ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರ ಹಿಡಿದು ದಿನ ಕಳೆದರೂ, ತನ್ನ ನೆರೆಯ ದೇಶದ ಈ ಬೆಳವಣಿಗೆಯ ಬಗ್ಗೆ ಭಾರತ ಈವರೆಗೆ ಅಧಿಕೃತವಾಗಿ ತುಟಿಬಿಚ್ಚಿಲ್ಲ!
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇನ್ನೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳಿಗೆ ಧನ್ಯವಾದ ಅರ್ಪಿಸುತ್ತಾ, ಒಲಿಂಪಿಕ್ ಸ್ಪರ್ಧಿಗಳೊಂದಿಗೆ ಸಂವಾದ ನಡೆಸುತ್ತಾ ಬಿಡುವಿಲ್ಲದ ಚಟುವಟಿಕೆಗಳಲ್ಲಿ ಮುಳುಗಿದ್ದಾರೆ. ಇನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಾಲಿಬಾನಿ ಆಡಳಿತಕ್ಕೆ ಜಾರಿರುವ ಆಫ್ಘಾನಿಸ್ತಾನದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ, ವಿನಃ ನೆರೆಯ ದೇಶದ ಈ ರಾಜಕೀಯ ವಿಪ್ಲವದ ಕುರಿತು ಯಾವುದೇ ರಾಜತಾಂತ್ರಿಕ ಪ್ರತಿಕ್ರಿಯೆ ನೀಡಿಲ್ಲ! ಹಾಗೇ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಕೂಡ ಪಾಕ್ ಬೆಂಬಲಿತ ಉಗ್ರಗಾಮಿ ಸಂಘಟನೆಗಳಿಗೆ ಆಫ್ಘಾನಿಸ್ತಾನದ ಬೆಳವಣಿಗೆಗಳು ನೀಡುವ ಕುಮ್ಮಕ್ಕು ಮತ್ತು ಅದು ಅಂತಿಮವಾಗಿ ಭಾರತದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ!
ಪ್ರಧಾನಮಂತ್ರಿ, ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರ ಈ ಮೌನ, ಇಡೀ ಭಾರತ ಸರ್ಕಾರದ ಮೌನ. ಹಾಗಾಗಿ ಭಾರತ ಸರ್ಕಾರದ ಈ ಮೌನದ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಏಕೆಂದರೆ, ಜಾಗತಿಕ ರಾಜಕಾರಣ, ರಾಜತಾಂತ್ರಿಕತೆ, ಉದ್ಯಮ ಮತ್ತು ವ್ಯವಹಾರ, ಸೇನಾ ವ್ಯೂಹಾತ್ಮಕ ಬಲ ಮುಂತಾದ ಕಾರಣಕ್ಕೆ ಆಫ್ಘಾನಿಸ್ತಾನ ಬಹುಶಃ ಅಮೆರಿಕಾಕ್ಕಿಂತ ಹೆಚ್ಚು ಭಾರತಕ್ಕೆ ಮುಖ್ಯ. ಚೀನಾ ಮತ್ತು ಪಾಕಿಸ್ತಾನದ ಪ್ರತೀಕೂಲ ಸಂಬಂಧಗಳ ಹಿನ್ನೆಲೆಯಲ್ಲಿ ಆ ಎರಡು ರಾಷ್ಟ್ರಗಳನ್ನು ಹೊರತುಪಡಿಸಿದರೆ, ಜಾಗತಿಕವಾಗಿ ಭಾರತ ಮತ್ತು ಇತರೆ ಹೊರಜಗತ್ತಿಗೆ ಭಾರತಕ್ಕಿರುವ ಏಕೈಕ ಭೂ ಸಂಪರ್ಕದ ಕೊಂಡಿ ಈ ಆಫ್ಘಾನಿಸ್ತಾನ.
ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!
