಇಂದಿಗೂ ಕಾಣಬಹುದು. ಸಾಮಾನ್ಯ ಪರಿಭಾಷೆಯಲ್ಲಿ ಇದನ್ನು ಶೋಷಣೆ-ದೌರ್ಜನ್ಯ ಎನ್ನಲಾಗುವುದಾದರೂ, ಸಮಾಜಶಾಸ್ತ್ರೀಯ ನೆಲೆಯಲ್ಲಿ ಇಂತಹ ವರ್ತನೆಯನ್ನು ರೋಗಿಷ್ಟ ಮನಸ್ಥಿತಿ ಎಂದೇ ನಿರ್ವಚಿಸಲಾಗುತ್ತದೆ. ವ್ಯಷ್ಟಿಯಿಂದ ಸಮಷ್ಟಿಯವರೆಗೆ ಕಾಣಬಹುದಾದ ಈ ರೋಗಿಷ್ಟ ಮನಸ್ಥಿತಿ ವ್ಯಕ್ತಿಯಿಂದ ಭೌಗೋಳಿಕ ದೇಶದವರೆಗೂ ವಿಸ್ತರಿಸುವುದನ್ನು ಚರಿತ್ರೆ ದಾಖಲಿಸಿದೆ.

ಕ್ರೌರ್ಯ-ಹಿಂಸೆಯ ಸಾಂಸ್ಥೀಕರಣ
ಇಂತಹ ಒಂದು ರೋಗಿಷ್ಟ ಮನಸ್ಥಿತಿಯನ್ನು ಅಮೆರಿಕದ ಸಾಮ್ರಾಜ್ಯಶಾಹಿ ನಡೆಯಲ್ಲಿ ಗುರುತಿಸಬಹುದು. ಕೊಲ್ಲಿ ರಾಷ್ಟ್ರಗಳು, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿರುವ ಅಪಾರ ತೈಲ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಅಮೆರಿಕದ ದಾಹಕ್ಕೆ ಈಗಾಗಲೇ ಹಲವು ರಾಷ್ಟ್ರಗಳು ಬಲಿಯಾಗಿವೆ. ಈಗ ವೆನೆಜುಯೆಲಾ . ಒಂದು ಸ್ವತಂತ್ರ-ಸಾರ್ವಭೌಮ ದೇಶದ ಅಧ್ಯಕ್ಷ ಮತ್ತು ಆತನ ಪತ್ನಿಯನ್ನು ನಡುರಾತ್ರಿಯಲ್ಲಿ, ಅವರ ನಿವಾಸದೊಳಗೇ ನುಗ್ಗಿ ವಶಪಡಿಸಿಕೊಳ್ಳುವ ದಾರ್ಷ್ಟ್ಯವನ್ನು ಸರಳವಾಗಿ ವಿವರಿಸಲಾಗುವುದಿಲ್ಲ. ಈ ಕಾರಣದಿಂದಲೇ ಒಂದು ಪುಟ್ಟ ದೇಶದ ಮೇಲೆ ನಿರಂತರ ಬಾಂಬ್ ದಾಳಿ ನಡೆಸುವ ಸಾಮ್ರಾಜ್ಯಶಾಹಿಯ ನಡವಳಿಕೆ ನಾಗರಿಕತೆಯ ಎಲ್ಲ ಎಲ್ಲೆಗಳನ್ನೂ ದಾಟಿದ ಒಂದು ಅಮಾನುಷ ಕ್ರೌರ್ಯ ಎಂದು ಬಣ್ಣಿಸಬಹುದು.
