• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಹಿಜಾಬ್‌ ಜನಿವಾರ ಇತ್ಯಾದಿ ಚಿಹ್ನೆಗಳು ವಿದ್ಯಾರ್ಥಿ ಸಮುದಾಯಕ್ಕೆ ಅತ್ಯವಶ್ಯವೇ ?

ಪ್ರತಿಧ್ವನಿ by ಪ್ರತಿಧ್ವನಿ
May 16, 2026
in Top Story
0
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಆಗತಾನೇ ಲೌಕಿಕ ಜಗತ್ತಿಗೆ ಕಣ್ತೆರೆಯುವ ಮಕ್ಕಳಿಗೆ ಏನನ್ನು ತೆರೆದಿಡಬೇಕು ? ಬಹುಶಃ ಈ ಪ್ರಶ್ನೆಗೆ ಭಾರತದ ರಾಜಕೀಯ ವಲಯದಲ್ಲಿ ಉತ್ತರವೇ ಸಿಗುವುದಿಲ್ಲ. ಏಕೆಂದರೆ ನೆಲದ ಸೂಕ್ಷ್ಮಗಳಿಂದ ಬಹುದೂರ ಸಾಗಿ ವಿಮುಖರಾಗಿರುವ ಜನಪ್ರತಿನಿಧಿಗಳಿಗೆ ತಮ್ಮಂತೆಯೇ ಈ ಎಳೆಯ ಜೀವಗಳೂ ಸಹ ಮಾರುಕಟ್ಟೆಯಲ್ಲಿ ವಿಕ್ರಯವಾಗುವ ಸಂಭಾವ್ಯ ಸರಕುಗಳಾಗಿಯೇ ಕಾಣುತ್ತಾರೆ. ಯಾವ ಮಕ್ಕಳಿಗೆ ಏನು ಕಲಿಸಬೇಕು, ಹೇಗೆ ಕಲಿಸಬೇಕು ಎನ್ನುವುದಕ್ಕಿಂತಲೂ, ಯಾವ ಮಗುವಿನ ತಲೆಯ ಮೇಲೆ ಏನಿರಬೇಕು, ಹಣೆಯ ಚಿಹ್ನೆ ಯಾವುದಿರಬೇಕು, ದೇಹವನ್ನು ಮುಚ್ಚಲು ಏನನ್ನು ಬಳಸಬೇಕು ಎನ್ನುವುದೇ ರಾಜಕೀಯ ಸಂಕಥನದ ಪ್ರಧಾನ ವಿಷಯವಾಗುತ್ತದೆ. ಹಾಗಾಗಿಯೇ ನೀಟ್‌ ಪರೀಕ್ಷೆಯಲ್ಲಿ ಉತ್ತರಗಳ ಸೋರಿಕೆಯಿಂದ ಗೋಳಾಡುತ್ತಿರುವ ಲಕ್ಷಾಂತರ ಮಕ್ಕಳಿಗಿಂತಲೂ, ಜನಿವಾರ ವಂಚಿತ ಅಲ್ಪಸಂಖ್ಯೆಯ ಮಕ್ಕಳು ಬಿಜೆಪಿಯಂತಹ ಪಕ್ಷಗಳಿಗೆ ಮುಖ್ಯವಾಗುತ್ತಾರೆ.

ಭಾರತೀಯರ ಅದೃಷ್ಟ , ವರ್ತಮಾನದ ರಾಜಕೀಯ ಸಂತತಿಯ ಛಾಯೆ ಸಂವಿಧಾನ ರಚನೆಯ ಸಮಯದಲ್ಲಿ ಇರಲಿಲ್ಲ. ಹಾಗೇನಾದರೂ ಇದ್ದಿದ್ದರೆ ತಾಯ ಗರ್ಭದಿಂದ ಅಂತಿಮ ಯಾತ್ರೆಯವರೆಗೆ ಪ್ರಜೆಗಳ ವಸ್ತ್ರ ಧಾರಣೆ, ಚಿಹ್ನೆ, ಮುದ್ರೆ ಮತ್ತಿತರ ಧರ್ಮ\ಜಾತಿ ಸಂಕೇತಗಳೆಲ್ಲವೂ ಸಾಂವಿಧಾನಿಕವಾಗಿ ನಿಷ್ಕರ್ಷೆಯಾಗಿಬಿಡುತ್ತಿತ್ತು. ಅದೇ ಭಾರತೀಯರ ದುರಂತ ಎಂದರೆ ವರ್ತಮಾನದ ಜನಪ್ರತಿನಿಧಿಗಳಿಗೆ, ಚುನಾಯಿತ ಸರ್ಕಾರಗಳಿಗೆ ಮತ್ತು ಪರಾಜಿತ ವಿರೋಧಿಗಳಿಗೆ, ಲೌಕಿಕ ಜಗತ್ತನ್ನು ಅರಿಯುವ ಮುನ್ನವೇ ಒಂದು ಆವರಣವನ್ನು ಪ್ರವೇಶಿಸುವ ಮಕ್ಕಳ (ಇವರನ್ನು ವಿದ್ಯಾರ್ಥಿ ಸಮುದಾಯ ಎಂದು ಪರಿಗಣಿಸಿದಾಗ ) ಆದ್ಯತೆಗಳೇನು, ಆಯ್ಕೆಗಳು ಏನಿರಬೇಕು ಎಂಬ ಪರಿಜ್ಞಾನವೇ ಇಲ್ಲದಿರುವುದು. ಈ ಬಲಿಪೀಠದಲ್ಲಿ ನಮಗೆ ಕಾಣಿಸುವುದು ವಿದ್ಯಾರ್ಜನೆಯ ಭೌತಿಕ ಮೂರ್ತ ರೂಪಗಳಲ್ಲ ಬದಲಾಗಿ ಈ ಎಳೆಯ ಸಮಾಜದ ಭವಿಷ್ಯದ ಅಮೂರ್ತ ಸ್ವರೂಪ.

