ಯಾವುದೇ ಮಸೂದೆಯನ್ನು ಮಂಡನೆ ಮಾಡುವ ಮುನ್ನ ಕಲಾಪ ಸಲಹಾ ಸಮಿತಿಯ ಗಮನಕ್ಕೆ ತರಬೇಕು, ಕಾರ್ಯಸೂಚಿ ಪಟ್ಟಿಯಲ್ಲಿ ಸೇರಿಸಬೇಕು, ಸದನದ ಪ್ರತಿ ಸದಸ್ಯರಿಗೂ ಮಸೂದೆಯ ಕರಡು ಪ್ರತಿಯನ್ನು ಮುಂಚಿತವಾಗಿ ನೀಡಬೇಕು. ಆ ಕುರಿತ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು. ಕರಡು ಮಸೂದೆಯ ಕುರಿತ ಸಾರ್ವಜನಿಕ ಚರ್ಚಗೆ ಕಾಲಾವಕಾಶ ನೀಡಬೇಕು. ಸಾರ್ವಜನಿಕ ಅಭಿಪ್ರಾಯ ಮತ್ತು ಸದನದ ಒಳಗಿನ ಚರ್ಚೆಯನ್ನು ಪರಿಗಣಿಸಿ ಮಸೂದೆಗೆ ಅನುಮೋದನೆ ಪಡೆಯಬೇಕು ಎಂಬ ಶಿಷ್ಟಾಚಾರವನ್ನೇ ಗಾಳಿಗೆ ತೂರಿ ‘ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ’ ವಿಧಾನಸಭೆಯ ಅನುಮೋದನೆ ಪಡೆದಿದೆ.
ಮಸೂದೆ ಮಂಡನೆಯ ವಿಷಯವನ್ನೇ ರಹಸ್ಯವಾಗಿ ಏಕಾಏಕಿ ಸದನದಲ್ಲಿ ಮಂಡಿಸಿದ ಕುತಂತ್ರದ ಬಗ್ಗೆ ಸಹಜವಾಗೇ ಪ್ರತಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಮಸೂದೆಯ ಮಂಡನೆಯ ಬಗ್ಗೆ ಮತ್ತು ಅದರ ಅಂಶಗಳ ಬಗ್ಗೆ ತೀವ್ರ ಆಕ್ಷೇಪವೆತ್ತಿವೆ. ಅದಕ್ಕೆ ಪ್ರತಿಯಾಗಿ ಆಡಳಿತ ಬಿಜೆಪಿಯ ಶಾಸಕರು ‘ಜೈಶ್ರೀರಾಮ್ ‘ ಮತ್ತು ‘ಗೋ ಮಾತೆಗೆ ಜೈ’ ಘೋಷಣೆಗಳನ್ನು ಕೂಗುವ ಮೂಲಕ ಮಸೂದೆಯನ್ನು ಅಂಗೀಕರಿಸಿದ ಕುರಿತು ಸಂಭ್ರಮಪಟ್ಟಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖವಾಗಿ 2010ರಲ್ಲಿ ಬಿಜೆಪಿ ಸರ್ಕಾರವೇ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತಂದಿದ್ದು, ಜಾನುವಾರು ಎಂಬುದರ ವ್ಯಾಪ್ತಿಗೆ ಹೊಸದಾಗಿ ಎಮ್ಮೆಯನ್ನೂ ಸೇರಿಸಲಾಗಿದೆ. ಶಿಕ್ಷೆ ಪ್ರಮಾಣ, ಸಕ್ಷಮ ಪ್ರಾಧಿಕಾರಗಳನ್ನು ಹೆಸರಿಸಲಾಗಿದೆ. ಜಾನುವಾರು ಸಾಗಣೆಯನ್ನು ನಿಷೇಧಿಸಿದ್ದು, ಸಾಕಾಣಿಕೆ ಮತ್ತು ಕೃಷಿ ಕೆಲಸಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಾನುವಾರು ಸಾಗಣೆಗೂ ಸಕ್ಷಯ ಪ್ರಾಧಿಕಾರದ(ಉಪ ವಿಭಾಗಾಧಿಕಾರಿ) ಪರವಾನಗಿ ಪಡೆಯುವುದು ಕಡ್ಡಾಯ. ಗೋಹತ್ಯೆಗೆ ಕನಿಷ್ಟ ಮೂರು ವರ್ಷದಿಂದ ಗರಿಷ್ಠ ಏಳು ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರದಿಂದ 5 ಲಕ್ಷ ರೂ.ಗಳವರೆಗೆ ದಂಡ ವಿಧಿಸುವ ಅವಕಾಶ. ಗೋಹತ್ಯೆ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ವಿಶೇಷ ನ್ಯಾಯಲಯ ಸ್ಥಾಪನೆ, ಜಾನುವಾರು ಸಾಗಣೆ ಕುರಿತು ಅನುಮಾನ ಬಂದರೆ, ದೂರು ಬಂದರೆ ಶೋಧಿಸುವ, ಜಪ್ತಿ ಮಾಡುವ ಅಧಿಕಾರವನ್ನು ಕೂಡ ಪೊಲೀಸರಿಗೆ ನೀಡಲಾಗಿದೆ.
