ಆಡಳಿತದಲ್ಲಿರುವ ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲದೇ ಇದ್ದರೆ ರಾಜ್ಯವೊಂದು ಯಾವ ಪರಿಸ್ಥಿತಿ ಎದುರಿಸಬಹುದು ಎಂಬುದಕ್ಕೆ ಇದೀಗ ಕರ್ನಾಟಕ ಉದಾಹರಣೆಯಾಗುತ್ತಿದೆ. ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಧ್ಯೆ ಉದ್ದೇಶಪೂರ್ವಕ ಸಂವಹನ ಕೊರತೆಯಿಂದಾಗಿ ಸರ್ಕಾರ ಉತ್ತರ ಧ್ರುವವಾದರೆ, ಪಕ್ಷ ದಕ್ಷಿಣ ಧ್ರುವ ಎನ್ನುವಂತಾಗಿದೆ.
ಇದರ ಪರಿಣಾಮವೇ ಮುಖ್ಯಮಂತ್ರಿಯವರ ತಂತಿಯ ಮೇಲಿನ ನಡಿಗೆ ಹೇಳಿಕೆ. ಸಮುದಾಯಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ನನ್ನದು ತಂತಿ ಮೇಲಿನ ನಡಿಗೆ ಎಂದು ಯಡಿಯೂರಪ್ಪ ಅವರು ಹೇಳಿದ್ದರೂ ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯದ ಕೊರತೆಯಿಂದಾಗಿ ಆ ಮಾತುಗಳು ಅಕ್ಷರಶಃ ಸತ್ಯವಾಗುತ್ತಿದೆ. ಆದರೆ, ಈ ತಂತಿ ಮೇಲಿನ ನಡಿಗೆಯಲ್ಲಿ ಯಡಿಯೂರಪ್ಪ ಅವರು ಎಡವಿ ಬಿದ್ದರೆ ಅವರು ಮಾತ್ರವಲ್ಲ, ರಾಜ್ಯದಲ್ಲಿ ಬಿಜೆಪಿಯೂ ಬೀಳುತ್ತದೆ. ಹಾಗೆ ಬಿದ್ದರೆ ಮತ್ತೆ ಏಳಲು ಕಷ್ಟ ಎನ್ನುವ ಪರಿಸ್ಥಿತಿಯೂ ಉದ್ಭವವಾಗುತ್ತದೆ.
ಇದೀಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಪಕ್ಷದಿಂದ ಅವರನ್ನು ದೂರ ಸರಿಸುವ ಪ್ರಯತ್ನಗಳಾಗುತ್ತಿವೆ. ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನಡವಳಿಕೆಯಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಈ ಬಗ್ಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಅವರು ಬಹಿರಂಗವಾಗಿಯೇ ಈ ಬಗ್ಗೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದು, ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರವನ್ನೂ ಬರೆದಿದ್ದಾರೆ.
