ಕೇರಳದ ಪ್ರಸಿದ್ಧ ತ್ರಿಶೂರ್ ಪೂರಂನ ಮುನ್ನ ನಡೆಯುವ ಆನಾ ಚಮಯಂ (ಆನೆ ಶೃಂಗಾರ) ಸಮಯದಲ್ಲಿ ಪಾರಮೆಕ್ಕಾವು ದೇವಸ್ವಂ ಪ್ರದರ್ಶಿಸಿದ ಛತ್ರಿಗಳು ವಿವಾದಕ್ಕೆ ನಾಂದಿ ಹಾಡಿದೆ. ಹಿಂದೂ ಬಲಪಂಥೀಯ ರಾಜಕಾರಣದ ಐಕಾನ್ ವಿಡಿ ಸಾವರ್ಕರ್ ಅವರ ಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಇಟ್ಟ ಛತ್ರಿಗಳು ಇದೀಗ ಚರ್ಚೆಗೆ ಕಾರಣವಾಗಿದೆ.
ಮೇ 8 ರ ಭಾನುವಾರದಂದು ಆನೆ ಶೃಂಗಾರ ಪ್ರದರ್ಶನದಲ್ಲಿ ಛತ್ರಿಗಳನ್ನು ಪ್ರದರ್ಶಿಸಲಾಯಿತು. ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದನ್, ಸುಭಾಷ್ ಚಂದ್ರ ಬೋಸ್ ಮತ್ತು ಕೇರಳದ ಚಟ್ಟಂಪಿ ಸ್ವಾಮಿಕಲ್ ಅವರಂತಹ ಸಮಾಜ ಸುಧಾರಕರೊಂದಿಗೆ ಸಾವರ್ಕರ್ ಅವರ ಚಿತ್ರವನ್ನೂ ಛತ್ರಿಗಳ ಮೇಲೆ ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೂರಂ ಆಚರಣೆಯಿಂದ ವಿವಾದಿತ ಕೊಡೆಗಳನ್ನು ಹೊರಗಿಡುವಂತೆ ಹಲವರು ಒತ್ತಾಯಿಸಿದ್ದಾರೆ.
ದೆಹಲಿ ಮೂಲದ ಪತ್ರಕರ್ತೆ ಚಾರ್ಮಿ ಹರಿಕೃಷ್ಣನ್ ಫೇಸ್ಬುಕ್ ಪೋಸ್ಟ್ನಲ್ಲಿ “ಪಾರಮೆಕ್ಕಾವು ಸಾವರ್ಕರ್ ರನ್ನು ಛತ್ರಿ ಮೇಲೆ ಹಾಕಬಾರದು. ತ್ರಿಶೂರ್ ಪೂರಂ ಅನ್ನು ರಾಜಕೀಯಗೊಳಿಸುವುದನ್ನು ಮತ್ತು ಕೋಮುವಾದೀಕರಣ ಮಾಡುವುದನ್ನು ನಿಲ್ಲಿಸಿ” ಎಂದು ಬರೆದಿದ್ದಾರೆ.
ಯೂತ್ ಕಾಂಗ್ರೆಸ್ ಮತ್ತು ಸಿಪಿಐನ ವಿದ್ಯಾರ್ಥಿ ಘಟಕವಾದ ಎಐಎಸ್ಎಫ್ (ಅಖಿಲ ಭಾರತ ವಿದ್ಯಾರ್ಥಿಗಳ ಫೆಡರೇಶನ್) ಭಾನುವಾರ ಸಾವರ್ಕರ್ ಚಿತ್ರವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದೆ ಎಂದು ವರದಿಯಾಗಿದೆ, ಪ್ರತಿಭಟನಾಕಾರರು, ಪರಮೆಕ್ಕಾವು ದೇವಸ್ವಂ ಪ್ರದರ್ಶನದಿಂದ ಛತ್ರಿಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪರಮೆಕ್ಕಾವು ದೇವಸ್ವಂ ಬೋರ್ಡ್ ಅಧ್ಯಕ್ಷ ರಾಜೇಶ್ ಮೆನನ್ ಅವರು ಛತ್ರಿಯನ್ನು ಇನ್ನೂ ಸ್ವಲ್ಪ ಸಮಯದವರೆಗೆ ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ಗೆ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ಹೊರಡಿಸಿದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸಾವರ್ಕರ್ ಅವರ ಹೆಸರಿದೆ ಮತ್ತು ಅದನ್ನು ನಾವು ಛತ್ರಿಗಳಲ್ಲಿ ಹಾಕಿದ್ದೇವೆ. ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್ ಕೂಡ ಇದ್ದಾರೆ,” ಎಂದು ಅವರು ಹೇಳಿದ್ದಾರೆ.

ಕುಡಮಟ್ಟಂ ಸಮಯದಲ್ಲಿ ಛತ್ರಿಗಳನ್ನು ಬಳಸಬಾರದು ಎಂದು ಹೇಳುತ್ತಾರೆ, ಆದರೆ, ಪೂರಂ ಸಮಯದಲ್ಲಿ ಇದು ಪ್ರತಿ ವರ್ಷವೂ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.
“ಕುಡಮಟ್ಟಂ ಸಮಯದಲ್ಲಿ ನಾವು ಎಂದಿಗೂ ಜನರ ಪ್ರತಿಕೃತಿಯನ್ನು ಬಳಸುವುದಿಲ್ಲ, ಏಕೆಂದರೆ ಅವರನ್ನು ದೇವಿಗಿಂತ ಎತ್ತರದಲ್ಲಿ ಇಡಬಾರದು.” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ರಾಜೇಶ್ ಮೆನನ್ ಅವರಲ್ಲಿ ಸಾವರ್ಕರ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ನಂಬುತ್ತಾರೆಯೇ ಎಂದು ಕೇಳಿದಾಗ, “ಈ ಸಮಯದಲ್ಲಿ ಚರ್ಚಿಸುವ ವಿಷಯವಲ್ಲ” ಎಂದು ಹೇಳಿದ್ದಾರೆ.
ಪೂರಂ ಅನ್ನು ಪರಮೆಕ್ಕಾವು ಮತ್ತು ತಿರುವಂಬಾಡಿ ದೇವಸ್ವಂಗಳು ಆಯೋಜಿಸುತ್ತವೆ. ಪೂರಂ ಉತ್ಸವದ ಆರಂಭವನ್ನು ಸೂಚಿಸುವ ʼಕೊಡಿಯೆಟ್ಟಂʼ (ತೇರು) ಮೇ 4 ಬುಧವಾರದಂದು ನಡೆದಿದೆ. ಹಬ್ಬದ ಪರಾಕಾಷ್ಠೆಯನ್ನು ಸೂಚಿಸುವ ಪೂರಂ ಮೇ 10 ರಂದು ನಡೆಯಲಿದೆ.