ಈ ಅಂಶಗಳ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ದುಬಾರಿ ದಂಡ ಮತ್ತು ಶಿಕ್ಷೆಯ ಬಗ್ಗೆ ಪ್ರಸ್ತಾಪವಾಗಿದೆ. ಕೃಷಿಕನೊಬ್ಬ ಕೃಷಿ ಮತ್ತು ಸಾಕಾಣೆ ಉದ್ದೇಶಕ್ಕೆ ಗೋವು ಸಾಗಣೆಗೂ ಪರವಾನಗಿ ಪಡೆಯಬೇಕು ಎಂಬುದೂ ಸೇರಿದಂತೆ ಒಬ್ಬ ಸಾಮಾನ್ಯ ಜಾನುವಾರು ಸಾಕಣೆದಾರರು ಈ ಮಸೂದೆಯಿಂದ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ವಯಸ್ಸಾದ ಮತ್ತು ತನಗೆ ಸಾಕಲು ಸಾಧ್ಯವಾಗದ ಹಸುಗಳನ್ನು ರೈತ ಏನು ಮಾಡಬೇಕು? ಎಂಬ ಪ್ರಶ್ನೆಗಳೂ ಎದ್ದಿವೆ.
ಅದೆಲ್ಲಕ್ಕಿಂತ ಮುಖ್ಯವಾಗಿ ಗೋ ರಕ್ಷಣೆಗೆ ಶ್ರಮಿಸುವರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಒಂದು ಅಂಶ ಈ ತಿದ್ದುಪಡಿ ಮಸೂದೆಯಲ್ಲಿ ಅಡಕವಾಗಿದೆ. ಆ ಬಗ್ಗೆ ಮಸೂದೆಯ ಟೀಕಾಕಾರರಲ್ಲಿ ಹೆಚ್ಚಿನವರು ಗಮನಹರಿಸಿದಂತಿಲ್ಲ. ಇದು ನಿಜಕ್ಕೂ ಸಮಾಜದ ನೆಮ್ಮದಿ ಮತ್ತು ಸ್ವಾಸ್ಥ್ಯ ಬಯಸುವವರೆಲ್ಲರೂ ಆತಂಕಪಡಬೇಕಾದ ಅಂಶ. ಯಾಕೆಂದರೆ; ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಕೊಲೆ, ಹಲ್ಲೆ, ಸುಲಿಗೆ, ದಬ್ಬಾಳಿಕೆಗಳನ್ನು ನಿತ್ಯ ನೋಡುತ್ತಿದ್ದೇವೆ. ಕರ್ನಾಟಕದಲ್ಲೇ ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಗೋ ಸಾಗಣೆ ಎಂದು ರೈತರ ಮೇಲೆ, ಅಮಾಯಕರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ ಘಟನೆಗಳೂ ನಡೆದಿವೆ.
