ಗದಗ: ಟಿಪ್ಪು ಸುಲ್ತಾನನನ್ನು ಯುದ್ಧದಲ್ಲಿ ಬ್ರಿಟೀಷರು ಕೊಂದಂತೆ ನನ್ನನ್ನು ಕೊಲ್ಲಿ ಎಂದು ಸಚಿವ ಅಶ್ವಥ್ ನಾರಾಯಣ ಅವರು ಜನರಿಗೆ ಪ್ರಚೋದನೆ ನೀಡಿದ್ದಾರೆ, ಆದರೆ ಎಲ್ಲಿಯವರೆಗೆ ನನ್ನ ಮೇಲೆ ಜನರ ಆಶೀರ್ವಾದ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಯಾರಿಂದಲೂ ಏನು ಮಾಡಲು ಆಗಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಜಿಲ್ಲೆಯ ಶಿರಹಟ್ಟಿಯಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ, ಕೋಮುವಾದಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯವರಿಂದ ತಳ ಸಮುದಾಯದ ಜನರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದು ಹರಿಹಾಯ್ದರು.
ಪಕ್ಷ ಘೋಷಿಸಿದ ಅಭ್ಯರ್ಥಿಯನ್ನು ಬೆಂಬಲಿಸಿ:
ಶಿರಹಟ್ಟಿಯಲ್ಲಿ 14 ಮಂದಿ ಆಕಾಂಕ್ಷಿಗಳು ಟಿಕೇಟ್ ಗಾಗಿ ಅರ್ಜಿ ಹಾಕಿದ್ದಾರೆ. ಒಬ್ಬರಿಗೆ ಮಾತ್ರ ಟಿಕೇಟ್ ನೀಡಲು ಸಾಧ್ಯ, ಉಳಿದ 13 ಮಂದಿ ಒಬ್ಬರ ಕಾಲು ಇನ್ನೊಬ್ಬರು ಎಳೆಯದೆ, ಪಕ್ಷ ಘೋಷಿಸಿದ ಅಭ್ಯರ್ಥಿಯ ಸಹಾಯಕ್ಕೆ ನಿಂತುಕೊಂಡು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗೆ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ? ನಮ್ಮ ಸರ್ಕಾರ ಶಿರಹಟ್ಟಿ ಒಂದೇ ಕ್ಷೇತ್ರಕ್ಕೆ 18,000 ಮನೆಗಳನ್ನು ನೀಡಿತ್ತು. ಈ ಸರ್ಕಾರ ಬಂದು 4 ವರ್ಷಗಳಾಯಿತು, ಒಂದೇ ಒಂದು ಮನೆ ಕೊಟ್ಟಿದ್ದಾರ? ಬರೀ ಲೂಟಿ ಹೊಡೆಯುತ್ತಿದ್ದಾರೆ. ಇಂಥವರು ಮತ್ತೆ ಗೆಲ್ಲಬೇಕಾ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನಿಗೆ 5 ಪೈಸೆ ಲಂಚ ನೀಡಿರುವುದಾಗಿ ಹೇಳಿದರೆ ರಾಜಕೀಯ ನಿವೃತ್ತಿ
ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹೀಗೆ ಎಲ್ಲೇ ಹೋದರು ಲಂಚದಿಂದ ತುಂಬಿಹೋಗಿದೆ. ವಿಧಾನಸೌಧದಲ್ಲಿ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ಲಂಚ ಫಿಕ್ಸ್ ಮಾಡಿ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ನಾನು 12 ವರ್ಷ ಹಣಕಾಸು ಸಚಿವನಾಗಿ, 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಒಬ್ಬನೇ ಒಬ್ಬ ಗುತ್ತಿಗೆದಾರ ಎನ್,ಒ,ಸಿ ರಿಲೀಸ್ ಮಾಡಲು ಸಿದ್ದರಾಮಯ್ಯನಿಗೆ 5 ಪೈಸೆ ಲಂಚ ನೀಡಿದ್ದೇನೆ ಎಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಸವಾಲು ಹಾಕಿದರು.
