ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ದಾಖಲೆಯೊಂದನ್ನು ಮಾಡಿದೆ. ಇದೇ ಸರ್ಕಾರ ಹಿಂದೆ ಮಾಡಿದ್ದಂತಹ ಎಲ್ಲಾ ದಾಖಲೆಯನ್ನು ಮುರಿಯುವಂತಹ ದಾಖಲೆ ಇದು!!
ನೀವು ನಂಬಲೇಬೇಕು. ಪ್ರಧಾನಿ ನರೇಂದ್ರ ಮೋದಿ ಜನರ ಮೇಲಿನ ‘ಕಾಳಜಿ’ಯಿಂದಾಗಿ ಸತತ 100 ದಿನಗಳ ಕಾಲ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿಲ್ಲ! ಪೆಟ್ರೋಲ್ ಮತ್ತು ಡಿಸೇಲ್ ದರಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಬಿಟ್ಟುಕೊಟ್ಟ ನಂತರದಲ್ಲಿ ಇದು ಅದ್ಭುತ ದಾಖಲೆ. ಹಿಂದೆಂದೂ ಇಷ್ಟು ಸುಧೀರ್ಘ ಅವಧಿಯವರೆಗೆ ಪೆಟ್ರೋಲ್, ಡಿಸೇಲ್ ದರ ತಟಸ್ಥವಾಗಿರಲಿಲ್ಲ. ಈ ಜನರ ಮೇಲಿನ ಕಾಳಜಿಯ ಹಿಂದಿನ ಗುಟ್ಟೇನು ಎಂಬುದು 5 ಟ್ರಿಲಿಯನ್ ಡಾಲರ್ ಪ್ರಶ್ನೆ!
2021 ನವೆಂಬರ್ 4 ರಂದು ಪೆಟ್ರೋಲ್, ಡಿಸೇಲ್ ದರ ಏರಿಸಿದ್ದೇ ಕೊನೆ. ಅದಾದ ನಂತರ ಪೆಟ್ರೋಲ್ ಮತ್ತು ಡಿಸೇಲ್ ದರಗಳು ತಟಸ್ಥವಾಗಿವೆ. ಅದಕ್ಕೂ ಮುಂಚೆ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ತಗ್ಗಿಸಿತ್ತು. ಎಲ್ಲಕ್ಕೂ ಮಿಗಿಲಾದ ದಾಖಲೆ ಏನಾಗಿತ್ತೆಂದರೆ, ಪೆಟ್ರೋಲ್ ಅಷ್ಟೇ ಅಲ್ಲ ಡಿಸೇಲ್ ಕೂಡಾ ಶತಕ ದಾಟಿ ಹೋಗಿತ್ತು. ವಿಶ್ವದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಅತ್ಯಧಿಕ ತೆರಿಗೆ ಹೇರುತ್ತಿರುವ ದೇಶ ಭಾರತ ಎಂಬ ‘ಹೆಗ್ಗಳಿಕೆ’ ದಕ್ಕಿತ್ತು.
ಈ ದೇಶದ ಯಾವ ನಾಗರಿಕ ಕೂಡಾ ಪೆಟ್ರೋಲ್ ಶತಕ ದಾಟುತ್ತದೆ ಎಂದು ಕನಸಿನಲ್ಲೂ ನಿರೀಕ್ಷೆ ಮಾಡಿರಲಿಲ್ಲ. ನರೇಂದ್ರ ಮೋದಿ ಸಾಧನೆ ಎಂದರೆ- ಪೆಟ್ರೋಲ್ ಅಷ್ಟೇ ಏಕೆ ಡಿಸೇಲ್ ರೇಟನ್ನೂ ‘ಶತಕ’ ದಾಟಿಸಿಬಿಟ್ಟಿದ್ದರು. ನರೇಂದ್ರ ಮೋದಿ ಏನೇ ಮಾಡಿದ್ರೂ ಅದಕ್ಕೊಂದು ಕಾರಣ ಇರುತ್ತೆ. ಪೆಟ್ರೋಲ್ ದರ ಏರಿಸಿದ್ರೂ, ಪೆಟ್ರೋಲ್ ದರ ಇಳಿಸಿದ್ರೂ ಅದಕ್ಕೊಂದು ಕಾರಣ ಇದ್ದೇ ಇರುತ್ತೆ!
