ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ತಂದೆ ಕೇಶವ ರೆಡ್ಡಿ ಅವರಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಇಂದು ಬೆಳಿಗ್ಗೆ ಸಿಎಂ ಕರೆದಿದ್ದ ತುರ್ತು ಸಭೆಯಲ್ಲಿ ಸುಧಾಕರ್ ಅವರು ಭಾಗಿಯಾಗದೇ ಇರುವುದು ಬಹಳಷ್ಟು ಚರ್ಚೆಗೆ ಒಳಗಾಗಿತ್ತು. ಆದರೆ ಇದಕ್ಕೆ ಕಾರಣವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸುಧಾಕರ್ ಅವರು ಬಹಿರಂಗ ಪಡಿಸಿದ್ದರು.
ಜ್ವರ, ಕೆಮ್ಮು ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ 82 ವರ್ಷದ ನನ್ನ ಪೂಜ್ಯ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಯ ಫಲಿತಾಂಶವನ್ನು ಕಾಯುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗುವಂತೆ ನೀವೂ ಪ್ರಾರ್ಥಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ, ಎಂದು ಡಾ. ಕೆ ಸುಧಾಕರ್ ಅವರು ಹೇಳಿದ್ದರು.
ಈಗ ವರದಿಯು ಬಂದಿದ್ದು 82 ವರ್ಷದ ಕೇಶವ ರೆಡ್ಡಿಯವರಿಗೆ ಕರೋನಾ ಸೋಂಕು ಇರುವುದು ದೃಢವಾಗಿದೆ. ಇವರೊಂದಿಗೆ ಮನೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಸೋಂಕು ಇರುವುದು ಪತ್ತೆಯಾಗಿದೆ.
ಈಗ ಕುಟುಂಬದ ಉಳಿದ ಸದಸ್ಯರಿಗೂ ಕರೋನಾ ಟೆಸ್ಟ್ ಮಾಡಿಸಿದ್ದು, ಅವರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.