ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಮುಚ್ಚಲ್ಪಟ್ಟಿದ್ದ 10 ನೇ ತರಗತಿಯನ್ನು ಸೋಮವಾರದಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ ಮುಂದಿನ ಆದೇಶದವರೆಗೆ ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ನೀಡಿರುವ ರಜೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ.
ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚದೆ, ತಕ್ಷಣವೇ ಪುನರಂಭಿಸಬೇಕು ಎಂದು ಹೈಕೋಟ್೯ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್,, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರ ಜತೆ ನಡೆಸಿದ ಸಭೆಯಲ್ಲಿ ಸೋಮವಾರದಿಂದ ಹತ್ತನೇ ತರಗತಿಗಳನ್ನು ಮಾತ್ರ ಆರಂಭಿಸಲು ತೀರ್ಮಾನಿಸಲಾಯಿತು.
ಕೋರ್ಟ್ ಆದೇಶದಂತೆ ಫೆಬ್ರವರಿ 14ರಿಂದ 10ನೇ ತರಗತಿವರೆಗೆ ಶಾಲೆ ಪುನಾರಂಭ ಮಾಡುತ್ತಿದ್ದೇವೆ. ದಯವಿಟ್ಟು ಮಕ್ಕಳನ್ನ ಸಮವಸ್ತ್ರದಲ್ಲಿಯೇ ಕಳುಹಿಸಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನವಿ ಮಾಡಿದ್ದಾರೆ.
ಅಭೆಯ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ‘ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲಾ-ಕಾಲೇಜು ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಹೈಸ್ಕೂಲ್ ಅಂದ್ರೆ 10ನೇ ತರಗತಿವರೆಗೆ ತರಗತಿಗಳನ್ನ ಆರಂಭಿಸಲಾಗುದು. ನಂತ್ರ ಪಿಯುಸಿ ಪ್ರಾರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.