ಈಗ ನೂರು ದಿನಗಳಾದರೂ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸದೇ ತಟಸ್ಥವಾಗಿಡಲು ಕಾರಣವೇನು? ಜನತೆಯ ಮೇಲಿನ ಕಾಳಜಿಯೇ? ಹೌದು ಅಂತಾರೆ ಮೋದಿ ಅಭಿಮಾನಿಗಳು. ಆದರೆ, ಕನಿಷ್ಠ ಜ್ಞಾನ ಇರೋ ನಾಗರಿಕರ ಪ್ರಕಾರ, ನಿಜವಾದ ಕಾರಣ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ!

ಈ ಚುನಾವಣೆಗಳನ್ನು ಘೋಷಣೆ ಮಾಡುವ ನಿರ್ಧಾರ ಕೈಗೊಂಡು ಅದನ್ನು ಪ್ರಕಟಿಸುವ ಪೂರ್ವದಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಗೆ ತಡೆ ಒಡ್ಡಲಾಗಿದೆ.
ದರ ಏರಿಕೆಗೆ ತಡೆ ಒಡ್ಡಿ ದರ ತಟಸ್ಥವಾಗಿರುವಂತೆ ಮಾಡಲಾಗಿದೆ. ಈ ಕಾರಣದಿಂದಾಗಿ ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಿಂದಾಗಿ ಮೋದಿ ಸರ್ಕಾರದ ಮೇಲಿದ್ದ ಆಕ್ರೋಶ ತಣ್ಣಗಾಗಿ ಬಿಟ್ಟಿದೆ. ಬೆಲೆ ಏರಿಕೆ ವಿಷಯವು ಚುನಾವಣಾ ವೇಳೆ ಪ್ರಸ್ತಾಪವಾದರೂ ಎಲ್ಲಿ ಬೆಲೆ ಏರಿಕೆಯಾಗಿದೆ? ನಾವು ಬೆಲೆ ಏರಿಸದೆಯೇ ಎರಡು ತಿಂಗಳಾಯಿತು, ವಿರೋಧ ಪಕ್ಷದವರು ಸುಳ್ಳು ಹೇಳುತ್ತಿದ್ದಾರೆ ಎಂದು ಜನರಿಗೆ ತಿಳಿ ಹೇಳುವ ತಂತ್ರವನ್ನು ನರೇಂದ್ರ ಮೋದಿ ಮಾಡಿದ್ದಾರೆ.
ಈಗ ಮೊದಲ ಹಂತದ ಮತದಾನವೂ ನಡೆದಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 15ರೊಳಗೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಆರಂಭವಾಗಲಿದೆ.
ಏರಿಕೆ ಎಷ್ಟು ತೀವ್ರವಾಗಿ ಇರಲಿದೆ ಎಂದರೆ ನರೇಂದ್ರ ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಕ್ರಮವಾಗಿ 5 ಮತ್ತು 10 ರೂಪಾಯಿ ಸುಂಕ ತಗ್ಗಿಸುವ ಪೂರ್ವದಲ್ಲಿದ್ದ ದರವನ್ನೂ ಮೀರಿ ಏರಿಕೆ ಆಗಲಿದೆ. ನೂರು ದಿನಗಳ ಕಾಲ ಗ್ರಾಹಕರ ಜೇಬಿಗೆ ಕತ್ತರಿ ಹಾಕದೇ ಬಿಟ್ಟಿದ್ದ ದುಡ್ಡನ್ನು ಹತ್ತಿಪ್ಪತ್ತು ದಿನಗಳಲ್ಲೇ ವಸೂಲಿ ಮಾಡುವ ಸಾಧ್ಯತೆ ಇದೆ.

