ಕೃಷ್ಣಗಿರಿ ತಮಿಳುನಾಡು : ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೃಷ್ಣಗಿರಿ ಜಿಲ್ಲೆಯ ಥಳಿ ವಿಧಾನಸಭಾ ಕ್ಷೇತ್ರದ ಕೆಲಮಂಗಲಂ ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ. ಥಳಿ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ. ನನ್ನ ಕ್ಷೇತ್ರ ಕನಕಪುರದೊಂದಿಗೆ ಗಡಿಯನ್ನು ಈ ಕ್ಷೇತ್ರ ಹಂಚಿಕೊಂಡಿದೆ. ಇಲ್ಲಿ ಸಾಕಷ್ಟು ಜನ ಕನ್ನಡಿಗರು ಇದ್ದೀರಿ. ನನ್ನ ಕ್ಷೇತ್ರದಲ್ಲಿ ಜಮೀನು ಹೊಂದಿರುವ ಈ ಭಾಗದ ಅನೇಕರಿಗೆ ನಮ್ಮ ಕ್ಷೇತ್ರದಲ್ಲೇ ಮತ ಇಟ್ಟುಕೊಳ್ಳಿ ಎಂದು ನಾನು ಆಹ್ವಾನ ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ.
ಆದರೂ ನೀವುಗಳು ಇಲ್ಲಿನ ಅಭ್ಯರ್ಥಿ ರಾಮಚಂದ್ರ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಇಲ್ಲೇ ಮತ ಹೊಂದಿದ್ದೀರಿ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ಬಳಿಕ ಮತದಾರರೆಲ್ಲರೂ ನಿಮ್ಮ ಕ್ಷೇತ್ರದಲ್ಲೇ ಮತದಾನ ಮಾಡಲು ಬಸುತ್ತಿದ್ದಾರೆ ಇಲ್ಲಿ ಕಲ್ಪಿಸಲಾಗಿರುವ ಯೋಜನೆಗಳೇನು ಎಂದು ನಾನು ರಾಮಚಂದ್ರ ಅವರನ್ನು ಕೇಳಿದ್ದೆ. ಅವರು ನಮಗೆ ಮಾಹಿತಿ ನೀಡಿದರು. ಆ ಮಾಹಿತಿ ಬಗ್ಗೆ ನಾನು, ರಾಮಲಿಂಗಾ ರೆಡ್ಡಿ, ಸಿದ್ದರಾಮಯ್ಯ ಅವರೆಲ್ಲರೂ ಸೇರಿ ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಗ್ಯಾರಂಟಿ ಗುಟ್ಟು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : “ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”
ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇತ್ತು. ಮೋದಿ ಸೇರಿದಂತೆ ಬಿಜೆಪಿಯವರೆಲ್ಲರೂ ಅಚ್ಚೇದಿನ ನೀಡುವುದಾಗಿ ಹೇಳಿದ್ದರು. ನಿಮಗೆ 15 ಲಕ್ಷ ಹಾಕುತ್ತೇವೆ ಎಂದು ನಿಮ್ಮಿಂದ ಜನಧನ್ ಖಾತೆ ತೆರೆಸಿದರು. ನಿಮಗೆ ಆ ಹಣ ಬಂತಾ? ಆದರೆ ನಾವು ಪಂಚ ಗ್ಯಾರಂಟಿ ಭರವಸೆ ನೀಡಿದೆವು. ನಾವು ರಾಜ್ಯದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡ ಕುಟುಂಬದ ಮಹಿಳೆಗೆ ಮಾಸಿಕ 2 ಸಾವಿರ, 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ 3 ಸಾವಿರ ವರೆಗೂ ನಿರುದ್ಯೋಗ ಭತ್ಯೆ ನೀಡಿದ್ದೇವು ಎಂದು ಹೇಳಿದ್ದಾರೆ.

ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ….
ಇಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ತಮಿಳುನಾಡಿನಾದ್ಯಂತ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2 ಸಾವಿರ ಹಣ ನೀಡುವ ಭರವಸೆ ನೀಡಿದ್ದಾರೆ. ಇನ್ನು ಮೋದಿ ಅವರಿಂದ ಗ್ಯಾಸ್ ಹೋಗಿ ಸೌದೆ ಒಲೆ ವಾಪಸ್ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8 ಸಾವಿರ ನೀಡುವ ಭರವಸೆ ನೀಡಲಾಗಿದೆ. ಡಿಎಂಕೆ, ಕಾಂಗ್ರೆಸ್ ಪಕ್ಷಗಳು ಕೊಟ್ಟ ಮಾತಿನಂತೆ ನಡೆಯುವ ಪಕ್ಷಗಳು. ನಮ್ಮ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದೇ ರೀತಿ ನಿಮ್ಮ ರಾಜ್ಯದಲ್ಲಿ ರೈತರಿಗೆ ಮೀಟರ್ ರಹಿತ ಪಂಪ್ ಸೆಟ್ ನೀಡುವ ಭರವಸೆ ನೀಡಿದ್ದೇವೆ. ಹಿರಿಯ ನಾಗರೀಕರಿಗೆ ವೃದ್ಧಾಪ್ಯ ವೇತನದ ಮೂಲಕ 2 ಸಾವಿರ, ವಿಕಲಾಂಗರಿಗೆ 2500 ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಮತ್ತೊಮ್ಮೆ ಇಂಡಿಯಾ ಕೂಟ ಅಧಿಕಾರಕ್ಕೆ ಈ ಎಲ್ಲವುಗಳ ಲಾಭ ಪಡೆಯಬಹುದು ಎಂದು ಭರವಸ ನೀಡಿದ್ದಾರೆ.
