ಕರೋನಾ ವೈರಸ್ ನ ಸಂಪೂರ್ಣ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ 12 ಗಂಟೆಗಳ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿದ್ದರು. ಅಷ್ಟೇ ಅಲ್ಲ, ರಾಮ ಜನ್ಮಭೂಮಿಯಲ್ಲಿ ಇರುವ ತಗಡಿನ ಶೆಡ್‌ನಿಂದ ಶ್ರೀರಾಮನ ವಿಗ್ರಹವನ್ನು ಹೊರಗೆ ತೆಗೆದು ಫೈಬರ್‌ನಿಂದ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್‌ಗೆ ಸ್ಥಳಾಂತರಿಸುವ ಕಾರ್ಯದಲ್ಲೂ ತೊಡಗಿಕೊಂಡರು. ಈ ಶೆಡ್ ನಲ್ಲಿ ಶ್ರೀರಾಮನ ಮೂರ್ತಿಯು ದೇವಾಲಯ ನಿರ್ಮಾಣವಾಗುವವರೆಗೂ ಇರಲಿದೆ.
ಮಂಗಳವಾರ ತಡರಾತ್ರಿ ಅಯೋಧ್ಯೆ ತಲುಪಿದ ಮುಖ್ಯಮಂತ್ರಿ, ನವರಾತ್ರಿಯ ಮೊದಲ ದಿನದಂದು ಈ ಆಚರಣೆಯನ್ನು ಅಯೋಧ್ಯೆಯಲ್ಲಿ ರಾಮ್ ದೇವಾಲಯ ನಿರ್ಮಾಣದ ಮೊದಲ ಹಂತದ ಆರಂಭ ಎಂದು ನಂತರ ಟ್ವೀಟ್ ಮಾಡಿದ್ದಾರೆ. ಅಯೋಧ್ಯಾ ಪಟ್ಟಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ದೇವಾಲಯದ ನಿರ್ಮಾಣದ ದಿನಾಂಕವನ್ನು ನಿರ್ಧರಿಸುವ ಸಭೆ ನಡೆಯಬೇಕಿತ್ತು, ಆದರೆ ಅದು ಮುಂದೆ ಹೋಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ರಾಷ್ಟ್ರವನ್ನು ವ್ಯಾಪಿಸಿರುವ ಭೀಕರ ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ವಿಗ್ರಹ ಸ್ಥಳಾಂತರವನ್ನು ಮುಂದೂಡಬಹುದೆಂದು ವರದಿಗಳು ತಿಳಿಸಿದ್ದವು. ಆದರೆ ಮುಖ್ಯಮಂತ್ರಿಗಳು ಸ್ಥಳಾಂತರಕ್ಕೆ ಮುಂದಾಗಿದ್ದು ಇದರಲ್ಲಿ 20 ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತೆಗೆಯಲಾದ ವೀಡಿಯೋಗಳಲ್ಲಿ ಅನೇಕ ಸಾಧು ಸಂತರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಪೂಜೆಯ ನೇತೃತ್ವ ವಹಿಸಿರುವುದು ಕಂಡು ಬಂದಿದೆ. ಹಿರಿಯ ಸರ್ಕಾರಿ ಅಧಿಕಾರಿಗಳು, ಅಯೋಧ್ಯೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲರೂ ಈ ಸಂದರ್ಭದಲ್ಲಿ ಹಾಜರಿದ್ದರು. ಸ್ಥಳಾಂತರದ ನಂತರ ಯೋಗಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿರುವ ರಾಷ್ಟ್ರವ್ಯಾಪಿ ಲಾಕ್ ಡೌನ್ ಗೆ ಜನತೆ ಸಹಕರಿಸಬೇಕೆಂದು ವಿನಂತಿ ಮಾಡಿಕೊಂಡರು.
ಹಿಂದಿನ ದಿನವಷ್ಟೆ ಪ್ರಧಾನಿಯವರು ಹೆಚ್ಚು ಜನ ಸೇರುವುದನ್ನು ತಪ್ಪಿಸಿ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನೂ ಶ್ರಮಿಸಬೇಕೆಂದು ಕರೆ ನೀಡಿದ್ದರು. ಚೀನಾದ ವುಹಾನ್ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಈ ಭೀಕರ ವೈರಸ್ ಪತ್ತೆಯಾಗಿದ್ದು ನಂತರ ಅನೇಕ ದೇಶಗಳಿಗೆ ಹಬ್ಬಿತ್ತು. ಕೇಂದ್ರ ಗೃಹ ಸಚಿವಾಲಯವು ಲಾಕ್ ಡೌನ್ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದು ಎಲ್ಲ ರೀತಿಯ ಧಾರ್ಮಿಕ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವಂತೆಯೇ ಆದೇಶಿಸಿತ್ತು. ಈ ಕುರಿತು ಪ್ರಧಾನಿ ಮೋದಿ ಅವರೂ ಟ್ವೀಟ್ ಮೂಲಕ ವೈರಸ್ ವಿರುದ್ದ ಹೋರಾಟಕ್ಕೆ ಕರೆ ನೀಡಿದ್ದರು.
