ಬೆಳಗಾವಿಯ (Belgaum) ಸುವರ್ಣಸೌಧ ಬಳಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ (Panchamasali reservation) ವೇಳೆ ನಡೆದ ಲಾಠಿಚಾರ್ಜ್ ಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀ (Basava jaya mrityunjaya swamiji) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬೆಳಗಾವಿಯ ಗಾಂಧಿ ಭವನದಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು,ಲಿಂಗಾಯತರ ಮೇಲೆ ಲಾಠಿಚಾರ್ಜ್ ಮಾಡಿಸಿದ ಸಿಎಂ ಸಿದ್ದರಾಮಯ್ಯ (Cm siddaramaiah) ಕ್ಷಮೆ ಕೇಳಬೇಕು ಎಂದು ಘೋಷಣೆ ಕೂಗಲಾಗಿದೆ.ಒಬ್ಬ ಪಂಚಮಸಾಲಿ ಕೋಟಿ ಪಂಚಮಸಾಲಿ, ಲಿಂಗಾಯತ ವಿರೋಧಿ ರಾಜ್ಯ ಸರ್ಕಾರಕ್ಕರ ಧಿಕ್ಕಾರ ಎಂದು ಘೋಷಣೆಗಳನ್ನು ಹೋರಾಟಗಾರರು ಮೊಳಗಿಸಿದ್ದಾರೆ.
ಇದೇ ವೇಳೆ ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ನಾಳೆ ನಮಗೆ ಪ್ರತಿಭಟನೆಗೆ ಅನುಮತಿ ನೀಡಬೇಕು ಇಲ್ಲವಾದ್ರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡ್ತೀವಿ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.