ಇನ್ನೂ ಕ್ರೂರ ಎನಿಸುವುದು ವಿಶ್ವ ಸಮುದಾಯದ ತಣ್ಣನೆಯ ಪ್ರತಿಕ್ರಿಯೆ ಅಥವಾ ಮೌನ. ಹಲ್ಲೆ-ದೌರ್ಜನ್ಯಕ್ಕೊಳಗಾದ ಸಮಾಜ ಅಥವಾ ದೇಶವನ್ನು, ಅಷ್ಟೇಕೆ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೂ ಸಹ ಸಂತ್ರಸ್ತರೆಂದು ಪರಿಗಣಿಸದೆ, ಅಪರಾಧಿಗಳಾಗಿ ಕಾಣುವ ವರ್ತಮಾನದ ಸಂದರ್ಭದಲ್ಲಿ, ಅಮೆರಿಕದ ದುಸ್ಸಾಹಸಕ್ಕೆ ಕಾರಣಗಳನ್ನೂ ಇದೇ ಸೂತ್ರದಡಿಯಲ್ಲೇ ಗುರುತಿಸಲಾಗುತ್ತದೆ. ತಾನು ಏಕಾಏಕಿ ಬಾಂಬ್ ದಾಳಿ ನಡೆಸಿ, ಏಕಪಕ್ಷೀಯ ಯುದ್ಧ ಸಾರುವ ಸಂದರ್ಭದಲ್ಲೆಲ್ಲಾ ಅಮೆರಿಕವು ದಾಳಿಗೊಳಗಾದ ಅನ್ಯ ರಾಷ್ಟ್ರವನ್ನು ಭಯೋತ್ಪಾದನೆಯ ತಾಣ, ಮಾದಕ ವಸ್ತುಗಳ ಕೇಂದ್ರ, ಮಾರಕಾಸ್ತ್ರಗಳ ಶಸ್ತ್ರಾಗಾರ ಎಂದು ಬಣ್ಣಿಸುವುದನ್ನು ಕಳೆದ 50 ವರ್ಷಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಈ ತೀರ್ಪು ನೀಡುವುದು ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ವಿಶ್ವಸಂಸ್ಥೆ ಅಲ್ಲ, ಒಬ್ಬ ಅಮೆರಿಕದ ಅಧ್ಯಕ್ಷ.

ಈ ತೀರ್ಪಿಗೆ ತಲೆಬಾಗುವ ಇತರ ದೇಶಗಳು ಅಮೆರಿಕದ ದುರ್ವರ್ತನೆಯನ್ನು, ಅಮಾನವೀಯ ದಾಳಿಯನ್ನು ಮತ್ತು ಯುದ್ಧಕೋರ ನೀತಿಯನ್ನು ಖಂಡಿಸದಿರುವುದು ಸಾಮ್ರಾಜ್ಯಶಾಹಿಯ ಶಕ್ತಿ-ಸಾಮರ್ಥ್ಯವನ್ನು ಸೂಚಿಸುತ್ತದೆ. ಶಾಂತಿ ಸ್ಥಾಪನೆಗಾಗಿ ಆಗ್ರಹಿಸುವ ದೇಶಗಳಿಗೆ ಮತ್ತು ವಿಶ್ವ ನಾಯಕರಿಗೆ, ಶಾಂತಿ ಎಂಬ ಪದದ ಔದಾತ್ಯವಾಗಲೀ, ಔಚಿತ್ಯವಾಗಲೀ ಅರ್ಥವಾಗಿಲ್ಲ ಎನ್ನುವುದು ಇಂತಹ ಬಾಲಿಶ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗುತ್ತದೆ. ಒಂದು ಸಾರ್ವಭೌಮ ದೇಶದ ಮೇಲೆ ಏಕಾಏಕಿ ಬಾಂಬ್ ದಾಳಿನಡೆಸಿ, ಅಲ್ಲಿನ ಜನತೆ ಮತ್ತು ಸಂಪತ್ತನ್ನು ಧ್ವಂಸಗೊಳಿಸಿ, ಅತಿಕ್ರಮವಾಗಿ ಒಳಗೆ ಪ್ರವೇಶಿಸಿ, ಅಲ್ಲಿನ ಅಧ್ಯಕ್ಷರನ್ನು ವಶಪಡಿಸಿಕೊಳ್ಳುವುದು, ಸರ್ಕಾರವನ್ನು ಪದಚ್ಯುತಗೊಳಿಸಿ , ತನ್ನದೇ ಸೂತ್ರದ ಗೊಂಬೆಯ ಆಳ್ವಿಕೆಯನ್ನು (Puppet Regime) ನೇಮಿಸಿ ಹೊಸ ಸರ್ಕಾರ ರಚಿಸುವುದು ಸಾಮ್ರಾಜ್ಯಶಾಹಿಯ ಚಾರಿತ್ರಿಕ ಲಕ್ಷಣ.
