~ಡಾ. ಜೆ ಎಸ್ ಪಾಟೀಲ.
ಲಡಾಯಿ ಪ್ರಕಾಶನˌ ಗದಗˌ ಮೇ ಸಾಹಿತ್ಯ ಬಳಗˌ (9th May Sahitya Mela) ವಿಜಯಪುರ ಮತ್ತು ಇನ್ನಿತರ ಸಂಘಟನೆಗಳು ಅನೇಕ ಇತರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಇದೇ ಮೇ ೨೭ ಹಾಗು ೨೮ ರಂದು ಎರಡು ದಿನಗಳ ೯ ನೇ ಮೇ ಸಾಹಿತ್ಯ ಮೇಳವು ವಿಜಯಪುರದಲ್ಲಿ ಯಶಸ್ವಿಯಾಗಿ ಕೊನೆಗೊಂಡಿತು. ಸುಮಾರು ಎರಡರಿಂದ ಮೂರು ಸಾವಿರ ಜನರು ಸೇರಿದ್ದ ಸಾಹಿತ್ಯ ಮೇಳ (Sahitya Mela) ಇದಾಗಿತ್ತು. ಮೇ ಸಾಹಿತ್ಯ ಮೇಳವು ಭಾರತೀಯ ಪ್ರಜಾತಂತ್ರದ ಸವಾಲುಗಳು ಹಾಗು ಅದನ್ನು ಮೀರುವ ಹಾದಿಗಳು ಎಂಬ ಆಶಯದಿಂದೊಡಗೂಡಿತ್ತು. ಸಾಹಿತ್ಯ ಮೇಳವನ್ನು ವಿಜಯಪುರದ ಹಿರಿಯ ಜನಪರ ಹೋರಾಟಗಾರರಾದ ಭೀಮಶಿ ಕಲಾದಗಿˌ ಪ್ರಕಾಶ್ ಹಿಟ್ನಳ್ಳಿ ತುಕಾರಾಮ ಚಂಚಲಕರ್ˌ ಹಾಗು ಆಳಂದದ ಕೋರ್ಣೇಶ್ವರ ಸ್ವಾಮಿಜಿಯವರು ವಿಶೇಷ ರೀತಿಯಲ್ಲಿ ಉದ್ಘಾಟಿಸಿದರು.
ಉದ್ಘಾಟನಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಪ್ರಕಾಶ್ ಅಂಬೇಡ್ಕರ್, ತೀಸ್ತಾ ಸೆಟಲ್ವಾಡ್ ಹಾಗೂ ಹರ್ಷ ಮಂದರ್ ಅವರು ಮೇಳದ ಕೇಂದ್ರ ವಿಷಯದ ಮೇಲೆ ಗಂಭೀರ ವಿಶ್ಲೇಷಣೆಯುಳ್ಳ ದಿಕ್ಸೂಚಿ ಮಾತುಗಳನ್ನಾಡಿದರು. ಹಿರಿಯ ವಿದ್ವಾಂಸರಾದ ರಾಜೇಂದ್ರ ಚೆನ್ನಿಯವರು ಪ್ರಜಾತಂತ್ರಕ್ಕಿರುವ ಕಾಲ್ತೊಡಕುಗಳನ್ನು ಜನ ಕೇಂದ್ರಿತವಾಗಿ ವಿವರಿಸಿದರು. ಉದ್ಘಾಟನೆಯ ನಂತರದ ಮೊದಲ ಗೋಷ್ಠಿಯಲ್ಲಿ ದೆಹಲಿ ಜವಾಹರಲಾಲ್ ವಿವಿಯ ಕನ್ನಡ ಪೀಠದ ಮಾಜಿ ಮುಖ್ಯಸ್ಥರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ರಾಷ್ಟ್ರೀಯ ಹೋರಾಟದ ವಿಭಿನ್ನ ಧಾರೆಗಳನ್ನು ಗುರುತಿಸಿ, ಅವುಗಳ ಅಂತರ್ ಸಂಬಂಧಗಳ ಕಡೆಗೆ ಜನರ ಗಮನ ಸೆಳೆದರು. ಡಾ. ಹೆಚ್.ಜಿ.ಜಯಲಕ್ಷ್ಮಿಯವರು ಹಿಂದಿನ ಕಾಲದ ಬುಡಕಟ್ಟು ಹೋರಾಟಗಳನ್ನು ಪರಿಚಯಿಸಿದರು.
