ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಜೆಡಿಎ ( ಜೈಪುರ ಡೆವಲಪ್ಮೆಂಟ್ ಅಥಾರಿಟಿ) ಅಡಿಯಲ್ಲಿ ರೈತರ ಜಮೀನನ್ನ ಗೂಂಡಾಗಿರಿಯ ತರಹ ಸ್ವಾಧೀನ ಪಡೆದುಕೊಂಡಿರುವುದು ರಾಜಸ್ಥಾನದ ಜನರಿಗಷ್ಟೇ ಅಲ್ಲ ಇಡೀ ದೇಶಕ್ಕೇ ದಿಗಿಲು ಬಡಿಸುವ ವಿಷಯ. ಅದರಲ್ಲೂ ಅಲ್ಲಿನ ನಿಂದಾರ್ ಹಳ್ಳಿಯ ರೈತರು ಈ ಧೋರಣೆಯ ವಿರುದ್ಧ ಜಮೀನ್ ಸಮಾಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. 2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲಂತೂ ಸರ್ಕಾರಗಳದ್ದೇ ದರ್ಪ. ಜಿಲ್ಲಾಧಿಕಾರಿಗೆ ನೇರವಾಗಿ ಅಧಿಕಾರ ನೀಡಿರುವುದರಿಂದ ರೈತರು ಒಪ್ಪಲಿ ಒಪ್ಪದಿರಲಿ ನಿಗದಿತ ಸಮಯದೊಳಗೆ ಒಕ್ಕಲೆಬ್ಬಿಸಿ ಕಳಿಸೋದೇ ಎಂಬಂತಾಗಿದೆ ರಾಜಸ್ಥಾನದ ರೈತರ ಪರಿಸ್ಥಿತಿ. ಈ ತಿದ್ದುಪಡಿ ಕಾಯ್ದೆ ವಿರುದ್ಧ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಆದರೆ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿರುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ರೈತರನ್ನ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಜಮೀನ್ ಸಮಾಧಿ ಪ್ರತಿಭಟನೆಯೇ ನಿದರ್ಶನ.
ಸುಮಾರು ವರ್ಷಗಳ ಹಿಂದೆ ಜೈಪುರ ಜಿಲ್ಲಾ ವ್ಯಾಪ್ತಿಯ ನಿಂದಾರ್ ಹಳ್ಳಿಯಲ್ಲಿ ಸುಮಾರು ಐದು ನೂರು ರೈತರಿಗೆ ನೋಟಿಸ್ ನೀಡಿದ್ದ ಸರ್ಕಾರ ಸುಮಾರು 286.87 ಹೆಕ್ಟೇರ್ ಜಮೀನನ್ನ ಸ್ವಾಧಿನ ಪಡಿಸಿಕೊಳ್ಳುವುದಾಗಿ ಹೇಳಿತ್ತು, ಜೈಪುರ ಅಭಿವೃದ್ಧಿ ಪ್ರಾಧಿಕಾರ ಅಂದರೆ ಕರ್ನಾಟಕದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇರುವಂತೆ, ರೈತರಿಗೆ ಕಿರುಕುಳ ನೀಡಿ ಜಮೀನನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮೊದಲನೆಯದಾಗಿ ಈ ಜಮೀನುಗಳ ದಾಖಲೆ ಪರಿಶೀಲಿಸದೇ ಮನಬಂದಂತೆ ಪರಿಹಾರ ನಿಗದಿ ಮಾಡಲಾಗಿದೆ. ಅದನ್ನೂ ಇದುವರೆಗೆ ನೀಡದೇ ಏಕಾಏಕಿ ಭೂ ಸ್ವಾಧೀನ ಪಡಿಸಿಕೊಂಡಿದೆ.
ನಿಂದಾರ್ ಹಳ್ಳಿಯ ಜನರನ್ನ ಒಕ್ಕಲೆಬ್ಬಿಸಿ ಅಲ್ಲಿ ಹೌಸಿಂಗ್ ಪ್ರಾಜೆಕ್ಟ್ ಮಾಡಲು ಸನ್ನದ್ಧರಾಗಿರುವ ಅಧಿಕಾರಿಗಳು ಭೂಸ್ವಾಧೀನ ತಿಡ್ಡುಪಡಿ ಕಾಯ್ದೆಯಡಿ ಜಾಗವನ್ನ ಅತಿಕ್ರಮಿಸಿದ್ದಾರೆ, ಸಂತ್ರಸ್ತರು ಬಿಟ್ಟುಕೊಟ್ಟ ಜಾಗಕ್ಕನುಗುಣವಾಗಿ ಪ್ರಾಜೆಕ್ಟ್ ಪೂರ್ಣವಾದಾಗ ಶೇ.25ರಷ್ಟು ಹೆಚ್ಚಿಗೆ ಮೌಲ್ಯದಲ್ಲೊಂದು ಮನೆ, ಅದಕ್ಕೂ ಮುಂಗಡ ಹಣ ಕಟ್ಟಬೇಕೆಂದು ತಾಕೀತು ಮಾಡಲಾಗಿದೆ. ಭೂಮಿ ಕಳೆದುಕೊಂಡ ರೈತರು ತಮ್ಮ ಭೂಮಿಯನ್ನ ಪುನಃ ಕೊಂಡು ಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿದ್ದಾರೆ.