ಚಿಹ್ನೆ-ಸಂಕೇತಗಳ ಪಗಡೆಯ ಹಾಸು
ಈ ದೃಷ್ಟಿಯಿಂದಲೇ ಕರ್ನಾಟಕದಲ್ಲಿ ಮತ್ತೊಮ್ಮೆ ತಲೆಎತ್ತಿರುವ ಹಿಜಾಬ್‌ ವಿವಾದವನ್ನು ನೋಡಬೇಕಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ 2023ರ ಹಲವಾರು ಜನೋಪಯೋಗಿ ಭರವಸೆಗಳನ್ನು ಈಡೇರಿಸಲು ಇನ್ನೂ ಮೀನ ಮೇ಼ಷ ಎಣಿಸುತ್ತಿದ್ದರೂ, 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಕರಾಳ ಆದೇಶವೊಂದನ್ನು ರದ್ದುಪಡಿಸುವ ಮೂಲಕ, ಶಾಲಾ ಹೆಣ್ಣು ಮಕ್ಕಳಿಗೆ ಹಿಜಾಬ್‌ ಧರಿಸುವ ಸ್ವಾತಂತ್ರ್ಯವನ್ನು ಪುನಃ ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಈ ಆದೇಶದ ಅನುಸಾರ ಸಂಪ್ರದಾಯ ಮತ್ತು ಆಚರಣೆಗಳನ್ನಾಧರಿಸಿದ ಯಾವುದೇ ಧಾರ್ಮಿಕ ಸಂಕೇತ-ಚಿಹ್ನೆ ಧರಿಸುವ ಹಕ್ಕನ್ನು ಶಾಲಾ ಕಾಲೇಜು ಮಕ್ಕಳಿಗೆ ನೀಡಲಾಗಿದೆ. ಪೇಟ/ಟರ್ಬನ್‌, ಜನಿವಾರ/ಪವಿತ್ರದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್‌ ಇವೆಲ್ಲವನ್ನೂ ಅನುಮತಿಸಲಾಗಿದೆ. ಇದು ಸ್ವಾಗತಿಸಲೇಬೇಕಾದ ನಿರ್ಧಾರ.

ತಮಾಷೆ ಎಂದರೆ ಎರಡೂ ಸರ್ಕಾರಗಳು ತಮ್ಮ ಆದೇಶಗಳಿಗೆ ನೀಡಿರುವ ಕಾರಣ ಒಂದೇ ಆಗಿದೆ. “ ಶಾಲೆ ಕಾಲೇಜುಗಳಲ್ಲಿ ಏಕರೂಪತೆ, ಸಮಾನತೆ, ಜಾತ್ಯತೀತತೆ ಮತ್ತು ಸಮಾನ ಶಿಕ್ಷಣದ ಅವಕಾಶ ” ಕಲ್ಪಿಸಲು ಬಿಜೆಪಿ ಹಿಜಾಬ್‌ ನಿಷೇಧಿಸಿತ್ತು. ಕಾಂಗ್ರೆಸ್‌ ಸರ್ಕಾರ ಈ ಹಿಜಾಬ್‌ ಮಾತ್ರ ಮರುಕಳಿಸಿದರೆ ಜನಿವಾರಕ್ಕೆ ಬೇಸರವಾಗಬಹುದು ಎಂದು ಭಾವಿಸಿ ರುದ್ರಾಕ್ಷಿ, ಜನಿವಾರಗಳನ್ನೂ ಒಳಗೊಂಡಿದೆ. ಸಮಾನತೆ ಮತ್ತು ಜಾತ್ಯಾತೀತತೆ ಎಂಬ ಉದಾತ್ತ ಕಲ್ಪನೆಗಳನ್ನು ರುಬ್ಬಿ ರುಬ್ಬಿ ಚಟ್ನಿ ಮಾಡಿರುವ ಭಾರತದ ರಾಜಕೀಯ ವ್ಯವಸ್ಥೆಗೆ ಶಾಲಾ ಕಾಲೇಜು ಆವರಣದಲ್ಲಿ ಏನಿರಬೇಕು ಎಂಬ ಪರಿಜ್ಞಾನವೇ ಇಲ್ಲದಿರುವುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ. ಬಿಜೆಪಿ ಸರ್ಕಾರಕ್ಕೆ ವಿದ್ಯಾರ್ಜನೆಗಾಗಿ ಶಾಲೆ-ಕಾಲೇಜಿಗೆ ಬರುವ ಮುಸ್ಲಿಂ ಹೆಣ್ಣುಮಕ್ಕಳ ಒಂದು ವಸ್ತ್ರದಲ್ಲಿ ʼ ಜಿಹಾದ್‌ ʼನ ಭೂತ ಕಂಡಿತ್ತು. ಹಾಗಾಗಿ ನಿಷೇಧಿಸಿಬಿಟ್ಟಿತು.

