ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಬರಬಾರದೆಂದು ಹಿಂದುತ್ವ ಪರಿವಾರ ಸಂಘರ್ಷಕ್ಕಿಳಿದ ಬೆನ್ನಲ್ಲೇ, ಮಧ್ಯ ಪ್ರದೇಶದಲ್ಲೂ ಹಿಜಾಬ್ ಧರಿಸುವ ವಿದ್ಯಾರ್ಥಿನಿಯ ಹಕ್ಕುಗಳ ವಿರುದ್ಧ ಅಪಸ್ವರ ಎದ್ದಿದೆ.
ಹಿಜಾಬ್ ನಿಷೇಧದ ಕುರಿತಂತೆ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಘ್ ಚೌಹಾನ್, ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ . ಶಾಲೆಗಳಲ್ಲಿ ನೂತನ ವಸ್ತ್ರ ಸಂಹಿತೆಯನ್ನು ಪರಿಚಯಿಸುತ್ತೇವೆ ಎಂದು ಹೇಳಿದ್ದ ಶಿಕ್ಷಣ ಸಚಿವರು ಯೂಟರ್ನ್ ಪಡೆದಿದ್ದು, ಹಿಜಾಬ್ ಕುರಿತು ಮಧ್ಯ ಪ್ರದೇಶ ಬಿಜೆಪಿಯ ಗೊಂದಲವನ್ನು ಬಯಲು ಮಾಡಿದೆ.
ಕರ್ನಾಟಕದ ಹಿಜಾಬ್ ವಿವಾದದ ಕುರಿತು ಪತ್ರಕರ್ತರು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರನ್ನು ಪ್ರಶ್ನಿಸಿದಾಗ ಅವರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇನ್ನು ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ನೂತನ ವಸ್ತ್ರ ಸಂಹಿತೆಯ ಪ್ರಸ್ತಾಪ ಇದೆ ಎಂದು ನೀಡಿದ್ದ ಹೇಳಿಕೆಯನ್ನು ಗೃಹಸಚಿವರು ತಿರಸ್ಕರಿಸಿದ್ದರು. ಅದರ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವರು ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
ಆದರೆ ಲವ್ ಜಿಹಾದ್, ಮತಾಂತರ-ವಿರೋಧಿ ಕಾನೂನು ಮೊದಲಾದವುಗಳನ್ನು ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳೊಂದಿಗೆ ಪರಿಚಯಿಸಿದ್ದ ಮಧ್ಯಪ್ರದೇಶದಲ್ಲಿ ಬಿಜೆಪಿ ಘಟಕವು ಹಿಜಾಬ್ ಕುರಿತು ಗದ್ದಲವನ್ನು ಏಕೆ ಕಡಿಮೆ ಮಾಡಿದೆ ಎಂದು ದಿ.ಕ್ವಿಂಟ್ ವಿವಿಧ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರೊಂದಿಗೆ ಚರ್ಚಿಸಿದೆ.
ಹಿಜಾಬ್ ವಿವಾದದಿಂದ ಮಧ್ಯಪ್ರದೇಶ ಬಿಜೆಪಿ ಹಿಂದೆ ಸರಿದದ್ದೇಕೆ?
ಮತಾಂತರದ ವಿರುದ್ಧದ ಕಾನೂನು ತರುವುದರಿಂದ ಹಿಡಿದು ಗೋಹತ್ಯೆ ನಿಷೇಧದವರೆಗೆ, ಮಧ್ಯಪ್ರದೇಶ ಬಿಜೆಪಿಯು ರಾಜ್ಯದ ವಿವಿಧ ಧ್ರುವೀಕರಣದ ವಿಷಯಗಳ ಬಗ್ಗೆ ತನ್ನ ನಿಲುವನ್ನು ಪದೇ ಪದೇ ಸ್ಪಷ್ಟಪಡಿಸಿದೆ. ಆದರೆ, ಈಗ ಭಾರತದ ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಹಿಜಾಬ್ ವಿಷಯದ ಕುರಿತು ಹಿಂದೆ ಸರಿದಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘ಕಂಫರ್ಟ್ ಝೋನ್’ನಿಂದ ಹೊರಬರಲು ಗೃಹ ಸಚಿವರು ಸಿದ್ಧರಿಲ್ಲ. ಪರ್ಮಾರ್ ಅವರ ಹೇಳಿಕೆಯನ್ನು ನೇರವಾಗಿ ವಿರೋಧಿಸಿದ ಮಿಶ್ರಾ, “ಇದು ಕರ್ನಾಟಕದ ಸಮಸ್ಯೆ ಮತ್ತು ಇದು ನ್ಯಾಯಾಲಯದಲ್ಲಿದೆ” ಎಂದು ಹೇಳಿರುವುದನ್ನು ಗಮನಿಸಬಹುದು.
ಚುನಾವಣೆ ಹತ್ತಿರದಲ್ಲಿದ್ದರೂ ಕೋಮು ಉದ್ವಿಗ್ನತೆಯನ್ನು ಹುಟ್ಟು ಹಾಕಲು ಬಿಜೆಪಿ ಬಯಸುವುದಿಲ್ಲವೇ?
