ಜೀವ ವಿಮಾ ಯೋಜನೆಗಳ ವ್ಯಾಪ್ತಿಗೆ ಹೆಚ್ಚಿನ ಜನರನ್ನು ಒಳಪಡಿಸಲು ಮತ್ತು ವಿಮಾ ಯೋಜನೆಗಳು ಹೆಚ್ಚು ಗ್ರಾಹಕ ಸ್ನೇಹಿಯಾಗಿ ರೂಪಿಸುವ ಸಲುವಾಗಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹಾಲಿ ಇರುವ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಈಗ ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ಮತ್ತು ಯುಲಿಪ್ (ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್) ಯೋಜನೆಗಳ ವ್ಯಾಪ್ತಿಯ ಜೀವ ವಿಮೆಗಳ ಪ್ರಮುಖ ಐದು ನಿಯಮಗಳನ್ನು ಮಾರ್ಪಡಿಸಲಾಗಿದೆ.
ನಿಜವಾದ ಅರ್ಥದಲ್ಲಿ ಇವುಗಳು ನಿಯಮಗಳ ಬದಲಾವಣೆ ಎನ್ನುವ ಬದಲಿಗೆ ಹಾಲಿ ಇರುವ ಕೆಲ ಗ್ರಾಹಕ ಸ್ನೇಹಿ ಅಲ್ಲದ ನಿಯಮಗಳ ಸಡಿಲಿಕೆ ಎಂದೇ ಹೇಳಬಹುದು. ಪರಿಷ್ಕೃತ ನಿಯಮಗಳು 2020 ಫೆಬ್ರವರಿ 1ರಿಂದ ಜಾರಿಗೆ ಬರಲಿವೆ. ವಿಮಾ ಪಾಲಿಸಿದಾರರು ಕೆಳಕಂಡ ಬದಲಾವಣೆಗಳನ್ನು ಗಮನಿಸಿ, ಅವುಗಳ ಉಪಯೋಗ ಪಡೆಯಬಹುದಾಗಿದೆ. ಬದಲಾದ ವಿಮಾ ನಿಯಮಗಳನ್ನು ಪ್ರತಿದ್ವನಿ ಓದುಗರಿಗಾಗಿ ಇಲ್ಲಿ ಸರಳವಾಗಿ ವಿವರಿಸಲಾಗಿದೆ.
ಬರುವ ಫೆಬ್ರವರಿ 1 ರಿಂದ ವಿಮಾ ಪಾಲಿಸಿದಾರರು ತಾವು ಪಿಂಚಣಿ ಯೋಜನೆಗಳ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಿದ ಮೊತ್ತದಲ್ಲಿ ಹಿಂಪಡೆಯುವ ಮೊತ್ತದ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಗ್ರಾಹಕರು ತಾವು ಪಾವತಿಸಿದ ವಿಮಾ ಕಂತುಗಳು ಮೆಚ್ಯುರಿಟಿ ಆದ ಅವಧಿಯ ಒಟ್ಟು ಮೊತ್ತದಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ ಇದುವರೆಗೆ ಹಿಂಪಡೆಯಲು ಅವಕಾಶ ಇತ್ತು. ಈಗ ಹಿಂಪಡೆಯಬಹುದಾದ ಮೊತ್ತವನ್ನು ಮೆಚ್ಯುರಿಟಿ ಅವಧಿಯ ಒಟ್ಟು ಮೊತ್ತದ ಶೇ.60ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಪಾಲಿಸಿದಾರರ ಮೆಚ್ಯುರಿಟಿ ಮೊತ್ತವು 10 ಲಕ್ಷ ರುಪಾಯಿಗಳಾಗಿದ್ದರೆ, ಆ ಪೈಕಿ 6 ಲಕ್ಷ ರುಪಾಯಿಗಳನ್ನು ಹಿಂಪಡೆಯಬಹುದಾಗಿದೆ. ಪ್ರಸ್ತುತ ಕೇವಲ ಮೂರನೇ ಒಂದರಷ್ಟು ಅಂದರೆ 3.33 ಲಕ್ಷ ರುಪಾಯಿಗಳನ್ನು ಮಾತ್ರ ಹಿಂಪಡೆಯಲು ಅವಕಾಶ ಇದೆ.
