ಕರ್ನಾಟಕದ ಕರಾವಳಿ ಹಾಗು ಉತ್ತರ ಕರ್ನಾಟಕ ಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಂತ ಪ್ರಬಲ ರಾಜಕೀಯ ಪಕ್ಷವಾಗಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಚುನಾವಣೆ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರ ದಂಡು ಮಂಡ್ಯ, ರಾಮನಗರ, ಸೇರಿದಂತೆ ಹಳೇ ಮೈಸೂರು ಭಾಗದ ಹಲವಾರು ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣದ ಮಸೀದಿಯನ್ನು ಮೂಡಲ ಬಾಗಿಲು ಆಂಜನೇಯನ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದೂ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದ ಭಾರತೀಯ ಜನತಾ ಪಾರ್ಟಿ, ಇತ್ತೀಚಿಗೆ ಹುರಿಗೌಡರು ಹಾಗು ನಂಜೇಗೌಡರು ಟಿಪ್ಪುವನ್ನು ಕೊಂದರು ಎಂದು ಪ್ರತಿ ಸಮಾವೇಶದಲ್ಲೂ ಹೊಗಳುವ ರೀತಿಯಲ್ಲಿ ಹೇಳುತ್ತಿದೆ. ಮೊದಲಿಗೆ ಅಮಿತ್ ಷಾ ಭಾಗಿಯಾಗಿದ್ದ ಸಮಾವೇಶದಲ್ಲಿ ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಈ ವಿಚಾರ ಹೇಳಿದ್ದರು. ಇದೀಗ ಸಚಿವ ಅಶ್ವತ್ಥ ನಾರಾಯಣ ಕೂಡ ಹುರಿಗೌಡ ಹಾಗು ನಂಜೇಗೌಡರು ಟಿಪ್ಪುವನ್ನು ಕೊಂದರು ಅದೇ ರೀತಿ ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಎಂದಿದ್ದಾರೆ.
ಮಂಡ್ಯ ಶಾಂತಿ ಕದಡುವುದೇ ಬಿಜೆಪಿ ಉದ್ದೇಶ..!?
ಮಂಡ್ಯದಲ್ಲಿ ಹಿಂದೂ ಮುಸ್ಲಿಂ ಅನ್ನೋ ಬೇಧಭಾವ ಹೆಚ್ಚಿನ ಮಟ್ಟದಲ್ಲಿ ಕಾಣಿಸುವುದಿಲ್ಲ. ಕೃಷಿ ಆಧಾರಿತ ಜಿಲ್ಲೆ ಆಗಿರುವ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದ ಜನರು ಕೃಷಿಕರಿಂದ ದವಸ ಧಾನ್ಯ ಖರೀದಿ ಮಾಡಿಕೊಂಡು ಮಾರಾಟ ಮಾಡುವುದು. ಕೃಷಿ ಉಪಕರಣಗಳನ್ನು ರಿಪೇರಿ ಮಾಡುವುದು ಸೇರಿದಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರೆ, ಹಿಂದೂ ಸಮುದಾಯದ ಜನರು ಜಮೀನುಗಳಲ್ಲಿ ದುಡಿಯುವ ಕೆಲಸ ಮಾಡುತ್ತಾರೆ. ಆದರೆ ಈ ಬಾಂಧವ್ಯ ಭಾರತೀಯ ಜನತಾ ಪಾರ್ಟಿಗೆ ಬೇಕಿಲ್ಲ ಎನ್ನಲಾಗ್ತಿದೆ. ಶ್ರೀರಂಗಪಟ್ಟಣದಲ್ಲಿ ಮೂಡಲ ಬಾಗಿಲು ಆಂಜೇನೇಯ ಸ್ವಾಮಿ ದೇವಸ್ಥಾನದ ಮೇಲೆಯೇ ಜಾಮೀಯ ಮಸೀದಿ ಕಟ್ಟಲಾಗಿದೆ ಎಂದು ಹೋರಾಟ ಶುರು ಮಾಡಿದರೂ ಬಿಜೆಪಿ ನಾಯಕರು ಅಂದುಕೊಂಡ ಮಟ್ಟದಲ್ಲಿ ಜನರು ಆಕರ್ಷಿತರಾಗಲಿಲ್ಲ. ದೊಡ್ಡ ಮಟ್ಟದ ಹೋರಾಟಕ್ಕೆ ಕೈ ಜೋಡಿಸಲಿಲ್ಲ. ಇದು ಭಾರತೀಯ ಜನತಾ ಪಾರ್ಟಿಗೆ ಇರುಸು ಮುರುಸು ತಂದಿದೆ. ಇದೇ ಕಾರಣಕ್ಕೆ ಇದೀಗ ಹುರಿಗೌಡ, ನಂಜೇಗೌಡರನ್ನು ಹಿರೋಗಳ ರೀತಿ ಬಿಂಬಿಸಿ ರಕ್ತಪಾತದ ಉದ್ದೇಶ ಹೊಂದಲಾಗಿದೆ ಎನ್ನುವುದು ವಿರೋಧ ಪಕ್ಷಗಳಲ್ಲಿ ಚರ್ಚೆ ಆಗ್ತಿರೋ ಮಾತು.
ಒಕ್ಕಲಿಗರು ಕೊಲೆಗಡುಕರು ಎಂದು ಬಿಂಬಿಸುವುದೇ ಉದ್ದೇಶ..!
ಒಕ್ಕಲಿಗರು ಟಿಪ್ಪುವನ್ನು ಕೊಂದ ಕೊಲೆಗಾರರು ಎಂದು ಹೇಳುತ್ತಲೇ ಮುಸ್ಲಿಂ ಸಮುದಾಯದ ನಡುವೆ ಸಾಮರಸ್ಯ ಹದಗೆಡುವಂತೆ ಮಾಡುವುದು. ಮುಸ್ಲಿಂ ಸಮುದಾಯವನ್ನು ಕಂಡರೆ ಒಕ್ಕಲಿಗರಿಗೂ ಆಗಿ ಬರುವುದಿಲ್ಲ. ಇದೇ ಕಾರಣಕ್ಕೆ ಟಿಪ್ಪುವನ್ನು ಕೊಂದರು ಎಂದು ಪ್ರಚಾರ ಮಾಡುವುದು. ಆ ಬಳಿಕ ಮಂಡ್ಯದಲ್ಲಿ ಮುಸ್ಲಿಂ ಹಾಗು ಹಿಂದೂಗಳ ಮತಗಳು ಹಿಬ್ಭಾಗ ಆಗುತ್ತವೆ. ಮುಂದಿನ ದಿನಗಳಲ್ಲಿ ಯಾವುದಾದರೂ ಧರ್ಮಾಂಧರ ನಡುವೆ ನಡೆಯುವ ರಕ್ತಪಾತದ ವೇಳೆ ಭಾರತೀಯ ಜನತಾ ಪಾರ್ಟಿ ಹಿಂದೂಗಳನ್ನು ಓಲೈಸುವ ಮೂಲಕ ಮಂಡ್ಯದ ಜನರ ಮನಸ್ಸು ಗೆಲ್ಲಬಹುದು ಅನ್ನೋದು ಭಾರತೀಯ ಜನತಾ ಪಾರ್ಟಿಯ ಲೆಕ್ಕಾಚಾರ. ಕಾಂಗ್ರೆಸ್ ಹಾಗು ಜೆಡಿಎಸ್ ಯಾವುದೇ ಕೊಲೆ ನಡೆದರು ಕಾನೂನು ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನುತ್ತ ಜಾತ್ಯತೀತ ನಿಲುವಿಗೆ ಅಂಟಿಕೊಳ್ತಾರೆ. ಆದರೆ ಮುಸ್ಲಿಮರನ್ನು ಸದಾಕಾಲ ದ್ವೇಷ ಮಾಡುವ ಬಿಜೆಪಿ, ಮಂಡ್ಯದಲ್ಲಿ ರಕ್ತಪಾತ ನಡೆದರೆ ಹಿಂದೂ ಕುಟುಂಬಕ್ಕೆ ಸಾಂತ್ವನ ಹೇಳುತ್ತಲೇ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಉದ್ದೇಶ ಹೊಂದಿದೆ ಎನ್ನುವ ಗುಸುಗುಸು ಮಂಡ್ಯದಲ್ಲಿ ಚಲಾವಣೆಯಲ್ಲಿದೆ.
