ಪುಟ್ಟ ಜಿಲ್ಲೆ ಕೊಡಗು ರಾಜ್ಯದಲ್ಲೆ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೀ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು ಜಿಲ್ಲೆಯ ಎಲ್ಲ ಭಾಗಗಗಳಲ್ಲೂ ಹೋಂ ಸ್ಟೇ ಗಳೇ ಎದ್ದು ನಿಂತಿವೆ. ಜಿಲ್ಲೆಯ ಶೇಕಡಾ 80 ರಷ್ಟು ಜನತೆ ಗ್ರಾಮೀಣ ಪ್ರದೇಶಗಳಲ್ಲೇ ವಾಸಿಸುತಿದ್ದಾರೆ. ಆದರೆ ಬಹಳಷ್ಟು ಗ್ರಾಮೀಣ ಪ್ರದೇಶಗಳು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವುದು ಕಟು ಸತ್ಯ. ಇದಷ್ಟೇ ಅಲ್ಲ ಸರ್ಕಾರ ಬಡ ವರ್ಗದವರ ಏಳಿಗೆಗಾಗೇ ಹಮ್ಮಿಕೊಂಡಿರುವ ಹತ್ತಾರು ಕಾರ್ಯಕ್ರಮಗಳು ವೀರಾಜಪೇಟೆ ತಾಲ್ಲೂಕಿನ ಬಡ ಕುಟುಂಬವೊಂದಕ್ಕೆ ಇನ್ನೂ ತಲುಪಿಲ್ಲದಿರುವ ವರದಿ ಇದಾಗಿದೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಈ ತಾಯಿ ಮಗಳಿಬ್ಬರ ಬದುಕಿನ ವಿಷಾದನೀಯವಾದ ಕ(ವ್ಯ)ಥೆ ಇದು. ಇದರ ನಡುವೆಯೂ ಓದಬೇಕೆಂಬ ಯುವತಿಯ ಹಂಬಲ ಮಾತ್ರ ಬಂಡೆಯಂತೆ ಅಚಲವಾಗಿದ್ದು ಸಮಾಜದ ಹತ್ತಾರು ಸಹೃದಯರು ಈ ಕುಟುಂಬದ ನೋವಿಗೆ ಸ್ಪಂದಿಸಲು ಮುಂದೆ ಬಂದಿರುವುದು ನಿಜಕ್ಕೂ ಸಮಾಧಾನಕರ ಸಂಗತಿ ಆಗಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಓದುವ ಆಸೆಯಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ, ಅನೇಕ ಕೌಟುಂಬಿಕ ಸಮಸ್ಯೆಗಳ ಕಾರಣ ಶಿಕ್ಷಣ ಮೊಟಕುಗೊಳಿಸುವ ಅನೇಕ ವಿದ್ಯಾರ್ಥಿಗಳನ್ನು ನಾವು ನಮ್ಮ ಸುತ್ತಲಿನ ವ್ಯವಸ್ಥೆಯಲ್ಲಿ ಕಾಣುತ್ತಿರುತ್ತೇವೆ. ಆದರೆ, ವಿರಾಜಪೇಟೆಯ ಹೆಗ್ಗಳ ಗ್ರಾಮದ ಭವಾನಿ ಪಿ.ಕೆ ಎನ್ನುವ ಸಾಧಕ ವಿದ್ಯಾರ್ಥಿನಿಯ ಜೀವನ ನಿಜಕ್ಕೂ ಮನಕಲಕುವಂಥದ್ದು. ಭವಾನಿಯ ಸಾಧನೆಗೂ ಆಕೆ ಸವೆಸುತ್ತಿರುವ ಜೀವನವನ್ನು ಕಂಡಾಗ ಈ ದೇಶದಲ್ಲಿ ಯಾವ ಕಾನೂನ್ನಲ್ಲ, ಯಾವ ಯೋಜನೆಯಲ್ಲ ಯಾವುದು ಬಂದರೂ ಅಶಕ್ತ ಜನಾಂಗದವರ, ಬಡವರ ಕಷ್ಟಕ್ಕೆ ಏನೇನು ಮಾಡಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮೊದಲಿಗೆ ಭವಾನಿ ಸಾಧನೆಗಳ ಬಗ್ಗೆ ತಿಳಿದುಕೊಂಡು ನಂತರ ಆ ಸಾಧನೆಯ ಹಿಂದೆ ಆಕೆ ಎಂಥ ದುರ್ಭರವಾದ ಬದುಕು ನಡೆಸುತ್ತಿದ್ದಾಳೆ ತಿಳಿಯೋಣ.