ಪಾಲಿಸಿದಾರರು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಪಿಂಚಣಿ ಯೋಜನೆಗಳ ವಿಮಾ ಪಾಲಿಸಿಯ ಮೆಚ್ಯುರಿಟಿ ಮೊತ್ತದ ಮೂರನೇ ಒಂದರಷ್ಟು ಮೊತ್ತವನ್ನು ಹಿಂಪಡೆಯಲು ತೆರಿಗೆ ವಿನಾಯಿತಿ ಇದೆ. ಒಂದು ಪಕ್ಷ ಶೇ.60ರಷ್ಟು ಹಿಂಪಡೆದಾಗ, ಪಾಲಿಸಿದಾರರು ಮೂರನೇ ಒಂದರಷ್ಟು ಮೊತ್ತಕ್ಕೆ ಮಾತ್ರ (ಶೇ.33.3ರಷ್ಟು) ತೆರಿಗೆ ವಿನಾಯಿತಿ ಪಡೆಯಲಿದ್ದು, ಉಳಿದ ಶೇ.26.7ರಷ್ಟು ಮೊತ್ತಕ್ಕೆ ಹಾಲಿ ತೆರಿಗೆ ನಿಯಮಗಳ ಪ್ರಕಾರ ವಿಧಿಸುವ ತೆರಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ ವ್ಯಾಪ್ತಿಯಲ್ಲಿ ಬರುವ ವಿಮಾ ಪಾಲಿಸಿಗಳ ಪುನರುಜ್ಜೀನ ಅವಧಿಯನ್ನು ಮೂರು ವರ್ಷಗಳಿಗೂ ಮತ್ತು ಯೂನಿಟ್ ಗಳಿಗೆ ಲಿಂಕ್ ಮಾಡದ ವಿಮಾ ಪಾಲಿಸಿಗಳಿಗೆ ಪುನರುಜ್ಜೀವನ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಈ ಎರಡೂ ಯೋಜನೆಗಳ ವ್ಯಾಪ್ತಿಯಲ್ಲಿನ ಪಾಲಿಸಿಗಳ ಪುನರುಜ್ಜೀವನ ಅವಧಿಯು ಕೇವಲ ಎರಡು ವರ್ಷಗಳಾಗಿತ್ತು.
ಪುನರುಜ್ಜೀವನ ಎಂದರೆ- ನಿಶ್ಛಿತ ಅವಧಿಯಲ್ಲಿ ಮಾಸಿಕ, ತ್ರೈಮಾಸಿಕ, ಅರೆ ವಾರ್ಷಿಕ ಅಥವಾ ವಾರ್ಷಿಕ ಅವಧಿಯಲ್ಲಿ ವಿಮಾ ಕಂತು ಪಾವತಿಸದೇ ಇದ್ದ ವಿಮಾ ಪಾಲಿಸಿಯನ್ನು ಬಾಕಿ ಕಂತುಗಳನ್ನು ಪಾವತಿಸಿ, ಅದನ್ನು ಮತ್ತೆ ಚಾಲ್ತಿಗೆ ತರುವ ಪ್ರಕ್ರಿಯೆಯೇ ಪುನರುಜ್ಜೀವನಗೊಳಿಸುವುದಾಗಿದೆ. ಹಲವಾರು ವರ್ಷಗಳ ಕಾಲ ವಿಮಾ ಕಂತುಗಳನ್ನು ಪಾವತಿಸಿದ್ದವರು ವಿವಿಧ ರೀತಿಯ ಹಣಕಾಸು ತೊಂದರೆಗಳಿಂದಾಗಿ ಕೆಲವು ಕಂತುಗಳನ್ನು ಪಾವತಿಸದೇ ಹೋದಾಗ ಆ ವಿಮಾ ಪಾಲಿಸಿ ವ್ಯರ್ಥವಾಗಬಾರದು ಮತ್ತು ಪಾಲಿಸಿದಾರರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಪುನರುಜ್ಜೀವನ ಅವಧಿಯನ್ನು ಕ್ರಮವಾಗಿ ಮೂರು ಮತ್ತು ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಗ್ರಾಹಕರು ಯಾವಾಗಲಾದರೂ ತಮ್ಮ ಪಾಲಿಯನ್ನು ಪುನರುಜ್ಜೀವನಗೊಳಿಸಬಹುದು. ಅದಕ್ಕಾಗಿ ಆಯಾ ವಿಮಾ ಕಂಪನಿಗಳು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.