ಈ ನಿಷೇಧಕ್ಕಿಂತಲೂ ಢಾಳಾಗಿ ಕಂಡಿದ್ದು, ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಈ ಸಂಸ್ಥೆಗಳ ಸೇವಕರು ಹಿಜಾಬ್‌ ಧರಿಸಿ ಬಂದ ಹೆಣ್ಣು ಮಕ್ಕಳನ್ನು ಗೇಟಿನ ಹೊರಗೆ ನಿಲ್ಲಿಸಿ ಬಹಿಷ್ಕರಿಸಿದ ಕ್ರೌರ್ಯ. ಈ ಕ್ರೌರ್ಯ ಸೃಷ್ಟಿಸುವ ಗಾಯದ ಮೇಲೆ ಉಪ್ಪು ಸವರಲು ಗಂಡುಮಕ್ಕಳಿಗೆ ಕೇಸರಿ ಶಾಲು ಹೊದಿಸಲಾಯಿತು. ಈ ಪ್ರಸಂಗಗಳೆಲ್ಲವೂ ವಿದ್ಯಾರ್ಜನೆಯ ದೇಗುಲದ ಅಂಗಳದಲ್ಲಿ ನಡೆದವು ಎಂದು ದಾಖಲಿಸಿದರೆ, ಎರಡು ಪೀಳಿಗೆಯ ನಂತರದ ಮಕ್ಕಳಿಗೆ 2020ರ ದಶಕ ಪ್ರಾಚೀನ ಶಿಲಾಯುಗದಂತೆ ಗೋಚರಿಸಬಹುದು. ಆದರೆ ಇದು ನಡೆಯಿತಲ್ಲವೇ ? ಅದನ್ನು ಸಂಭ್ರಮಿಸಿದ್ದೂ ಆಯಿತು. ನ್ಯಾಯಾಲಯದವರೆಗೂ ಹೋದ ಈ ವಿವಾದ ಅಂತಿಮ ನ್ಯಾಯ ಗಳಿಸಿದೆಯೋ ಇಲ್ಲವೋ, ಆದರೆ ಶಿಕ್ಷಣ ವಂಚಿತ ಮಕ್ಕಳ ದೃಷ್ಟಿಯಿಂದ ಹೇಗೆ ಕಾಣಬಹುದು ?
ಶಾಲಾ ಅಂಗಳದ ಸೌಂದರ್ಯ ಏನಾಗಿದೆ ?
ಇದನ್ನು ನಾವು ಯೋಚಿಸಿದ್ದೇವೆಯೇ ? ಈಗ ಹಿಜಾಬ್‌ ಮತ್ತೆ ಬಂದಿದೆ. ಇದು ಸಿದ್ದರಾಮಯ್ಯ ಸರ್ಕಾರ ಕೈಗೊಂಡಿರುವ ಹಲವು ವಿವೇಕಯುತ ನಿರ್ಧಾರಗಳಲ್ಲಿ ಒಂದು. ಸ್ವಾಗತಾರ್ಹ.

ರಾಜಕೀಯವಾಗಿ ಇದು ಮುಸ್ಲಿಂ ಓಲೈಕೆಯಾಗಿ, ಬಿಜೆಪಿ ನಾಯಕ ಅಶೋಕ್‌ ಅವರ ಭಾಷೆಯಲ್ಲಿ ʼಮುಸ್ಲಿಂ ಮುನಿಸಿಗೆ ಹೆಚ್ಚಿದ ಮುಲಾಮು ʼ ಆಗಿ ಕಾಣುತ್ತದೆ. ಕಾಂಗ್ರೆಸ್‌ ಪಕ್ಷದ ದೃಷ್ಟಿಯಲ್ಲಿ ಇದು ಅಂಬೇಡ್ಕರ್‌ ಎತ್ತಿಹಿಡಿದ ಸಾಂವಿಧಾನಿಕ-ಧಾರ್ಮಿಕ ಸ್ವಾತಂತ್ರ್ಯದ ಕುರುಹಾಗಿ ಕಾಣುತ್ತದೆ. ಈ ಕೊಳಕು ರಾಜಕೀಯ ಅಂಗಳದಿಂದಾಚೆ ನಿಂತು ನೋಡಿದಾಗ, ನಾವು ವಿದ್ಯಾರ್ಜನೆಗಾಗಿ ಶಾಲೆಗೆ ಬರುವ ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬ ಪ್ರಶ್ನೆ ಕಾಡುವುದಿಲ್ಲವೇ ? ವಿವೇಕ ಇರುವವರಿಗೆ ಕಾಡಲೇಬೇಕಲ್ಲವೇ ?
ಸಂವೇದನಾಶೀಲ ಸಾಹಿತಿ ರೂಪ ಹಾಸನ “ ಶಾಲೆ ಕಾಲೇಜುಗಳಲ್ಲಿ ಮಕ್ಕಳನ್ನು ಅವರ ವ್ಯಕ್ತಿತ್ವ , ವಿದ್ಯೆ, ಪ್ರತಿಭೆ, ಘನತೆ , ಕೆಲಸ ಸಾಧನಗಳ ಮೂಲಕ ಗುರುತಿಸಿಕೊಳ್ಳುವಂತೆ ಬೆಳೆಸುವುದೇ ಮುಖ್ಯವಾಗಬೇಕು. ಆದರೆ ಜಾತಿ ಧರ್ಮಗಳ ಸಂಕೇತಗಳ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳುವ ಸ್ಥಿತಿಗೆ ಜನಸಮುದಾಯ ಇಳಿಯುತ್ತಿರುವ ಬಗ್ಗೆ ಮರುಕವಾಗುತ್ತದೆ ” (ಆಂದೋಲನ 15-05-2026) ಎಂದು ಹೇಳಿರುವುದು ಯಾವುದೇ ಸಂವೇದನಾಶೀಲ ಮನಸ್ಸನ್ನು ಕದಡುವ ವಾಸ್ತವ. 1970-80ರ ದಶಕದಲ್ಲೂ ಸಹ ಶಾಲೆಗೆ ಹೋಗುವ ಮಕ್ಕಳು ಎಂದರೆ ಬಗಲಲ್ಲಿ ಚೀಲ, ಅದರೊಳಗೆ ಪುಸ್ತಕಗಳು, ಕೆಲವೊಮ್ಮೆ ಸಮವಸ್ತ್ರ ಇವುಗಳ ಮೂಲಕ ಗುರುತಿಸಲಾಗುತ್ತಿತ್ತು. ಈಗ ಬಹುಶಃ ಹಣೆಯ ಮೇಲಿನ ತಿಲಕ, ತಲೆಯ ಮೇಲಿನ ಹಿಜಾಬು, ಹೆಣ್ಣುಮಕ್ಕಳ ಹಣೆಯ ಬೊಟ್ಟು, ಮುಸ್ಲಿಂ ಬಾಲಕರ ಬಿಳಿ ಟೊಪ್ಪಿ, ಕುತ್ತಿಗೆಯಲ್ಲಿರುವ ರುದ್ರಾಕ್ಷಿ, ಯಾರಿಗೂ ಕಾಣದ ಜನಿವಾರ ಇವುಗಳ ಮೂಲಕ ಗುರುತಿಸುವಂತಿದೆ.