ಉಡುಪಿಯ ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ, ಜೋಕಟ್ಟೆಯ ಹಸನಬ್ಬ ಹತ್ಯೆ ಘಟನೆ ಇರಬಹುದು, ಚಿಕ್ಕಮಗಳೂರಿನಲ್ಲಿ ಗೋ ಸಾಗಣೆದಾರರ ಮೇಲೆ ಪೊಲೀಸರೇ ಗುಂಡು ಹಾರಿಸಿ ಒಬ್ಬನ ಹತ್ಯೆ ಮಾಡಿದ ಪ್ರಕರಣವಿರಬಹುದು,.. ಇಂತಹ ನೂರಾರು ಪ್ರಕರಣಗಳಲ್ಲಿ ಗೋರಕ್ಷಣೆಯ ನೆಪದಲ್ಲಿ ಕಾನೂನು ಕೈಗೆ ತೆಗೆದುಕೊಂಡು ಸ್ಥಳದಲ್ಲಿಯೇ ಜೀವತೆಗೆಯುವಂತಹ ಭೀಕರ ಶಿಕ್ಷೆ ವಿಧಿಸಿದ್ದನ್ನು ಕಂಡಿದ್ದೇವೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿಯಂತೂ ಗೋರಕ್ಷಣೆ ಎಂಬುದು ಕೆಲವು ಸಂಘಟನೆಗಳ ಪಾಲಿಗೆ ದಂಧೆಯಾಗಿ ಮಾರ್ಪಟ್ಟಿದೆ. ಈ ಮೊದಲು ಶ್ರೀಗಂಧ, ಬೀಟೆ ಮುಂತಾದ ಕಾಡಿನ ಮರಗಳ ಕಳ್ಳಸಾಗಣೆ ಮಾಡಿ, ಕಾಡುಪ್ರಾಣಿ ಬೇಟೆ, ಅವುಗಳ ಚರ್ಮ, ಉಗುರು ಮಾರಾಟ, ಮರಳು ದಂಧೆ ಜಾಲಗಳಲ್ಲಿ ದುಡ್ಡು ಮಾಡುತ್ತಿದ್ದವರು ಇತ್ತೀಚಿನ ವರ್ಷಗಳಲ್ಲಿ ಗೋ ರಕ್ಷಕರ ವೇಷ ತೊಟ್ಟಿದ್ದಾರೆ ಎಂಬುದು ಯಾರೂ ನಿರಾಕರಿಸಲಾಗದ ವಾಸ್ತವ.
Also Read: ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ
ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮತ್ತು ಅದಕ್ಕೆ ಕಾರಣವಾದ ಜೂಜುಕೋರ ತೇಜಸ್ ಅಪಹರಣ ಪ್ರಕರಣಗಳ ಕಿಂಗ್ ಪಿನ್ ಪ್ರವೀಣ್ ಖಾಂಡ್ಯನ ಪ್ರಕರಣ ಮಲೆನಾಡು- ಕರಾವಳಿಯಲ್ಲಿ ಗೋರಕ್ಷಣೆ ಎಂಬುದು ಹೇಗೆ ಲಕ್ಷಾಂತರ ರೂ. ವಹಿವಾಟಿನ ದಂಧೆಯಾಗಿದೆ ಎಂಬುದಕ್ಕೆ ನಿದರ್ಶನ. ಗೋರಕ್ಷಣೆಯ ಹೆಸರಿನಲ್ಲಿ ಗೋ ಸಾಗಣೆದಾರರು, ಖಸಾಯಿಖಾನೆಯವರು ಮತ್ತು ಮಾರಾಟ ಮಾಡುವ ರೈತರಿಂದಲೂ ಹಫ್ತಾ ವಸೂಲಿಯಲ್ಲಿ ನಿರತವಾಗಿದ್ದ ಈ ಗ್ಯಾಂಗಿನ ಕೃತ್ಯಗಳು ಹಂಡಿಭಾಗ್ ಆತ್ಮಹತ್ಯೆ ತನಿಖೆ ನಡೆಸಿದ ಸಿಐಡಿಯನ್ನೇ ಬೆಚ್ಚಿಬೀಳಿಸಿದ್ದವು. ಕಿಂಗ್ ಪಿನ್ ಪ್ರವೀಣ್ ಖಾಂಡ್ಯನ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 35ಕ್ಕೂ ಹೆಚ್ಚು ಪ್ರಕರಣಗಳ ಪೈಕಿ ಬಹುತೇಕ ಗೋರಕ್ಷಣೆಯ ನೆಪದಲ್ಲಿ ಹಫ್ತಾ ವಸೂಲಿ, ಬೆದರಿಕೆ, ಬ್ಲಾಕ್ ಮೇಲ್ ಗೆ ಸಂಬಂಧಿಸಿದ್ದವು ಎಂಬುದು ಗಮನಾರ್ಹ.