ಲೇಖಕ ಹಾಗು ಖ್ಯಾತ ಅಂಕಣಕಾರ ಎ.ನಾರಾಯಣ ಅವರು ಸಂವಿಧಾನದ ಪರಿಕಲ್ಪನೆಯನ್ನು ವಿಸ್ತ್ರತವಾಗಿ ವಿವರಿಸಿ ಭವಿಷ್ಯದಲ್ಲಿ ನಾವು ಮಾಡಬೇಕಾದ ಕೆಲಸಗಳ ಕುರಿತು ಒತ್ತು ನೀಡಿದರು. ಮೊದಲ ದಿನದ ಎರಡನೇ ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಚಮರಂ ಅವರು ದಲಿತ ಸಂವೇದನೆ ಕುರಿತು, ಹನೀಫ್ ಅವರು ಅಲ್ಪ ಸಂಖ್ಯಾತರ ಕುರಿತು ಹಾಗು ಶೈಲಜಾ ಹಿರೇಮಠ ಅವರು ಸ್ತ್ರೀ ಸಂವೇದನೆ ಕುರಿತು ಮಾತಾಡಿದರು. ಗೋಷ್ಠಿಯಲ್ಲಿ ಮಂಡನೆಯಾದ ಎಲ್ಲಾ ವಿದ್ವಾಂಸರ ಪ್ರಬಂಧಗಳು ಅವರ ಆಳವಾದ ಓದು ಹಾಗು ಸತತ ಅಧ್ಯಯನದಿಂದ ಮೂಡಿ ಬಂದವಾಗಿದ್ದು ಅವು ದೇಶದ ಸಮಕಾಲೀನ ಆಗುಹೋಗುಗಳ ಕುರಿತು ಸ್ಪಷ್ಟ ಚಿತ್ರಣವನ್ನು ಜನರೆದುರಿಗೆ ತೆರೆದಿಡುವಲ್ಲಿ ಸಂಪೂರ್ಣ ಯಶಸ್ವಿಯಾದವು.
ಮೊದಲನೇ ದಿನದ ಮೂರನೇಯ ಹಾಗು ಕೊನೆಯ ಗೋಷ್ಠಿಯಲ್ಲಿ ಬೌದ್ಧ, ಸೂಫಿ ಮತ್ತು ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು ಕುರಿತು ಹಿರಿಯ ವಿದ್ವಾಂಸರಾದ ನಟರಾಜ್ ಬೂದಾಳ್ ಅವರು ಬಹಳ ಮಾರ್ಮಿಕವಾಗಿ ವಿಷಯವನ್ನು ಮಂಡಿಸಿದರು. ಇಡೀ ಮೇ ಮೇಳದಲ್ಲಿ ಬೂದಾಳ್ ಅವರು ಮಂಡಿಸಿದ ಭಾಷಣವು ಅತ್ಯುತ್ತಮ ಎನಿಸಿತು. ಮೇಳದ ಎರಡನೇಯ ಹಾಗು ಕೊನೆಯ ದಿನದ ಯುವಸ್ಪಂದ ಎಂಬ ಗೋಷ್ಠಿಯಲ್ಲಿ ಸುಭಾಸ್ ರಾಜಮಾನೆ ಮತ್ತು ಟಿ ಎಸ್ ಗೊರವರ ಅವರು ಅತ್ಯಂತ ಪ್ರೌಢವಾಗಿ ವಿಷಯಗಳನ್ನು ಮಂಡಿಸಿದರು. ಎರಡನೇ ದಿನದ ಕೊನೆಯ ಗೋಷ್ಠಿಯಲ್ಲಿ ಮಾವಳ್ಳಿ ಶಂಕರ್, ಸಿದ್ದನಗೌಡ ಪಾಟೀಲ್, ನೂರ್ ಶ್ರೀಧರ್, ಕೆ ನೀಲಾ, ಬಡಗಲಪುರ ನಾಗೇಂದ್ರ ಹಾಗೂ ನಂದಕುಮಾರ್ ಕುಂಬ್ರಿಉಬ್ಬು ಅವರು ನಾವು ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಎಚ್ಚರಿಸಿದರು.
ಮೇ ಸಾಹಿತ್ಯ ಮೇಳದಲ್ಲಿ ಈ ಸಲ ಎರಡು ಕವಿಗೋಷ್ಠಿಗಳು ಜರುಗಿದವು. ಎರಡನೇ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಬಿತಾ ಬನ್ನಾಡಿಯವರು ವಹಿಸಿದ್ದರು. ಗೋಷ್ಠಿಗಳ ಮಧ್ಯದಲ್ಲಿ ವಿವಿಧ ಕಲಾತಂಡಗಳಿಂದ ಹೋರಾಟದ ಹಾಡುಗಳು ಇಡೀ ಮೇಳದ ಆಶಯಕ್ಕೆ ಪೂರಕವಾಗಿ ಮೂಡಿ ಬಂದಿದ್ದಲ್ಲದೆ ಸಭಿಕರ ಮನಸ್ಸನ್ನು ಹಗುರಗೊಳಿಸಿದವು. ರಾಜ್ಯದ ವಿವಿಧ ಭಾಗದ ಲೇಖಕರು, ಸಾಹಿತ್ಯಾಸಕ್ತರುˌ ಕಲಾವಿದರು, ಹೋರಾಟಗಾರರು ಮೇಳದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಡಾ. ಹೆಚ್.ಎಸ್.ಅನುಪಮಾ ಹಾಗೂ ಲಡಾಯಿ ಪ್ರಕಾಶನದ ಬಸು ಅವರು ಹಾಗು ಸ್ಥಳೀಯ ವಿಜಯಪುರದ ಅವರ ತಂಡ ಸಮ್ಮೇಳನದ ಯಶಸ್ವಿಗೆ ಕಾರಣವಾಯಿತು. ಬಿಸಿಲ ನಾಡಾದ ವಿಜಯಪುರದಲ್ಲಿ ಮೇ ಸಾಹಿತ್ಯ ಮೇಳವು ಅಚ್ಚುಕಟ್ಟಾಗಿ ನೆರವೇರಿತು.
ಹಿರಿಯ ರಂಗಸಾಧಕ ಬಸವಲಿಂಗಯ್ಯ, ಸನತ್ ಕುಮಾರ್ ಬೆಳಗಲಿˌ ಮಲ್ಲಿಕಾರ್ಜುನ್ ಹೆಗ್ಗಳಿಗಿˌ ಡಾ. ಪೋತೆˌ ಮುತಾದ ಹಿರಿಯ ಸಾಹಿತಿˌ ಪತ್ರಕರ್ತˌ ಹೋರಾಟಗಾರರು ಮೇ ಮೇಳದಲ್ಲಿ ಭಾಗವಸಿದ್ದರು. ಸಮಾಜಮುಖಿ ಸಂಪಾದಕ ಚಂದ್ರಕಾಂತ ವಡ್ಡು ಅವರು ವಿಜಯಪುರ ಘೋಷಣೆಯನ್ನು ಮಂಡಿಸಿದರು. ಮೇಳದಲ್ಲಿ ಎರಡೂ ದಿನ ಉತ್ತರ ಕರ್ನಾಟಕದ ವಿಶೇಷ ಶೈಲಿಯ ಊಟˌ ತಿಂಡಿಗಳನ್ನು ಸವಿದ ಸಾಹಿತ್ಯಾಸಕ್ತರು ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ವಿಕ್ಷಿಸಲು ಮರೆಯಲಿಲ್ಲ.
~ಡಾ. ಜೆ ಎಸ್ ಪಾಟೀಲ.