ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ತೆರೆಯುವಂತೆ ಕೇರಳ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಕರಾವಳಿಯ ಜನಪ್ರತಿನಿಧಿಗಳು ಗರಂ ಆಗಿದ್ದಾರೆ. ಟ್ವೀಟ್ ಮೂಲಕ ಕೇರಳ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿ ನ್ಯಾಯಾಂಗ ನಿಂದನೆ ಭೀತಿಗೆ ಸಿಲುಕಿ ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ ಅವರೆಲ್ಲ ಕೇರಳ ಸರಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.
ಇದರ ಮಧ್ಯೆಯೇ ಟ್ವೀಟ್ನಲ್ಲಿ ಪೌರುಷ ಮೆರೆಯುವ ಜನಪ್ರತಿನಿಧಿಗಳನ್ನು ನಂಬಿ ಕೂರದೆ ಮಂಗಳೂರು ಮೂಲದ ಮೂವರು ಕೇರಳ ಹೈ ಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಒಬ್ಬರು ಮಂಗಳೂರು ಬಾರ್ ಎಸೋಸಿಯೇಷನ್ ಅಧ್ಯಕ್ಷ ನರಸಿಂಹ ಹೆಗ್ಡೆ, ಇನ್ನೊಬ್ಬರು ಬಿಜೆಪಿ ಹಾಗೂ ಸಂಘಪರಿವಾರದ ಜೊತೆ ಗುರುತಿಸಿಕೊಂಡಿರುವ ಡಾ. ಅಣ್ಣಯ್ಯ ಕುಲಾಲ್ ಹಾಗೂ ಮತ್ತೊಬ್ಬರು ಕಾಂಗ್ರೆಸ್ ಯುವನಾಯಕ ಮಿಥುನ್ ರೈ.
ಅಚ್ಚರಿ ಅಂದ್ರೆ ಈ ರೀತಿ ಕೇರಳ ಹೈಕೋರ್ಟ್ ತೀರ್ಪಿನ ಸಿಂಧುತ್ವ ಪ್ರಶ್ನಿಸಿ ಮಿಥುನ್ ರೈ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕುತೂಹಲಕ್ಕೂ ಕಾರಣವಾಗಿದೆ. ಈ ಹಿಂದೆ ಇದೇ ಗಡಿಭಾಗದ ಮಂಜೇಶ್ವರಕ್ಕೆ ತೆರಳಿ ಮಿಥುನ್ ರೈ ಅಲ್ಲಿನ ಯುಡಿಎಫ್ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿದ್ದರು. ಆದರೆ ಈಗ ಏಕಾಏಕಿ ಈ ರೀತಿಯ ನಿರ್ಧಾರ ಯಾಕೆ ತಳೆದರು ಅನ್ನೋ ಕುತೂಹಲ ಸಹಜವಾದದ್ದು. ಅದರಲ್ಲೂ ಕೇರಳ-ಕರ್ನಾಟಕ ಗಡಿ ಬಂದ್ ವಿಚಾರದಲ್ಲಿ ಕಾಂಗ್ರೆಸ್ ನಡೆ ಒಂದು ರೀತಿ ಅಡ್ಡ ಗೋಡೆ ಮೇಲಿನ ದೀಪದಂತೆ. ಆದರೆ ಮಿಥುನ್ ರೈ ಮಾತ್ರ ಅದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿ ತನ್ನ ವೈಯಕ್ತಿಕ ಆಸಕ್ತಿಯಿಂದ, ಜಿಲ್ಲೆಯ ಹಿತದೃಷ್ಟಿಯಿಂದ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಕಳೆದ ಒಂದು ವಾರದ ಅವಧಿಯಲ್ಲಿ ಕಾಸರಗೋಡು-ದಕ್ಷಿಣ ಕನ್ನಡ ಗಡಿ ಬಂದ್ನಿಂದಾಗಿ ಗಡಿ ದಾಟಲಾಗದೇ ಕಾಸರಗೋಡು ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಾರಣ, ರಾಜ್ಯದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡಕ್ಕೆ ನೆರೆಯ ಕೇರಳದ ಕಾಸರಗೋಡು ತಾಗಿಕೊಂಡಿರುವುದರಿಂದ ಬಹುತೇಕ ಕಾಸರಗೋಡಿನ ಮಂದಿ ಅನಾರೋಗ್ಯ ಬಂದಾಗಲೆಲ್ಲ ಮಂಗಳೂರಿನತ್ತವೇ ಮುಖ ಮಾಡುತ್ತಾರೆ. ಆದರೆ ಈಗ ಅದಕ್ಕೆ ಕಡಿವಾಣ ಬಿದ್ದ ಪರಿಣಾಮ ತಲಪಾಡಿ ದಾಟಿ ಬರುವಂತಿಲ್ಲ. ಇದರಿಂದಾಗಿ ಕಾಸರಗೋಡಿನ ಮಂದಿಗೆ ಕರ್ನಾಟಕ ರಾಜ್ಯ ಸರಕಾರದ ನಿಲುವು ನಿಜಕ್ಕೂ ಕುತ್ತು ತಂದಿದೆ.