ಅಯೋಧ್ಯಾ ಜಿಲ್ಲಾಡಳಿತವು ಏಪ್ರಿಲ್ 2 ರ ವರೆಗೆ ಈ ನಗರಿಗೆ ಭಕ್ತರ ಪ್ರವೇಶವನ್ನೇ ನಿಷೇಧಿಸಿತ್ತು. ದೇಶದಲ್ಲಿ ಅತ್ಯವಶ್ಯ ವಸ್ತುಗಳ ಸಾಗಾಟ ಹೊರತುಪಡಿಸಿ ಎಲ್ಲ ಸಾರ್ವಜನಿಕ ಪ್ರಯಾಣಿಕರ ವಾಹನಗಳು, ವಿಮಾನಗಳ ಹಾರಾಟ, ರೈಲುಗಳ ಓಡಾಟವನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕಳೆದ ನವೆಂಬರ್ ನಲ್ಲಷ್ಟೇ ದೇಶದ ಸರ್ವೋಚ್ಚ ನ್ಯಾಯಾಲಯವು ವಿವಾದಿತ ರಾಮ ಜನ್ಮ ಭೂಮಿಯ ಕುರಿತು ಐತಿಹಾಸಿಕ ತೀರ್ಪು ನೀಡಿ ಭೂಮಿಯನ್ನು ರಾಮಲಲ್ಲಾ ಸಮಿತಿಗೆ ನೀಡಿತ್ತು. ಅಲ್ಲದೆ ಉತ್ತರ ಪ್ರದೇಶದ ಮುಖ್ಯ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಸ್ಥಳವನ್ನು ನೀಡುವಂತೆಯೂ ಆದೇಶಿಸಿತ್ತು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಮ ದೇವಾಲಯವನ್ನು ಕೆಲವು ತಿಂಗಳುಗಳಲ್ಲೇ ಕಟ್ಟುವುದಾಗಿಯೂ ಹೇಳಿದ್ದರು. ಸರ್ಕಾರವು ಮಸೀದಿ ನಿರ್ಮಾಣಕ್ಕಾಗಿ ಗುರುತಿಸಿರುವ ಸ್ಥಳವು ಈಗಿರುವ ರಾಮ ಜನ್ಮಭೂಮಿ ಸ್ಥಳದಿಂದ 25 ಕಿಲೋಮೀಟರ್ ದೂರದಲ್ಲಿದೆ. ಈ ನಿವೇಶನವು ಅಯೋಧ್ಯಾ ಸಮೀಪದ ಧನಿಪುರ ಗ್ರಾಮದಲ್ಲಿದ್ದು ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಕೇಂದ್ರದಿಂದ 18 ಕಿಲೋಮೀಟರ್ ದೂರದಲ್ಲಿದೆ ಎಂದು ಉತ್ತರ ಪ್ರದೇಶದ ಮಂತ್ರಿ ಶ್ರೀಕಂಠ ಶರ್ಮ ಕಳೆದ ಫೆಬ್ರುವರಿಯಲ್ಲೇ ತಿಳಿಸಿದ್ದರು. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನಡುವೆ ವಿವಾದಕ್ಕೆ ಕಾರಣವಾಗಿದ್ದ ರಾಮಜನ್ಮ ಭೂಮಿಯ ವಿವಾದವು ದಶಕಗಳಷ್ಟು ಇತಿಹಾಸ ಹೊಂದಿದ್ದರೂ ಸುಪ್ರೀಂ ಕೋರ್ಟಿನ ತೀರ್ಪಿನಿಂದಾಗಿ ಎರಡೂ ಸಮುದಾಯಗಳ ನಡುವೆ ಶಾಂತಿ ನೆಲೆಸಲೂ ಕಾರಣವಾಯಿತು.
ಪ್ರಧಾನ ಮಂತ್ರಿಗಳ ಕರೆಯ ನಡುವೆಯೂ ಹಿರಿಯ ಜನಪ್ರತಿನಿಧಿಯಾಗಿ ರಾಜ್ಯವೊಂದರ ಮುಖ್ಯ ಹುದ್ದೆಯಲ್ಲಿರುವ ಯೋಗಿ ಅವರು ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ಮಂಗಳವಾರ ಬೆಳಿಗ್ಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಆದೇಶಗಳು ಬರೀ ಜನಸಾಮಾನ್ಯರಿಗೆ ಮಾತ್ರವೋ ಉನ್ನತ ಹುದ್ದೆ ಮತ್ತು ಅಧಿಕಾರಸ್ಥರಿಗೆ ಇದು ಅನ್ವಯವಾಗುದಿಲ್ಲವೋ ಎಂಬುದನ್ನು ಆಳುವ ಸರ್ಕಾರವೇ ಸ್ಪಷ್ಟಪಡಿಸಬೇಕಿದೆ.