ಯಡಿಯೂರಪ್ಪ ಅವರನ್ನು ಕಡೆಗಣಿಸಿ ಪಕ್ಷ ಸಂಘಟನೆಗೆ ಮುಂದಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು, ಅಧಿಕಾರ ಸಿಕ್ಕ ನಂತರ ಯಡಿಯೂರಪ್ಪ ಬೇಡ ಎಂಬಂತೆ ಪಕ್ಷದ ಕೆಲ ಬುದ್ಧಿವಂತ ಮುಖಂಡರು ವರ್ತಿಸುತ್ತಿದ್ದಾರೆ. ಇಂತಹ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವೂ ಸಹ ಹೊರಬರಬೇಕು. ಅರ್ಹತೆ ಮತ್ತು ಯೋಗ್ಯತೆ ಇಲ್ಲದವರ ಮಾತು ಕೇಳಿಕೊಂಡು ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿಪಕ್ಷದ ಅಸ್ತಿತ್ವಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಎಲ್ಲರೂ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪಕ್ಷದಲ್ಲೇನಿದ್ದರೂ ಸಂತೋಷ್ ಹೇಳಿದ್ದೇ ವೇದವಾಕ್ಯ
2008ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಅವರಿಗೆ ಪಕ್ಷದಲ್ಲಿ ಸೆಡ್ಡು ಹೊಡೆದಿದ್ದ ಬಿ. ಎಲ್. ಸಂತೋಷ್ ಅವರು ಬಿಜೆಪಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ನೋಡುತ್ತಿದ್ದಾರೆ. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಅವರು ಕಾರ್ಯನಿರ್ವಹಿಸುತ್ತಿದ್ದರೂ ಅವರ ಹೆಚ್ಚಿನ ಗಮನವೆಲ್ಲಾ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ದೂರವಿಟ್ಟು ಬಿಜೆಪಿ ಕಟ್ಟುವತ್ತಲೇ ನೆಟ್ಟಿದೆ. ಇದರಿಂದಾಗಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಅವರಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಕೂರಿಸಿದ್ದು. ಸಂಘಟನೆ ವಿಚಾರದಲ್ಲಿ ಅಷ್ಟೊಂದು ಅನುಭವ ಇಲ್ಲದ, ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿರದ ನಳಿನ್ ಕುಮಾರ್ ಕಟೀಲ್ ಆರಂಭದಿಂದಲೇ ಸಂತೋಷ್ ಅವರು ಮೆಚ್ಚುವಂತೆ ಕೆಲಸ ಆರಂಭಿಸಿದ್ದಾರೆ. ಸಂತೋಷ್ ಹೇಳಿದ್ದೇ ವೇದವಾಕ್ಯ ಎಂದು ನಳಿನ್ ಕುಮಾರ್ ಕೆಲಸ ಮಾಡುತ್ತಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮಾಡಿದ ಮೊದಲ ಕೆಲಸ ಭಾನುಪ್ರಕಾಶ್ ಮತ್ತು ನಿರ್ಮಲ್ ಕುಮಾರ್ ಸುರಾನಾ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದು. ಇವರಿಬ್ಬರೂ ಯಡಿಯೂರಪ್ಪ ಅವರ ವಿರುದ್ಧ ಕತ್ತಿ ಮಸೆದವರು. ಕೆಜೆಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾದಾಗ ಅವರ ವಿರುದ್ಧ ಸ್ಥಾಪನೆಯಾದ ರಾಯಣ್ಣ ಬ್ರಿಗೇಡ್ ನಲ್ಲಿದ್ದವರು. ಈ ಬ್ರಿಗೇಡ್ ಹಿಂದೆ ಇದ್ದವರು ಬಿ. ಎಲ್. ಸಂತೋಷ್. ರಾಯಣ್ಣ ಬ್ರಿಗೇಡ್ ವೇದಿಕೆಯಲ್ಲಿ ನಿಂತು ಯಡಿಯೂರಪ್ಪ ಅವರನ್ನು ಮನಬಂದಂತೆ ನಿಂದಿಸಿದವರು.