ಇದು ಒಂದು ನಾಗರಿಕತೆಯಾಗಿ ನಾವು ಎಂತಹ ಪಾತಾಳಕ್ಕೆ ಕುಸಿದಿದ್ದೇವೆ ಎನ್ನುವುದರ ಸೂಚಕವಲ್ಲವೇ ? ಇತ್ತೀಚೆಗೆ ನಡೆದ NEET ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಿಗೆ ಜನಿವಾರವನ್ನು ತೆಗೆಸಿದ ಪ್ರಕರಣ, ಇರಾನ್-ಇಸ್ರೇಲ್‌ ಯುದ್ಧಕ್ಕಿಂತಲೂ ಗಂಭೀರ ಚರ್ಚೆಯನ್ನು ಹುಟ್ಟುಹಾಕಿತ್ತು. ಇದು ಬಿಜೆಪಿಯ ಪಾಲಿಗೆ ರಾಷ್ಟ್ರೀಯ ಸಮಸ್ಯೆಯಾಗಿ ಕಂಡಿತ್ತು. ಆದರೆ ಅದೇ NEET ಪರೀಕ್ಷೆಗಳನ್ನು ಹರಾಜು ಮಾರುಕಟ್ಟೆಯನ್ನಾಗಿ ಮಾಡಿದ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ 25 ಲಕ್ಷ ಅಭ್ಯರ್ಥಿಗಳು ಕಂಗಾಲಾಗಿರುವುದು ಸಮಸ್ಯೆ ಎಂದು ಕಂಡೇ ಇಲ್ಲ. ಬಹುಶಃ ಬಂಧಿತ ಆರೋಪಿಗಳಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ ಅಲ್ಲಿ ʼ ನೀಟ್‌ ಜಿಹಾದ್‌ ʼ ಕಂಡು ಹೌಹಾರಬಹುದಿತ್ತು. ಅವಕಾಶ ತಪ್ಪಿಹೋಯಿತು.

ರಾಜಕೀಯ ನೈತಿಕತೆ ಪ್ರಶ್ನೆ
ಇದೇ ವಾತಾವರಣವನ್ನು ಕರ್ನಾಟಕದ ಹಿಜಾಬ್‌ ವಿವಾದದ ದೃಷ್ಟಿಯಲ್ಲಿ ನೋಡಿದಾಗ, ನಮ್ಮ ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಮತ್ತು ಆದ್ಯತೆಗಳ ಬಗ್ಗೆ ಹೇವರಿಕೆ ಮೂಡುತ್ತದೆ. ಒಂದು ಸರ್ಕಾರ ನಿಷೇಧಿಸಿರುವುದನ್ನು ಮತ್ತೊಂದು ಸರ್ಕಾರ ರದ್ದುಪಡಿಸುವ ಈ ರಾಜಕೀಯ ಚದುರಂಗದಾಟದಲ್ಲಿ ಮುಸ್ಲಿಂ ಹೆಣ್ಣುಮಕ್ಕಳ, ಒಟ್ಟಾರೆ ಶಾಲಾ ಮಕ್ಕಳ ಪಾಡು ಏನಾಗುತ್ತದೆ ? ಬಿಜೆಪಿಯ ಹಿಜಾಬ್‌ ನಿಷೇಧದ ಹಿಂದೆ ವಿಶಾಲ ರಾಜಕೀಯ ಉದ್ದೇಶಗಳಿದ್ದುದು ಗುಟ್ಟಿನ ಮಾತೇನಲ್ಲ. ಇದನ್ನು ರದ್ದುಪಡಿಸಿರುವುದು ಅಭಿನಂದನಾರ್ಹ ನಿರ್ಧಾರ. ಆದರೆ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಮತ್ತೆ ಹಿಜಾಬ್‌ ಬಲಿಯಾಗುವುದಿಲ್ಲವೇ ? ಮತ್ತೊಮ್ಮೆ ಕೋರ್ಟ್‌ ಕಲಾಪ ಇತ್ಯಾದಿ. ಮತ್ತೊಂದು ಬ್ಯಾಚಿನ ಹೆಣ್ಣು ಮಕ್ಕಳಿಗೆ ತ್ರಿಶಂಕು ಸ್ಥಿತಿ. ಈ ಪಗಡೆಯಾಟದಲ್ಲಿ ಶಾಲಾ ಮಕ್ಕಳನ್ನೇಕೆ ದಾಳಗಳಾಗಿ, ಆಟಕಾಯಿಗಳಾಗಿ ಬಳಸಿಕೊಳ್ಳಬೇಕು ? ಉತ್ತರದಾಯಿತ್ವದ ಕಲ್ಪನೆಯಾದರೂ ಇದ್ದರೆ ರಾಜಕೀಯ ನಾಯಕರು ಇದಕ್ಕೆ ಉತ್ತರಿಸಬೇಕು.

