ಕಳೆದ ಏಳೆಂಟು ವರ್ಷಗಳಲ್ಲಿ ಭಾರತದ ರಾಜಕಾರಣ, ಉದ್ಯಮ, ಹಣಕಾಸು ವಲಯದಲ್ಲಿ ಊಹೆಗೂ ಮೀರಿದ ಬೆಳವಣಿಗೆಗಳು ನಡೆಯುತ್ತಿವೆ.
ಅದರಲ್ಲೂ ಧರ್ಮಕಾರಣ ಎಂಬುದು ದೇಶದ ರಾಜಕೀಯದ ಮುನ್ನೆಲೆಗೆ ಬಂದ ಬಳಿಕವಂತೂ ಧರ್ಮಗುರುಗಳು, ಧಾರ್ಮಿಕ ಮುಖಂಡರು, ಸ್ವಯಂಘೋಷಿತ ದೇವಮಾನವರು ಕೇವಲ ಸಮಾಜದ ಧಾರ್ಮಿಕ ಸಂಗತಿಗಳನ್ನು ಮಾತ್ರವಲ್ಲ, ರಾಜಕಾರಣ, ಉದ್ಯಮ, ವಹಿವಾಟು, ವ್ಯವಹಾರಗಳನ್ನು ಕೂಡ ನಿರ್ದೇಶಿಸತೊಡಗಿದ್ದಾರೆ. ಅದು ಬಾಬಾ ರಾಮ್ ದೇವ್ ಆಗಿರಬಹುದು, ಜಗ್ಗಿ ವಾಸುದೇವ್ ಇರಬಹುದು, ನಿತ್ಯಾನಂದ ಇರಬಹುದು,.. ಎಲ್ಲರೂ ತಮ್ಮ ವರ್ಚಸ್ಸು ಮತ್ತು ಪ್ರಭಾವನ್ನು ಬಳಸಿಕೊಂಡು ಜನಸಾಮಾನ್ಯರಷ್ಟೇ ಅಲ್ಲದೆ, ಅಧಿಕಾರಸ್ಥರು ಮತ್ತು ಅಧಿಕಾರ ಸ್ಥಾನಗಳನ್ನು ಕೂಡ ತಮ್ಮ ಕೈಗೊಂಬೆ ಮಾಡಿಕೊಂಡ ಉದಾಹರಣೆಗಳು ಸಾಲು ಸಾಲು ಇವೆ.
ಇದೀಗ ಈ ಎಲ್ಲಾ ನಕಲಿ, ಅಸಲಿ ಬಾಬಾ, ಗುರೂಜಿಗಳನ್ನು ಮೀರಿದ ಹಿಮಾಲಯದ ಅಜ್ಞಾತ ‘ಗುರು’ವೊಬ್ಬನ ಪ್ರಭಾವಳಿಯ ಪುರಾಣ ಭಾರತದ ಉದ್ಯಮ ಮತ್ತು ವ್ಯವಹಾರ ಜಗತ್ತು ತಲುಪಿರುವ ನಾಚಿಕೆಗೇಡಿನ ಸ್ಥಿತಿಗೆ ತಾಜಾ ಕನ್ನಡಿಯಾಗಿದೆ. ಹೌದು, ದೇಶದ ಷೇರುಪೇಟೆಯ ಮುನ್ನೂರು ಲಕ್ಷ ಕೋಟಿ ಸಂಪತ್ತಿನ ಬೃಹತ್ ಸಂಸ್ಥೆ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ)ನ ವ್ಯವಹಾರ, ಆಡಳಿತವನ್ನು ಹಿಮಾಲಯದ ಯಾವುದೋ ತಪ್ಪಲಿನಲ್ಲಿ ಕುಳಿತ ಸ್ವಯಂಘೋಷಿತ ಬಾಬಾನೊಬ್ಬ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಚಿತ್ರಾ ರಾಮಕೃಷ್ಣ ಎಂಬ ಎನ್ ಎಸ್ ಇಯ ಹಿಂದಿನ ಸಿಇಒ ಮತ್ತು ಎಂಡಿಯನ್ನೇ ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಈ ಬಾಬಾ, ಆಕೆಯನ್ನು ತನ್ನ ಕೈಗೊಂಬೆಯಾಗಿ ಬಳಸಿಕೊಂಡು ಇಡೀ ಎನ್ ಎಸ್ ಇಯ ಆಡಳಿತವನ್ನು ಹಿಮಾಲಯದ ತಪ್ಪಲಿನಿಂದಲೇ ನಿಯಂತ್ರಣ ಮಾಡುತ್ತಿದ್ದ ಎಂದರೆ ನೀವು ನಂಬಲೇಬೇಕು!