ಏನೋ ಪರಿಸ್ಥಿತಿಯ ಕೈಗೆ ಸಿಲುಕಿ ಅವರು ಅಂದು ಆ ರೀತಿ ಮಾಡಿದ್ದರು ಎಂದು ಭಾವಿಸಬಹುದು. ಆದರೆ, ಅವರಲ್ಲಿ ಸಂಘಟನಾತ್ಮಕ ಶಕ್ತಿ ಇದೇಯೇ ಎಂಬ ಪ್ರಶ್ನೆ ಬಂದಾಗ ಸಿಗುವುದು ಇಲ್ಲ ಎಂಬ ಉತ್ತರವಷ್ಟೆ. ಸಂಘಕ್ಕೆ (ಆರ್ ಎಸ್ ಎಸ್) ನಿಷ್ಠರಾದವರು ಎಂಬ ಒಂದು ಅಂಶ ಬಿಟ್ಟರೆ ಅವರಲ್ಲಿ ಹೆಚ್ಚಿನ ಕೌಶಲ್ಯವೇನೂ ಇಲ್ಲ. ಕೇವಲ ಯಡಿಯೂರಪ್ಪ ಅವರ ವಿರೋಧಿಗಳು ಎಂಬ ಕಾರಣಕ್ಕೆ ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಿದಂತೆ ಕಾಣಿಸುತ್ತಿದೆ. ಅಂದರೆ, ಇಲ್ಲಿ ಸಂತೋಷ್ ಅವರಿಗೆ ರಾಜ್ಯದಲ್ಲಿ ಪಕ್ಷ ಬಲಪಡಿಸಬೇಕು, ಬೆಳೆಸಬೇಕು ಎಂಬುದಕ್ಕಿಂತಲೂ ಯಡಿಯೂರಪ್ಪ ಅವರನ್ನು ದೂರವಿಟ್ಟು ಬಿಜೆಪಿ ಸಂಘಟನೆ ಮಾಡಬೇಕು ಎಂಬುದಷ್ಟೇ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಆಯ್ಕೆ ವಿಚಾರದಲ್ಲೂ ಯಡಿಯೂರಪ್ಪ ಅವರನ್ನು ದೂರವಿಡಲಾಗಿತ್ತು. ಮೇಯರ್ ಆಯ್ಕೆಗಾಗಿ ಯಡಿಯೂರಪ್ಪ ಸಮಿತಿ ರಚಿಸಿದ್ದರೆ ಅದನ್ನು ರದ್ದುಗೊಳಿಸಿದ್ದ ನಳಿನ್ ಕುಮಾರ್, ತಾವೇ ಮುಂದೆ ನಿಂತು ಅಭ್ಯರ್ಥಿ ಆಯ್ಕೆ ಮಾಡಿದ್ದರು. ಜತೆಗೆ ಯಡಿಯೂರಪ್ಪ ಅವರಿಗೆ ಸಮೀಪವರ್ತಿಗಳು ಎಂಬ ಕಾರಣದಿಂದ ಸಚಿವ ಆರ್. ಅಶೋಕ್ ಮತ್ತು ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರನ್ನೂ ಕತ್ತಲಲ್ಲಿಡಲಾಗಿತ್ತು. ಜೈನ್ ಸಮುದಾಯದವರನ್ನು ಆಯ್ಕೆ ಮಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಮೆಚ್ಚಿಸುವ ಪ್ರಯತ್ನ ಮಾಡಿದರೇ ಹೊರತು ಅದರಿಂದ ಪಕ್ಷಕ್ಕೇನೂ ಲಾಭವಾಗಲಿಲ್ಲ. ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಒಡಕಿನಿಂದ ಗೌತಮ್ ಕುಮಾರ್ ಗೆದ್ದರಷ್ಟೇ ಹೊರತು ಅದರಲ್ಲಿ ಬಿಜೆಪಿಯ ಪಾತ್ರ ಕಾಣಿಸುತ್ತಿಲ್ಲ. ಈ ಎರಡೂ ಪ್ರಮುಖ ನಿರ್ಧಾರಗಳು ಭವಿಷ್ಯದಲ್ಲಿ ಬಿಜೆಪಿಗೆ ಸಮಸ್ಯೆಯಾಗಬಹುದೇ ಹೊರತು ಸಂಘಟನೆಗೆ ನೆರವಾಗುವುದಿಲ್ಲ.