ಇಲ್ಲಿ ಶಾಂತಿ ನೆಲೆಸುವುದೆಂದರೆ ಅರ್ಥವೇನು ? ದಾಳಿಗೊಳಗಾದ ದೇಶ ತನ್ನ ಮೇಲೆ ನಡೆದ ಅತಿಕ್ರಮಣವನ್ನು ಸಹಿಸಿಕೊಂಡು, ಸುಮ್ಮನಾಗುವುದೇ ? ಅಲ್ಲಿನ ಜನತೆ ತಮ್ಮ ನಾಯಕನ ಸ್ಥಾನಕ್ಕೆ ಮತ್ತೊಬ್ಬರು ಬರುವುದನ್ನು ವಿರೋಧಿಸದೆ ಸ್ವೀಕರಿಸುವುದೇ ? ದಾಳಿಗೊಳಗಾದ ದೇಶದಲ್ಲಿ ಆಳ್ವಿಕೆಯ ಮಾದರಿ ಪ್ರಜಾಪ್ರಭುತ್ವವೋ , ಸರ್ವಾಧಿಕಾರವೋ ಎನ್ನುವುದು ಆ ದೇಶದ ಜನರ ಆಯ್ಕೆ. ಇದನ್ನು ಪ್ರಶ್ನಿಸುವ, ವಿರೋಧಿಸುವ, ಪದಚ್ಯುತಗೊಳಿಸುವ ಹಕ್ಕು ಮತ್ತು ಅಧಿಕಾರ ಇರುವುದೂ ಆ ಜನರ ಕೈಯ್ಯಲ್ಲೇ. ಈ ಅಧಿಕಾರವನ್ನು ತನ್ನದಾಗಿಸಿಕೊಂಡು, ಇಡೀ ವಿಶ್ವದಲ್ಲಿ ಪ್ರಜಾಪ್ರಭುತ್ವದ ಗುತ್ತಿಗೆ ಪಡೆದವರಂತೆ ಅನ್ಯ ದೇಶಗಳ ಮೇಲೆ ದುರಾಕ್ರಮಣ ಮಾಡುವ ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ʼ ಶಾಂತಿ ʼ ಕಾಪಾಡುವುದೆಂದರೆ ಏನರ್ಥ ?
ತೈಲ ಸಂಪತ್ತು ಮತ್ತು ಮಾರುಕಟ್ಟೆ

ಮಾನವ ಸಮಾಜದಲ್ಲಿ ʼ ಅನ್ಯರ ʼ ಸಾವು ನೋವುಗಳನ್ನು ಲೆಕ್ಕಿಸದ ಅಥವಾ ಸಂಭ್ರಮಿಸುವ ಕ್ರೂರ ಮನಸ್ಥಿತಿಗೆ ಶತಮಾನಗಳ ಇತಿಹಾಸವಿದೆ. ಹಾಗೆಯೇ ಅನ್ಯ ದೇಶಗಳಲ್ಲಿ ಸಂಭವಿಸುವ ಸಾವು ನೋವುಗಳನ್ನೂ ʼ ದಿಗ್ವಿಜಯ ʼದ ಕಲ್ಪನೆಯಲ್ಲಿ ಸಂಭ್ರಮಿಸುವ ಯುದ್ಧ ಪರಂಪರೆಗೂ ಅಷ್ಟೇ ದೀರ್ಘ ಇತಿಹಾಸವಿದೆ. ಇದನ್ನು ಯುದ್ಧ ಪರಂಪರೆಯಲ್ಲಿ ʼ ಪರಾಕ್ರಮ ʼ ಎಂದೂ ಬಣ್ಣಿಸಲಾಗುತ್ತದೆ. ಅಮೆರಿಕದ ಡೆಲ್ಟಾ ಸೇನೆಯು ವೆನೆಜುಯೆಲಾ ಮೇಲೆ ವೈಮಾನಿಕ ದಾಳಿ ನಡೆಸಿ, ಅಧಕ್ಷೀಯ ನಿವಾಸವನ್ನು ಅಕ್ರಮವಾಗಿ ಪ್ರವೇಶಿಸಿ, ಅಲ್ಲಿನ ಅಧ್ಯಕ್ಷ ನಿಕೊಲಾಸ್ ಮಡುರೋ ಮತ್ತು ಆತನ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಪಡಿಸಿಕೊಂಡ ಪ್ರಕ್ರಿಯೆಯನ್ನು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗೆಯೇ ಬಣ್ಣಿಸಿದ್ದಾರೆ. 1989ರ ಪನಾಮಾ ಅತಿಕ್ರಮಣದ ನಂತರದಲ್ಲಿ ಇದು ಸಾಮ್ರಾಜ್ಯಶಾಹಿ ಅಮೆರಿಕದ, ಅತ್ಯಂತ ನೇರ ಸೇನಾ ದಾಳಿಯಾಗಿದೆ.