ಬರೋಬ್ಬರಿ 4 ಟ್ರಿಲಿಯನ್ ಡಾಲರ್(ಸುಮಾರು 300 ಲಕ್ಷ ಕೋಟಿ ರೂಪಾಯಿ) ನಷ್ಟು ಅಪಾರ ಮಾರುಕಟ್ಟೆ ಮೌಲ್ಯದ ವ್ಯವಹಾರ ನಡೆಸುವ ಬೃಹತ್ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಚಿತ್ರಾ ರಾಮಕೃಷ್ಣ, ಅಕ್ಷರಶಃ ಕಚೇರಿಯ ಪ್ರಮೋಷನ್, ಸಂಬಳ, ಸಾರಿಗೆಯಿಂದ ಹಿಡಿದು ಆಡಳಿತ ಮಂಡಳಿಯ ಆಯ್ಕೆಯವರೆಗೆ ಪ್ರತಿ ವಿಷಯದಲ್ಲಿಯೂ ಆಕೆ ‘ಗುರು’ ಎಂದು ಕರೆಯುತ್ತಿದ್ದ ಆ ಬಾಬಾನೊಂದಿಗೆ ಚರ್ಚಿಸಿ ಅವರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುತ್ತಿದ್ದರು! ಈ ಅಚ್ಚರಿಯ ಸಂಗತಿ ಎನ್ ಎಸ್ ಇಯಲ್ಲಿ ಚಿತ್ರಾ ನಡೆಸಿದ ಅಕ್ರಮಗಳ ಕುರಿತು ಸೆಬಿ(ಸೆಕ್ಯುರಿಟೀಸ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ) ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ.
‘ಶೀರೋಂಮಣಿ’ ಎಂದು ಚಿತ್ರಾ ಕರೆಯುತ್ತಿದ್ದ ಆ ಯೋಗಿಯ ಆಣತಿಯಂತೆ ಎನ್ ಎಸ್ ಇಯ ಕಾರ್ಯನಿರ್ವಾಹಕ ಅಧಿಕಾರಿ(ಸಿಒಒ) ಅಧಿಕಾರಿಯಾಗಿ ಆನಂದ್ ಬಾಲಸುಬ್ರಹ್ಮಣ್ಯಂ ಎಂಬ ಆ ಉದ್ಯಮದಲ್ಲೇ ಹೆಸರೇ ಗೊತ್ತಿಲ್ಲದ ವ್ಯಕ್ತಿಯನ್ನು ನೇಮಕ ಮಾಡಿದ್ದರು. ಆತನ ನೇಮಕವೂ ಸೇರಿದಂತೆ ಎನ್ ಎಸ್ ಇಯ ಆಡಳಿತ ಮಂಡಳಿಯಲ್ಲಿ ಯಾರು ಯಾರಿಗೆ ಯಾವ ಸ್ಥಾನ ಕೊಡಬೇಕು. ಕಂಪನಿಯ ಯಾವ ವಿಭಾಗಗಳಿಗೆ ಯಾರನ್ನು ನೇಮಿಸಬೇಕು ಎಂಬುದನ್ನು ಯೋಗಿಯೇ ನಿರ್ಧರಿಸಿ ಚಿತ್ರಾಗೆ ಸೂಚನೆ ನೀಡಿದ ಇಮೇಲ್ ಮಾಹಿತಿ ಸೆಬಿಯ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.