ಉಳುವವನಿಗೆ ಭೂಮಿ, ಉಚಿತ ವಿದ್ಯುತ್ ಸೇರಿದಂತೆ ಜನಪರ ಯೋಜನೆ ನೀಡಿದ್ದು ಕಾಂಗ್ರೆಸ್..

ಪೆರಿಯಾರ್ ಅವರ ಮಾರ್ಗದರ್ಶನದಲ್ಲಿ ಡಿಎಂಕೆ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಪೆರಿಯಾರ್ ಅವರ ಮಾತೃಭಾಷೆ ಕನ್ನಡವಾಗಿತ್ತು. ಅವರು ತಮಿಳು ಭಾಷೆಗಾಗಿ ಹೋರಾಟ ಮಾಡಿಕೊಂಡು ಬಂದರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳು. ಮೋದಿಯವರು ಅಧಿಕಾರಕ್ಕೆ ಬಂದು 12 ವರ್ಷಗಳಾಗಿದ್ದು, ಅವರು ಯಾವುದಾದರೂ ಒಂದು ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ನುಡಿದಂತೆ ನಡೆದು ಒಂದು ಕಾರ್ಯಕ್ರಮ ಜಾರಿಗೆ ತಂದಿದ್ದಾರಾ? ಇಲ್ಲ. ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ, ಅಂಗನವಾಡಿ ಕಾರ್ಯಕ್ರಮ, ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ, ಉಳುವವನಿಗೆ ಭೂಮಿ, ಉಚಿತ ವಿದ್ಯುತ್ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರವೇ ಹೊರತು. ಬಿಜೆಪಿಯಲ್ಲ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರದ್ದು ಖಾಲಿ ಬುಟ್ಟಿ, ಬೇವಿನಸೊಪ್ಪು ನಂದೇ ಬೆಳಗೋ ಪೂಜಾರಿ ಎಂಬ ಮಾತಿನಂತೆ ಖಾಲಿ ಮಾತು ಅಷ್ಟೇ. ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಸೇವೆಸಲ್ಲಿಸಿದ್ದರು. ಬಿಜೆಪಿಯವರು ಪಾಪ ಆತನನ್ನು ಕಿತ್ತೊಗೆದಿದ್ದಾರೆ. ಆತನಿಗೆ ಟಿಕೆಟ್ ನೀಡಿಲ್ಲ. ಈಗ ಎಐಡಿಎಂಕೆ ಅವರು ಆತನನ್ನು ನೀವು ಇಟ್ಟುಕೊಂಡರೆ ನಾವು ನಿಮ್ಮ ಹತ್ತಿರಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ..
ಜನರ ಹೊಟ್ಟೆ ತುಂಬಿಸಿ, ಬದುಕು ಬದಲಿಸುವುದು ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳು ಮಾತ್ರ..

“ಬಿಜೆಪಿಗೆ ಗೆಲ್ಲುತ್ತೇವೆ ಎಂದು ಭರವಸೆ ಇದ್ದಿದ್ದರೆ ಎಐಡಿಎಂಕೆ ಜೊತೆ ಹೋಗುತ್ತಿದ್ದರೇ? ಎಐಡಿಎಂಕೆ ಅವರು ಶಕ್ತಿ ಕಳೆದುಕೊಂಡಿದ್ದಾರೆ. ಇನ್ನು ಮತ್ತೊಂದು ಹೊಸ ಪಕ್ಷ ತಾನು ಎಂಜಿಆರ್ ರೀತಿ ಆಗಬೇಕು ಎಂದು ಹೊರಟಿದ್ದಾರೆ. ಅದೆಲ್ಲವೂ ಸಿನಿಮಾದಲ್ಲಿ ಕೈ ಬೀಸಲು ಸರಿಯೇ ಹೊರತು, ಇಲ್ಲಿ ಆ ರೀತಿ ಆಗುವುದಿಲ್ಲ. ಜನರ ಹೊಟ್ಟೆ ತುಂಬುವಂತೆ ನೋಡಿಕೊಂಡು ಬದುಕಿನಲ್ಲಿ ಬದಲಾವಣೆ ತರುವ ಪಕ್ಷ, ತಮಿಳುನಾಡು ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುತ್ತಿರುವುದು ಡಿಎಂಕೆ ಹಾಗೂ ಸ್ಟಾಲಿನ್ ಅವರು. ಐದು ವರ್ಷಗಳಲ್ಲಿ ಅನೇಕ ರಸ್ತೆ, ಬ್ರಿಡ್ಜ್, ಶಾಲೆ, ಆಸ್ಪತ್ರೆ ಮಾಡಿದ್ದಾರೆ. ಬಂಡವಾಳ ಹೂಡಿಕೆ ಹಾಗೂ ಖಾಸಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಸ್ಥಳೀಯರಿಗೆ 75% ಉದ್ಯೋಗ ನೀಡಲು ತೀರ್ಮಾನ ಮಾಡಿದ್ದು ಸ್ಟಾಲಿನ್ ಅವರ ಆಡಳಿತ ಎಂಬುದನ್ನು ಮರೆಯುವಂತಿಲ್ಲ ಎಂದು