ಇಷ್ಟಕ್ಕೂ ಲ್ಯಾಟಿನ್ ಅಮೆರಿಕಾದ ಪುಟ್ಟ ರಾಷ್ಟ್ರ ವೆನೆಜುಯೆಲಾದ ಮೇಲೆ ಅಮೆರಿಕ ದಾಳಿ ನಡೆಸಲು ಕಾರಣವಾದರೂ ಏನು ? ಅಲ್ಲಿ ಮಡುರೋ ಅವರ ಸಮಾಜವಾದಿ ಸರ್ಕಾರ ಇರುವುದು ಒಂದು ಕಾರಣವಾಗಿರಬಹುದು. ಈ ಪುಟ್ಟ ದೇಶದಿಂದ ಅಮೆರಿಕಾಗೆ ಯಾವುದೇ ರೀತಿಯ ಅಪಾಯವಿಲ್ಲ. ಅಥವಾ ಟ್ರಂಪ್ ಆರೋಪಿಸುವ ಹಾಗೆ ವೆನೆಜುಯೆಲಾ ಮಾದಕ ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ದೇಶವೂ ಅಲ್ಲ. ಅಮೆರಿಕ ಇದೇ ಆರೋಪವನ್ನು ಹೊರಿಸಿದ್ದರೂ, ಸೂಕ್ತ ಸಾಕ್ಷಿ ಪುರಾವೆಯನ್ನು ಒದಗಿಸಿಲ್ಲ. ಮಡುರೋ ಮಾದಕ ವಸ್ತುಗಳ ಕಾರ್ಟೆಲ್ ನಡೆಸುತ್ತಿಲ್ಲ. ಮಡುರೋ ಆಳ್ವಿಕೆಯಲ್ಲಿ ವೆನೆಜುಯೆಲಾ ಅತಿ ದೊಡ್ಡ ಮಾದಕ ದ್ರವ್ಯ ಸಾಗಣೆದಾರ ದೇಶವಾಗಿದೆ ಎಂಬ ಹುರುಳಿಲ್ಲದ ಆರೋಪ ಹೊರಿಸಿದ್ದ ಅಮೆರಿಕಾ , ಆ ದೇಶದ ಹೊರಗೆ ಹಲವು ಹಡಗುಗಳ ಮೇಲೆ ಸಹ ವೈಮಾನಿಕ ದಾಳಿ ನಡೆಸಿತ್ತು.
![]()
ತೈಲ ಸಂಪತ್ತನ್ನು ಹೊಂದಿರುವ ದೇಶಗಳನ್ನು ಆಕ್ರಮಿಸಲು ಸದಾ ಹವಣಿಸುವ ಅಮೆರಿಕಾಗೆ ವೆನೆಜುಯೆಲಾ ಹೊಂದಿರುವ 300 ಶತಕೋಟಿ ಬ್ಯಾರಲ್ ತೈಲದ ಮೇಲೆ ಆಧಿಪತ್ಯ ಸಾಧಿಸುವುದು ಪ್ರಧಾನ ಧ್ಯೇಯ ಎನ್ನುವುದು ಸಾರ್ವತ್ರಿಕ ಸತ್ಯ. ವಿಶ್ವದಲ್ಲೇ ಅತಿ ಹೆಚ್ಚು ತೈಲ ಸಂಪತ್ತನ್ನು ಈ ದೇಶ ಹೊಂದಿದೆ. ಬಹಳ ಮುಖ್ಯವಾಗಿ ಕೇವಲ 35 ಶತಕೋಟಿ ಬ್ಯಾರಲ್ ತೈಲ ಹೊಂದಿರುವ ಅಮೆರಿಕಾಗೆ, ಗ್ಯಾಸೋಲಿನ್ ಉತ್ಪಾದನೆಗೆ ಉಪಯಕ್ತವಾದ ಗುಣಮಟ್ಟದ ತೈಲ ಲಭ್ಯವಿಲ್ಲ. ವೆನೆಜುಯೆಲಾ ಈ ವಸ್ತುವನ್ನು ಹೊಂದಿದೆ. ಈ ಮೂಲ ಕಾರಣದೊಂದಿಗೇ ಅಮೆರಿಕದ ದಾಳಿ ಮತ್ತು ವೆನೆಜುಯೆಲಾದ ಆಳ್ವಿಕೆಯ ಬದಲಾವಣೆಗೆ, ಇನ್ನಿತರ ಕಾರಣಗಳನ್ನೂ ಗುರುತಿಸಬಹುದು.