ಯಡಿಯೂರಪ್ಪ ಇಲ್ಲದ ಬಿಜೆಪಿ ಪರಿಸ್ಥಿತಿ ಹೇಗಾಗಿತ್ತು
ರಾಜ್ಯದಲ್ಲಿ ಯಡಿಯೂರಪ್ಪ ಅವರು ಇಲ್ಲದ ಬಿಜೆಪಿ ಪರಿಸ್ಥಿತಿ ಏನಾಗಿತ್ತು ಹಾಗೆಯೇ ಬಿಜೆಪಿ ಇಲ್ಲದೆ ಯಡಿಯೂರಪ್ಪ ಅವರ ಪರಿಸ್ಥಿತಿ ಏನಾಗಿತ್ತು ಎಂಬುದಕ್ಕೆ 2013ರ ವಿಧಾನಸಭೆ ಚುನಾವಣೆ ಸ್ಪಷ್ಟ ಉದಾಹರಣೆ. 1990ರ ದಶಕಗಳಿಂದ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಬಂದು 2008ರಲ್ಲಿ ಶೇ. 33.86ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 2013ರಲ್ಲಿ ಯಡಿಯೂರಪ್ಪ ಅವರಿಲ್ಲದೆ ಶೇ. 19.90 ಮತಗಳನ್ನು ಪಡೆಯಲು ಮಾತ್ರ ಶಕ್ತವಾಗಿತ್ತು. ಅದೇ ರೀತಿ ಬಿಜೆಪಿ ಮತಗಳಿಕೆ ಪ್ರಮಾಣ ಹೆಚ್ಚಿಸಿದ್ದ ಯಡಿಯೂರಪ್ಪ ಅವರು ಪಕ್ಷದ ಬೆಂಬಲವಿಲ್ಲದೆ ಕೇವಲ 9.8ರಷ್ಟು ಮತಗಳನ್ನು ಮಾತ್ರ ಗಳಿಸಿದ್ದರು. ಮತ್ತೆ ಬಿಜೆಪಿ ಮತ್ತು ಯಡಿಯೂರಪ್ಪ ಒಂದಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಶೇ. 36.35ರಷ್ಟು ಮತಗಳನ್ನು ಗಳಿಸಿತ್ತು. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಯಡಿಯೂರಪ್ಪ ಪರಸ್ಪರ ಅನಿವಾರ್ಯ ಎನ್ನುವಂತಾಗಿದೆ.
ಆದರೆ, ಯಡಿಯೂರಪ್ಪ ಅವರನ್ನು ದೂರವಿಡುವ ನಳಿನ್ ಕುಮಾರ್ ಕಟೀಲ್ ಅವರ ಈ ನಡೆಗಳು ಅವರ ಬೆಂಬಲಿಗರನ್ನು ಕೆರಳಿಸಿವೆ. ಅಮಿತ್ ಶಾ ಭಯದಿಂದ ಬಹಿರಂಗವಾಗಿ ಅವರು ಏನನ್ನೂ ಹೇಳದೇ ಇದ್ದರೂ ಸಂಘಟನೆ ವಿಚಾರದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡುವುದು ಖಂಡಿತ. ಇದರಿಂದ ಸಂಘಟನೆ ಮೇಲೆ ಪರಿಣಾಮ ಬೀರಿದರೆ ಆಗ ಸಮಸ್ಯೆಯಾಗುವುದು ಬಿಜೆಪಿಗೆ. ಯಡಿಯೂರಪ್ಪ ಅವರಂತೂ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿಲ್ಲ. ಆದರೆ, ಅವರನ್ನು ಬಿಟ್ಟು ಪಕ್ಷ ಕಟ್ಟುತ್ತೇವೆ ಎಂದರೆ ಬಿಜೆಪಿಯೂ ಮತ್ತೆ ರಾಜ್ಯದಲ್ಲಿ ಅಧಿಕಾರ ಹೊಂದುವುದು ಕನಸಿನ ಮಾತು. ಹೀಗಾಗಿ ಯಡಿಯೂರಪ್ಪ ಅವರ ನಂತರ ಬಿಜೆಪಿಯಲ್ಲಿ ಯಾರು ಎಂಬುದನ್ನು ಅವರೊಂದಿಗೆ ಚರ್ಚಿಸಿಯೇ ನಿರ್ಧರಿಸಬೇಕೇ ಹೊರತು ಅವರನ್ನು ದೂರವಿಟ್ಟರೆ ಅದು ಅಸಾಧ್ಯವಾಗಬಹುದು.