ಅಷ್ಟೇ ಅಲ್ಲ; ಎನ್ ಎಸ್ ಇಯ ವಹಿವಾಟು ಅಂಕಿಅಂಶ, ಐದು ವರ್ಷಗಳ ವಹಿವಾಟು ಅಂದಾಜು, ಡೆವಿಡೆಂಡ್ ಹಂಚಿಕೆ, ಭವಿಷ್ಯದ ವ್ಯವಹಾರ ಯೋಜನೆಗಳು, ಆಡಳಿತ ಮಂಡಳಿ ಸಭೆಯ ಅಜೆಂಡಾ, ನೌಕರರ ಕಾರ್ಯಕ್ಷಮತೆ ಮತ್ತು ಅದಕ್ಕೆ ತಕ್ಕಂತೆ ಅವರಿಗೆ ನೀಡಬೇಕಾದ ವೇತನ ಹೆಚ್ಚಳದಂತಹ ವಿಷಯಗಳನ್ನು ಸೇರಿದಂತೆ ಸಂಪೂರ್ಣ ಎನ್ ಎಸ್ ಇಯ ಆಡಳಿತ ಮತ್ತು ಕಾರ್ಯಯೋಜನೆಗಳನ್ನು ಚಿತ್ರಾ ಯೋಗಿಯ ಜೊತೆ ಚರ್ಚಿಸಿಯೇ ಅವರ ಸಲಹೆಯಂತೆಯೇ ನಿರ್ವಹಿಸುತ್ತಿದ್ದರು ಎಂಬ ಸಂಗತಿಯನ್ನೂ ಈ ಇಮೇಲ್ ವಿವರಗಳು ಬಹಿರಂಗಪಡಿಸಿವೆ.
ಆನಂದ್ ಬಾಲಸುಬ್ರಹ್ಮಣ್ಯಂ ನೇಮಕಾತಿಯಲ್ಲಿ ಎಸಗಿದ ಅಕ್ರಮವೂ ಸೇರಿದಂತೆ ಎನ್ ಎಸ್ ಇಯ ಕೊ ಲೊಕೇಷನ್ ಮತ್ತು ಆಲ್ಗೋ ಟ್ರೇಡಿಂಗ್ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವು ದೂರುಗಳು ಕೇಳಿಬಂದ ಬಳಿಕ ಚಿತ್ರಾ 2016ರಲ್ಲಿ ಎನ್ ಎಸ್ ಇಯಿಂದ ಹೊರನಡೆದಿದ್ದರು. ಆದರೆ ತನ್ನ ಅಧಿಕಾರವಧಿಯಲ್ಲಿ ಅಕ್ಷರಶಃ ಯಾರೂ ಹೇಳುವವರು ಕೇಳುವವರೇ ಇಲ್ಲ, ತಾನೇ ಬೃಹತ್ ಸಂಸ್ಥೆಯ ಸರ್ವಾಧಿಕಾರಿ ಎಂಬಂತೆ ಆಡಳಿತ ನಡೆಸಿದ ಚಿತ್ರಾ ಆಡಳಿತ ವೈಖರಿಗೆ ಆಡಳಿತ ಮಂಡಳಿ, ವ್ಯವಸ್ಥಾಪಕ ಮಂಡಳಿಗಳಿಂದ ಯಾರೊಬ್ಬರೂ ಸೊಲ್ಲುತ್ತುತ್ತಿರಲಿಲ್ಲ! ದೇಶದ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕುಗಳು, ಕಂಪನಿಗಳು ಕೂಡ ಆಡಳಿತ ಮಂಡಳಿ ಮತ್ತು ಅದರ ಪ್ರಮೋಟರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಆ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಯಾವುದೇ ಆಕ್ಷೇಪವೆತ್ತದೆ ಆಕೆಯ ಆಣತಿಯಂತ ಗೋಣು ಆಡಿಸಿದ್ದರು! ಅಷ್ಟೇ ಅಲ್ಲ. ಅಕ್ರಮ ಮತ್ತು ಅವ್ಯವಹಾರದ ಗಂಭೀರ ಆರೋಪದ ನಡುವೆಯೇ ಆಕೆ ಸಂಸ್ಥೆಯಿಂದ ಹೊರಹೋದಾಗಲೂ ಆಕೆಗೆ ಬರೋಬ್ಬರಿ 44 ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಬಾಕಿ ವೆಚ್ಚಗಳೊಂದಿಗೆ ವೇತನವನ್ನೂ ಕೊಟ್ಟು ಆಡಳಿತ ಮಂಡಳಿ ಬೀಳ್ಕೊಟ್ಟಿತ್ತು!
