ರೂಪಾಂತರಿ (Genetically modified ) ಆಹಾರ ಪದಾರ್ಥಗಳ ಆಮದು ಮತ್ತು ಮಾರಾಟದ ನಿಯಂತ್ರಣಕ್ಕಾಗಿ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಮೂರು ತಿಂಗಳ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೂರಾರರು ದ್ವೇಷಭರಿತ ಇ ಮೈಲ್ (hate mail) ಸ್ವೀಕರಿಸುತ್ತಿದೆ ಎಂದು ವರದಿಯಾಗಿದೆ.
ಸಾಮಾಜಿಕ ಹೋರಾಟಗಾರರು ಎಂದು ಹೇಳಿಕೊಳ್ಳುವವರು FSSAI ರೂಪಾಂತರಿ ಆಹಾರ (GM food)ಗಳನ್ನು ‘ಅದು ಉಂಟುಮಾಡುವ ಅಪಾಯಗಳನ್ನು ಲೆಕ್ಕಿಸದೆ’ ಕಾನೂನುಬದ್ಧಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. GM ಆಗಿರುವ ಎಲ್ಲವೂ ದೇಶದಲ್ಲಿ ಮಾರಾಟವಾಗದಂತೆ ಖಚಿತಪಡಿಸಿಕೊಳ್ಳಲು GM ಆಹಾರ ಪದಾರ್ಥಗಳ ಬಗ್ಗೆ ಕೆಲವು ವಲಯಗಳಲ್ಲಿ ನಿಯಮಗಳು ಅಗತ್ಯವೆಂದು ಪ್ರಾಧಿಕಾರವು ಭಾವಿಸಿ ಅಧಿಸೂಚನೆ ಬಿಡುಗಡೆ ಮಾಡಿತ್ತು.
ಕರಡು ಅಧಿಸೂಚನೆಯನ್ನು ಮೊದಲ ಬಾರಿಗೆ ನವೆಂಬರ್ 2021 ರಲ್ಲಿ ಹೊರತರಲಾಯಿತು. ಕಳೆದ ತಿಂಗಳು, ನಿಯಂತ್ರಿಸಬೇಕಾದ ವಸ್ತುಗಳ ಪಟ್ಟಿಯಲ್ಲಿ GM ಮೂಲದ ಕಿಣ್ವಗಳನ್ನು ಒಳಗೊಂಡಿರುವ ಒಂದು ಅನುಬಂಧವನ್ನು ಪ್ರಸ್ತಾಪಿಸಲಾಯಿತು. “ನಾವು ಆಕ್ಟಿವಿಸ್ಟ್ಗಳಿಂದ ಸುಮಾರು 10,000-20,000 ದ್ವೇಷದ ಮೇಲ್ಗಳನ್ನು ಸ್ವೀಕರಿಸಿದ್ದೇವೆ. ಅವುಗಳಲ್ಲಿ ಹೆಚ್ಚಿನವು ಒಂದೇ ವಿಷಯ ಹೊಂದಿರುವ ಕಾಪಿ ಪೇಸ್ಟ್ ಇಮೇಲ್ಗಳಾಗಿವೆ, ಆದರೆ ಬೇರೆ ಬೇರೆ ಇಮೇಲ್ ಐಡಿಗಳಿಂದ ಬಂದವು. ಅವುಗಳಲ್ಲಿ ಜನರು ಮತ್ತು ಪರಿಸರಕ್ಕೆ ಒಡ್ಡುವ ಬೆದರಿಕೆಗಳ ಬಗ್ಗೆ ಕಾಳಜಿಯಿಲ್ಲದೆ GM ಆಹಾರ ಪದಾರ್ಥಗಳನ್ನು ಕಾನೂನುಬದ್ಧಗೊಳಿಸಿದ್ದೇವೆ ಎಂದು ಆರೋಪಿಸಲಾಗಿದೆ ” ಎಂದು ಹಿರಿಯ FSSAI ಅಧಿಕಾರಿಯೊಬ್ಬರು ಹೇಳಿರುವುದಾಗಿ ThePrint ವರದಿ ಮಾಡಿದೆ.
“ಈಗಾಗಲೇ ಕೆಲವು ಪ್ರಮಾಣದ GM ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಉದಾಹರಣೆಗೆ, ನಾವು ರೂಪಾಂತರಿ ಸೋಯಾಬೀನ್ ಎಣ್ಣೆಯನ್ನು ಬಳಸುತ್ತೇವೆ. ಹೆಚ್ಚುವರಿಯಾಗಿ, ಆಹಾರ ಉದ್ಯಮದಲ್ಲಿ ಬಹಳಷ್ಟು GM ಕಿಣ್ವಗಳನ್ನು ಬಳಸಲಾಗುತ್ತದೆ. ನಾವು ಮಾನದಂಡವನ್ನು ನಿರ್ದಿಷ್ಟಪಡಿಸದ ಹೊರತು ನಿಯಂತ್ರಿಸಲು ಸಾಧ್ಯವಿಲ್ಲ. ಯಾವುದೇ ನಿಯಮಾವಳಿಗಳು ಸದ್ಯಕ್ಕೆ ಜಾರಿಯಲ್ಲಿಲ್ಲ, ಹಾಗೆಂದ ಮಾತ್ರಕ್ಕೆ ಈಗ ಅವು ಮಾರಾಟವಾಗುತ್ತಿಲ್ಲ ಎಂದರ್ಥವಲ್ಲ” ಎಂದು ಅಧಿಕಾರಿ ಹೇಳಿದ್ದಾರೆ.
ಕರಡು ಅಧಿಸೂಚನೆಯ ಪ್ರಕಾರ, ಆಧುನಿಕ ಜೈವಿಕ ತಂತ್ರಜ್ಞಾನದ ಮೂಲಕ ಪಡೆದ ರೂಪಾಂತರಿ ತಳಿಯ ಅಥವಾ ತಳಿ ಇಂಜಿನಿಯರಿಂಗ್ ಅಂಶಗಳನ್ನು ಒಳಗೊಂಡಿರುವ ಯಾವುದೇ ಆಹಾರ ಮತ್ತು ಆಹಾರ ಪದಾರ್ಥವನ್ನು GM ಆಹಾರ ಪದಾರ್ಥಗಳಾಗಿ ವರ್ಗೀಕರಿಸಬಹುದು ಮತ್ತು ನಿಯಂತ್ರಿಸಬಹುದು.
ಭಾರತದಲ್ಲಿ GM ಬೆಳೆ ಯಾಗಿ ಬೆಳೆಯಲು ಅನುಮತಿ ನೀಡಿರುವುದು ಬಿಟಿ ಹತ್ತಿಗೆ ಮಾತ್ರ
2002 ರಲ್ಲಿ, ಭಾರತ ಸರ್ಕಾರವು ಬಿಟಿ ಹತ್ತಿಯನ್ನು ಬೆಳೆಯಲು ಅನುಮತಿ ನೀಡಿತ್ತು. ಆಗಲೇ ಇದು ದೇಶಾದ್ಯಂತ ಪರ ವಿರೋಧದ ಚರ್ಚೆಯನ್ನೂ ಹುಟ್ಟು ಹಾಕಿತ್ತು. ಭಾರತದ ಸ್ಥಳೀಯ ಹತ್ತಿಯನ್ನು ಇದು ನಾಶ ಮಾಡುತ್ತದೆ ಮತ್ತು ರೂಪಾಂತರಿ ಹತ್ತಿಯ ದೂರಗಾಮಿ ಪರಿಣಾಮಗಳನ್ನು ಅಧ್ಯಯನ ಮಾಡದೇ ಅನುಮತಿ ನೀಡಲಾಗಿದೆ ಎಂದು ವಿವಾದಗಳು ಎದ್ದಿದ್ದವು.
2020 ರಲ್ಲಿ GM ಬೆಳೆಗಳ ಕೃಷಿಯ ಅಧ್ಯಯನದ ಕುರಿತು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲವು “ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ) ಇದರ ಕುರಿತು ದೀರ್ಘಾವಧಿಯ ಅಧ್ಯಯನಗಳನ್ನು ನಡೆಸಿದೆ. ಬಿಟಿ ಹತ್ತಿಯ ಪರಿಣಾಮವು ಮಣ್ಣು, ಮೈಕ್ರೋಫ್ಲೋರಾ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ತೋರಿಸಲಿಲ್ಲ” ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB)ಗೆ ಹೇಳಿಕೆ ಬಿಡುಗಡೆ ಮಾಡಿತ್ತು.
“ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯಗಳ ಸಂಸತ್ತಿನ ಸ್ಥಾಯಿ ಸಮಿತಿಯು 2017ರ ಆಗಸ್ಟ್ 25ರಂದು ಸಂಸತ್ತಿಗೆ ಸಲ್ಲಿಸಿದ ‘ವಂಶವಾಹಿ ರೂಪಾಂತರಿಸಿದ ಬೆಳೆಗಳು ಮತ್ತು ಪರಿಸರದ ಮೇಲೆ ಅದರ ಪ್ರಭಾವ’ ಎಂಬ ವರದಿಯಲ್ಲಿ GM ಬೆಳೆಗಳನ್ನು ಅದರ ಪ್ರಯೋಜನ ಮತ್ತು ಸುರಕ್ಷತೆಯ ವೈಜ್ಞಾನಿಕ ಮೌಲ್ಯಮಾಪನದ ನಂತರವೇ ದೇಶದಲ್ಲಿ ಪರಿಚಯಿಸಬೇಕೆಂದು ಶಿಫಾರಸು ಮಾಡಿದೆ. ಅಲ್ಲದೆ GM ಬೆಳೆಗಳ ನಿಷ್ಪಕ್ಷಪಾತ ಮೌಲ್ಯಮಾಪನಕ್ಕಾಗಿ ನಿಯಂತ್ರಕ ಚೌಕಟ್ಟಿನ ಪುನರ್ರಚನೆಗೆ ಶಿಫಾರಸು ಮಾಡಲಾಗಿದೆ.
ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (GEAC)ಯು ಜೆನೆಟಿಕ್ ಆಗಿ ರೂಪಾಂತರಿಸಿದ ಜೀವಿಗಳನ್ನು ನಿಯಂತ್ರಿಸುವ ಸರ್ಕಾರದ ಉನ್ನತ ಸಂಸ್ಥೆಯಾಗಿದ್ದು, 2020-23ರ ಅವಧಿಯಲ್ಲಿ ಎಂಟು ರಾಜ್ಯಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ Bt ಬದನೆಗಳ ಎರಡು ಹೊಸ ತಳಿಗಳ ಜೈವಿಕ ಸುರಕ್ಷತೆ ಸಂಶೋಧನಾ ಕ್ಷೇತ್ರ ಪ್ರಯೋಗಗಳಿಗೆ ಆ ರಾಜ್ಯಗಳಿಂದ ಯಾವುದೇ ಆಕ್ಷೇಪಣೆ ಬರದ ಕಾರಣ ಅನುಮತಿ ನೀಡಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. .
ಆದರೆ, ದೇಶವನ್ನು ಪ್ರವೇಶಿಸುವ ಮತ್ತು ಮಾರಾಟವಾಗುವ ರೆಡಿಮೇಡ್ GM ವಸ್ತುಗಳ ಮೇಲೆ ಪ್ರಸ್ತುತ ಯಾವುದೇ ನಿಯಂತ್ರಣವಿಲ್ಲ. ಆಹಾರ ಪದಾರ್ಥವು ಕೃಷಿ ಬೆಳೆಗಳಂತೆ ಜೀವಂತ ರೂಪಾಂತರಿಸಿದ ಜೀವಿಗಳನ್ನು (LMOs) ಹೊಂದಿರುವಾಗ ಮಾತ್ರ GEAC ಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
ಕರಡು ನಿಯಮಗಳು
ಕಳೆದ ನವೆಂಬರ್ನಲ್ಲಿ ಎಫ್ಎಸ್ಎಸ್ಎಐ ಬಿಡುಗಡೆ ಮಾಡಿದ ಕರಡು ನಿಯಮಾವಳಿಗಳು ರೂಂಪಾತರಿ ಆಹಾರ ಅಥವಾ ವಿನ್ಯಾಸಗೊಳಿಸಿದ ಆಹಾರವು ಯಾವುದೇ ಎಲ್ಎಂಒಗಳನ್ನು ಹೊಂದಿಲ್ಲದಿದ್ದರೆ ಎಫ್ಎಸ್ಎಸ್ಎಐ ಅದರ ಅನುಮೋದನೆಗಾಗಿ ಅರ್ಜಿಯನ್ನು ಸ್ವೀಕರಿಸಿದ ನಂತರ ಆಹಾರ ಪದಾರ್ಥಗಳಿಗೆ ಅನುಮೋದನೆ ನೀಡುವ ಮೊದಲು ಹೆಚ್ಚುವರಿ ಡೇಟಾ ಅಥವಾ ಪೋಷಕ ದಾಖಲೆಗಳನ್ನು ಪಡೆಯಬಹುದು ಮತ್ತು ಅದರ ಸ್ವಂತ ಸುರಕ್ಷತಾ ಮೌಲ್ಯಮಾಪನವನ್ನು ನಡೆಸಬಹುದು ಎನ್ನುತ್ತದೆ.
ಹೊರದೇಶಗಳಿಂದ GM ಆಹಾರ ವಸ್ತುಗಳನ್ನು ಆಮದು ಮಾಡುವಾಗ ‘ರಫ್ತು ಮಾಡುವ ದೇಶದ ನಿಯಂತ್ರಕ ಸಂಸ್ಥೆಯು ಆ ಆಹಾರಕ್ಕೆ ಮೂರು ವರ್ಷಗಳ ಸುರಕ್ಷಿತ ಬಳಕೆಗೆ ಅನುಮತಿ ನೀಡಿದೆ ಎಂಬ ದಸ್ತಾವೇಜನ್ನು ಮತ್ತು ವ್ಯಾಪಾರದ ಪ್ರಮಾಣ ಹಾಗೂ ಹೆಸರಿನ ಪೂರ್ಣ ಮಾಹಿತಿ ಮತ್ತು ಆಹಾರ ಉದ್ದೇಶಗಳಿಗಾಗಿ GMO/LMO ಗಳನ್ನು ಪಡೆದ ಸಂಸ್ಕರಿತ ಉತ್ಪನ್ನದ ರಫ್ತಿನ ಪುರಾವೆ’ಗಳನ್ನು ಕಂಪೆನಿಯು ಎಫ್ಎಸ್ಎಸ್ಎಐಗೆ ಸಲ್ಲಿಸಬೇಕು ಎಂಬ ನಿಯಮವಿದೆ.