ಜೊತೆಗೆ ಸದ್ಯ ಆಫ್ಘಾನಿಸ್ತಾನದ ಅಧಿಕಾರ ಹಿಡಿದಿರುವ ತಾಲಿಬಾನ್ ವ್ಯವಸ್ಥೆಗೆ ಪಾಕಿಸ್ತಾನ, ಚೀನಾ ಸೇರಿದಂತೆ ಭಾರತದ ನೆರೆಯ ರಾಷ್ಟ್ರಗಳು ಬೆಂಬಲಕ್ಕೆ ನಿಂತಿವೆ. ದಶಕಗಳ ಕಾಲದ ಸುದೀರ್ಘ ಸಂಘರ್ಷದಿಂದ ಅಕ್ಷರಶಃ ಸ್ಮಶಾನದಂತಾಗಿದ್ದ ಆಫ್ಘಾನಿಸ್ತಾನದಲ್ಲಿ ವ್ಯವಸ್ಥೆಯನ್ನು ಮರುಸ್ಥಾಪಿಸಲು, ಸುರಕ್ಷತೆ, ಭದ್ರತೆ, ಉದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಕಟ್ಟಲು ಕಳೆದ ಒಂದೂವರೆ ದಶಕದಿಂದ ಒಂದು ಕಡೆ ಅಮೆರಿಕ ಯತ್ನಿಸುತ್ತಿದ್ದರೆ, ಅಷ್ಟೇ ಪ್ರಮಾಣದಲ್ಲಿ ಭಾರತ ಕೂಡ ಶ್ರಮಿಸಿದೆ. ಅಲ್ಲಿನ ಸಂಸತ್ ಭವನ, ವಿಮಾನ ನಿಲ್ದಾಣ, ಶಾಲೆಗಳು ಸೇರಿದಂತೆ ಹಲವು ನಿರ್ಮಾಣಗಳಿಗೆ ಭಾರತ ಕೈಜೋಡಿಸಿದೆ.
ಜೊತೆಗೆ ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಅಮೆರಿಕ ಸೇನಾ ಮತ್ತು ಉದ್ಯಮ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಮೊಟಕುಗೊಳಿಸುವ ಯತ್ನವಾಗಿ ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಇರಾನ್ ಪರಸ್ಪರ ಕೈಜೋಡಿಸಿದ್ದು, ತಾಲಿಬಾನ್ ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಆ ಹಿನ್ನೆಲೆಯಲ್ಲಿ ಕೂಡ, ನೆರೆಯ ಶತ್ರುದೇಶಗಳ ಪ್ರಾಬಲ್ಯಕ್ಕೆ ಆಫ್ಘನ್ ನೆಲದ ಹೊಸ ಬೆಳವಣಿಗೆ ಇನ್ನಷ್ಟು ಬಲ ನೀಡಿದೆ. ಆದರೆ, ಅದೇ ಹೊತ್ತಿಗೆ, ಪ್ರಾದೇಶಿಕ ವ್ಯೂಹಾತ್ಮಕ ತಂತ್ರಗಾರಿಕೆಯನ್ನು ಬದಿಗೊತ್ತಿ ಅಮೆರಿಕದೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಆಪ್ತತೆ ಹೊಂದಿದ್ದ ಭಾರತ ಒಬ್ಬೊಂಟಿಯಾಗಲಿದೆ. ಅದರಲ್ಲೂ ಅಲ್ ಖೈದಾ, ಐಎಸ್ ಐಎಸ್, ಜೆಎಂಎಂ, ಎಲ್ ಇಟಿ ಮುಂತಾದ ಉಗ್ರಗಾಮಿ ಸಂಘಟನೆಗಳು ತಮ್ಮ ನೆಲೆಗಳನ್ನು ಆಫ್ಘಾನಿಸ್ತಾನಕ್ಕೆ ಸ್ಥಳಾಂತರಿಸುತ್ತಿರುವ ಹಿನ್ನೆಲೆಯಲ್ಲಿ, ತಾಲಿಬಾನ್ ಕೆಂಗಣ್ಣಿಗೆ ಗುರಿಯಾಗಿರುವ ಅಮೆರಿಕದೊಂದಿಗಿನ ನಂಟು ಮತ್ತು ಪಾಕ್ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಮುಂದಿರುವ ಸವಾಲು ದೊಡ್ಡದು.
ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
ಈಗಾಗಲೇ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಹಿಡಿದ ಬಳಿಕ ನೇಪಾಳ, ಶ್ರೀಲಂಕಾ, ಮಾಲ್ಡೀವ್ಸ್ ನಂತಹ ಸಣ್ಣಪುಟ್ಟ ರಾಷ್ಟ್ರಗಳಿಂದ ಹಿಡಿದು ಚೀನಾ, ಪಾಕಿಸ್ತಾನಗಳ ವರೆಗೆ ಬಹುತೇಕ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಹಳಸಿದೆ. ವಿವಿಧ ಸಂದರ್ಭಗಳಲ್ಲಿ ವಿವಿಧ ಕಾರಣಗಳಿಗಾಗಿ ಭಾರತ ಸರ್ಕಾರ ನೀತಿ-ನಡೆಗಳು, ಸುದೀರ್ಘ ಅವಧಿಯ ಆಪ್ತ ರಾಷ್ಟ್ರಗಳನ್ನು ದೂರ ಮಾಡಿವೆ. ಇನ್ನು ಚೀನಾ ಮತ್ತು ಪಾಕಿಸ್ತಾನಗಳೊಂದಿಗಿನ ಸಂಬಂಧವಂತೂ ತೀರಾ ಹದಗೆಟ್ಟಿದೆ. ಅದರಲ್ಲೂ ಮುಖ್ಯವಾಗಿ ಭಾರತ, ಅಮೆರಿಕದೊಂದಿಗೆ ಆಪ್ತವಾದಷ್ಟು ಚೀನಾ ಭಾರತದ ವಿರುದ್ಧ ಸೇನಾ ಮತ್ತು ವ್ಯೂಹಾತ್ಮಕ ಚಟುವಟಿಕೆಗಳ ಮೂಲಕ ಪದೇಪದೆ ಕೆಣಕುತ್ತಲೇ ಇದೆ. ಹೀಗೆ ಸುತ್ತಮುತ್ತಲ ವೈರಿಪಡೆಗಳಿಂದಲೇ ಸುತ್ತುವರಿದ ಸ್ಥಿತಿಯಲ್ಲಿರುವ ಭಾರತಕ್ಕೆ ಆಫ್ಘಾನ್ ನೆಲದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇರುವುದು ಮತ್ತು ಅದು ತನ್ನ ಮಿತ್ರ ರಾಷ್ಟ್ರವಾಗಿರುವುದು ವ್ಯೂಹಾತ್ಮಕವಾಗಿ ತೀರಾ ಅನಿವಾರ್ಯವಾಗಿತ್ತು.
ಆ ಕಾರಣದಿಂದಾಗಿಯೇ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಮತ್ತು ನಾಗರಿಕ ಸರ್ಕಾರದ ಕೈ ಬಲಪಡಿಸಲು ಅಗತ್ಯ ಎಲ್ಲಾ ನೆರವು ನೀಡಿದ್ದಲ್ಲದೆ, ಅಲ್ಲಿನ ಮೂಲಭೂತ ಸೌಕರ್ಯ ಮರು ಸ್ಥಾಪನೆಯ ನಿಟ್ಟಿನಲ್ಲಿ ಭಾರತ ಅಮೆರಿಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೆಗಲು ಕೊಟ್ಟಿತ್ತು. ಭಾರತವೇ ಸಂಪೂರ್ಣವಾಗಿ ನಿರ್ಮಿಸಿಕೊಟ್ಟಿದ್ದ ಅಲ್ಲಿನ ಸಂಸತ್ ಭವನವನ್ನು ಸ್ವತಃ ಪ್ರಧಾನಿ ಮೋದಿಯವರೇ ಉದ್ಘಾಟಿಸಿದ್ದರು ಕೂಡ. ಆದರೆ, ಇದೀಗ ಆ ಸಂಸತ್ ಭವನವೂ ಸೇರಿದಂತೆ ಇಡೀ ದೇಶ ತಾಲಿಬಾನಿಗಳ ಕೈವಶವಾಗಿದೆ.
