ಉಕ್ರೇನಿನಾದ್ಯಂತ ಹಾರಾಡುತ್ತಿರುವ ಯುದ್ಧ ವಿಮಾನಗಳು ಮತ್ತು ಬಾಂಬ್ ಸ್ಪೋಟದ ಸದ್ದಿಗೆ ಕರ್ನಾಟಕದ ಪೋಷಕರು ಬೆಚ್ಚಿಬೀಳುತ್ತಿದ್ದಾರೆ. ಟಿ.ವಿಯಲ್ಲಿ ಕಾಣಿಸಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಸುರಕ್ಷಿತ ವಾಪಾಸಾತಿಗಾಗಿ ಸರ್ಕಾರದ ಬಳಿ ಸಹಾಯ ಹಸ್ತ ಚಾಚುತಿದ್ದಾರೆ. ಪೂರ್ವ ಯುರೋಪಿನ ದೇಶವೊಂದರಲ್ಲಿ ನಡೆಯುತ್ತಿರುವ ಯುದ್ಧ ಬೆಲೆ ಏರಿಕೆ, ಪೆಟ್ರೋಲ್ ತುಟ್ಟಿಯಿಂದಾಗಿ ಮಾತ್ರ ಭಾರತವನ್ನು ಕಾಡಬಹುದು ಅಂದುಕೊಂಡಿದ್ದವರ ಮುಂದೆ ಈಗ ಹೊಸ ಸಮಸ್ಯೆ ಸೃಷ್ಟಿಯಾಗಿದೆ.
ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಇಷ್ಟೊಂದು ಪ್ರಮಾಣದ ಭಾರತೀಯರಿರುವುದೇ ಅಚ್ಚರಿಯಂತೆ ತೋರುತ್ತಿದೆ . ತಜ್ಞರ ಪ್ರಕಾರ, ಕೈಗೆಟುಕುವ ಶುಲ್ಕ, ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೇ ಇರುವುದು ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನಿಗೆ ಕೈ ಬೀಸಿ ಕರೆಯುತ್ತಿದೆ.
“ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲ ಮತ್ತು ಭಾರತಕ್ಕೆ ಹೋಲಿಸಿದರೆ ಶಿಕ್ಷಣದ ವೆಚ್ಚವೂ ಕೈಗೆಟುಕುವ ಕಾರಣ ಉಕ್ರೇನ್ ಅಥವಾ ರಷ್ಯಾದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸುಲಭ” ಎನ್ನುತ್ತಾರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಮಾಜಿ ಉಪಕುಲಪತಿ. “ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು NEET ಮೂಲಕ ಸೀಟ್ ಪಡೆಯಲು ಅನರ್ಹರಾದವರಾಗಿರುತ್ತಾರೆ ಅಥವಾ ಮ್ಯಾನೇಜ್‌ಮೆಂಟ್ ಕೋಟಾದ ಅಡಿಯಲ್ಲಿ ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದೇ ಇರುವವರು” ಎಂದು ಅವರು ವಿವರಿಸಿದರು.

ತಜ್ಞರ ಪ್ರಕಾರ, ಸರಾಸರಿ 10,000 ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪಶುವೈದ್ಯಕೀಯ ಪದವಿ ಪಡೆಯಲು ಉಕ್ರೇನಿಗೆ ಪ್ರಯಾಣಿಸುತ್ತಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಮಾತನಾಡಿ, “ ಖಾಸಗಿ ವೈದ್ಯಕೀಯ ಕಾಲೇಜುಗಳು ವಿಧಿಸುವ ಒಂದು ವರ್ಷದ ಶುಲ್ಕವನ್ನು ಖರ್ಚು ಮಾಡುವ ಮೂಲಕ ಉಕ್ರೇನ್‌ನಲ್ಲಿ ಸಂಪೂರ್ಣ ಎಂಬಿಬಿಎಸ್ ಕೋರ್ಸ್ ಅನ್ನು ಪಡೆಯಬಹುದು” ಎನ್ನುತ್ತಾರೆ.