ಈಗಾಗಲೇ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂತಾದ ಪ್ರಮುಖರು ಗಡಿ ನಿರ್ಬಂಧ ತೆರವುಗೊಳಿಸಲು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರಕಾರ ಗಡಿ ನಿರ್ಬಂಧ ತೆರವುಗೊಳಿಸೋದಕ್ಕೆ ಮುಂದಾಗಿಲ್ಲ, ಬದಲಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಪ್ರಿಲ್ 1 ರಂದು ಮಾಡಿದ್ದ ಟ್ವೀಟ್ ಸಾಕಷ್ಟು ಗಮನಸೆಳೆದಿತ್ತು. ಮಾನವೀಯ ದೃಷ್ಟಿಯಿಂದ ಕಾಸರಗೋಡಿನಿಂದ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದರು. ಆದರೆ ಇದೀಗ ಅವರದ್ದೇ ಪಕ್ಷದ ಯುವ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಳೆದ ಲೋಕಸಭಾ ಚುನಾವಣಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೂ ಆದ ಮಿಥುನ್ ರೈ ಅವರೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಮುಖರಾಗಿದ್ದಾರೆ. ಸ್ವತಃ ಟ್ವೀಟ್ ನಲ್ಲೂ ಇದನ್ನು ಖಚಿತಪಡಿಸಿದ್ದಾರೆ.
ಸಿದ್ದರಾಮಯ್ಯನವರದ್ದು ದೇಶ ಹಿತದ ಚಿಂತನೆ, ನನ್ನದು ಜಿಲ್ಲೆಯ ಹಿತ :
ಸಿದ್ದರಾಮಯ್ಯ ಹೇಳಿಕೆ ಹೊರತಾಗಿಯೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಗಡಿ ನಿರ್ಬಂಧ ತೆರವಿಗೆ ನ್ಯಾಯಾಂಗದ ಮೊರೆ ಹೋದ ಮಿಥುನ್ ರೈ ನಡೆಯ ಬಗ್ಗೆ ʼಪ್ರತಿಧ್ವನಿʼ ಅವರನ್ನೇ ಮಾತಾಡಿಸಿದಾಗ ಅವರು ಮುಂದಿಟ್ಟ ವಿಚಾರವಿದು. “ ಸಿದ್ದರಾಮಯ್ಯನವರ ಹೇಳಿಕೆಗೆ ನನ್ನ ವಿರೋಧವಿಲ್ಲ. ನಮ್ಮ ರಾಜ್ಯ ನಾಯಕರಾಗಿ ಅವರ ಮೇಲೆ ಗೌರವವಿದೆ. ಅವರು ಉಲ್ಲೇಖಿಸಿರುವ ವಿಚಾರ ದೇಶ ಹಿತದ ದೃಷ್ಟಿಯಲ್ಲಿ ನೋಡುವುದಾದರೆ ಸರಿಯಾಗಿದೆ. ಆದರೆ ಓರ್ವ ಜಿಲ್ಲೆ ಜವಾಬ್ದಾರಿಯುತ ನಾಗರಿಕನಾಗಿ ಗಡಿ ನಿರ್ಬಂಧ ತೆರವಿಗೆ ನನ್ನ ವಿರೋಧವಿದೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿನ ವಾಸ್ತವ ವಿಚಾರ ನನಗೆ ಚೆನ್ನಾಗಿ ತಿಳಿದಿದೆ. ವೈದ್ಯ ಕುಟಂಬದವನಾದ ನನಗೆ ಕರೋನಾ ರೋಗ ಅದೆಷ್ಟರ ಮಟ್ಟಿಗೆ ಗಂಭೀರತೆ ಪಡೆದುಕೊಂಡಿದೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದೇನೆ. ಹಾಗಾಗಿ ಜಿಲ್ಲೆಯ ಹಿತದೃಷ್ಟಿಯಿಂದ, ನಾನೂ ಮಾನವೀಯ ನೆಲೆಯಿಂದನೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ” ಎಂದರು.
ಮಿಥುನ್ ರೈ ಲೆಕ್ಕಾಚಾರ ; ನಿಜಕ್ಕೂ ಆಘಾತಕಾರಿ ಅಂಕಿಅಂಶ!