ಪಾಲಿಸಿದಾರರು ಅಕಾಲಿಕವಾಗಿ ಭಾಗಷಃ ಹಿಂಪಡೆಯುವಿಕೆಯ ನಿಯಮಗಳನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸಡಿಲಿಸಿದೆ. ಐದು ವರ್ಷಗಳ ಲಾಕ್-ಇನ್ ಅವಧಿ ಮುಗಿದ ನಂತರ ಗ್ರಾಹಕರಿಗೆ ಶೇ.25ರಷ್ಟು ಭಾಗಶಃ ಹಿಂಪಡೆಯಲು ಅವಕಾಶವಿರುತ್ತದೆ. ಮಕ್ಕಳ ಉನ್ನತ ಶಿಕ್ಷಣ, ಮನೆ ಖರೀದಿ ಅಥವಾ ನಿರ್ಮಾಣ, ಮಕ್ಕಳ ಮದುವೆ ಅಥವಾ ಗಂಭೀರ ಕಾಯಿಲೆ ಸಂದರ್ಭದಲ್ಲಿ ಭಾಗಷಃ ಹಿಂಪಡೆಯಬಹುದಾಗಿದೆ. ಇದುವರೆಗೆ ಅಕಾಲಿಕವಾಗಿ ಭಾಗಷಃ ವಾಪಾಸಾತಿ ಪಡೆಯಲು ಅವಕಾಶ ಇರಲಿಲ್ಲ. ಇದರಿಂದ ಪಾಲಿಸಿದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಯುನಿಟ್ ಲಿಂಕ್ಡ್ ಪ್ಲಾನ್ (ಯುಲಿಪ್) ಯೋಜನೆಗಳಲ್ಲಿ 45 ವರ್ಷ ವಯೋಮಿತಿಯೊಳಗಿನ ಪಾಲಿಸಿದಾರರ ಲೈಫ್ ಕವರ್ ಪ್ರಮಾಣವನ್ನು ಹತ್ತು ಪಟ್ಟು ಇದ್ದದ್ದನ್ನು 7 ಪಟ್ಟಿಗೆ ತಗ್ಗಿಸಲಾಗಿದೆ. ಅಂದರೆ, ಪಾಲಿಸಿದಾರ ಮೃತ ಪಟ್ಟ ಸಂದರ್ಭದಲ್ಲಿ ಆತನ ವಿಮಾ ಹೂಡಿಕೆಯ ಒಟ್ಟು ಮೊತ್ತದ ಏಳುಪಟ್ಟು ನೀಡಲಾಗುತ್ತದೆ. ಪ್ರಸ್ತುತ ಇದು ಹತ್ತು ಪಟ್ಟು ಇದೆ. ಕೇವಲ 45 ವರ್ಷ ವಯೋಮಿತಿಯೊಗಳಗಿನ ಪಾಲಿಸಿದಾರರಿಗೆ ಮಾತ್ರ ಈ ನಿಯಮ ಮಾರ್ಪಡಿಸಲಾಗಿದೆ.
ಪಿಂಚಣಿ ಯುನಿಟ್ ಲಿಂಕ್ಡ್ ಪ್ಲಾನ್ (ಯುಲಿಪ್) ಯೋಜನೆಗಳಲ್ಲಿ ಇದುವರೆಗೆ ಖಾತರಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಖಾತರಿ ಯೋಜನೆಯನ್ನು ಆಯ್ಕೆ ಮಾಡುವ ಅಥವಾ ಬಿಡುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ಗ್ರಾಹಕರು ಆ ಸಂದರ್ಭಕ್ಕೆ ಅನುಕೂಲವಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಈ ಹೊಸ ತಿದ್ದುಪಡಿಯೊಂದಿಗೆ, ರಾಷ್ಟ್ರೀಯ ಪಿಂಚಣಿ ಯೋಜನೆಯ ನಿಯಮಗಳಿಗೆ ಪೂರಕವಾಗಿ ಪಿಂಚಣಿ ಯೋಜನೆಗಳ ನಿಯಮವನ್ನು ಮಾರ್ಪಡಿಸಿದೆ. ಈ ಬದಲಾವಣೆಯಿಂದ ಗ್ರಾಹಕರಿಗಷ್ಟೇ ಅಲ್ಲಾ ವಿಮಾ ಕಂಪನಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.