ಇದೀಗ ರಾಜ್ಯ ಸರ್ಕಾರ ಗೋ ರಕ್ಷಣೆಗೆ ಶ್ರಮಿಸುತ್ತಿರುವ ಇಂತಹವರಿಗೆ ಕಾನೂನು ರಕ್ಷಣೆಯ ಕವಚ ತೊಡಿಸಿದೆ. ಆ ಮೂಲಕ ಗೋ ರಕ್ಷಣೆಯ ಹೆಸರಿನಲ್ಲಿ ಆ ಗ್ಯಾಂಗುಗಳು ನಡೆಸುವ ಎಲ್ಲಾ ಕೃತ್ಯಗಳಿಗೆ ಪೊಲೀಸರೇ ರಕ್ಷಣೆ ನೀಡಬೇಕಾದ ಪರಿಸ್ಥಿತಿಯನ್ನು ಗೋ ಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಕಲ್ಪಿಸಿಕೊಟ್ಟಿದೆ.
ಹಾಗೆ ನೋಡಿದರೆ; ಸರ್ಕಾರದ ಈ ಹೊಸ ಮಸೂದೆಯ ಉದ್ದೇಶ ನಿಜವಾಗಿಯೂ ದನಗಳೂ ಸೇರಿದಂತೆ ಜಾನುವಾರು ಸಂರಕ್ಷಣೆಗಿಂತ ಹೆಚ್ಚಾಗಿ, ಗೋ ಸಾಕಣೆಯ ಬದಲಾಗಿ ಗೋವಿನ ಹೆಸರಿನಲ್ಲಿ ಜೀವನ ನಡೆಸುತ್ತಿರುವ ಇಂತಹ ಗೂಂಡಾ ಪಡೆಗಳು, ಗೋ ಶಾಲೆಯ ಹೆಸರಿನಲ್ಲಿ ಸಾರ್ವಜನಿಕ ತೆರಿಗೆ ಹಣ ಲೂಟಿ ಹೊಡೆಯುತ್ತಿರುವ ವಂಚಕರು ಮತ್ತು ಅಂತಿಮವಾಗಿ ಕೋಮು ಆಧಾರದ ಮೇಲೆ ಮತಗಳ ಧ್ರುವೀಕರಣದ ತನ್ನ ವೋಟ್ ಬ್ಯಾಂಕ್ ರಾಜಕಾರಣ, ಅಥವಾ ಗೋ ರಾಜಕಾರಣದ ರಕ್ಷಣೆಯ ಹೆಚ್ಚು ಮುಖ್ಯವಾಗಿದೆ.