ಇಂತಹ ಕೊಡುಗೆಗಳ ಜೊತೆಗೆ, ಅಕ್ರಮದ ಕುರಿತು ಸೆಬಿ ಮತ್ತಿತರ ಸಂಸ್ಥೆಗಳು ಎಚ್ಚೆತ್ತುಕೊಳ್ಳುವ ಮುಂಚೆಯೇ ಎನ್ ಎಸ್ ಇ ಆಡಳಿತ ಮಂಡಳಿ, ಆಕೆ ಮತ್ತು ಆಕೆಯ ಆಪ್ತ ಆನಂದ್ ಸುಬ್ರಮಣ್ಯಂ ಸೇರಿದಂತೆ ಇತರೆ ಆಪ್ತ ಸಿಬ್ಬಂದಿ ಬಳಸುತ್ತಿದ್ದ ಲ್ಯಾಪ್ ಮತ್ತು ಕಂಪ್ಯೂಟರುಗಳನ್ನು ಇ ವೇಸ್ಟ್ ರದ್ದಿಗೆ ಹಾಕುವ ಮೂಲಕ ಇಡೀ ಅಕ್ರಮವನ್ನು ಮುಚ್ಚಿಹಾಕುವ ಯತ್ನವನ್ನೂ ಮಾಡಿತ್ತು. ಹಾಗಾಗಿ ಸೆಬಿ ತನಿಖೆಯಲ್ಲಿ ಚಿತ್ರಾ ತನ್ನ ಕಚೇರಿಯ ಅಧಿಕೃತ ಇ ಮೇಲ್ ಬಳಸಿ ನಡೆಸಿದ ಸಂವಾದದ ವಿವರಗಳು ಸಿಕ್ಕಿದ್ದರೂ, ಆಕೆ ಮತ್ತು ಆನಂದ್ ಅವರ ಖಾಸಗಿ ಇಮೇಲ್ ಖಾತೆಗಳ ವಿವರಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ. ಹಾಗಾಗಿ ಸದ್ಯಕ್ಕೆ ಅಧಿಕೃತ ಇಮೇಲ್ ಖಾತೆಯಲ್ಲಿ ಸಿಕ್ಕಿರುವ ಮಾಹಿತಿ ಪ್ರಮುಖ ಸಾಕ್ಷ್ಯವಾಗಿದ್ದರೂ, ವಾಸ್ತವವಾಗಿ ಆಕೆಯ ಖಾಸಗಿ ಇಮೇಲ್, ಲ್ಯಾಪ್ ಮತ್ತು ಕಚೇರಿಯ ಕಂಪ್ಯೂಟರಿನಲ್ಲಿ ಸಿಗಬಹುದಾಗಿದ್ದ ಇನ್ನಷ್ಟು ಅಕ್ರಮಗಳ ಕುರಿತ ಸಾಕ್ಷ್ಯಗಳು ಸೆಬಿಯ ಕೈತಪ್ಪಿಹೋಗಿವೆ!
ಸುಮಾರು 20 ವರ್ಷಗಳಿಂದ ನಿಗೂಢ ಯೋಗಿಯ ಜೊತೆ ಆಪ್ತ ಸಂಪರ್ಕದಲ್ಲಿದ್ದ ಚಿತ್ರಾ, “ತಮ್ಮ ನಡುವೆ ಭೌತಿಕವಾಗಿ ಸಂಪರ್ಕವೇ ಇರಲಿಲ್ಲ. ಅವರಿಗೆ ಭೌತಿಕವಾಗಿ ಸಂಪರ್ಕಕ್ಕೆ ಬರದೆಯೂ ನಮಗೆ ಮಾರ್ಗದರ್ಶನ ಮಾಡುವ ಅಭೂತಪೂರ್ವ ದೈವಿಕ ಶಕ್ತಿ ಅವರಿತ್ತು” ಎಂದು ಸೆಬಿಯ ತನಿಖೆಯ ವೇಳೆ ಹೇಳಿಕೆ ನೀಡಿದ್ದರು. ಆದರೆ, ಸೆಬಿ ತನಿಖೆ ಬಹಿರಂಗಪಡಿಸಿರುವ ಮೇಲ್ ಒಂದರಲ್ಲಿ ಯೋಗಿ, ಚಿತ್ರಾ ಅವರ ತಲೆಗೂದಲು ಮತ್ತು ಅವರ ಸೌಂದರ್ಯವನ್ನು ವರ್ಣಿಸುವ, ಆಕೆಯೊಂದಿಗೆ ಸ್ಯಾಚಿಲ್ಲೆ ಐಷಾರಾಮಿ ದ್ವೀಪದಲ್ಲಿ ರಜೆಯನ್ನು ಕಳೆದ ಅನುಭವಗಳನ್ನು ಮೆಲುಕು ಹಾಕಿರುವ ವಿವರಗಳೂ ಇವೆ!