ಸ್ಥಳೀಯ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ನಾವು ನೀವೆಲ್ಲರೂ ಒಂದೇ ಮನೆಯವರು ಕೇವಲ ಒಂದು ಗೋಡೆ ಅಂತರವಿದೆ. ಬಿಜೆಪಿಯವರು ಏನಿದ್ದರೂ ಸಮಾಜ ಒಡೆಯುವ ಕತ್ತರಿ ಇದ್ದಂತೆ, ನಾವು ಸೂಜಿಯಂತೆ ಎಲ್ಲರನ್ನು ಸೇರಿಸುತ್ತೇವೆ. ರಾಮಚಂದ್ರ ಅವರು ನಿಮ್ಮ ಬಳಿ ಲಂಚ ಪಡೆದಿದ್ದಾರಾ? ಮೋಸ ಮಾಡಿದ್ದಾರಾ? ಇಲ್ಲ. ಸರಳ ನಾಯಕತ್ವದಲ್ಲಿ ನಿಮಗಾಗಿ ಅವರು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್, ಡಿಎಂಕೆ, ಕಮ್ಯುನಿಷ್ಟ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ 20 ಪಕ್ಷಗಳ ಶಕ್ತಿ ರಾಮಚಂದ್ರ ಅವರ ಪರವಾಗಿದೆ. ಅವರ ಗೆಲುವು ನಿಮ್ಮ ಗೆಲುವು, ಅವರ ಶ್ರಮ ನಿಮಗೆ ಫಲ ಎಂದು ಇಂಡಿಯಾ ಕೂಟದ ಅಭ್ಯರ್ಥಿ ರಾಮಚಂದ್ರ ಪರ ಮತಯಾಚನೆ ಮಾಡಿದ್ದಾರೆ.
ಈ ಹಿಂದೆ ರಾಮಚಂದ್ರ ಅವರನ್ನು 56 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಕನಕಪುರದ ಜನ ಅಶೋಕ್ ವಿರುದ್ಧ ನನ್ನನ್ನು 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನೀವು ರಾಮಚಂದ್ರ ಅವರನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಚುನಾವಣೆಯಲ್ಲಿ ರಾಮಚಂದ್ರ ಅವರನ್ನು ಗೆಲ್ಲಿಸಿದ ನಂತರ ನನ್ನನ್ನು ಕರೆಯಿರಿ ನಾನು ಬರುತ್ತೇನೆ ಎಂದು ಡಿಕೆ ಶಿವಕುಮಾರ್ ಅಭಯ ನೀಡಿದ್ದಾರೆ.
ಪಂಚಾಯಿತಿಯಲ್ಲಿ ಮಹಿಳೆಯರಿಗೆ 50% ಮೀಸಲಾತಿ ಕೊಟ್ಟವರು ನಾವು..
ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಕೊಟ್ಟ ಅವಕಾಶವನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ರಾಮಚಂದ್ರ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ನಿಮ್ಮ ಸೇವೆ ಮಾಡಿ ನಿಮ್ಮ ಮನ ಗೆದ್ದಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಪಾಲನ್ನು ಕಡಿಮೆ ಮಾಡುವ ಸಂಚು ರೂಪಿಸಿತ್ತು. ಅದನ್ನು ನಾವು ಮಣಿಸಿದ್ದೇವೆ ಎಂದು ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.
ಮಹಿಳೆಯರಿಗೆ 33% ರಾಜಕೀಯ ಮೀಸಲಾತಿ ನೀಡಬೇಕು ಎಂದು ನಾವು ಒಪ್ಪಿಗೆ ನೀಡಿದ್ದರೂ ಚುನಾವಣೆಯಲ್ಲಿ ನಮ್ಮನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸ್ಟಾಲಿನ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ಒಟ್ಟಾಗಿ ಸೇರಿ ಆ ಮಸೂದೆಗೆ ತಡೆದಿದ್ದೇವೆ. ಪಂಚಾಯಿತಿಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿರುವುದು ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯುವಂತಿಲ್ಲ. ಮಹಿಳೆಯರಿಗೆ 33% ಮೀಸಲಾತಿ ನೀಡಲು ನಾವು ಬದ್ಧರಾಗಿದ್ದೇವೆ. ಇದು ನಮ್ಮ ತತ್ವ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.