ದಾಳಿಯ ಮೂಲ ಕಾರಣಗಳು
ಮೊದಲನೆಯದು, ಪಶ್ಚಿಮ ಗೋಳಾರ್ಧದಲ್ಲಿ (Western Hemisphere) ತನ್ನ ಆಧಿಪತ್ಯವನ್ನು ಶಾಶ್ವತವಾಗಿ ಸ್ಥಾಪಿಸುವ ಅಮೆರಿಕದ ಮಹತ್ವಾಕಾಂಕ್ಷೆ. 1823ರಲ್ಲೇ ಅಮೆರಿಕದ ಅಧ್ಯಕ್ಷ ಜೇಮ್ಸ್ ಮನ್ರೋ , ಭವಿಷ್ಯದ ಯೂರೋಪ್ ದೇಶಗಳೊಳಗಿನ ಹಸ್ತಕ್ಷೇಪಗಳಿಗೆ ಮತ್ತು ವಸಾಹತೀಕರಣಕ್ಕೆ ಅಮೆರಿಕಕ್ಕೆ ಯಾವುದೇ ಇತಿಮಿತಿ ಇರುವುದಿಲ್ಲ ಎಂದು ಘೋಷಿಸಿದ್ದರು. ಇದನ್ನು ಮನ್ರೋ ಸಿದ್ದಾಂತ ಎಂದೇ ಕರೆಯಲಾಗುತ್ತದೆ. ಇದರ ವಿಸ್ತರಣೆಯಾಗಿ ಡೊನಾಲ್ಡ್ ಟ್ರಂಪ್ ಆಡಳಿತವು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳನ್ನು ರಣತಾಂತ್ರಿಕ ಆದ್ಯತೆ ಎಂದು ತನ್ನ ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಗುರುತಿಸುತ್ತದೆ. ಲ್ಯಾಟಿನ್ ಅಮೆರಿಕಾದ ಮೇಲೆ ಇತರ ದೇಶಗಳ, ಅಂದರೆ ಮುಖ್ಯವಾಗಿ ಚೀನಾದ, ಪ್ರಭಾವಕ್ಕೆ ಅವಕಾಶ ನೀಡದೆ, ಇಡೀ ಪಶ್ಚಿಮ ಗೋಳಾರ್ಧವು ಅಮೆರಿಕದ ಆಧಿಪತ್ಯದಲ್ಲೇ ಇರಬೇಕು ಎಂದು ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದರು. ಇದನ್ನು ಸಾಕಾರಗೊಳಿಸುವ ಪ್ರಥಮ ಹೆಜ್ಜೆ ವೆನೆಜುಯೆಲಾ ಮೇಲಿನ ಆಕ್ರಮಣ.

ಎರಡನೆಯ ಕಾರಣ ಎಂದರೆ, ಈ ಪ್ರದೇಶದಲ್ಲಿ ಅಮೆರಿಕದ ಪ್ರಾಬಲ್ಯವನ್ನು ವಿಸ್ತರಿಸಿ, ಆಧಿಪತ್ಯವನ್ನು ಸಾಧಿಸುತ್ತಲೇ, ಅಮೆರಿಕ ಚೀನಾ ಮತ್ತು ರಷ್ಯಾ ದೇಶಗಳ ಪ್ರಭಾವವನ್ನು ನಿರ್ಬಂಧಿಸುವುದು. ಬೆಲ್ಟ್ ಅಂಡ್ ರೋಡ್ ಯೋಜನೆಯ ಮೂಲಕ ಚೀನಾ ಈಗಾಗಲೇ ಲ್ಯಾಟಿನ್ ಅಮೆರಿಕದಲ್ಲಿ ಅಪಾರ ಮೊತ್ತದ ಬಂಡವಾಳ ಹೂಡಿಕೆ ಮಾಡಿದೆ. ಈ ಪ್ರದೇಶದ ಬಹುತೇಕ ದೇಶಗಳೊಡನೆ ವ್ಯಾಪಾರಿ ಸಹಭಾಗಿತ್ವ ಹೊಂದಿರುವ ದೇಶಗಳ ಪೈಕಿ ಚೀನಾ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲೇ ತಮ್ಮ ಎರಡನೆಯ ಪಾಳಿಯಲ್ಲಿ ಡೊನಾಲ್ಡ್ ಟ್ರಂಪ್ ಈ ಪ್ರದೇಶದಲ್ಲಿ ಬಲಪಂಥೀಯ ಸರ್ಕಾರಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಬ್ರೆಜಿಲ್‌ನ ಬೋಲ್ಸನಾರೋ, ಅರ್ಜೆಂಟೈನಾದ ಜೇವಿಯರ್ ಮಿಲೀ, ಹೊಂಡುರಾಸ್‌ನ ನಸ್ರಿ ಅಸ್‌ಫುರಾ ಕೆಲವು ನಿದರ್ಶನಗಳು. ಈ ನಡುವೆ ಅಮೆರಿಕದ ಆಧಿಪತ್ಯವನ್ನು ವಿರೋಧಿಸುವ ಎರಡು ದೇಶಗಳು ಕ್ಯೂಬಾ ಮತ್ತು ವೆನೆಜುಯೆಲಾ. ಎರಡೂ ಸಮಾಜವಾದಿ ಆಳ್ವಿಕೆಯನ್ನು ಹೊಂದಿರುವುದು ಕಾಕತಾಳೀಯ.