Also Read: ಗೋಹತ್ಯೆ ನಿಷೇಧ ಮಸೂದೆ: ಸದನದಲ್ಲಿ ಕಾಂಗ್ರೆಸ್ನಿಂದ ಬಾವಿಗಿಳಿದು ಪ್ರತಿಭಟನೆ
ಏಕೆಂದರೆ; ನಿಜವಾಗಿಯೂ ದನಕರುಗಳ ರಕ್ಷಣೆಯಾಗಬೇಕು ಎಂದರೆ; ದನಕರುಗಳಿಗೆ ಮೇವು ಮತ್ತು ಆರೈಕೆ ಬೇಕು. ಮೇವು ಸಿಗಬೇಕೆಂದರೆ; ಮೇಯಿಸುವ ಜಾಗ, ಗೋಮಾಳ ಬೇಕು. ಆದರೆ, ವಿಪರ್ಯಾಸವೆಂದರೆ; 2011-12ರ ಹೊತ್ತಿಗೆ ಇದೇ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರವೇ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ದಾವಣಗೆರೆ ಸೇರಿದಂತೆ ಮಲೆನಾಡು, ಅರೆಮಲೆನಾಡು ಪ್ರದೇಶದ ಸರಿಸುಮಾರು ಒಂದು ಲಕ್ಷ ಎಕರೆ ಗೋಮಾಳ ಜಮೀನನ್ನು ರಾತ್ರೋರಾತ್ರಿ ಅರಣ್ಯಭೂಮಿಯನ್ನಾಗಿ ದಾಖಲೆ ತಿದ್ದುಪಡಿ ಮಾಡಿ ಇಂಡೀಕರಣಗೊಳಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ವಹಿಸಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಒಟ್ಟು 1.80 ಲಕ್ಷ ಎಕರೆ ಕಂದಾಯ ಜಮೀನು ಹೀಗೆ ಇಂಡೀಕರಣಗೊಂಡು ಅರಣ್ಯ ಇಲಾಖೆಗೆ ಹಸ್ತಾಂತರವಾಗಿದೆ. ಆ ಪೈಕಿ ಸುಮಾರು 60 ಸಾವಿರದಷ್ಟು ಎಕರೆ ಪ್ರದೇಶ ದನಕರುಗಳಿಗಾಗಿಯೇ ಮೀಸಲಿಟ್ಟಿದ್ದ ಗೋಮಾಳ(ಅಥವಾ ದನಗಳಿಗಾಗಿ ಮುಪತ್ತು). ಸರ್ಕಾರಿ ನಿಯಮದ ಪ್ರಕಾರ 33 ಜಾನುವಾರುಗಳಿಗೆ ಕನಿಷ್ಟ 100 ಎಕರೆ ಗೋಮಾಳ ಭೂಮಿ ಇರಬೇಕು. ಅಂದರೆ, ಪ್ರತಿ ಒಂದು ಜಾನುವಾರಿಗೆ ಮೂರು ಎಕರೆ ಜಾಗವನ್ನು ಮೇವಿಗೆ ಮೀಸಲಿಡಬೇಕು. ಆದರೆ, ಇಂದು ರಾಜ್ಯದಲ್ಲಿನ ಗೋಮಾಳ ಮತ್ತು ದನಗಳಿಗೆ ಮುಪತ್ತು ಜಾಗಗಳು ಒಂದೋ ರಿಯಲ್ ಎಸ್ಟೇಟ್, ಕೃಷಿ ಒತ್ತುವರಿ, ಜನವಸತಿ, ಸರ್ಕಾರಿ ಉದ್ದೇಶಕ್ಕೆ ಬಳಕೆಯಾಗಿವೆ. ಇಲ್ಲವೇ ಬಿಜೆಪಿ ಸರ್ಕಾರವೇ ಮಾಡಿದಂತೆ ಅರಣ್ಯ ಇಲಾಖೆಗೆ ಹಸ್ತಾಂತರವಾಗಿ ಟ್ರೆಂಚ್ ತೆಗೆದು ಗಡಿ ನಿಗದಿ ಮಾಡಿ, ದನಕರು ಪ್ರವೇಶಕ್ಕೆ ಅವಕಾಶವೇ ಇಲ್ಲದಂತಾಗಿದೆ.