ಮೊನ್ನೆ-ಮೊನ್ನೆಯಾಗಿ ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು, ಸಿ.ಇಟಿ, ಉನ್ನತ ಶಿಕ್ಷಣ ಮಾಡುವ ತಯಾರಿಯಲ್ಲಿ ಯಾವ ಕಾಲೇಜ್ ಬೆಸ್ಟ್? ಯಾವ ಕೋರ್ಸು ಒಳ್ಳೆಯದು ಎನ್ನುವ ಹುಡುಕಾಟದಲ್ಲಿದ್ದಾರೆ. ಹೆಗ್ಗಳ ಗ್ರಾಮದ ಭವಾನಿಯೂ ವಿರಾಜಪೇಟೆಯ ಸರ್ಕಾರೀ ಜೂನಿಯರ್ ಕಾಲೇಜಿನ್ನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಓದುತ್ತಿದ್ದರು. ಅವರ ಫಲಿತಾಂಶ ಕೂಡಾ ಬಂದಿದ್ದು, 600 ಅಂಕಗಳಿಗೆ 516 ಅಂಕಗಳನ್ನು ಪಡೆದಿದ್ದಾರೆ. ಜೂನಿಯರ್ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಟಾಪರ್ ಆಗೀ ಹೊರಹೊಮ್ಮಿದ್ದಾರೆ. ಕಾಲೇಜಿಗೆ ಎರಡನೇ ಅತೀ ಹೆಚ್ಚು ಅಂಕ ಗಳಿಸಿದವರಾಗಿದ್ದಾರೆ. ಅಲ್ಲದೇ ಕನ್ನಡ ಮತ್ತು ವ್ಯವಹಾರ ಶಾಸ್ತ್ರದಲ್ಲಿ ನೂರಕ್ಕೆ 96 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ ಹತ್ತನೇ ತರಗತಿಯಲ್ಲೂ ಹೆಗ್ಗಳ ಗ್ರಾಮದ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಯ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದರು. ನಮ್ಮ ಶಿಕ್ಷಣ ವ್ಯವಸ್ಥೆ ರೂಪಿಸಿರುವ ಪರೀಕ್ಷೆಗಳನ್ನು ಭವಾನಿ ಬಹಳ ಚೆನ್ನಾಗಿಯೇ ಎದುರಿಸಿ ಮುನ್ನಡೆಯುತ್ತಿದ್ದಾಳೆ. ಆದರೆ ಬದುಕು ಮತ್ತು ನಮ್ಮ ವ್ಯವಸ್ಥೆ ಆಕೆಗೆ ನೀಡಿರುವ ಜೀವನವನ್ನು ಎದುರಿಸಲಾರದೆ, ಚಿಕ್ಕ ವಯಸಿನ ಭವಾನಿ ಬಳಲಿದ್ದಾಳೆ. ಮುಂದೇನು ಅನ್ನುವ ಚಿಂತೆಯಲ್ಲಿದ್ದಾಳೆ.
ಹೆಗ್ಗಳ ಗ್ರಾಮದಲ್ಲಿ ಇಬ್ಬರು ಮನುಷ್ಯರಷ್ಟೇ ಕೂರಬಹುದಾದ ಒಂದು ಪುಟ್ಟ ಕತ್ತಲ ಕೋಣೆಯೇ ಇವರ ವಾಸದ ಮನೆ. ಸರಿಯಾಗಿ ಆ ಮನೆ ನೋಡಿದರೆ ಕುರಿಗಳು ವಾಸಿಸಲು ಯೋಗ್ಯವಲ್ಲದ ಸ್ಥಳ. ಚಿಕ್ಕಂದಿನಲ್ಲಿ ಕೂಲಿಕಾರ್ಮಿಕ ತಂದೆಯನ್ನು ಕಳೆದುಕೊಳ್ಳುವ ಭವಾನಿಗೆ ಅಮ್ಮ ಮಾತ್ರ ಪಾಲಿಗೆ ಉಳಿಯುತ್ತಾಳೆ. ಅಮ್ಮನಿಗೂ ಮಾನಸಿಕ ಕಾಯಿಲೆ. ನಾಲ್ಕು ದಿನ ಚೆನ್ನಾಗಿದ್ದರೆ ಐದನೇ ದಿನಕ್ಕೆ ಮಲಗಿದ್ದಲ್ಲಿಂದ ಏಳುವುದಿಲ್ಲ.