ಅಪಾರ ತೈಲ ಸಂಪತ್ತಿನ ಒಡೆತನ ಹೊಂದಿರುವ ವೆನೆಜುಯೆಲಾದಿಂದ ಶೇಕಡಾ 80ರಷ್ಟು ತೈಲವನ್ನು ಚೀನಾ ಖರೀದಿಸುತ್ತದೆ. ಇಲ್ಲಿನ ತೈಲ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವವರ ಪೈಕಿ ಚೀನಾದ ಸಿಎನ್‌ಪಿಸಿ ಅಗ್ರಗಣ್ಯ ಕಂಪನಿಯಾಗಿದೆ. 2025ರ ಆರಂಭದಲ್ಲಿ ಪನಾಮಾ ದೇಶದ ಮೇಲೆ ಒತ್ತಡ ಹೇರಿದ ಟ್ರಂಪ್ ಚೀನಾದ ಬೆಲ್ಟ್ ಅಂಡ್ ರೋಡ್ ಯೋಜನೆಯಿಂದ ಹಿಮ್ಮೆಟ್ಟುವಂತೆ ಮಾಡಿದ್ದರು. ಈಗ ಮಡುರೋ ಸರ್ಕಾರವನ್ನೂ ಮಣಿಸಿದರೆ ಈ ಪ್ರದೇಶದ ಇತರ ಸಣ್ಣ ಹಾಗೂ ದುರ್ಬಲ ದೇಶಗಳಿಗೆ ಬಲವಾದ ಸಂದೇಶ ರವಾನಿಸಬಹುದು ಎಂಬ ದುರುದ್ದೇಶವನ್ನು, ಅಮೆರಿಕದ ಈ ದಾಳಿಯಲ್ಲಿ ಕಾಣಬಹುದು. ಈ ಪ್ರದೇಶವನ್ನು ಚೀನಾದ ಪ್ರಭಾವದಿಂದ ತಪ್ಪಿಸಿ ತನ್ನ ಆಧಿಪತ್ಯವನ್ನು ಗಟ್ಟಿ ಮಾಡಿಕೊಳ್ಳುವ ಒಂದು ವಸಾಹತೀಕರಣದ ಧೋರಣೆಯನ್ನು ಇಲ್ಲಿ ಗುರುತಿಸಬಹುದು.

ಮೂರನೆಯ ಪ್ರಬಲ ಕಾರಣ ಎಂದರೆ, ವೆನೆಜುಯೆಲಾ ಬಳಿ ಇರುವ ಅಪಾರ ತೈಲ ಸಂಪತ್ತು. ವಿಶ್ವದ ಒಟ್ಟು ತೈಲ ಸಂಗ್ರಹಾಗಾರಗಳ ಪೈಕಿ ಶೇಕಡಾ 17ರಷ್ಟನ್ನು ಹೊಂದಿರುವ ಈ ಪುಟ್ಟ ದೇಶದ ಬಳಿ 300 ಶತಕೋಟಿ ಬ್ಯಾರಲ್ ತೈಲದ ದಾಸ್ತಾನು ಇದೆ. ಅಮೆರಿಕದ ಎಕ್ಸ್‌ಕಾನ್ ಮೊಬಿಲ್ ಮತ್ತು ಗಲ್ಫ್ ಆಯಿಲ್ ಕಂಪನಿಗಳ ಹಿಡಿತದಲ್ಲಿದ್ದ ಈ ತೈಲ ಸಂಪನ್ಮೂಲಗಳನ್ನು 1976ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. 1999ರಲ್ಲಿ ಹ್ಯೂಗೋ ಚವೇಜ್ ಅಧಿಕಾರಕ್ಕೆ ಬಂದಾಗ, ತೈಲ ಸಂಪನ್ಮೂಲಗಳ ಮೇಲೆ ಸರ್ಕಾರದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲಾಯಿತು. ಇಲ್ಲಿ ಬರುವ ಲಾಭವನ್ನು ಬಡತನ ನಿವಾರಣೆಯ ಯೋಜನೆಗಳಿಗೆ ವಿನಿಯೋಗಿಸಲಾಗಿತ್ತು. 2002ರಲ್ಲಿ ಅಮೆರಿಕದ ಪ್ರಚೋದನೆಯಿಂದ ಚವೇಜ್ ವಿರುದ್ಧ ಕ್ಷಿಪ್ರಕ್ರಾಂತಿ ನಡೆದರೂ, ಯಶಸ್ವಿಯಾಗಲಿಲ್ಲ, ಎರಡು ದಿನಗಳೊಳಗಾಗಿ ಚವೇಜ್ ಮರಳಿ ಅಧಿಕಾರ ಪಡೆದಿದ್ದರು. ಇದಕ್ಕೆ ಜನಾಂದೋಲನವೂ ಕಾರಣವಾಗಿತ್ತು.