ಈ ಹಿಂದೆ 2020ರಲ್ಲಿ ಕೋವಿಡ್ ಕಾರಣಕ್ಕಾಗಿ ಲಾಕ್ಡೌನ್ ಹೇರಿಕೆ ಮಾಡಲಾಗಿತ್ತು. ಆ ಅವಧಿಯಲ್ಲಿ ಪೆಟ್ರೋಲ್ ದರವನ್ನು ಏರಿಕೆ ಮಾಡಲಾಗಿತ್ತಾದರೂ, ಅದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಕುಸಿದಿದ್ದ ಕಾರಣಕ್ಕೆ ದರ ಇಳಿಕೆಗೆ ಹೊಂದಾಣಿಕೆ ಮಾಡಲಾಗಿತ್ತು. ಅಂದರೆ, ದರ ಇಳಿದಿತ್ತು, ಆದರೆ ವಾಸ್ತವಿಕವಾಗಿ ದರ ಇಳಿದಿರಲಿಲ್ಲ. ಸುಂಕದ ಏರಿಕೆ ಮೂಲಕ ಸರಿದೂಗಿಸಲಾಗಿತ್ತು. ಲಾಕ್ಡೌನ್ ತೆರವು ಗೊಳಿಸಿದ ನಂತರ 2020ರ ಜೂನ್ 6ರಿಂದ ಜೂನ್ 30ವರೆಗೆ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ನಿತ್ಯವೂ ಸತತವಾಗಿ ಏರಿಸಲಾಗಿತ್ತು. ಈ ಏರಿಕೆ ಎಷ್ಟಿತ್ತೆಂದರೆ, ಸತತ ಏರಿಕೆ ಮತ್ತು ಗರಿಷ್ಠ ಏರಿಕೆಯಲ್ಲಿ ಹೊಸದೊಂದು ದಾಖಲೆಯಾಗಿತ್ತು. ಜೂನ್ 6 ರಂದು 73.55 ರುಪಾಯಿ ಇದ್ದ ಪೆಟ್ರೋಲ್ ಜೂನ್ 29ರವರೆಗೂ ಸತತವಾಗಿ ಏರಿಕೆಯಾಗಿ 83.04 ರುಪಾಯಿಗೆ ಜಿಗಿದಿತ್ತು. ಅಂದರೆ, ಈ ಅವಧಿಯಲ್ಲಿ 9.49 ರುಪಾಯಿ ಏರಿಕೆಯಾಗಿತ್ತು. ಏರಿಕೆಯ ಪ್ರಮಾಣ ಶೇ.13ರಷ್ಟು!
2020ರ ಜೂನ್ ತಿಂಗಳಲ್ಲಿ ನಡೆದ ಪೆಟ್ರೋಲ್, ಡಿಸೇಲ್ ದರ ಏರಿಕೆಯ ದಾಖಲೆಯನ್ನು ನರೇಂದ್ರ ಮೋದಿ ಸರ್ಕಾರ ಮುರಿಯಲಿದೆ. ಅಂದರೆ ಮಾರ್ಚ್ 15ರಿಂದ ಏಪ್ರಿಲ್ 15ರವರೆಗೆ ಅದೆಷ್ಟು ತೀವ್ರವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಲಿದೆ ಎಂದರೆ- ಹಣದುಬ್ಬರ ಮುನ್ನಂದಾಜನ್ನು ಶೇ.4.5ಕ್ಕೆ ತಗ್ಗಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಕೂಡಾ ಬೆಚ್ಚಿ ಬೀಳಲಿದ್ದಾರೆ. ಏಕೆಂದರೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಜತೆಜತೆಗೆ ಎಲ್ಲಾ ಅಗತ್ಯ ವಸ್ತುಗಳ ದರ ಏರಲಿದ್ದು, ಹಣದುಬ್ಬರ ತೀವ್ರವಾಗಿ ಜಿಗಿಯಲಿದೆ! ಜನತೆ ಬೆಚ್ಚಿ ಬೀಳೋದಿಲ್ಲ ಬಿಡಿ, ಏಳೂವರೆ ವರ್ಷದಲ್ಲಿ ಇಂತಹ ಬೆಲೆ ಏರಿಕೆಗಳನ್ನು ಸಹಿಸಿ ಸಹಿಸಿ ಅಭ್ಯಾಸವಾಗಿಬಿಟ್ಟಿದೆ!