ಹಂತಕರನ್ನು ಆರಾಧಿಸುವವರಿಗೆ ಮತ ನೀಡುತ್ತೀರಾ ?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾತನಾಡುವಾಗ ರಸ್ತೆ, ಚರಂಡಿ, ಸೇತುವೆಗಳ ಬಗ್ಗೆ ಪ್ರಶ್ನೆ ಮಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ಚುನಾವಣೆ ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಎಂದಿದ್ದಾರೆ. ಯುವ ಜನರಿಗೆ ಕೆಲಸ, ರೈತರ ಜಮೀನಿಗೆ ನೀರು, ಬಡವರಿಗೆ ಅನ್ನ ಇದನ್ನು ಚರ್ಚೆ ಮಾಡದೆ ಅಬ್ಬಕ್ಕ ವರ್ಸಸ್ ಟಿಪ್ಪು ಬಗ್ಗೆ ಯೋಚನೆ ಮಾಡಿ ಮತ ನೀಡುತ್ತೀರ? ಮಹಾತ್ಮ ಗಾಂಧಿ ವರ್ಸಸ್ ಸಾವರ್ಕರ್, ಗಾಂಧಿ ವರ್ಸಸ್ ಗೋಡ್ಸೆ ಎಂದು ಗಾಂಧಿ ಹಂತಕರನ್ನು ಆರಾಧಿಸುವವರ ಕೈಗೆ ಮತ್ತೆ ಅಧಿಕಾರ ನೀಡುತ್ತೀರಾ ಎಂದು ಪ್ರಶ್ನಿಸಿದರು.

ಬಿಜೆಪಿಯವರ ಬಂಡವಾಳವೇ ಮೋದಿ
ನರೇಂದ್ರ ಮೋದಿ ಅವರು ಬರಗಾಲ, ಕೊರೊನಾದಿಂದ ಜನ ಸಾಯುವಾಗ ಬರಲಿಲ್ಲ. ಆದರೆ ಈಗ ಚುನಾವಣೆ ಬಂದಿದೆ ಎಂದು ಮೇಲಿಂದ ಮೇಲೆ ಬರುತ್ತಿದ್ದಾರೆ. ಬಿಜೆಪಿಯವರ ಬಂಡವಾಳವೇ ಮೋದಿ ಅವರು, ಇಲ್ಲಿನ ನಾಯಕರಿಗೆ ಮತ ಕೇಳಲು, ಜನರ ಬಳಿ ಹೋಗಲು ಮುಖವಿಲ್ಲ ಅಷ್ಟು ಲೂಟಿ ಮಾಡಿ, ಹೆಸರು ಕೆಡಿಸಿಕೊಂಡಿದ್ದಾರೆ. ಮೋದಿ ನೋಡಿ ಜನ ನಮಗೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ತಿಳಿಸಿದರು.
ಅಡುಗೆ ಮಾಡಿದ್ದು ನಾವು, ಊಟ ಬಡಿಸಿದ್ದು ಮೋದಿ
ಲಂಬಾಣಿ ಜನರಿಗೆ ಮೋದಿ ಅವರು ಹಕ್ಕು ಪತ್ರ ನೀಡಲು ಬಂದಿದ್ರು. ತಾಂಡಗಳು, ಮಜರೆಗಳು, ಹಟ್ಟಿಗಳಲ್ಲಿ ವಾಸ ಮಾಡುವ ಜನರಿಗೆ ಭೂಮಿಯ ಒಡೆತನದ ಹಕ್ಕು ನೀಡಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿದ್ದು ನಮ್ಮ ಸರ್ಕಾರ. ಅಡುಗೆ ಮಾಡಿದವರು ನಾವು, ಊಟ ಬಡಿಸಲು ಮೋದಿ ಅವರನ್ನು ಕರೆಸಿದ್ದಾರೆ. ಮೋದಿ ಅವರಾದರೂ ಕಾರ್ಯಕ್ರಮದ ಆಹ್ವಾನವನ್ನು ನಿರಾಕರಿಸಬೇಕಿತ್ತು ಹರಿಹಾಯ್ದರು.
ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ
ನಾವು ಮುಂದೆ ಅಧಿಕಾರಕ್ಕೆ ಬಂದ ಕೂಡಲೆ ಬಡಜನರಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಪ್ರತೀ ಮನೆಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ. ಎರಡನೆಯದು ಪ್ರತೀ ಮನೆಯ ಯಜಮಾನಿ ತಿಂಗಳಿಗೆ 2,000 ದಂತೆ ವರ್ಷಕ್ಕೆ 24,000 ರೂ. ಸಹಾಯಧನ ನೀಡುತ್ತೇವೆ. ಕೊಟ್ಟ ಮಾತಿಗೆ ನಾವು ತಪ್ಪಿದರೆ ಒಂದು ಸೆಕೆಂಡ್ ಕೂಡ ರಾಜಕೀಯದಲ್ಲಿ ಇರುವುದಿಲ್ಲ. ಈ ಬಾರಿ ಕ್ಷೇತ್ರದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.