ವೆನೆಜುಯೆಲಾ ಸರ್ಕಾರದ ಈ ರಾಷ್ಟ್ರೀಕರಣ ನೀತಿಯ ವಿರುದ್ಧ ಸಮರ ಸಾರಿದ ಅಮೆರಿಕದ ಅಧ್ಯಕ್ಷ ಟ್ರಂಪ್, 2019ರಲ್ಲೇ ಅಮೆರಿಕದ ತೈಲ, ಭೂಮಿ ಮತ್ತು ಆಸ್ತಿಯನ್ನು ಕದಿಯಲಾಗಿದೆ ಅದನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸತೊಡಗಿದರು. ಆಗ ವೆನೆಜುಯೆಲಾದಲ್ಲಿ ಅಮೆರಿಕದ ಆಪ್ತ ಜುವಾನ್ ಗಾಯ್ಡೋ ಹಂಗಾಮಿ ಅಧ್ಯಕ್ಷರಾಗಿದ್ದರು. . ತನ್ನ ಮಿತ್ರ ರಾಷ್ಟ್ರಗಳ ಮೂಲಕ ಅಮೆರಿಕವು, ವೆನೆಜುಯೆಲಾ ಚೀನಾ ಮತ್ತು ರಷ್ಯಾದೊಡನೆ ಸಂಪರ್ಕವನ್ನು ಕಡಿದುಕೊಂಡು, ಅಲ್ಲಿನ ತೈಲ ಸಂಪತ್ತು ಅಮೆರಿಕಾಗೆ ಲಭ್ಯವಾಗುವಂತೆ ಮಾಡಲು ಮಿತ್ರ ರಾಷ್ಟ್ರಗಳನ್ನು ಟ್ರಂಪ್ ಒತ್ತಾಯಿಸುತ್ತಿದ್ದರು. ಗಾಯ್ಡೋ ಅಧಿಕೃತವಾಗಿ ಚುನಾಯಿತರಾದರೆ ಈ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಈಗ ಮಡುರೋ ಬಂಧನ ಮತ್ತು ತನ್ನದೇ ಆದ ಆಪ್ತ ಸರ್ಕಾರವನ್ನು ನೇಮಿಸುವ ಮೂಲಕ ಟ್ರಂಪ್ ಮತ್ತು ಅಮೆರಿಕ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ನಿರೀಕ್ಷೆ ಹೊಂದಿದೆ.