ಭರವಸೆ ಕಳೆದುಕೊಂಡ ನಿಂದಾರ್ ಗ್ರಾಮಸ್ಥರು ಜಮೀನಿನಲ್ಲಿ ಹೊಂಡಗಳನ್ನ ತೋಡಿಕೊಂಡು, ದೇಹವನ್ನು ಹುದುಗಿಸಿಕೊಂಡು ಸಮಾಧಿ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 21 ರೈತರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಸಹ ಸೇರಿಕೊಂಡಿದ್ದಾರೆ. ಸಂಘರ್ಷದ ನೇತೃತ್ವ ವಹಿಸಿಕೊಂಡಿರುವ ನಾಗೇಂದ್ರ ಸಿಂಗ್ ಎಂಬ ರೈತ ಎಷ್ಟೇ ಕಷ್ಟ ಬಂದರೂ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಾರೆ. ಸರ್ಕಾರ ವಸಾಹತುಶಾಹಿ ನೀತಿ ತೊಡೆದುಹಾಕಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಲ್ಲಿನ ನೈಜ ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸುತ್ತಾರೆ. ಅಲ್ಲಿರುವ ರೈತರಲ್ಲಿ ಒಬ್ಬರದ್ದು ಒಂದೊಂದು ಕಥೆ. ಅರವತ್ತು ವರ್ಷದ ಚಾಂದ್ ಇದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.
ನಗರ ಬೆಳೆದಂತೆ ತಮ್ಮ ಜಮೀನು ಅರಿವಿಗೆ ಬಾರದಂತೆ ಸರ್ಕಾರದ ವಶಕ್ಕೆ ಹೋಗಿರೋದನ್ನ ನೋಡಿ ಕಂಗಾಲಾಗಿದ್ದಾರೆ. ಇಪ್ಪತ್ತೊಂದು ವರ್ಷದ ಮಮತಾ ಶರ್ಮಾ ಆಸ್ತಿ ಉಳಿಸಿಕೊಳ್ಳಲು ಹೋರಾಟ ರೂಪಿಸುತ್ತಾ ಸ್ನಾತಕೊತ್ತರ ಪದವಿ ಪರೀಕ್ಷೆಯನ್ನೂ ಬರೆದಿಲ್ಲ. ಮಮತಾದೇವಿ ಹಾಗೂ ಆಚೀ ದೇವಿ ಇಬ್ಬರು ಸಹೋದರಿಯರು ಅಣ್ಣತಮ್ಮಂದಿರನ್ನ ಮದುವೆಯಾಗಿದ್ದರು, ಆದರೆ ಕಳೆದ ವರ್ಷ ಅಪಘಾತದಲ್ಲಿ ಮೃತರಾಗಿಬಿಟ್ಟರು. ಈಗ ಭೂಮಿಯೂ ಇಲ್ಲ ಕುಟುಂಬವೂ ಇಲ್ಲ, ಚಿಕ್ಕಮಕ್ಕಳೊಂದಿಗೆ ಪ್ರತಿಭಟನೆಯ ಟೆಂಟ್ನಲ್ಲಿ ಕೂತಿದ್ದಾರೆ.
ಸರ್ಕಾರಕ್ಕೆ ಕಣ್ಣು, ಕಿವಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ, ರಾಜ್ಯವನ್ನ ಅಧಃಪತನಕ್ಕೆ ತಳ್ಳಿಕೊಂಡು, ಅಭಿವೃದ್ಧಿ ಹೆಸರಲ್ಲಿ ಪರಿಹಾರ ನೀಡದೇ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ರಾಜಸ್ಥಾನ ಸರ್ಕಾರ ಕೇವಲ ನಿದರ್ಶನವಷ್ಟೇ. ಇನ್ನುಮುಂದೆ ನಮ್ಮ ರಾಜ್ಯವನ್ನೂ ಸೇರಿಕೊಂಡು ಎಲ್ಲರೂ ಹೀಗೆ ಒಕ್ಕಲೆಬ್ಬಿಸಲು ಮುಂದಾಗುವ ದಿನಗಳು ದೂರ ಇಲ್ಲ. ರಸ್ತೆ, ರೈಲು ಮಾರ್ಗ, ಕೈಗಾರಿಕೆಗಳು, ಟೋಲ್ ಗೇಟ್, ವಾಣಿಜ್ಯ ಸಂಕೀರ್ಣಗಳನ್ನ ನಿರ್ಮಾಣ ಮಾಡಲು ಪ್ರತಿದಿನ ಹತ್ತಾರು ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಮುಂದೆ ಹೀಗೆ ದಿವಾಳಿ ಸ್ವಾಧೀನಕ್ಕೆ ಸಂಕಲ್ಪ ಮಾಡಿದರೂ ಆಶ್ವರ್ಯವಿಲ್ಲ.