ಆದರೆ ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟ ಮತ್ತು ಸುಧಾರಿತ ವಿಧಾನಗಳಲ್ಲಿ ಉಕ್ರೇನ್‌ಗಿಂತ ಭಾರತದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಉತ್ತಮವಾಗಿವೆ ಎಂದು ಡಾ ಗಿರೀಶ್ ಹೇಳುತ್ತಾರೆ. “ಈ ಕಾರಣಕ್ಕಾಗಿಯೇ ಕೇಂದ್ರವು ಸಾಗರೋತ್ತರ ವಿಶ್ವವಿದ್ಯಾಲಯಗಳಿಂದ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದವರಿಗೆ ಕಡ್ಡಾಯ ಅರ್ಹತಾ ಪರೀಕ್ಷೆಯನ್ನು ಪರಿಚಯಿಸಿತು. ಅರ್ಹತೆ ಪಡೆಯಲು ವಿಫಲರಾದರೆ, ಅವರು ಇಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅರ್ಹರಲ್ಲ.

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಾಜಿ ನಿರ್ದೇಶಕ ಕೆ ಎಸ್ ಗಂಗಾಧರ್ ಅವರ ಪ್ರಕಾರ, ಕರ್ನಾಟಕವು ಸುಮಾರು 63 ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ 20 ಸರ್ಕಾರಿ ಕಾಲೇಜುಗಳಾಗಿವೆ. ಉಳಿದವುಗಳು ಖಾಸಗಿ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳಾಗಿವೆ. ಅವರು ತಮ್ಮ ಒಟ್ಟು ಸೀಟುಗಳಲ್ಲಿ 40% ಅನ್ನು ಸರ್ಕಾರಿ ಕೋಟಾ ವಿದ್ಯಾರ್ಥಿಗಳಿಗೆ ನೀಡಿದರೆ, 60% ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ದಾಖಲಾಗಲು ಸಾಧ್ಯವಿಲ್ಲದವರು ಹೆಚ್ಚಾಗಿ ಉಕ್ರೇನ್, ರಷ್ಯಾಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ದಾಖಲಾಗುತ್ತಾರೆ.
ಉಕ್ರೇನ್, ಚೀನಾ, ಫಿಲಿಪೈನ್ಸ್ ಮತ್ತು ರಷ್ಯಾದಿಂದ ವೈದ್ಯಕೀಯ ಪದವಿ ಹೊಂದಿರುವ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯಲ್ಲಿ (FMGE) ಪರೀಕ್ಷೆಯನ್ನು ಕಡ್ಡಾಯವಾಗಿ ಭಾರತದಲ್ಲಿ ತೆಗೆದುಕೊಳ್ಳಲೇಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (NMC) ಸಂಬಂಧಿಸಿದ ಮೂಲಗಳ ಪ್ರಕಾರ, ಉಕ್ರೇನ್‌ನಂತಹ ದೇಶಗಳ ವೈದ್ಯಕೀಯ ಪದವೀಧರರಲ್ಲಿ 18% ಸಹ ಭಾರತದಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ.
ಎನ್‌ಎಂಸಿಯ ಸ್ನಾತಕೋತ್ತರು ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದ RGUHS ನ ಉಪಕುಲಪತಿ ಡಾ.ಎಂ.ಕೆ.ರಮೇಶ್ ಮಾತನಾಡಿ, ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಎಫ್‌ಎಂಜಿಇ ತೇರ್ಗಡೆಯಾದವರಿಗೆ ಕಡ್ಡಾಯ ಇಂಟರ್ನ್‌ಶಿಪ್ ಅನ್ನು ಸಹ ಎನ್‌ಎಂಸಿ ಪರಿಚಯಿಸಿದೆ ಎನ್ನುತ್ತಾರೆ.