ಅಫ್ಘನ್ ರಕ್ತಚರಿತೆ ಭಾಗ-2: ತಾಲಿಬಾನ್ ಹುಟ್ಟು, ಅಮೆರಿಕಾ ಮತ್ತು ಶಾಂತಿ ಒಪ್ಪಂದ
ಈ ನಡುವೆ ಮತ್ತೊಂದು ಬಿಕ್ಕಟ್ಟಿನ ಸ್ಥಿತಿ ಭಾರತಕ್ಕೆ ಎದುರಾಗಿದೆ. ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಇರಾನ್ ಮತ್ತಿತರ ಪ್ರಭಾವಿ ರಾಷ್ಟ್ರಗಳು ತಾಲಿಬಾನಿ ಆಡಳಿತಕ್ಕೆ ಬೆಂಬಲ ಘೋಷಿಸಿವೆ. ಆ ಹಿನ್ನೆಲೆಯಲ್ಲಿ ತಾಲಿಬಾನ್ ಆಡಳಿತಕ್ಕೆ ಅಧಿಕೃತ ಮಾನ್ಯತೆ ನೀಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ತೆಗೆದುಕೊಳ್ಳಬೇಕಾದ ತೀರ್ಮಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇಂತಹ ಹೊತ್ತಿನಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಸಿಕ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಭಾರತದ ಮುಂದೆ, ತಾಲಿಬಾನ್ ಆಡಳಿತಕ್ಕೆ ಜಾಗತಿಕ ಮಾನ್ಯತೆ ನೀಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಚರ್ಚಿಸಲು ಭದ್ರತಾ ಮಂಡಳಿಯ ಸಭೆ ಕರೆಯುವ ಕುರಿತ ನಿರ್ಧಾರ ಕೈಗೊಳ್ಳುವ ಮತ್ತು ಅಂತಹ ಸಭೆ ನಡೆದಲ್ಲಿ ಅದರ ಅಧ್ಯಕ್ಷತೆ ವಹಿಸುವ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಭಾರತ, ತಾಲಿಬಾನ್ ಪರ ನಿರ್ಧಾರ ಕೈಗೊಂಡರೂ ಕಷ್ಟ,ಅದರ ವಿರುದ್ಧ ನಿರ್ಧಾರ ಕೈಗೊಂಡರೂ ಕಷ್ಟ ಎಂಬ ಅತ್ತ ಧರಿ, ಇತ್ತ ಪುಲಿ ಎಂಬ ಅಡಕತ್ತರಿಯ ಸ್ಥಿತಿ ಎದುರಿಸಬೇಕಾಗಿದೆ.
ಅಲ್ಲದೆ, ತಾಲಿಬಾನ್ ಮತ್ತು ಆಫ್ಘಾನಿಸ್ತಾನದ ಬೆಳವಣಿಗೆಗಳಿಂದ ಭಾರತವನ್ನು ದೂರವಿಡುವ ಮೂಲಕ, ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡುವ ಮತ್ತು ಭಾರತದ ವಿರುದ್ಧ ತಾಲಿಬಾನಿಗಳನ್ನು ಎತ್ತಿಕಟ್ಟಿ ತಮ್ಮ ಸೇಡು ತೀರಿಸಿಕೊಳ್ಳುವ ತಂತ್ರಗಾರಿಕೆಯನ್ನು ಚೀನಾ ಮತ್ತು ಪಾಕಿಸ್ತಾನ ಮಾಡುತ್ತಿವೆ. ಅದರ ಭಾಗವಾಗಿಯೇ ದೋಹಾದಲ್ಲಿ ನಡೆದ ಮಾತುಕತೆಗಳ ವೇಳೆ, ಚೀನಾ, ಪಾಕಿಸ್ತಾನ, ರಷ್ಯಾ, ಇರಾನ್, ಉಜ್ಬೆಕಿಸ್ತಾನ, ಖಜಕಿಸ್ತಾನಗಳು ಮಹತ್ವದ ಮಾತುಕತೆಗಳ ಭಾಗವಾಗಿದ್ದರೆ, ಆ ಮಾತುಕತೆಗಳಿಂದ ಭಾರತವನ್ನು ಹೊರಗಿಡಲಾಗಿತ್ತು. ಅಷ್ಟೇನೂ ಮಹತ್ವವಲ್ಲದ ಮಾತುಕತೆಗಳಲ್ಲಿ ಭಾರತವನ್ನು ಒಳಗೊಳ್ಳಲಾಗಿತ್ತು. ಜೊತೆಗೆ ಆಫ್ಘನ್ ಕೂಡ ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್(ಆರ್ ಬಿಐ) ಮತ್ತು ಚೀನಾ-ಪಾಕಿಸ್ತಾನ್ ಎಕಾನಾಮಿಕ್ ಕಾರಿಡಾರ್(ಸಿಪಿಇಸಿ) ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಚೀನಾದ ಕಡೆ ಹೆಚ್ಚು ವಾಲತೊಡಗಿತ್ತು.
