ಭೂ ಸುಧಾರಣೆ ಕಾಯ್ದೆ ಎಪಿಎಂಸಿ ಕಾಯ್ದೆ ಜಾರಿ ಮಾಡುವ ಮುನ್ನ ರಾಜ್ಯಸರ್ಕಾರ ರೈತರು ಹಾಗೂ ಸಾರ್ವಜನಿಕರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನಿಡುವುದಾಗಿ ರಾಜ್ಯಪಾಲ ವಾಜುಭಾಯಿ ವಾಲಾ ರವರು ರೈತ ದಲಿತ ಕಾರ್ಮಿಕರ ಒಕ್ಕೂಟದ ಮುಖಂಡರಿಗೆ ಬರವಸೆ ನೀಡಿದ್ದಾರೆ.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟಿದ್ದ ಸಾವಿರಾರು ರೈತರು ದಲಿತರು ಕಾರ್ಮಿಕರು ಹೋರಾಟಗಾರರನ್ನು ಸ್ವಾತಂತ್ರ್ಯ ಉದ್ಯಾನವನದ ಬಳಿ ಪೊಲೀಸರು ತಡೆದಾಗ ರೈತರು ಪೊಲೀಸರ ನಡುವೆ ಬಾರಿ ತಳ್ಳಾಟ ನೂಕಾಟ ನಡೆಯಿತು. ಅಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನಕಾರರ ಮುಖಂಡರು ಭಾಷಣ ಮಾಡುತ್ತಿದ್ದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಅವರ ತಂಡ ಚಳವಳಿ ನಿರತ ರೈತರ ಬಳಿ ಬಂದು ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತ ಮುಖಂಡರಾದ ಕುರುಬೂರು ಶಾಂತಕುಮಾರ್ ಮಾತನಾಡಿ ರಾಜ್ಯ ಸರ್ಕಾರ ರೈತರ ಬಗ್ಗೆ ಹಗುರವಾಗಿ ನಡೆದುಕೊಳ್ಳುತ್ತಿದೆ, ದ್ರೋಹಿ ಕಾಯ್ದೆಗಳನ್ನು ಜಾರಿಗೆ ತಂದು ಮರಣಶಾಸನ ಬರೆಯುತ್ತಿದೆ. ಜನತಾದಳದ ಮುಖಂಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಾಟಕ ಕಂಪನಿ ನಾಟಕಕಾರರಂತೆ ರೀತಿ ವರ್ತನೆ ಮಾಡಿ ರೈತರಿಗೆ ದ್ರೋಹ ಬಗೆದಿದ್ದಾರೆ.ಕೇಂದ್ರ ಸರ್ಕಾರವು ಖಾಸಗಿ ಕಂಪನಿಗಳಿಗೆ ಎಲ್ಲವನ್ನು ಮಾರಿ ಈಗ ಕಾಯ್ದೆಗಳು ತಿದ್ದುಪಡಿ ಮಾಡಿ ರೈತರನ್ನ ಮಾರಲು ಮುಂದಾಗಿದ್ದಾರೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಲು ರೈತ ದಲಿತ ಕಾರ್ಮಿಕ ದುಡಿಯುವ ವರ್ಗದವರು ಒಂದಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ರೈತ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ ಸರ್ಕಾರ ನಿರ್ಧಾರವನ್ನು ಬದಲಾಯಿಸದಿದ್ದರೆ ರಾಜ್ಯಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಸರ್ಕಾರಕ್ಕೆ ಬುದ್ಧಿ ಕಲಿಸುವ ಚಳುವಳಿ ನಡೆಸಬೇಕಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದರು.

ಹಿರಿಯ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಅನುಚೆತ್, ಚಳುವಳಿ ನಿರತರೊಂದಿಗೆ ಮಾತನಾಡಿ ಹತ್ತು ಜನ ರಾಜ್ಯಪಾಲರ ಭೇಟಿಗೆ ಬರುವಂತೆ ಆಹ್ವಾನಿಸಿದರು, ಅದಕ್ಕೆ ಒಪ್ಪದೇ ಪ್ರತಿ ಸಂಘಟನೆಯಿಂದ ಒಬ್ಬರಂತೆ 20 ಜನ ಬರುವುದಾಗಿ ಒತ್ತಾಯಿಸಿದಾಗ ರಾಜಭವನಕ್ಕೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪೊಲೀಸರು ಸಮ್ಮತಿಸಿ ಕರೆದೊಯ್ದರು.
ರಾಜ್ಯಪಾಲ ವಜುಭಾಯಿ ವಾಲಾ ರವರಿಗೆ ಕಾಯ್ದೆಯಿಂದ ರೈತರಿಗೆ ದಲಿತರಿಗೆ ಕಾರ್ಮಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು. ವಿವರವಾಗಿ ಎಲ್ಲವನ್ನೂ ಆಲಿಸಿದ ರಾಜ್ಯಪಾಲರು ಸರ್ಕಾರಕ್ಕೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ಕರೋನ ನಂತರ ಸಾರ್ವಜನಿಕರಿಗೆ ಯಾರನ್ನು ಭೇಟಿಯಾಗಿಲ್ಲ ಇದೇ ಮೊದಲ ರೈತರ ಭೇಟಿ ಮಾಡುತ್ತಿದ್ದೇನೆ. ದೇಶಾದ್ಯಂತ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.






