ತಮಿಳುನಾಡಿನಲ್ಲಿ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಮತ್ತೆ ರಾಜಕೀಯದಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತಾರಾ ಎಂಬ ಪ್ರಶ್ನೆ ಉದ್ಭುವಿಸಿದೆ?
ಶಶಿಕಲಾ ಮತ್ತು ಪಕ್ಷದ ಕಾರ್ಯಕರ್ತರೊಬ್ಬರ ನಡುವಿನ ಫೋನ್ ಸಂಭಾಷಣೆಯ ಆಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಐಎಡಿಎಂಕೆ ಪಕ್ಷವನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲಿಯೇ ರಾಜಕೀಯಕ್ಕೆ ಬರುತ್ತೇನೆ, ಚಿಂತಿಸ ಬೇಡಿ, ಧೈರ್ಯವಾಗಿರಿ, ಕರೋನಾ ಸಾಂಕ್ರಾಮಿಕ ಮುಗಿಯಲಿ ನಾನು ಬರುತ್ತೇನೆ ಎಂದಿದ್ದಾರೆ. ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮ ಎಂದು ಕಾರ್ಯಕರ್ತ ಉತ್ತರಿಸಿದ್ದಾನೆ.

ಕೆಲವು ತಿಂಗಳ ಹಿಂದೆ ಉಚ್ಚಾಟಿತ ಎಐಎಡಿಎಂಕೆ ನಾಯಕಿ ಶಶಿಕಲಾ ರಾಜಕೀಯ ನಿವೃತ್ತಿ ಘೋಷಿಸಿದ್ದರು, ರಾಜಕೀಯಕ್ಕೆ ಹೊರತಾಗಿ ಏನಾದರೊಂದು ಮಾಡುತ್ತೇನೆಂದು ಹೇಳಿಕೆ ನೀಡಿದ್ದರು. ನನ್ನ ಅಕ್ಕ ಜಯಲಲಿತಾ ಅವರ ಆಡಳಿತ ಸಮಯದಲ್ಲಿ ಇದ್ದ ಸುವರ್ಣಾಡಳಿತ ಮತ್ತೆ ತರಲು ಪ್ರಯತ್ನಿಸುತ್ತೇನೆ, ಅವರ ದೃಷ್ಟಿಕೋನದಂತೆ ರಾಜ್ಯವನ್ನು ಮುನ್ನಡೆಸುವ ಶಕ್ತಿಯನ್ನು ದೇವರು ನನಗೆ ಕೊಡಲಿ ಎಂದು ಹೇಳಿದ್ದರು.
ಆಕ್ರಮ ಆಸ್ತಿ ಸಂಬಂಧ ಶಶಿಕಲಾ 4 ವರ್ಷ ಜೈಲು ಸೇರಿದ್ದರು. ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರಿಂದ ಜನವರಿ 27 ರಂದು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ.
ಜಯಲಲಿತಾ ನಿಧನದ ನಂತರ ಶಶಿಕಲಾ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ 2017 ರಲ್ಲಿ ಅಕ್ರಮ ಆಸ್ತಿಸಂಬಂಧ ಜೈಲು ಸೇರಿದ್ದರಿಂದ ಪಕ್ಷದ ನಿಯಂತ್ರಣವನ್ನು ಸೋದರಳಿಯ ದಿನಕರನ್ ಅವರಿಗೆ ಹಸ್ತಾಂತರಿಸಲಾಗಿತ್ತು.

ಶಶಿಕಲಾ ಅವರ ಬೆಂಬಲದೊಂದಿಗೆ ಇ ಪಳನಿಸ್ವಾಮಿ ಅವರನ್ನು ಸಿಎಂ ಮಾಡಲಾಗಿತ್ತು. ಪಕ್ಷದಲ್ಲಿನ ಕೆಲವು ಭಿನ್ನಾಭಿಪ್ರಾಯದಿಂದ 2017 ರ ಸೆಪ್ಟೆಂಬರ್‌ನಲ್ಲಿ ಶಶಿಕಲಾ ಮತ್ತು ದಿನಕರನ್ ಇಬ್ಬರನ್ನು ಪಕ್ಷದಿಂದ ವಜಾ ಮಾಡಲಾಗಿತ್ತು.
ಮೂಲ- NIE