ಆ ಪುಟ್ಟ ಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ಭವಾನಿಯ ಓದಿಗೆ ಸೀಮೆ ಎಣ್ಣೆ ದೀಪವೇ ಗತಿ. ಇನ್ನು ಇಡೀ ದೇಶದಾದ್ಯಂತ ಬಯಲು ಮುಕ್ತ ಶೌಚಲಯ ಸಾಧಿಸಿದ್ದೇವೆ. ಕೊಡಗು ಜಿಲ್ಲೆಯಲ್ಲಿ ಬಯಲು ಶೌಚ ವ್ಯವಸ್ಥೆಯೇ ಇಲ್ಲ ಎನ್ನುವ ಇಲಾಖೆ ಒಮ್ಮೆ ಬಂದು ಈ ಮನೆಯನ್ನು ನೋಡಲಿ. ಶೌಚಲಯವೂ ಇಲ್ಲ ಕಾಡಿಗೆ ಹೋಗಬೇಕು ಎನ್ನುವಾಗ ಭವಾನಿಯ ಧ್ವನಿ ಸಂಕೋಚದಿಂದ ಮುದುಡುತ್ತದೆ.ಇಲ್ಲೇ ಹುಟ್ಟಿ ಇಲ್ಲೇ ಬೆಳೆದರೂ ಇವರಿಗೆ ಆಧಾರ್ ಕಾರ್ಡ್ ಇಲ್ಲ, ರೇಶನ್ ಕಾರ್ಡ್ ಇಲ್ಲ. ತಾಯಿಯ ಜೊತೆ ಭವಾನಿ ರಜೆಯಿದ್ದಾಗಲೆಲ್ಲಾ ಇಲ್ಲಿಂದ ಎರಡು ಕಿಲೋಮೀಟರ್ ದೂರದ ರಾಮನಗರದ ಕಾಫಿತೋಟಗಳಿಗೆ ಕೂಲಿಗೆ ಹೋದರೆ ತಿನ್ನಲು ಸಿಗುತ್ತದೆ. ಇಲ್ಲದಿದ್ದರೇ ಅಕ್ಕಪಕ್ಕದ ಮನೆಯವರು ತಿನ್ನಲು ಮನೆಯಲ್ಲಿ ಏನು ಇಲ್ಲದ ದಿನ ಕೊಡುವ ರೊಟ್ಟಿ, ಅನ್ನವೇ ಇವರ ಜೀವ ಉಳಿಸುವ ಅಮೃತವಾಗಿದೆ.
ಹೆಗ್ಗಳದಿಂದ ವಿರಾಜಪೇಟೆ ಜೂನಿಯರ್ ಕಾಲೇಜಿಗೆ ಬರಲು ಬಸ್ ಗೆ ಹಣ, ಕಾಲೇಜ್ ಶುಲ್ಕ ಕಟ್ಟಲು ಹಣ ಎಲ್ಲವನ್ನು ಭವಾನಿಯೇ ಕಾಲೇಜಿಗೆ ರಜೆಯಿದ್ದಾಗ ದುಡಿದು ಸಂಪಾದನೆ ಮಾಡಿಕೊಂಡು ನಂತರ ಆ ಹಣದಲ್ಲಿ ದಿನದೂಡಬೇಕು. ನಾವೂ ಇನ್ನು ಕೂಡಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ದೀಪದ ಬೆಳಕಿನ್ನಲ್ಲಿ ಪಾಠ ಓದಿದರು ಎನ್ನುವುದನ್ನು ಮಕ್ಕಳಿಗೆ ಕಲಿಸುತ್ತಿದ್ದೇವೆ. ಆದರೆ, ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಭವಾನಿಯ ಮನೆಯಲ್ಲಿ ಓದಲೂ ಸೀಮೆಎಣ್ಣೆಯೂ ಇರುತ್ತಿರಲಿಲ್ಲ. ಪಕ್ಕದ ಮನೆಯವರು ಉದಾರ ಮನಸು ಮಾಡಿ ಸಂಜೆ ಏಳು ಘಂಟೆಯಿಂದ ರಾತ್ರಿ ಒಂಬತ್ತೂವರೆವರೆಗೆ ಓದಲು ತಮ್ಮ ಮನೆಯಲ್ಲಿ ಅನುಮತಿ ನೀಡಿದ್ದರು. ಪಕ್ಕದಮನೆಯವರ ಲೈಟ್ ಬೆಳಕಿನ್ನಲ್ಲಿ ಓದಿ ಭವಾನಿ ಇಷ್ಟು ಫಲಿತಾಂಶ ತೆಗೆದಿದ್ದಾರೆ. ಈ ಬಗ್ಗೆ ಮಾತನಾಡಿದ ನೆರೆಮನೆಯಾಕೆ ಜ್ಯೋತಿಯವರು ಈ ಭವಾನಿ ತುಂಬಾ ಸಾಧು ಸ್ವಭಾವದ ಹುಡುಗಿ, ಓದಬೇಕು, ಸಾಧಿಸಬೇಕು ಎನ್ನುವ ಛಲಗಾರ್ತಿ. ನಮ್ಮ ಮನೆಯಲ್ಲಿ ರಾತ್ರಿಯ ಸಮಯ ಓದಿಕೊಂಡು ಹೋಗುತ್ತಿದ್ದಳು. ಅವಳು ಪಟ್ಟ ಕಷ್ಟಕ್ಕೆ ಒಳ್ಳೆಯ ಫಲಿತಾಂಶ ಬಂದಿದೆ ಎನ್ನುತ್ತಾರೆ.