ಚುನಾವಣೆಯ ಸಮಯದಲ್ಲಿ ಬಿಜೆಪಿ ಧ್ರುವೀಕರಣವನ್ನು ಆರಿಸಿಕೊಳ್ಳುತ್ತದೆ ಎಂದು ಹಲವರು ನಂಬುತ್ತಾರೆ. ಆದರೆ ಅದು ಮಧ್ಯಪ್ರದೇಶದಲ್ಲಿ ಮಾತ್ರ ಈ ತಂತ್ರಗಾರಿಕೆ ಇಲ್ಲ. ಹಿಂದಿನ ಜನಗಣತಿಯ ಪ್ರಕಾರ, 7.33 ಕೋಟಿ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಆರರಿಂದ ಏಳು ಪ್ರತಿಶತದಷ್ಟು ಮಾತ್ರ ಮುಸ್ಲಿಮರು. ಅಲ್ಲದೆ ಮಧ್ಯಪ್ರದೇಶದಲ್ಲಿ ವಿಭಿನ್ನ ಡೆಮಾಗ್ರಫಿ ಇದೆ. ಕರ್ನಾಟಕದಲ್ಲಿ, ರಾಜ್ಯದ ಒಟ್ಟು 6.41 ಕೋಟಿ ಜನಸಂಖ್ಯೆಯಲ್ಲಿ ರಾಜ್ಯದ ಮುಸ್ಲಿಂ ಜನಸಂಖ್ಯೆಯು ಸುಮಾರು 12 ಪ್ರತಿಶತದಷ್ಟಿದೆ.
“ಸಿಎಂ ಮತ್ತು ಬಿಜೆಪಿ ಇಬ್ಬರೂ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಮುಸ್ಲಿಂ ಮತಗಳನ್ನು ಗಳಿಸುತ್ತಿದ್ದಾರೆ. ಚುನಾವಣೆಗೆ ಕೇವಲ ಒಂದೂವರೆ ವರ್ಷ ಮೊದಲು ಧ್ರುವೀಕರಣದ ನೀತಿಗೆ ನಿಂತರೆ ಅವರು ಈ ಮತಗಳನ್ನು ಕಳೆದುಕೊಳ್ಳುತ್ತಾರೆ. ಇದು ಶಿವರಾಜ್ ಅವರ ಸಾರ್ವಜನಿಕ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ತನ್ನ ಚುನಾವಣಾ ಕಾರ್ಯಸೂಚಿಯಲ್ಲಿ ಕೋಮು ರಾಜಕೀಯವನ್ನು ಚಾಲನೆ ಮಾಡಲು ಬಯಸುವುದಿಲ್ಲ, ” ಎಂದು ಮತ್ತೊಬ್ಬ ಪತ್ರಕರ್ತ ಹೇಳುತ್ತಾರೆ.
ಹಿಜಾಬ್ ವಿಷಯದಲ್ಲಿ ತನ್ನ ಬಲಪಂಥೀಯ ಪರವಾದ ನಿಲುವು ತನಗೆ ಹಾನಿಕರವಾಗಬಹುದು ಎಂದು ಬಿಜೆಪಿ ಚಿಂತಿಸಿದೆ ಎಂದು ರಾಜ್ಯ ರಾಜಕೀಯವನ್ನು ಹತ್ತಿರದಿಂದ ಗಮನಿಸುವ ಮತ್ತೊಬ್ಬ ಪತ್ರಕರ್ತ ಹೇಳುತ್ತಾರೆ.
ಹಿಜಾಬ್ ವಿಚಾರದಲ್ಲಿ ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದಂತೆಯೇ, ಈ ವಿಷಯದ ಬಗ್ಗೆ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡುವುದರ ವಿರುದ್ಧ ಶಿವರಾಜ್ ಅವರು ತಮ್ಮ ಕ್ಯಾಬಿನೆಟ್ಗೆ ಬಲವಾದ ಎಚ್ಚರಿಕೆ ರವಾನಿಸಿದ್ದಾರೆ.
ಇದಲ್ಲದೆ, ಆರ್ಎಸ್ಎಸ್ಗೆ ಕರ್ನಾಟಕಕ್ಕಿಂತ ಮಧ್ಯಪ್ರದೇಶದಲ್ಲಿ ಬಲವಾದ ಜಾಲ ಮತ್ತು ಅಸ್ತಿತ್ವವಿದೆ. ಮಧ್ಯಪ್ರದೇಶದ ಅಗರ್ ಮಾಲ್ವಾ ಪ್ರದೇಶವನ್ನು ಆರ್ಎಸ್ಎಸ್ ನೆಲೆ ಎಂದು ಪರಿಗಣಿಸಲಾಗಿದೆ. ಹಾಗಾಗಿ, ರಾಜ್ಯದಲ್ಲಿ ಕೋಮುವಾದಿ ಆಟವನ್ನು ಆಡುವ ಅಗತ್ಯವಿಲ್ಲ ಎಂದು ಹಲವರು ವಾದಿಸುತ್ತಾರೆ.