ಜನಿವಾರ ಸಾಮುದಾಯಿಕ ಸಂಕೇತ, ರುದ್ರಾಕ್ಷಿ ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವ ಆಭರಣ, ಸಿಖ್ಖರು ಧರಿಸುವ ಟರ್ಬನ್‌, ಪೇಟ ಇವು ಧಾರ್ಮಿಕ ಸಂಕೇತಗಳು. ಕ್ರೈಸ್ತರು ಧರಿಸುವ ಶಿಲುಬೆ ಕ್ರಿಸ್ತ ಮತದ ಸಂಕೇತ. ಹಿಜಾಬ್‌ ಇಸ್ಲಾಂ ಧರ್ಮದಲ್ಲಿ ವಿಧಿಸಲಾಗುವ ಒಂದು ಧಾರಣಾ ವಸ್ತ್ರ. ಈ ಸಂಕೇತಗಳು ಮಕ್ಕಳಲ್ಲಿ ಆಯಾ ಮತ ಧರ್ಮ ಅಥವಾ ಜಾತಿ ಪಂಗಡಗಳ ಅಸ್ಮಿತೆಯನ್ನು ಗಟ್ಟಿಗೊಳಿಸುವುದೇ ಹೊರತು, ಅವರಲ್ಲಿನ ವಿದ್ಯಾರ್ಜನೆಯ ಕ್ಷಮತೆ, ಕಲಿಕೆಯ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಉದ್ಧೀಪನಗೊಳಿಸುವುದಿಲ್ಲ. ರೂಪ ಹಾಸನ ಅವರ ಮಾತುಗಳನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ಜಾತ್ಯಾತೀತತೆ ಅಥವಾ ಸಮಾನತೆ ಎಂಬ ಸಾಂವಿಧಾನಿಕ ಔದಾತ್ಯಗಳು ಶಾಲಾ ಮಕ್ಕಳಲ್ಲಿ ಬಿತ್ತಬೇಕಾದ ಬೀಜಗಳೇ ಹೊರತು ಆ ಮಕ್ಕಳ ಮೂಲಕವೇ ಬಿಂಬಿಸಬೇಕಾದ ಸಂಕೇತಗಳಲ್ಲ.