ಹಾಗಾಗಿ ಸದ್ಯ ದನಕರು ಸಾಕಣೆ ಎಂಬುದು ನೈಜ ರೈತರ ಪಾಲಿಗೆ ಗೋಳಿನ ಕಥೆಯಾಗಿದೆ. ಹಾಲು-ಹವಿಸ್ಸು, ಸಗಣಿ-ಗೊಬ್ಬರಕ್ಕಾಗಿ ದನಕರು ಸಾಕಣೆ ಅನಿವಾರ್ಯ. ಆದರೆ ತನ್ನ ತುಂಡುಭೂಮಿಯಲ್ಲಿ ಅವುಗಳನ್ನು ಮೇಯಿಸಲಾಗದು. ಅವುಗಳದ್ದೇ ಹಕ್ಕಿನ ಗೋಮಾಳ ಭೂಮಿಯನ್ನು ಸರ್ಕಾರಗಳೇ ಕಿತ್ತುಕೊಂಡಿವೆ. ಈ ನಡುವೆ ಹೊಸ ಕಾನೂನು ರಚಿಸಿ, ರೈತರು ಜಾನುವಾರು ಸಾಕಣೆ ಎಂದರೆ ಬೆಚ್ಚಿಬೀಳುವಂತೆ ಮಾಡಲಾಗುತ್ತಿದೆ. ಇರುವ ದನಗಳನ್ನು ಸಾಕಲಾಗದ ಪರಿಸ್ಥಿತಿಯಲ್ಲಿ ಮಾರಾಟ ಮಾಡುವುದು ಕೂಡ ಸಾಧ್ಯವಿಲ್ಲದೆ, ಗೋಶಾಲೆಯ ದಂಧೆಕೋರರಿಗೆ ಪುಕ್ಕಟ್ಟೆ ಕೊಟ್ಟು ಕೈತೊಳೆದುಕೊಳ್ಳುವ ಇಕ್ಕಟ್ಟಿಗೆ ಈ ಮಸೂದೆ ಸಿಲುಕಿಸಿದೆ.
ಇಂದು ಇಡೀ ರಾಜ್ಯದಲ್ಲಿ ಕೃಷಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಉತ್ತಲು, ಬಿತ್ತಲು, ಸರಕು ಸಾಗಣೆಗೆ ದನಕರುಗಳನ್ನು ಅವಲಂಬಿಸಿದ ರೈತರ ಪ್ರಮಾಣ ನಗಣ್ಯ. ಆದರೆ, ಗೊಬ್ಬರ ಮತ್ತು ಹೈನಿಗಾಗಿ ದನಕರುಗಳನ್ನು ಈಗಲೂ ಬಹಳಷ್ಟು ಮಂದಿ ರೈತರು ಅವಲಂಬಿಸಿದ್ದಾರೆ. ಸಾಂಪ್ರದಾಯಿಕವಾಗಿ ದನಕರು ಸಾಕಾಣಿಕೆ ಮಾಡುತ್ತಿದ್ದಾರೆ. ಆದಾಯ ಮೂಲವಾಗಿ, ಉದ್ಯಮವಾಗಿ ಹೈನುಗಾರಿಕೆ ಮಾಡುವವರಿಗೆ ದೊರೆಯುವ ಯಾವ ಸೌಲಭ್ಯಗಳೂ ಈ ಸಾಂಪ್ರದಾಯಿಕ ಜಾನುವಾರು ಸಾಕಣೆದಾರರಿಗೆ ಸಿಗುತ್ತಿಲ್ಲ. ಮುಖ್ಯವಾಗಿ ಜಾನುವಾರುಗಳಿಗೆ ಮೇವು ಮತ್ತು ಮೇಯಿಸಲು ಜಾಗದ ಕೊರತೆ ತೀರಾ ಮಲೆನಾಡಿನಂತಹ ಅರಣ್ಯ ಪ್ರದೇಶದಲ್ಲೂ ಸವಾಲಾಗಿ ಪರಿಣಮಿಸಿದೆ. ಅಂತಹ ತಳಮಟ್ಟದ ಸಮಸ್ಯೆಯ ಬಗ್ಗೆ ಈ ಮಸೂದೆ ಚಕಾರವೆತ್ತುವುದಿಲ್ಲ.