ಇಮೇಲ್ ಒಂದರ ಸಂಭಾಷಣೆಯಲ್ಲಿ, ಹಿಮಾಲಯದ ತಪ್ಪಲಿನಲ್ಲಿದ್ದಾನೆ ಎನ್ನಲಾಗುವ ಸ್ವಯಂಘೋಷಿತ ಅನಾಮಿಕ ಯೋಗಿ, “ಇವತ್ತು ನೀನು ತುಂಬಾ ಸುಂದರವಾಗಿ ಕಾಣಿಸುತ್ತಿದ್ದೆ. ನೀನು ನಿನ್ನ ತಲೆಗೂದಲನ್ನು ಇನ್ನಷ್ಟು ಆಕರ್ಷಕವಾಗಿ ಕಟ್ಟುವುದನ್ನು ಕಲಿತರೆ, ನೀನು ಇನ್ನೂ ಮೋಹಕವಾಗಿ ಮತ್ತು ನೋಡುಗರನ್ನು ಸೆಳೆಯುವಂತೆ ಕಾಣಿಸುತ್ತಿ. ಇದು ಪುಕ್ಕಟ್ಟೆ ಸಲಹೆ. ನನಗೆ ಗೊತ್ತು ಇಂಥ ಪುಕ್ಕಟ್ಟೆ ಸಲಹೆಯನ್ನು ನೀನು ಯಾವತ್ತೂ ಬಿಟ್ಟುಕೊಡುವುದಿಲ್ಲ. ಮಾರ್ಚ್ ಮಧ್ಯಭಾಗದಲ್ಲಿ ಸ್ವಲ್ಪ ಬಿಡುವು ಮಾಡಿಕೋ. ..ನಾನು ಕಳಿಸಿದ ಆ ಹಾಡು ಕೇಳಿದೆಯಾ? ಹಾಡು ಕೇಳುತ್ತಾ ನಿನ್ನ ಮುಖದಲ್ಲಿ ಮೂಡುವ ಖುಷಿಯ ನಗೆಯನ್ನು ನೋಡಲು ಆಸೆ ನನಗೆ. ಹಾಗೇ ನಿನ್ನ ಹೃದಯದ ಖುಷಿಯನ್ನೂ ಕೇಳಲು… ನಿನ್ನೆಯಂತೂ ನಿನ್ನೊಂದಿಗಿನ ಕ್ಷಣಗಳು ಮತ್ತೆ ಮತ್ತೆ ಸಂತೋಷ ಕೊಡುತ್ತವೆ. ನೀನು ಮಾಡುವ ಇಂತಹ ಸಣ್ಣಪುಟ್ಟ ಸಂಗತಿಗಳೇ ನಿನಗೆ ಮತ್ತೆ ಯೌವನ ಮತ್ತು ಉತ್ಸಾಹ ತರುತ್ತವೆ” ಎಂದು ಮಹಾ ರಸಿಕತೆ ಮೆರೆದಿದ್ದಾನೆ.
ಎನ್ ಎಸ್ ಇಯ ಕೊ ಲೊಕೇಷನ್ ಹಗರಣದ ಕುರಿತು ವಿಷಲ್ ಬ್ಲೋಯರ್(ಸೊಲ್ಲಿಗ) ಒಬ್ಬರು ಮಾಹಿತಿ ಹೊರಗೆಡವಿದ ಒಂದು ತಿಂಗಳ ಬಳಿಕ ಕೂಡ ಆ ಕಳ್ಳ ಯೋಗಿ ಚಿತ್ರಾಗೆ ಇಮೇಲ್ ಮಾಡಿ, “ಬ್ಯಾಗ್ ರೆಡಿ ಮಾಡಿಕೊಂಡಿರು. ಮುಂದಿನ ತಿಂಗಳು ಸ್ಯಾಚಿಲ್ಲೆ(ಐಷಾರಾಮಿ ದ್ವೀಪ) ಗೆ ಹೋಗೋಣ. ನಿನಗೆ ಈಜು ಬರುತ್ತಿದ್ದರೆ, ನಾವು ಅಲ್ಲಿ ಸಮುದ್ರ ಸ್ನಾನ ಮಾಡಬಹುದು ಮತ್ತು ಕಡಲ ಕಿನಾರೆಯಲ್ಲಿ ವಿರಮಿಸಬಹುದು. ..” ಎಂದು ಹೇಳಿದ್ದಾನೆ!