ಹಿಂದೂ ಯುವಕರೇ ಚುನಾವಣೆ ವೇಳೆ ಎಚ್ಚರ..!
ಕಳೆದ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್ ಮೇಸ್ತಾ ಎಂಬಾತನ ಸಾವಾಗಿತ್ತು. ಮೀನುಗಾರ ಕುಟುಂಬದ ಯುವಕ ಸಾವು ಹೇಗಾಯ್ತು ಎನ್ನುವುದು ಇಲ್ಲೀವರೆಗೂ ನಿಗೂಢವಾಗಿಯೇ ಉಳಿದಿದೆ. ಆದರೆ ಕೊಲೆಯಲ್ಲ ಅನ್ನೋದು ಸಾಬೀತಾಗಿದೆ. ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಇದು ಮುಸ್ಲಿಂ ಯುವಕರು ಉದ್ದೇಶಪೂರ್ವಕವಾಗಿ ನಡೆಸಿರುವ ಕೊಲೆ ಎಂದು ಇಡೀ ರಾಜ್ಯಾದ್ಯಂತ ಅಬ್ಬರದ ಪ್ರಚಾರ ಮಾಡಿತ್ತು. ಪ್ರಚಾರ ಅಷ್ಟೇ ಅಲ್ಲದೆ ರಾಜಕೀಯವಾಗಿ ತನ್ನ ಉದ್ದೇಶವನ್ನೂ ಈಡೇರಿಸಿಕೊಂಡಿತ್ತು. ಉತ್ತರ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಹಿಂದೂಗಳು ಒಗ್ಗಟ್ಟಾಗಿ ಬಿಜೆಪಿಯನ್ನು ಗೆಲ್ಲಿಸಿದ್ದರು. ಅದೇ ಬಿಜೆಪಿ ಸರ್ಕಾರ ಪರೇಶ್ ಮೇಸ್ತಾ ಸಾವಿನ ಕೇಸನ್ನು ಸಿಬಿಐಗೆ ವಹಿಸಿತ್ತು. ಇತ್ತೀಚಿಗೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತಾನ ಸಾವು ಕೊಲೆಯಲ್ಲ ಎಂದು ವರದಿ ಕೊಟ್ಟಿತ್ತು. ಅಂದರೆ ಬಿಜೆಪಿ ಯಾರದ್ದೋ ಸಾವನ್ನು ರಾಜಕೀಯಕ್ಕೆ ಬಳಸಿಕೊಂಡಿತ್ತು ಎನ್ನುವುದು ಸಾಬೀತಾಯ್ತು. ಇದೀಗ ಭಾರತೀಯ ಜನತಾ ಪಾರ್ಟಿ ಕಣ್ಣು ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯ ಮೇಲೆ ಬಿದ್ದಿದೆ. ಹಿಂದೂ ಯುವಕರು ಚುನಾವಣೆ ಮುಗಿಯುವ ತನಕ ಜಾಗ್ರತೆಯಿಂದ ಇರುವುದು ಒಳಿತು. ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನನ್ನೂ ಬೇಕಿದ್ದರೂ ಮಾಡುತ್ತಾರೆ ಅಲ್ಲವೇ..?