ಈಗ ಭವಾನಿಗೆ ಮುಂದೆ ಪದವಿ ತರಗತಿಗೆ ಪ್ರವೇಶ ಪಡೆಯಬೇಕು. ಅದಕ್ಕೆ ಆಕೆಗೆ ಕಾಲೇಜ್ ಶುಲ್ಕ, ಸಮವಸ್ತ್ರ, ಪುಸ್ತಕಗಳು ಜೊತೆಗೆ ಮಾನಸಿಕ ರೋಗಿ ತಾಯಿ ಮಗಳ ಜೀವನಕ್ಕೆ ಬೇಕಾಗುವ ಆಹಾರ ಇಷ್ಟನ್ನು ಹೊಂದಿಸಿಕೊಳ್ಳಬೇಕು ಇದಕ್ಕಾಗಿ ಆಕೆ ಕಾಫೀತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಳೆ. ಭವಾನಿಯ ನಿವಾಸಕ್ಕೆ ತೆರಳಿದಾಗ ವಿದ್ಯಾರ್ಥಿನಿಯೂ ಕೆಲಸಕ್ಕೆ ಹೋಗಲು ತಯಾರಾಗುತ್ತಿದ್ದಳು. ತಾನು ಪಡುತ್ತಿರುವ ಕಷ್ಟ ಹೇಳಿಕೊಂಡ ಭವಾನಿ, ಮುಂದೆ ನಾನು ನನ್ನ ಕಾಲೇಜಿನ ಉಪನ್ಯಾಸಕರುಗಳ ಹಾಗೇ ನಾನು ಉಪನ್ಯಾಸಕಿಯಾಗಬೇಕು ಎಂಬ ಆಸೆಯಿಟ್ಟುಕೊಡಿದ್ದೇನೆ. ನಮಗೆ ಯಾಕೆ ಕರೆಂಟಿಲ್ಲ, ಶೌಚಲಯವಿಲ್ಲ ಗೊತ್ತಿಲ್ಲ. ಪಂಚಾಯತಿಗೆ ಹೋಗಿ ಒಂದೆರೆಡು ಬಾರಿ ಕೇಳಿದ್ದೇನೆ ಅವರು ನಿಮ್ಮ ಆಧಾರ್ ಕಾರ್ಡ್ ಸರಿಯಿಲ್ಲ ಎಂದು ಹೇಳುತ್ತಾರೆ. ಒಮ್ಮೊಮ್ಮೆ ಅಮ್ಮಾ ರೇಶನ್ ಅಂಗಡಿಯ ಮುಂದೆ ಘಂಟೆಗಟ್ಟ್ಟಲೇ ಕೂತುಕೊಂಡಾಗ ಉಳಿದಿರುವ ಏನಾದರೂ ಚೂರುಪಾರು ಕೊಟ್ಟು ಕಳಿಸುತ್ತಾರೆ.