ಧಾರ್ಮಿಕ ಕಟ್ಟುಪಾಡುಗಳ ಸಂಕೋಲೆ
ಹಿಂದೂ, ಕ್ರೈಸ್ತ, ಸಿಖ್‌ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಧಾರ್ಮಿಕ ಸಂಕೇತಗಳು ಎಂದಿಗೂ ವ್ಯಕ್ತಿಯ ಆದ್ಯತೆ ಅಥವಾ ಆಯ್ಕೆಯಾಗಿರುವುದಿಲ್ಲ. ತೊಟ್ಟಿಲಿನಲ್ಲೇ ಇದನ್ನು ಕಟ್ಟಳೆಯಾಗಿ ವಿಧಿಸಲಾಗಿರುತ್ತದೆ. ಚಟ್ಟದವರೆಗೂ ಮುಂದುವರೆಯಬೇಕು ಎಂದು ಈ ಮತಗಳ, ಧರ್ಮಗಳ ನಿರ್ದೇಶಕರು, ನಿಯಂತ್ರಕರು, ನಿರ್ವಾಹಕರು ಬಯಸುತ್ತಾರೆ. ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಕೆಲವರೇ ಧರಿಸುತ್ತಿದ್ದ ಹಿಜಾಬ್‌, ಬಿಜೆಪಿ ಸರ್ಕಾರ ಸೃಷ್ಟಿಸಿದ ಗೊಂದಲದಿಂದ, ಅಸ್ಮಿತೆಯ ಸಂಕೇತವಾಗಿ ಮುಸ್ಲಿಂ ಹೆಣ್ಣು ಮಕ್ಕಳ ಪಾಲಿಗೆ ಹೇರಿಕೆಯ ವಸ್ತ್ರವಾಗಿಬಿಟ್ಟಿತು. ಹಿಜಾಬ್‌ ಧರಿಸದೆ ಮನೆಯ ಹೊರಗೆ ಕಾಲಿಡದಂತಹ ಪರಿಸ್ಥಿತಿಯೂ ಸೃಷ್ಟಿಯಾಗಿಹೋಯಿತು. ಮತ್ತೆ ಇಲ್ಲಿ ಬಲಿಯಾದದ್ದು ಹೆಣ್ಣಿನ ಆಯ್ಕೆ ಸ್ವಾತಂತ್ರ್ಯ ಮತ್ತು ಹೆಣ್ಣು ಜೀವವನ್ನು ಆವರಿಸುವ ಆಚರಣಾತ್ಮಕ ಸಂಕೋಲೆಗಳು.
ಈ ಧಾರ್ಮಿಕ ಚಿಹ್ನೆ ಮತ್ತು ಸಂಕೇತಗಳನ್ನು ಭೌತಿಕ ಪ್ರದರ್ಶನ ವಸ್ತುಗಳಾಗಿ ಪರಿವರ್ತಿಸುವುದು ಧರ್ಮಕೇಂದ್ರಗಳ, ಅಧ್ಯಾತ್ಮ ಕೇಂದ್ರಗಳ ಮತ್ತು ಆರಾಧನಾ ತಾಣಗಳ ಮುಖ್ಯ ಪ್ರಣಾಳಿಕೆಯಾಗಿರುತ್ತದೆ. ಬ್ರಾಹ್ಮಣ/ಮೇಲ್ಜಾತಿ ಹುಡುಗ ಧರಿಸುವ ಜನಿವಾರ ಅಥವಾ ಮುಸ್ಲಿಂ ಹೆಣ್ಣು ಮಗು ಧರಿಸುವ ಹಿಜಾಬ್‌ ಎರಡೂ ಸಹ ಪೋಷಕರಿಗಿಂತಲೂ ಅವರನ್ನು ಮಾನಸಿಕವಾಗಿ ಬಂಧಿಸುವ ಧಾರ್ಮಿಕ ಕಟ್ಟಳೆಗಳಿಂದ ನಿರ್ಧಾರವಾಗುತ್ತವೆ. ಈ ಕಟ್ಟಳೆಗಳನ್ನು ಮೀರಿ ನಡೆಯದಂತೆ ಇಡೀ ಕುಟುಂಬವನ್ನು ಧಾರ್ಮಿಕ ಸಂಸ್ಥೆಗಳು ನಿರ್ಬಂಧಿಸಿರುತ್ತವೆ. ಹಾಗಾಗಿಯೇ ಹಿಜಾಬ್‌ ಧರಿಸುವುದು ಕಡ್ಡಾಯ ಅಲ್ಲ ಎಂದು ಮುಸ್ಲಿಂ ಸಮಾಜದ ಪ್ರಗತಿಶೀಲ ಮನಸ್ಸುಗಳು ಹೇಳಿದರೂ, ಧಾರ್ಮಿಕ ನಾಯಕರು ಹೇಳುವುದಿಲ್ಲ. ಈ ನಿಟ್ಟಿನಲ್ಲಿ ಫತ್ವಾ ಹೊರಡಿಸುವುದಿಲ್ಲ. ಜನಿವಾರ ಧರಿಸದ ಬ್ರಾಹ್ಮಣ ಹುಡುಗ ಆಂತರಿಕವಾಗಿ ಬಹಿಷ್ಕೃತನಾಗಿಬಿಡುತ್ತಾನೆ. ಪಿತೃಕರ್ಮಗಳ ಹಕ್ಕನ್ನೂ ಕಳೆದುಕೊಳ್ಳುತ್ತಾನೆ.

ಹಿಜಾಬ್‌ಗೆ ಪ್ರತಿಯಾಗಿ ಹಿಂದುತ್ವ ಸಂಘಟನೆಗಳು ಕೇಸರಿ ಶಾಲನ್ನು ಧರಿಸಲು ಆಜ್ಞಾಪಿಸಿರುವುದು ಶಾಲಾ ಮಕ್ಕಳ ದೃಷ್ಟಿಯಿಂದ ಹೇಗೆ ಕಾಣಲು ಸಾಧ್ಯ ? ಯಾವುದೇ ಭೇದ ಭಾವಗಳ ಅರಿವಿಲ್ಲದೆ ಅಥವಾ ತಮ್ಮ ಮನೆಯೊಳಗೆ ರೂಢಿಸಿಕೊಂಡಿದ್ದರೂ ಅವುಗಳನ್ನು ಮರೆತು, ʼ ನಾವೆಲ್ಲಾ ಒಂದು ʼ ಎಂದು ಬೆರೆತು, ಕಲಿಯುವ, ಆಟೋಟಗಳಲ್ಲಿ ನಲಿಯುವ, ಹಾಡು ನೃತ್ಯಗಳನ್ನು ಸಂಭ್ರಮಿಸುವ ಶಾಲಾ ಮಕ್ಕಳ ನಡುವೆ , ಸಂಕೇತಗಳ ಹೆಸರಿನಲ್ಲಿ ಕಟ್ಟುವ ಗೋಡೆಗಳು ಎಂತಹ ಸಮಾಜವನ್ನು ರೂಪಿಸಲು ಸಾಧ್ಯ ? ಮನುಷ್ಯನಲ್ಲಿ ದ್ವೇಷ ಏಕಾಏಕಿ ಮೂಡುವ ಲಕ್ಷಣವಲ್ಲ. ಭಿನ್ನತೆಯನ್ನು ಸ್ವಾಭಾವಿಕ ಎಂದು ಭಾವಿಸುವ ಅವಕಾಶಗಳನ್ನೂ ಕಸಿದುಕೊಂಡು ಮಕ್ಕಳಲ್ಲಿ ಭಿನ್ನವಾದುದನ್ನು ಅನ್ಯ ಎನಿಸುವಂತೆ ಮಾಡುವ ವಿಕೃತ ಸಾಂಸ್ಕೃತಿಕ ಅಂಗಳದಲ್ಲಿ ದ್ವೇಷ ಎಂಬ ವಿಷವೃಕ್ಷ ಬೆಳೆಯುತ್ತದೆ.