ಅವರ ಪ್ರಕಾರ ಕಾಸರಗೋಡು ಜಿಲ್ಲೆ ಒಂದರಲ್ಲಿಯೇ 121 ಮಂದಿ ಕೋವಿಡ್-19 ಗೆ ತುತ್ತಾಗಿದ್ದಾರೆ. ಅಲ್ಲದೇ 21,600 ಮಂದಿ ಕ್ವಾರೆಂಟೈನ್ ನಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಕೇವಲ ಐದು ಸಾವಿರ ಮಂದಿಯಷ್ಟೇ ಕ್ವಾರೆಂಟೈನ್ ನಲ್ಲಿದ್ದಾರೆ. ಒಂದು ವೇಳೆ ಅಲ್ಲಿಂದ ಬರೋ ರೋಗಿಗಳಿಗೆ ಇಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಂತೂ ಚಿಕಿತ್ಸೆ ಸಿಗದು. ಬದಲಾಗಿ ಸರಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗುತ್ತದೆ. ಹಾಗೇ ಏನಾದರೂ ಆದರೆ ಅವರಲ್ಲಿ ಯಾರಾದರೊಬ್ಬ ಕೋವಿಡ್-19 ರೋಗಿ ಇದ್ದರೆ ಮಂಗಳೂರು ನಗರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇದರಿಂದ ಮಂಗಳೂರು ನಗರಕ್ಕೂ ಕರೋನಾ ಸೋಂಕು ಹರಡುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಇದುವರೆಗೂ ನಗರದಲ್ಲಿ ಕಾಣಿಸಿಕೊಳ್ಳದ ಈ ರೋಗ ನಗರದಲೆಲ್ಲ ಹರಡಿ ಸಮುದಾಯಕ್ಕೆ ಹರಡುವ ಆತಂಕ ಎದುರಿಸುವಂತಾಗುತ್ತದೆ. ಈ ರೀತಿ ಏನಾದ್ರೂ ಆದರೆ ಸದ್ಯ 5 ಸಾವಿರದಷ್ಟಿರುವ ಕ್ವಾರೆಂಟೈನ್ 80 ಸಾವಿರ ಮಂದಿವರೆಗೆ ತಲುಪಬಹುದು. ಸಾವಿರ ಸಂಖ್ಯೆಯಲ್ಲಿ ಜನ ಕೋವಿಡ್-19 ಗೆ ತುತ್ತಾಗಬಹುದು ಅನ್ನೋ ಆತಂಕವನ್ನ ʼಪ್ರತಿಧ್ವನಿʼ ಮುಂದಿಟ್ಟಿದ್ದಾರೆ. ಅಲ್ಲದೇ ಕೇರಳದ ಕಣ್ಣೂರಿನಲ್ಲಿ 18 ವಿಶೇಷ ಆಸ್ಪತ್ರೆಗಳಿವೆ. ಆದ್ದರಿಂದ ಕಾಸರಗೋಡು ಜಿಲ್ಲೆಯ ನಿವಾಸಿಗಳು ಆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ನಮಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ ಆದರೆ ಕರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಇದು ಅನಿವಾರ್ಯ ಎಂದರು.
ಪಿಣರಾಯಿ ವಿರೋಧಿ ನಳಿನ್ ಟ್ವೀಟ್ ಗೆ ಮಿಥುನ್ ಖಂಡನೆ:
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮೂವರನ್ನು ನಳಿನ್ ಕುಮಾರ್ ಕಟೀಲ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಿಥುನ್ ರೈ, “ಅವರ ಹೊಗಳುವಿಕೆಗಾಗಿ ನಾನು ಅರ್ಜಿ ಹಾಕಿಲ್ಲ. ನನ್ನ ಸ್ವಂತ ಹಣ ಖರ್ಚು ಮಾಡಿಕೊಂಡು ಜಿಲ್ಲೆಯ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದೇನೆ” ಎಂದರು. ಅಲ್ಲದೇ ನಳಿನ್ ಟ್ವೀಟ್ವೊಂದರಲ್ಲಿ ʼಸೇವ್ ಕರ್ನಾಟಕ ಫ್ರಂ ಪಿಣರಾಯಿʼ (#SaveKarnatakaFromPinarayi) ಎಂದು ಉಲ್ಲೇಖಿಸಿರುವ ಬಗ್ಗೆ ಇದೇ ಸಂದರ್ಭ ಯುವ ನಾಯಕ ಮಿಥುನ್ ರೈ, “ಅಂತಹ ಹೇಳಿಕೆ ಯಾವತ್ತೂ ಒಪ್ಪಲು ಸಾಧ್ಯವಿಲ್ಲ, ಖಂಡನೀಯ” ಎಂದರು.
ಒಟ್ಟಿನಲ್ಲಿ ಕಾಸರಗೋಡು-ದಕ್ಷಿಣ ಕನ್ನಡ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ವಿಚಾರ ಇದೀಗ ಎರಡು ರಾಜ್ಯಗಳ ಪಾಲಿಗೆ ರಾಜಕೀಯ ಜಂಗೀಕುಸ್ತಿಗೂ ಕಾರಣವಾಗುತ್ತಿದೆ. ಮೊದಲೇ ಎಡಪಕ್ಷವನ್ನು ಕಂಡರಾಗದ ಬಿಜೆಪಿ ಸಿಕ್ಕಿರೋ ಅವಕಾಶವನ್ನು ಹಿಡಿದುಕೊಂಡು ಕೇರಳ ಸರಕಾರವನ್ನು ದೂಷಿಸುವ ಕೆಲಸ ಮಾಡುತ್ತಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಜಿಲ್ಲೆಯ ಹಿತ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ ಗಮನಸೆಳೆಯುತ್ತಿದೆ. ಆದರೆ ಇದಕ್ಕೆ ಪಕ್ಷದ ವರಿಷ್ಠರು ಅದ್ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅನ್ನೋದು ಕಾದು ನೋಡಬೇಕಿದೆ.