ಹತ್ತು ದನ-ಎಮ್ಮೆ ಕಟ್ಟಿಕೊಂಡ ಮಲೆನಾಡಿನ ರೈತನೊಬ್ಬ ಅವುಗಳಿಗೆ ಕನಿಷ್ಟ ಮೂರು ಎಕರೆಯಷ್ಟಾದರೂ ಮೇಯುವ ಜಾಗ ಮೀಸಲಿಡಬೇಕು. ಆದರೆ, ಇವತ್ತಿನ ಆದಾಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಯಾವ ರೈತನೂ ಕೃಷಿಯೋಗ್ಯ ಭೂಮಿಯನ್ನು ಹಾಗೆ ಬೆಳೆ ಬೆಳೆಯದೇ ಹಸುಗಳಿಗೆ ಮೀಸಲಿಡುವ ಅನುಕೂಲಸ್ಥನಾಗಿಲ್ಲ. ಇನ್ನು ಜಮೀನು ಅಂಚಿನ ಕಾಡಿಗೆ ಅಟ್ಟೋಣ ಎಂದರೆ ಮಲೆನಾಡಿನ ಉದ್ದಗಲಕ್ಕೆ ಅರಣ್ಯ ಇಲಾಖೆ ಆಳದ ತೋಡುಗಳನ್ನು ತೋಡಿ ಜಾನುವಾರುಗಳು ಒಳ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಒಂದು ವೇಳೆ ಜಾನುವಾರು ಒಳ ಹೋದರೂ ಕೇಸು ಹಾಕುವ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ. ಹಾಗಾದರೆ, ಬಡ ರೈತ ಜಾನುವಾರುಗಳನ್ನು ಹೇಗೆ ಸಾಕಬೇಕು? ಒಂದು ಹಸು ಕಟ್ಟಿಕೊಂಡು ಶೋಕಿ ಗೋರಕ್ಷಕರಂತೆ ಇದ್ದರೆ ಹೊಲ-ತೋಟಕ್ಕೆ ಗೊಬ್ಬರ ಕೊಂಡು ಕೃಷಿ ಮಾಡಿ ಬದುಕುವುದು ಸಾಧ್ಯವೇ? ಎಂಬ ಜಟಿಲ ಪ್ರಶ್ನೆಗಳಿವೆ.
ಅಂದರೆ, ಸರ್ಕಾರ ಹೊಸ ತಿದ್ದುಪಡಿಗಳ ನೈಜ ಉದ್ದೇಶ ಗೋರಕ್ಷಣೆಯೇ ಆಗಿದ್ದರೆ, ಜಾನುವಾರುಗಳ ಕೈತಪ್ಪಿಹೋಗಿರುವ ಗೋಮಾಳ ಭೂಮಿಯನ್ನು ದನಕರುಗಳ ಸಾಕಣೆಗೆ, (ಬಿಜೆಪಿ ಭಾಷೆಯಲ್ಲಿ ಗೋಮಾತೆ ರಕ್ಷಣೆಗೆ) ವಾಪಸು ಕೊಡಬೇಕಿತ್ತು. ಪ್ರತಿ ಜಾನುವಾರಿಗೂ ಅದರ ಮೇವಿಗಾಗಿ ಮೀಸಲು ಭೂಮಿಯನ್ನು ಖಾತರಿಪಡಿಸಬೇಕಿತ್ತು. ನೈಜ ರೈತರಿಗೆ, ಗೋ ಸಾಕಣೆಗೆ ಉತ್ತೇಜನ ನೀಡಲು ಮತ್ತು ಮುದಿ ಮತ್ತು ರೋಗಪೀಡಿತ ಹಸುಗಳನ್ನು ಅವರಿಗೆ ಹೊರೆಯಾಗದಂತೆ ವಿಲೇ ಮಾಡಲು ವ್ಯವಸ್ಥೆಗಳನ್ನು ಕಲ್ಪಿಸಬೇಕಿತ್ತು. ಆದರೆ, ಸರ್ಕಾರದ ಉದ್ದೇಶ ಜಾರುವಾರು ರಕ್ಷಣೆಯಲ್ಲ; ಬದಲಾಗಿ ಗೋರಕ್ಷಣೆಯ ಹೆಸರಿನಲ್ಲಿ ಜೀವನ ನಡೆಸುತ್ತಿರುವವರ ರಕ್ಷಣೆ. ಹಾಗಾಗಿಯೇ ಅದು ನೈಜ ರೈತರ ಬಗ್ಗೆಯಾಗಲೀ, ದನಕರುಗಳ ನೈಜ ಸಮಸ್ಯೆಯ ಬಗ್ಗೆಯಾಗಲೀ ಏನನ್ನೂ ಪ್ರಸ್ತಾಪಿಸುವುದೇ ಇಲ್ಲ!