ಅಂದರೆ; ದಕ್ಷಿಣ ಮತ್ತು ಮಧ್ಯ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಂಟಿನೊಂದಿಗೆ ಆಫ್ಘಾನಿಸ್ತಾನವನ್ನು ನೆಚ್ಚಿಕೊಂಡು ಭಾರತ ಕಟ್ಟಲು ಹೊರಟಿದ್ದ ಚೀನಾ ಮತ್ತು ಪಾಕಿಸ್ತಾನಕ್ಕೆ ಪರ್ಯಾಯವಾದ ವ್ಯೂಹಾತ್ಮಕ ರಕ್ಷಣಾ ಮತ್ತು ವ್ಯವಹಾರಿಕ ಪರ್ಯಾಯಕ್ಕೆ ತಾಲಿಬಾನಿ ಅಧಿಕಾರ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಇದೀಗ ಚೀನಾ-ಪಾಕಿಸ್ತಾನ-ತಾಲಿಬಾನ್ ನಂಟು ಗಟ್ಟಿಯಾಗಿದ್ದು, ಈ ವಲಯದಲ್ಲಿ ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಬಲ್ಯ ಸಾಧಿಸಿದಲ್ಲಿ ಭಾರತದ ಪಾಲಿಗೆ ದೊಡ್ಡ ಬಿಕ್ಕಟ್ಟು ತಲೆದೋರಲಿದೆ. ಅದರಲ್ಲೂ ಆಫ್ಘಾನಿಸ್ತಾನದ ತನ್ನ ಸೇನಾ ನೆಲೆ ಮತ್ತು ವ್ಯವಹಾರಿಕ ಹಿತಾಸಕ್ತಿಗಳು ಕಾರಣಕ್ಕೆ ಈ ವಲಯದಲ್ಲಿ ಸಕ್ರಿಯವಾಗಿದ್ದ ಅಮೆರಿಕ ಇಲ್ಲಿಂದ ಸಂಪೂರ್ಣ ಹಿಂತೆಗೆದುಕೊಂಡು, ಅಲ್ಲಿನ ಪ್ರಸ್ತುತತೆಯನ್ನೇ ಕಳೆದುಕೊಂಡ ಬಳಿಕ, ಭಾರತ ಒಬ್ಬೊಂಟಿಯಾಗಿ ಚೀನಾ-ಪಾಕಿಸ್ತಾನ-ತಾಲಿಬಾನಿಗಳು ಜಂಟಿಯಾಗಿ ಹೂಡುವ ಆಟಗಳನ್ನು ಎದುರಿಸಬೇಕಾಗಲಿದೆ. ಅದು ನಿಜಕ್ಕೂ ಸವಾಲಿನ ಕೆಲಸ.
ಬಂಡುಕೋರರ ತೆಕ್ಕೆಗೆ ಅಫ್ಘನ್: ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ನೂತನ ಅಧ್ಯಕ್ಷ!
