ಜೂನ್ ತಿಂಗಳಿನಲ್ಲಿ 9 ರಿಂದ 10 ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು ಉತ್ಪಾದನೆ ಮಾಡಲು ಹಾಗೂ ಪೂರೈಸಲು ಸಾಧ್ಯವಾಗಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ದೇಶದಾದ್ಯಂತ ಲಸಿಕೆ ಕೊರತೆ ಕುರಿತಂತೆ ರಾಜ್ಯಗ್ಳು ಅಹವಾಲು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಸೇರಂ ಇನ್ಸ್ಟಿಟ್ಯೂಟ್ ನೀಡಿರುವ ಈ ಮಾಹಿತಿ ಕೊಂಚ ಭರವಸೆಯನ್ನ ನೀಡಿದೆ. ದೇಶದ ಅನೇಕ ರಾಜ್ಯಗಳು ಲಸಿಕೆ ಕೊರತೆ ಬಗೆಗೆ ದೂರಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಂದಿದೆ.
ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ಸವಾಲುಗಳನ್ನು ತನ್ನ ಉದ್ಯೋಗಿಗಳು ಎದುರಿಸುತ್ತಿದ್ದಾರೆ. ಅದಾಗ್ಯೂ, ದಿನದ 24 ಗಂಟೆಗಳ ಕಾಲ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಸೇರಂ ಇನ್ಸ್ಟಿಟ್ಯೂಟ್ ತಿಳಿಸಿದೆ.
“ಮೇ ತಿಂಗಳಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಇತ್ತು. ಅದಕ್ಕೆ ಹೋಲಿಸಿದರೆ, ನಮ್ಮ ಉತ್ಪಾದನಾ ಸಾಮರ್ಥ್ಯದಲ್ಲಿ ಏರಿಕೆ ಕಂಡಿದೆ. ಜೂನ್ ತಿಂಗಳಲ್ಲಿ ಲಸಿಕೆಯ ಒಂಬತ್ತು ರಿಂದ 10 ಕೋಟಿ ಡೋಸ್ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ತಿಳಿಸಲು ನಾವು ಸಂತೋಷಪಟ್ಟಿದ್ದೇವೆ” ಎಂದು ಸೇರಂ ಇನ್ಸ್ಟಿಟ್ಯೂಟ್ ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ -19 ಲಸಿಕೆಗಳಲ್ಲಿ ಭಾರತವನ್ನು ‘ಆತ್ಮನಿರ್ಭರ’ (ಸ್ವಾವಲಂಬಿ) ಯನ್ನಾಗಿ ಮಾಡಲು ಮತ್ತು ಅದನ್ನು ದೇಶದ ಜನರಿಗೆ ಲಭ್ಯವಾಗುವಂತೆ ಮಾಡಲು ಅವರು ಮಾಡಿದ ಪ್ರಯತ್ನದ ವಿವಿಧ ಹಂತಗಳಲ್ಲಿ “ಅಮೂಲ್ಯವಾದ ಮಾರ್ಗದರ್ಶನ ಮತ್ತು ನಿರಂತರ ಬೆಂಬಲದ ” ಬಗ್ಗೆ ಪ್ರಕಾಶ್ ಕುಮಾರ್ ಸಿಂಗ್ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಭಾರತ ಸರ್ಕಾರ ನೀಡುತ್ತಿರುವ ಬೆಂಬಲದೊಂದಿಗೆ ಹಾಗೂ ನೀವು ನೀಡುತ್ತಿರುವ ಮಾರ್ಗದರ್ಶನದಿಂದ, ಮುಂದಿನ ತಿಂಗಳಲ್ಲಿ ಕೋವಿಶೀಲ್ಡ್ ಉತ್ಪಾದನೆಯನ್ನು ಹೆಚ್ಚಿಸಲು ನಮ್ಮ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಅತ್ಯತ್ತಮ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ನಾವು ಭರವಸೆ ನೀಡುತ್ತೇವೆ ಎಂದು ಪತ್ರದಲ್ಲಿ ಸಂಸ್ಥೆಯ ವತಿಯಿಂದ ತಿಳಿಸಲಾಗಿದೆ,
ಭಾರತ ಸರ್ಕಾರವು ಪ್ರಸ್ತುತ ಕರೋನಾ ವಿರುದ್ಧ ಲಸಿಕೆಯನ್ನಾಗಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಹಾಗೂ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯನ್ನು ಬಳಸಿಕೊಳ್ಳುತ್ತಿವೆ. ಸಂಪೂರ್ಣ ವ್ಯಾಕ್ಸಿನೆಷನ್ನಿಂದ ಕರೋನಾ ವಿರುದ್ಧದ ಹೋರಾಟದಲ್ಲಿ 80 % ಗೆಲುವು ಸಾಧಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಅದಾಗ್ಯೂ, ಲಸಿಕೆ ನೀಡಲು ವಿಫಲವಾಗುತ್ತಿರುವ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆಗೆ ಎಳೆದಿದ್ದರು.