ಯಾರಾದರೂ ನನ್ನ ಓದಿಗೆ ಸಹಾಯ ಮಾಡಿದರೆ ಸಾಕು ಉತ್ತಮ ಅಂಕ ಗಳಿಸುತ್ತೇನೆ ಎನ್ನುವಾಗ ಭವಾನಿಯ ಕಣ್ಣಾಲಿಗಳು ತುಂಬಿ ಬರುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಎಷ್ಟೆಲ್ಲಾ ಯೋಜನೆಗಳಿವೆ. ಬಡವರಿಗಾಗಿ ಅವರ ಬದುಕಿಗಾಗಿ ಎಷ್ಟೆಲ್ಲಾ ಯೋಜನೆಗಳಿವೆ. ಅದಕ್ಕೆಲ್ಲಾ ಒಂದು ಆಧಾರ್ ಕಾರ್ಡ್ ಮುಂದಿಟ್ಟುಕೊಂಡು ಎಲ್ಲಾ ಸೇವೆಗಳನ್ನು ನಿರಾಕರಿಸುವುದು ಎಷ್ಟು ಸರಿ. ಮತ್ತು ಸೌಲಭ್ಯ ಕಲ್ಪಿಸಬೇಕೆಂದರೆ, ಬರೇ ಕಾರ್ಡ್ ಗಳನ್ನೇ ಬಳಸಿ ಮಾಡಬೇಕಾಗಿಲ್ಲ. ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿನ ಪಂಚಾಯತಿ ಇವರ ನೆರವಿಗೆ ಧಾವಿಸಬಹುದಿತ್ತು. ಈ ಕುರಿತು ಜ್ಯೋತಿಯ ಕಾಲೇಜ್ ಪ್ರಾಂಶುಪಾಲರಾದ ಜ್ಯೋತಿಯವರನ್ನು ಸಂಪರ್ಕಿಸಿದಾಗ ವಿದ್ಯಾರ್ಥಿನಿ ತುಂಬಾ ಒಳೆಯವಳು, ಶ್ರಮಜೀವಿ ನಮ್ಮ ಕಾಲೇಜಿಗೆ ಒಳ್ಳೆಯ ಹೆಸರು ತಂದಿದ್ದಾಳೇ. ಆಕೆಯ ಜೀವನದಲ್ಲಿ ಇಷ್ಟು ಕಷ್ಟ ಇದೆ ಎಂದು ತಿಳಿದಿರಲಿಲ್ಲ. ಆಕೆಗೆ ಶಿಕ್ಷಣದ ಬಗ್ಗೆ ವೈಯಕ್ತಿಕವಾಗಿ ಸಾಧ್ಯವಾದಷ್ಟು ನೆರವು ನೀಡುವುದಾಗಿ ತಿಳಿಸಿದರು.
ಇಷ್ಟೆಲ್ಲಾ ಕಷ್ಟಗಳ ನಡುವೆ ಭವಾನಿ ಉನ್ನತ ಹುದ್ದೆಗಳಿಸುವ ಛಲ ಬಿಟ್ಟಿಲ್ಲ ಛಲಗಾರ್ತಿಯಂತೆ ಬದುಕುವ ಯತ್ನ ಮಾಡುತ್ತಲೇ ಇದ್ದಾಳೇ. ಆದರೆ, ಭವಾನಿಯಂಥ ವಿದ್ಯಾರ್ಥಿನಿಗೆ ಖಂಡಿತವಾಗಿ ಒಂದು ಬದುಕು ಕಟ್ಟಿಕೊಳ್ಳಲು ನೆರವು ಬೇಕಾಗಿದೆ. ಆ ನೆರವು ಆಕೆಗೆ ಸಿಗುವವರೆಗೆ, ಅಂಥವರು ಮುಂದೆ ಬಂದು ಆಕೆಗೆ ನೆರವು ಮಾಡುವವರಿಗೆ ಈ ವರದಿ ತಲುಪಿಸಿ. ಭವಾನಿಗೆ ನೆರವಾಗಿ. ಒಂದು ಹೆಣ್ಣುಮಗುವಿನ ಶಿಕ್ಷಣಕ್ಕೆ ನೆರವಾಗಿ. ನಮ್ಮ ಸರ್ಕಾರದ ಕಡೆಯಿಂದ ಆಕೆಗೆ ಮೂಲಭೂತವಾಗಿ ಸಿಗಬೇಕಾದ ವಿದ್ಯುತ್, ನೀರು, ಒಂದು ಮನೆ, ಬಸ್ ಪಾಸ್ ದೊರಕಿಸಿಕೊಡುವಲ್ಲಿ ನೆರವಾಗುತ್ತಾರೇನೋ ಎನ್ನುವ ಆಶಾಭಾವದ ಜೊತೆಗೆ ಭವಾನಿಯಂಥ ಪ್ರತಿಭಾವಂತ ವಿದ್ಯಾರ್ಥಿನಿ ಸಮಾಜದ ಮುನ್ನೆಲೆಗೆ ಬರುವಲ್ಲಿ ಸಮಾಜದ ಎಲ್ಲರೂ ಸ್ಪಂದಿಸಬೇಕಾಗಿದೆ. ಇದು ನಮ್ಮ ನೈತಿಕ ಹೊಣೆಗಾರಿಕೆ.