ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ರಾಜ್ಯಾದ್ಯಂತ ಮಾನ್ಯತೆ ಇಲ್ಲದ ಮದರಸಾಗಳನ್ನು ಪಟ್ಟಿ ಮಾಡಲು ಆದೇಶಿಸಿದೆ.
ಈ ಕುರಿತಾಗಿ ಸಮೀಕ್ಷೆ ನಡೆಸುವಂತೆ ಯೋಗಿ ಸರ್ಕಾರ ಆದೇಶಿಸಿದ್ದು, ಅನಧಿಕೃತ ಮದರಸಾಗಳಲ್ಲಿ ಇರುವ ಶಿಕ್ಷಕರು, ವಿದ್ಯಾರ್ಥಿಗಳು, ಮದರಸಾಗಳ ಪಠ್ಯ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೆ ಮದರಸಾಗಳಿಗೆ ಇರುವ ನಂಟಿನ ಕುರಿತು ತನಿಖೆ ನಡೆಸುವಂತೆಯೂ ಸೂಚಿಸಿದೆ.
ಅಷ್ಟೇ ಅಲ್ಲ, ಅನಧಿಕೃತ ಮದರಸಾಗಳಿಗೆ ಸರ್ಕಾರಿ ಅನುದಾನಿತ ಮದರಸಾಗಳಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವರ್ಗಾವಣೆ ಮಾಡಲೂ ಸರ್ಕಾರ ಆದೇಶಿಸಿದೆ. ವರ್ಗಾವಣೆ ಸಂಬಂಧ ಆಯಾ ಮದರಸಾಗಳ ನಿರ್ವಾಹಕರ ಅನುಮತಿ ಪಡೆಯಬೇಕು ಹಾಗೂ ಉತ್ತರ ಪ್ರದೇಶ ರಾಜ್ಯದ ಮದರಸಾ ಶಿಕ್ಷಣ ಪರಿಷತ್‌ನ ರಿಜಿಸ್ಟ್ರಾರ್ ಅನುಮತಿ ಪಡೆಯುವಂತೆಯೂ ಸರ್ಕಾರ ನಿರ್ದೇಶನ ನೀಡಿದೆ.

ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ನಿಗಾ ವಹಿಸುವಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಹಿಂದೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಸಮೀಕ್ಷೆ ನಡೆಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.