ನವದೆಹಲಿ: ದೇಶದಲ್ಲಿ ಚೀತಾಗಳಿರುವ ಏಕೈಕ ರಾಷ್ಟ್ರೀಯ ಉದ್ಯಾನವನ ಎಂಬ ಗರಿಮೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ ಮತ್ತೆ ೧೨ ಚೀತಾಗಳನ್ನು ಸ್ವಾಗತಿಸಲು ಸಜ್ಜಾಗಿದೆ.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚೀತಾಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಒ.ಆರ್.ಟಂಬೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್’ಗಳಲ್ಲಿ ಚೀತಾಗಳು ಆಗಮಿಸಲಿವೆ.
ಮಧ್ಯಪ್ರದೇಶದ ಗ್ವಾಲಿಯರ್’ನ ವಾಯುಪಡೆ ನೆಲೆಗೆ ಶನಿವಾರ ಬೆಳಿಗ್ಗೆ ಚೀತಾಗಳು ಆಗಮಿಸಲಿವೆ. ಅಲ್ಲಿಂದ ಶಿಯೋಪುರ್’ನ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗುತ್ತದೆ. ಭಾರಿ ತೂಕ ಸಾಗಣೆಯ ಸಾಮರ್ಥ್ಯದ ಹೆಲಿಕಾಪ್ಟರ್ ಅನ್ನು ಭಾರತೀಯ ವಾಯುಪಡೆಯು ಈ ಉದ್ದೇಶಕ್ಕಾಗಿ ಒದಗಿಸಿದೆ.

ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಬೇಕು ಎಂಬ ಚರ್ಚೆ ಆರಂಭವಾದ ಮೂರು ವರ್ಷಗಳ ತರುವಾಯ ಇದು ಕಾರ್ಯಗತಗೊಳ್ಳುತ್ತಿದೆ. ಮೊದಲಿನ ಯೋಜನೆಯಂತೆ, ಚೀತಾಗಳು 2022ರ ಮೊದಲ ಅವಧಿಯಲ್ಲಿ ಬರಬೇಕಿತ್ತು. ಆದರೆ, ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಡುವುದು ವಿಳಂಬವಾಗಿತ್ತು.
ಒಪ್ಪಂದ ವಿಳಂಬವಾದ ಕಾರಣ ಭಾರತಕ್ಕೆ ಕಳುಹಿಸಲು ಗುರುತಿಸಲಾಗಿದ್ದ ಚೀತಾಗಳು ಇಲ್ಲಿನ ಲಿಂಪೊಪೊ ಪ್ರಾಂತ್ಯದ ಮೀಸಲು ಅರಣ್ಯದಲ್ಲಿ ಸೀಮಿತ ಪ್ರದೇಶದಲ್ಲೇ ದೀರ್ಘ ಕಾಲ ಕ್ವಾರಂಟೈನ್’ನಲ್ಲಿ ಕಳೆಯಬೇಕಾಯಿತು.
ದಕ್ಷಿಣ ಆಫ್ರಿಕಾದ ಚೀತಾಗಳನ್ನು ಭಾರತದಲ್ಲಿ ಅವುಗಳು ಜೀವಿಸಲು ಸೂಕ್ತವಾಗಿರುವ ಹವಾಮಾನವುಳ್ಳ ಪ್ರಾಂತ್ಯದಲ್ಲಿ ಪರಿಚಯಿಸಲು ಸುಪ್ರೀಂ ಕೋರ್ಟ್ ಜನವರಿ 2020ರಲ್ಲಿ ಅನುಮತಿ ನೀಡಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್’ಟಿಸಿಎ) ನಮೀಬಿಯಾದ ಚೀತಾ ತರಲು ಅನುಮೋದನೆ ಕೋರಿ ಅರ್ಜಿ ಸಲ್ಲಿಸಿತ್ತು.
ನಮೀಬಿಯಾದಿಂದ ಕಳೆದ ಸೆಪ್ಟೆಂಬರ್’ನಲ್ಲಿ ಎಂಟು ಚೀತಾಗಳನ್ನು ಕರೆತಂದಿದ್ದು, ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿವೆ.
ಭಾರತದಲ್ಲಿದ್ದ ಚೀತಾಗಳು ಬೇಟೆ, ನಗರೀಕರಣ, ಕುಗ್ಗಿದ ಅರಣ್ಯ ವ್ಯಾಪ್ತಿ ಕಾರಣದಿಂದ ಸಂತತಿ ನಶಿಸಿತ್ತು. ಮತ್ತೆ ಚೀತಾ ಸಂತತಿ ವೃದ್ಧಿಗಾಗಿ ಇಲ್ಲಿ ಮರುಪರಿಚಯಿಸಲಾಗುತ್ತಿದೆ.