ಅಮೆರಿಕಾದ ಈ ದಾಳಿಯಿಂದ ನೆರೆ ರಾಷ್ಟ್ರಗಳಾದ ಕೊಲಂಬಿಯಾ, ಕ್ಯೂಬಾ ಇನ್ನಿತರ ದೇಶಗಳು ಆತಂಕದಲ್ಲಿವೆ. ಇಡೀ ಪ್ರದೇಶದ ಮೇಲೆ ತನ್ನ ಪ್ರಾಬಲ್ಯ ಸಾಧಿಸುವ ಮೂಲಕ ತೈಲ ಮಾರುಕಟ್ಟೆಯ ಮೇಲೆ ಆಧಿಪತ್ಯ ಸಾಧಿಸುವ ಅಮೆರಿಕದ ಮಹತ್ವಾಕಾಂಕ್ಷೆಗೆ ಇನ್ನೂ ಹಲವು ದೇಶಗಳು ಬಲಿಪಶುಗಳಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಕೊಲ್ಲಿ ಮತ್ತು ಕೆರಿಬಿಯನ್ ದೇಶಗಳ ಮೇಲೆಯೂ ಇದೇ ದುರುದ್ದೇಶದಿಂದ ದಾಳಿ ನಡೆಸಿ ಅಲ್ಲಿನ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸಿರುವ ಅಮೆರಿಕ, ತನ್ನ ಸೇನಾ ಪ್ರಾಬಲ್ಯ, ಪೆಂಟಗನ್‌ನ ಸೇನಾ ಸಾಮರ್ಥ್ಯ ಮತ್ತು ಕೆಲವು ಮಿತ್ರ ರಾಷ್ಟ್ರಗಳ ಬೆಂಬಲದೊಂದಿಗೆ ತನ್ನ ಸಾಮ್ರಾಜ್ಯಶಾಹಿ ಧೋರಣೆಯನ್ನು ಮುಂದುವರೆಸಲಿದೆ. ಮಾರುಕಟ್ಟೆಯ ಆವರಣದಲ್ಲಿ ಡಾಲರ್ ಪ್ರಾಬಲ್ಯ ಮತ್ತು ರಣತಾಂತ್ರಿಕ ಆವರಣದಲ್ಲಿ ಪೆಂಟಗನ್‌ನ ಶಸ್ತ್ರ ಸಾಮರ್ಥ್ಯ ಅಮೆರಿಕವನ್ನು ಇಂತಹ ದುಸ್ಸಾಹಸಗಳಿಗೆ, ದುರಾಕ್ರಮಣಗಳಿಗೆ ಪ್ರಚೋದಿಸುತ್ತವೆ.
ನಾಗರಿಕ ಜಗತ್ತಿನ ನಿಷ್ಕ್ರಿಯತೆ
ವಿಪರ್ಯಾಸ ಕಾಣುವುದು ಅಮೆರಿಕದ ಈ ಕ್ರೌರ್ಯದಲ್ಲಿ ಅಲ್ಲ ಬದಲಾಗಿ ವಿಶ್ವ ಸಮುದಾಯದ, ಪ್ರಜಾಪ್ರಭುತ್ವ ಆಳ್ವಿಕೆಗಳ ತಣ್ಣನೆಯ ಪ್ರತಿಕ್ರಿಯೆಯಲ್ಲಿ, ಮೌನದಲ್ಲಿ ಮತ್ತು ಮೌನ ಸಮ್ಮತಿಯಲ್ಲಿ. ಹಿಂತಿರುಗಿ ನೋಡಿದಾಗ, 1960-70ರ ವಿಯೆಟ್ನಾಂ ಯುದ್ಧದ ಸಂದರ್ಭವನ್ನು ನೆನಪಿಸಿಕೊಳ್ಳಬಹುದು ಅಥವಾ 1990ರ ಕೊಲ್ಲಿ ಯುದ್ಧಗಳ ಸನ್ನಿವೇಶವನ್ನೂ ಸ್ಮರಿಸಬಹುದು. ಆ ಸಂದರ್ಭಗಳಲ್ಲಿ ವಿಶ್ವದಾದ್ಯಂತ ನಾಗರಿಕ ಸಮಾಜಗಳು, ಪ್ರಜಾಪ್ರಭುತ್ವ ದೇಶಗಳು, ಅಕಾಡೆಮಿಕ್ ಮತ್ತು ಬೌದ್ಧಿಕ ವಿದ್ವತ್ ವಲಯಗಳು, ಅಮೆರಿಕದ ಸಾಮ್ರಾಜ್ಯಶಾಹಿ ಯುದ್ಧಪರಂಪರೆಯ ವಿರುದ್ಧ ಎದ್ದು ನಿಂತು, ಒಕ್ಕೊರಲಿನಿಂದ ಖಂಡಿಸಿದ ಕ್ಷಣಗಳ ಛಾಯೆಯನ್ನೂ ಸಹ ವರ್ತಮಾನದಲ್ಲಿ ಕಾಣಲಾಗುತ್ತಿಲ್ಲ. ಎಡಪಂಥೀಯ ಸಂಘಟನೆಗಳು ಜಗತ್ತಿನ ವಿವಿಧ ದೇಶಗಳಲ್ಲಿ, ಭಾರತದಲ್ಲೂ ಸಹ ಅಮೆರಿಕದ ದುರಾಕ್ರಮಣದ ವಿರುದ್ಧ ಪ್ರತಿಭಟನೆ ನಡೆಸಿವೆ. ವೆನೆಜುಯೆಲಾ ಜನತೆಯ ಪ್ರತಿಕ್ರಿಯೆಯನ್ನು ಕಾದುನೋಡಬೇಕಿದೆ.
![]()







