ಬೀದರ್: ಹಾಡಹಗಲೇ ನಡೆದ ಭಯಾನಕ ದರೋಡೆಗೆ ಬೀದರ್ ಜನರು ಬೆಚ್ಚಿ ಬಿದ್ದಿದ್ದಾರೆ. ಎಟಿಎಂಗೆ ಹಣ ತುಂಬಲು ತೆಗೆದುಕೊಂಡು ಹೋಗ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಹಣದ ಬಾಕ್ಸ್ ಹೊತ್ತೊಯ್ದಿದ್ದಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿಯನ್ನ ಖದೀಮರು ಹೊತ್ತೊಯ್ದಿದ್ದಾರೆ. ಹಾಡಹಗಲೇ ಘಟನೆ ನಡೆದಿರೋ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಮೊದಲಿಗೆ 5 ಸುತ್ತಿನ ಗುಂಡಿನ ದಾಳಿ ನಡೆಸಿರುವ ಖದೀಮರು, ವ್ಯಾನ್ನಲ್ಲಿದ್ದ ಹಣ ತೆಗೆದುಕೊಂಡು ಬೈಕ್ನಲ್ಲಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟು 5 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಗಿರಿ ಎಂಬ ಸಿಬ್ಬಾಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನಿಸಲಾಗಿದೆ.

ಮೃತ ಸಿಬ್ಬಂದಿ ಗಿರಿ ವೆಂಕಟೇಶ್ ಸಹೋದರ ನಾಗರಾಜ್ ಮಾತನಾಡಿ, ಬಹಳ ವರ್ಷದಿಂದ ನನ್ನ ತಮ್ಮ ATMನಲ್ಲಿ ಹಣ ತುಂಬುವ ಕೆಲಸ ಮಾಡ್ತಿದ್ದ. ಇನ್ನು ಮದುವೆ ಆಗಿರಲಿಲ್ಲ, ಮದುವೆ ಮಾಡ್ಬೇಕು ಅಂತಾ ಅಂದುಕೊಂಡಿದ್ದೆವು. ನಾನು ಬೆಳಗ್ಗೆ ಡ್ಯೂಟಿಗೆ ಹೋಗುವಾಗ ಮನೆಯಲ್ಲಿ ಡ್ಯೂಟಿಗೆ ಈಗ ಹೋಗ್ತಿದ್ದೀಯಾ ಅಣ್ಣಾ ಅಂತ ಕೊನೇ ಬಾರಿ ನನ್ನ ಬಳಿ ಮಾತನಾಡಿದ್ದ. ಯಾವಾಗಲೂ ತನ್ನ ಕುಟುಂಬದ ಬಗ್ಗೆ ತುಂಬಾ ಕೇರ್ ಮಾಡ್ತಿದ್ದ. ನನ್ನ ಮಕ್ಕಳಿಗೆ ಏನ್ ಹೇಳೋದು ಅನ್ನೋದೇ ಗೊತ್ತಾಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.

ಬೀದರ್‌ನಲ್ಲಿ ATM ದರೋಡೆ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ATMಗಳಿಗೆ ಅನೇಕ ಗೈಡ್ಲೈನ್ಸ್ ಕೊಡಲಾಗಿರುತ್ತದೆ. ಅದನ್ನು ಫಾಲೋ ಮಾಡಿದ್ದಾರೋ ಇಲ್ವೋ ಅಂತ ಮಾಹಿತಿ ಪಡೆಯಬೇಕಿದೆ. ತನಿಖೆ ಮಾಡಲು ಎಸ್ಪಿಗೆ ಸೂಚಿಸಿದ್ದೇನೆ ಅಂತ ಹೇಳಿದ್ದಾರೆ. ಬೀದರ್‌ನಲ್ಲಿ ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ, ಘಟನೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಇಬ್ಬರು ದುಷ್ಕರ್ಮಿಗಳು ಬಂದು ದರೋಡೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆರೋಪಿಗಳನ್ನು ಶೀಘ್ರವಾಗಿ ಬಂಧನ ಮಾಡಲಾಗುತ್ತದೆ. 93 ಲಕ್ಷ ರೂಪಾಯಿ ದರೋಡೆ ಆಗಿದೆ ಅಂತಾ ಹೇಳಲಾಗ್ತಿದೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ATMಗಳಿಗೂ ಸೂಕ್ತ ಭದ್ರತೆ ಕೊಡಲು ಚರ್ಚೆ ನಡೆಸಲಾಗುವುದು ಎಂದಿದ್ದಾರೆ.