ಹೀಗೆ ಸಾವಿರಾರು ಕೋಟಿ ರೂ. ಹೂಡಿಕೆಯ ಹತ್ತಾರು ಯೋಜನೆಗಳು, ನೂರಾರು ಕಾಮಗಾರಿಗಳು, ಸಾಮಾಜಿಕ ಹೂಡಿಕೆಗಳು ಒಂದು ಕಡೆಯಾದರೆ, ವ್ಯವಹಾರಿಕ ಮತ್ತು ರಕ್ಷಣಾ ತಂತ್ರಗಾರಿಕೆಯ ದೃಷ್ಟಿಯಿಂದ ವ್ಯೂಹಾತ್ಮಕವಾಗಿ ಕಟ್ಟಿದ ವ್ಯವಸ್ಥೆಗಳು ಮತ್ತೊಂದು ಕಡೆ. ಆ ಎಲ್ಲಕ್ಕೂ ಈಗ ತಾಲಿಬಾನಿಗಳ ದಿಢೀರ್ ಪ್ರಾಬಲ್ಯ ಆತಂಕ ಒಡ್ಡಿದೆ. ಬಹುತೇಕ ಎಲ್ಲಾ ರೀತಿಯಲ್ಲೂ ಭಾರತದ ದಶಕಗಳ ಶ್ರಮ ಮತ್ತು ತಂತ್ರಗಾರಿಕೆಗಳು ನೀರಲ್ಲಿ ಹೋಮ ಎಂಬಂತಹ ಸ್ಥಿತಿಗೆ ಬಂದು ನಿಂತಿವೆ. ಹಾಗಂತ ತಾಲಿಬಾನಿಗಳ ವಿಷಯದಲ್ಲಿ ಏನನ್ನೂ ದಿಢೀರನೇ ನಿರ್ಧರಿಸುವ, ತತಕ್ಷಣದ ನಿಲುವಿಗೆ ಬರುವ ಸ್ಥಿತಿಯಲ್ಲಿ ಕೂಡ ಭಾರತ ಇಲ್ಲ. ನಿಜಕ್ಕೂ ಇದು ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪವನ್ನು ಗಂಟಲಿಗೆ ಇಳಿಸಿಕೊಂಡ ಸ್ಥಿತಿ.
ಹಾಗಾಗಿಯೇ ಭಾರತ ಅಳೆದೂ ತೂಗಿ ನೋಡುತ್ತಿದೆ. ಈವರೆಗೂ ಅಲ್ಲಿನ ಬೆಳವಣಿಗೆಗಳಿಂದ ಸಂಕಷ್ಟದಲ್ಲಿರುವ ಭಾರತೀಯ ರಾಜತಾಂತ್ರಿಕರು, ಇತರೆ ಭಾರತ ಮೂಲದ ನಾಗರಿಕರ ಪ್ರಾಣ ರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದೆಯೇ ವಿನಃ, ತಾಲಿಬಾನ್ ಆಡಳಿತದ ಬಗ್ಗೆಯಾಗಲೀ, ಪರಾರಿಯಾದ ಅಧ್ಯಕ್ಷ ಅಶ್ರಫ್ ಘನಿ ಬಗ್ಗೆಯಾಗಲೀ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಉಗ್ರ ಸಂಘಟನೆ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಬಗ್ಗೆಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯಾಗಲೀ, ತಾಲಿಬಾನ್ ಆಡಳಿತಕ್ಕೆ ತನ್ನ ಮಾನ್ಯತೆಯ ಬಗ್ಗೆಯಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ದೃಷ್ಟಿಯಲ್ಲಿ ಭಾರತ ಬಹಳ ಎಚ್ಚರಿಕೆ ಹೆಜ್ಜೆಗಳನ್ನು ಇಡುತ್ತಿದೆ. ಆದರೆ, ಅಂತಹ ಎಚ್ಚರಿಕೆಯ ಹೆಜ್ಜೆಗಳು ಕೂಡ ಭವಿಷ್ಯದಲ್ಲಿ ತಾಲಿಬಾನ್ ಮತ್ತು ಭಾರತದ ಸಂಬಂಧದ ವಿಷಯದಲ್ಲಿ ಹೆಚ್ಚೇನೂ ವ್ಯತ್ಯಾಸ ತರಲಾರವು ಎಂಬುದು ಕಟುವಾಸ್ತವ!