ಅಲ್ಲದೆ, ಎನ್ ಎಸ್ ಇಗೆ ಸೆಲ್ಪ್ ಲಿಸ್ಟಿಂಗ್ ಅವಕಾಶಕ್ಕಾಗಿ ದೆಹಲಿಯ ಪ್ರಧಾನಿ ಕಾರ್ಯಾಲಯದ ಸೋಮನಾಥನ್, ಹಣಕಾಸು ಸಚಿವರು, ಹಣಕಾಸು ಸಚಿವಾಲಯ ಕಾರ್ಯದರ್ಶಿ, ಆರ್ಥಿಕ ಸಲಹೆಗಾರರು, ಮತ್ತು ಅಂತಿಮವಾಗಿ ಸ್ವತಃ ಪ್ರಧಾನಮಂತ್ರಿಗಳನ್ನೂ ಬಳಸಿಕೊಂಡು, ಅವರೊಂದಿಗೆ ಕೆಲವು ಅಡಜ್ಟ್ ಮೆಂಟ್ ಮಾಡಿಕೊಂಡು ಸುಬ್ರಮಣ್ಯಂ ಮತ್ತು ಚಿತ್ರಾ ಚಾಣಾಕ್ಷತನದಿಂದ ಕಾರ್ಯಸಾಧಿಸಬೇಕು ಎಂದು ಯೋಗಿ ಬರೆದಿರುವ ಇಮೇಲ್ ವಿವರಗಳು(2015, ಡಿಸೆಂಬರ್ 4ರಂದು) ಕೂಡ ಸೆಬಿ ತನಿಖೆಯಲ್ಲಿ ಬಹಿರಂಗವಾಗಿವೆ.
2013ರಲ್ಲಿ ದೆಹಲಿಯ ಅಂದಿನ ಪ್ರಭಾವಿ ರಾಜಕಾರಣಿಯೊಬ್ಬರ ಪ್ರಭಾವ ಬಳಸಿ ಚಿತ್ರಾ ರಾಮಕೃಷ್ಣ ಎನ್ ಎಸ್ ಇ ಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಆಗಿದ್ದರು. ಕೋ ಲೊಕೇಶನ್, ಆಲ್ಗೊ ಟ್ರೇಡಿಂಗ್ ಮತ್ತು ಆನಂದ್ ಸುಬ್ರಮಣ್ಯಂ ನೇಮಕಾತಿ ಅಕ್ರಮಗಳ ಕುರಿತು ವಿವರಗಳು ಬಹಿರಂಗವಾದ ಬಳಿಕ 2016ರಲ್ಲಿ ಆಕೆ ವೈಯಕ್ತಿಕ ಕಾರಣ ನೀಡಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎನ್ ಎಸ್ ಇಯ ಆಡಳಿತ ಆಕೆಯ ಅಮೋಘ ಸೇವೆಯನ್ನು ಕೊಂಡಾಡಿ ಭಾರೀ ಬೀಳ್ಕೊಡುಗೆ ಕೊಟ್ಟಿತ್ತು.
ಇದು ಧರ್ಮರಾಜಕಾರಣದ ಭಾರತದ ಮತ್ತೊಂದು ಮುಖ. ಕೇವಲ ಬೀದಿಯಲ್ಲಿ ಹಿಜಾಬ್ ಗಲಭೆ, ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಬೇಡಿ ಎಂಬಷ್ಟಕ್ಕೆ ಅಥವಾ ವೇದಿಕೆಗಳಲ್ಲಿ ಹಿಂದುತ್ವದ ಭಾಷಣ ಬಿಗಿಯಲು ಮಾತ್ರ ಸೀಮಿತವಾಗಿಲ್ಲ ಅದು. ಜಗತ್ತಿನ ಅತಿದೊಡ್ಡ ಷೇರು ವಹಿವಾಟು ಸಂಸ್ಥೆಯ ಜುಟ್ಟನ್ನೂ ಹಿಡಿದು ಕೈಗೊಂಬೆ ಮಾಡಿಕೊಳ್ಳುವ ಮಟ್ಟಿಗೂ ಧರ್ಮಕಾರಣದ ಲಂಪಟತನ ಭಾರತದಲ್ಲಿ ಬೆಳೆದುನಿಂತಿದೆ.