ಕೊಳಕು ರಾಜಕಾರಣದ ಬಯಲಿನಲ್ಲಿ
ಈ ವಿರಾಟ್‌ ವೃಕ್ಷದ ಅಡಿಯಲ್ಲಿ ಅನ್ಯೀಕರಣದ (Othering) ಭಾವನೆ, ಭಿನ್ನ ಎಂದರೆ ನಮ್ಮದಲ್ಲ ಎಂಬ ಮನೋಭಾವ, ನಮ್ಮದಲ್ಲವನ್ನು ಸಹಿಸಲಾಗದ ಮನಸ್ಥಿತಿ ಇವೆಲ್ಲವೂ ದ್ವೇಷ ಎಂಬ ವೃಕ್ಷದ ಬೇರುಗಳಾಗಿ ಗಟ್ಟಿಯಾಗುತ್ತಾ ಹೋಗುತ್ತವೆ. ಜಾತ್ಯತೀತತೆ ಇರುವುದು ಎರಡು ಧೃವಗಳಲ್ಲಿ ನಿಲ್ಲುವ ಧಾರ್ಮಿಕ ಸಂಕೇತಗಳನ್ನು ಸಹಿಸಿಕೊಂಡು, ಒಪ್ಪಿಕೊಳ್ಳುವುದರಲ್ಲೇ ಹೊರತು, ಈ ಸಂಕೇತಗಳನ್ನು ಪ್ರದರ್ಶನ ವಸ್ತುಗಳಾಗಿ ಬಳಸುವುದರಲ್ಲಲ್ಲ. ಸಮಾನತೆ ಇರುವುದು ಎಳೆಯ ಮಕ್ಕಳ ಸಮಾನ ಅವಕಾಶ, ಸಮಾನ ಘನತೆ ಮತ್ತು ಸಮಾನ ಆಯ್ಕೆ ಸ್ವಾತಂತ್ರ್ಯದಲ್ಲೇ ಹೊರತು, ಸರ್ಕಾರಗಳು ನಿರ್ಧರಿಸುವ ನಡವಳಿಕೆಗಳಲ್ಲಿ ಅಲ್ಲ. ಈ ಅರಿವು ಅಥವಾ ಪ್ರಜ್ಞೆಯನ್ನು ಶಾಲಾ-ಕಾಲೇಜು ಮಕ್ಕಳಲ್ಲಿ ಅಪೇಕ್ಷಿಸಲಾಗುವುದಿಲ್ಲ. ಇವುಗಳ ಔದಾತ್ಯ ಮತ್ತು ಅವಶ್ಯಕತೆಯನ್ನು ಅವರ ಮನಸ್ಸಿನಲ್ಲಿ ಬಿತ್ತುವ ಜವಾಬ್ದಾರಿ ಸಮಾಜದ ಮೇಲಿರುತ್ತದೆ.

ಸಮಾಜ ಇಲ್ಲಿ ಹೆಜ್ಜೆ ತಪ್ಪಿದಾಗ , ಸಮುದಾಯಗಳನ್ನು ನಿಯಂತ್ರಿಸುವ ಧಾರ್ಮಿಕ ಸಂಸ್ಥೆಗಳು, ಅಧ್ಯಾತ್ಮಿಕ ಕೇಂದ್ರಗಳು ಮತ್ತು ಆಚರಣಾ ಮಂಡಲಿಗಳು ತಮ್ಮದೇ ಆದ ವಿಧಿವಿಧಾನಗಳ ಮೂಲಕ ಮಕ್ಕಳ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತವೆ. ಇಡೀ ಹಿಜಾಬ್‌ ವಿವಾದದಲ್ಲಿ ಇದನ್ನು ಗಮನಿಸಬೇಕಿದೆ. ಧಾರ್ಮಿಕ-ಸಾಂಪ್ರದಾಯಿಕ-ಸಾಮುದಾಯಿಕ ಸಂಕೇತ ಧಾರಣೆ ವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತು ಸ್ವಾಯತ್ತ ಬದುಕಿನ ಹಕ್ಕನ್ನು ಹತ್ತಿಕ್ಕುವ ಅಸ್ತ್ರಗಳಾದಾಗ ಅದು ಕೊಳೆಯುವ ಸಮಾಜದ ಆರಂಭದ ಲಕ್ಷಣಗಳು ಎಂದೇ ಪರಿಗಣಿಸಬೇಕು. ಭಾರತೀಯ ಸಮಾಜ ಒಂದು ರೀತಿಯಲ್ಲಿ ಈ ಕೊಳೆಯುವ ದಾರಿಯಲ್ಲಿ ಸಾಗುತ್ತಿದೆ. ಕೆಲವೆಡೆ ಕೊಳೆತುಹೋಗಿರುವುದೂ ಸತ್ಯ. ರಾಜಕೀಯ ಪಕ್ಷಗಳಿಗೆ ಇದರ ವಾಸನೆ ಬಡಿದರೂ ಮೂಗುಮುಚ್ಚಿ ಮುಂದೆ ಸಾಗುತ್ತವೆ.
ಸಮಾಜದ ಜವಾಬ್ದಾರಿ !!!

ಆದರೆ ಜೀವಂತಿಕೆ ಮತ್ತು ಚಲನಶೀಲ ಸಂವೇದನೆ ಇರುವ ಸಮಾಜ ಹೀಗೆ ಹೆಜ್ಜೆ ಹಾಕಲಾಗುವುದಿಲ್ಲ. ಏಕೆಂದರೆ ಈ ಸಮಾಜದ ಕಣ್ಣಲ್ಲಿ ಮಕ್ಕಳ ಉಜ್ವಲ ಭವಿಷ್ಯ ಮುಖ್ಯವಾಗುತ್ತದೆ. ಈ ಮಕ್ಕಳು ಒಂದು ಪೀಳಿಗೆ ಅಥವಾ ತಲೆಮಾರನ್ನು ಪ್ರತಿನಿಧಿಸುತ್ತಿದ್ದಾರೆ. ಮುಂದಿನ ಎಳೆಯ ಪೀಳಿಗೆಗೆ ಇವರು ದಿಕ್ಸೂಚಿಯಾಗುತ್ತಾರೆ. ಇವರ ಎದೆಯಲ್ಲಿ ನಾವು ಬಿತ್ತುವ ಬೀಜ ಹೊಂಗೆಯ ನೆರಳು ನೀಡಬೇಕೋ, ಜಾಲಿಯ ಮೊನಚನ್ನು ಸೃಷ್ಟಿಸಬೇಕೋ ಎಂದು ನಿರ್ಧರಿಸುವ ಜವಾಬ್ದಾರಿ ಈ ಸಮಾಜದ ಮೇಲಿದೆ. ಈಗಾಗಲೇ ಜಾಲಿಯ ಮುಳ್ಳುಗಳು ಮೊಳಕೆಯೊಡೆಯುತ್ತಿವೆ ಅದನ್ನೂ ಕಿತ್ತುಹಾಕಿ, ಸುಂದರ ಶಾಂತಿಯುತ ಉದ್ಯಾನವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ.

ಪರ-ವಿರೋಧಗಳ ನೆಲೆಯಲ್ಲಿ ಅಸ್ತಿತ್ವಗಳನ್ನು ನಿರ್ಧರಿಸಿಕೊಳ್ಳುವುದರ ಬದಲು, ಭವಿಷ್ಯದ ದೃಷ್ಟಿಯಿಂದ ಸರ್ಕಾರಗಳ ಈ ಮೇಲಾಟಗಳನ್ನು ನಿಷ್ಠುರವಾಗಿ ಖಂಡಿಸಬೇಕಿದೆ. ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತಲೇ ಇದು ಶಾಶ್ವತವಾಗಿರಲಿಕ್ಕಿಲ್ಲ ಎಂಬ ಆತಂಕವೂ ನಮ್ಮನ್ನು ಕಾಡಬೇಕಿದೆ. ಏಕೆಂದರೆ ದೇಶ ಅಂತಹ ಪಾತಾಳಕುಸಿತಕ್ಕೆ ಸಜ್ಜಾಗುತ್ತಿದೆ. ಅಕ್ಷರ, ಅರಿವು, ಜ್ಞಾನ ಮತ್ತು ಶಿಕ್ಷಣದ ಮೌಲ್ಯಗಳನ್ನು ಎಳೆಯ ಮನಸ್ಸುಗಳಲ್ಲಿ ಬಿತ್ತುವ ಒಂದು ಬೌದ್ಧಿಕ ಪ್ರಕ್ರಿಯೆಗೆ ನಾವು ಚಾಲನೆ ನೀಡಬೇಕಿದೆ. ಅಲ್ಲಿ ಹಿಜಾಬ್‌, ಜನಿವಾರ, ರುದ್ರಾಕ್ಷಿ ಇರುವುದಿಲ್ಲ. ಬರೀ ಮಕ್ಕಳಿರುತ್ತಾರೆ, ಮಕ್ಕಳ ಕಲರವ ಇರುತ್ತದೆ , ಅವರ ಉಲ್ಲಾಸ ಇರುತ್ತದೆ.
-೦-೦-೦-೦-

Tags: #EducationSystem#HijabRow#KarnatakaPolitics#SchoolEducation#StudentsRightsGenderEqualityJanivaraNadivakarapratidavanisecularismSocialJustice
Previous Post

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

Next Post

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

Related Posts

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!
Top Story

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

by ಪ್ರತಿಧ್ವನಿ
May 16, 2026
0

ಮುಂಬೈ : ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, Uber, Ola Consumer ಹಾಗೂ Rapido ಆ್ಯಪ್‌ಗಳನ್ನು...

Read moreDetails
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

May 16, 2026
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

May 16, 2026
Next Post
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada