~ಡಾ. ಜೆ ಎಸ್ ಪಾಟೀಲ.
ಬ್ರಿಟೀಷರ ದಾಸ್ಯದಿಂದ ಇಡೀ ಭಾರತ ಅಗಸ್ಟ್ ೧೫ˌ ೧೯೪೭ ರಂದು ವಿಮೋಚನೆಗೊಂಡು ಸಂಭ್ರಮ ಆಚರಿಸುತ್ತಿರುವಾಗ ಕರ್ನಾಟಕˌ ಅಂದಿನ ಆಂಧ್ರಪ್ರದೇಶ (ಇಂದಿನ ತೆಲಂಗಾಣ) ಮತ್ತು ಮಹಾರಾಷ್ಟ್ರದಲ್ಲಿ ಹರಿದು ಹಂಚಿ ಹೋಗಿದ್ದ ಹೈದರಾಬಾದ ಸಂಸ್ಥಾನದ ೧೬ ಜಿಲ್ಲೆಗಳ ನಾಗರಿಕರು ಮಾತ್ರ ನಿಜಾಮನ ಬಲಗೈ ಬಂಟ ಖಾಸಿಂ ರಜ್ವಿ ನೇತೃತ್ವದ ಖಾಸಗಿ ಅರೆ ಸೈನಿಕ ಮಾದರಿ ಮಿಲಿಟಂಟ್ ಸಂಸ್ಥೆಗೆ ಸೇರಿದ್ದ ರಕ್ಕಸ ಹಾಗು ಧರ್ಮಾಂಧ ಕಜಾಕಾರರ ವಿರುದ್ಧ ಧೀರೋದ್ದಾತ ಸೆಣಸಾಟ ನಡೆಸಿದ್ದರು. ನಿಜಾಮ್ ಸಂಸ್ಥಾನದ ಈ ೧೬ ಜಿಲ್ಲೆಗಳಿಗೆ ಸ್ವಾತಂತ್ರ್ಯದ ಭಾಗ್ಯ ಲಭಿಸಿರಲಿಲ್ಲ. ಬ್ರಿಟೀಷರ ದಾಸ್ಯದಿಂದ ಬಿಡುಗಡೆಯಾದರೂ ನಿಜಾಮನಿಂದ ಈ ಭಾಗ ವಿಮೋಚನೆಯಾಗಿರಲಿಲ್ಲ. ಆಗಸ್ಟ್ ೨೯, ೧೯೧೧ ರಲ್ಲಿ ಗದ್ದುಗೆ ಏರಿದ ಕೊನೆಯ ನಿಜಾಮ್ˌ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್ ಮಾತ್ರ ತಾನು ಸ್ವತಂತ್ರ ಸಾರ್ವಭೌಮನೆಂತಲು ಮತ್ತು ಬ್ರಿಟೀಷ್ ಕಾಮನವೆಲ್ತ್ ನ ಸದಸ್ಯ ರಾಷ್ಟ್ರವಾಗಿ ಹೈದರಾಬಾದ್ ಇರುತ್ತದೆ ಎಂದು ಘೋಷಿಸಿಕೊಂಡಿದ್ದ.
ತನ್ನ ಬಲಗೈ ಭಂಟ ಕಾಸಿಂ ರಜ್ವಿಯ ಮಾತು ಕೇಳಿ ೧೧ ನೇ ಜೂನ್ ೧೯೪೭ ರಂದು ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಜ್ಯವಾಗಿ ಉಳಿಸಿಕೊಳ್ಳುವುದಾಗಿ ನಿಜಾಮ ಫರ್ಮಾನು ಹೊರಡಿಸಿದ್ದ. ಇದರಿಂದ ಕೆರಳಿದ ಹೈದರಾಬಾದ್ ಸಂಸ್ಥಾನದ ಜನರು ನಿಜಾಮನ ವಿರುದ್ಧ ಚಳುವಳಿಯನ್ನು ಆರಂಭಿಸಿದರು. ಜನರ ಚಳುವಳಿಯನ್ನು ಹತ್ತಿಕ್ಕುವ ಎಲ್ಲಾ ಬಗೆಯ ಕುತಂತ್ರಗಳನ್ನು ನಿಜಾಮ ಮತ್ತು ಖಾಸಿಮ್ ರಜ್ವಿಯ ಅರೆಸೈನಿಕ ಪಡೆಯ ರಜಾಕಾರರು ಮಾಡಿದರು. ಈ ರಜಾಕಾರರು ‘ಮಜ್ಲೀಸ್ ಐ-ಇಥ್ಥೆಹಾದ್ ಉಲ್ ಮುಸ್ಲಿಮೀನ್’ ಸಂಸ್ಥೆಯ ಸದಸ್ಯರಾಗಿದ್ದರು. ಡೆಕ್ಕನ್ನಿನಲ್ಲಿ ಧರ್ಮಾಧಾರಿತ ಸರ್ವಾಧಿಕಾರಿ ಸರಕಾರ ಸ್ಥಾಪಿಸುವ ಉದ್ದೇಶದಿಂದ ನಿಜಾಮ್ ಸಂಸ್ಥಾನದ ವಿಶ್ರಾಂತ ಅಧಿಕಾರಿ ಮೊಹಮದ್ ನವಾಜಖಾನ್ ೧೯೨೬ ರಲ್ಲಿ ಇಥ್ಥೆಹಾದ್ ಸಂಸ್ಥೆಯನ್ನು ಸ್ಥಾಪಿಸಿದ. ಆನಂತರ ಯಾರಜಂಗ್ ಮತ್ತು ಕಾಸಿಂ ರಜ್ವಿ ಈ ಸಂಸ್ಥೆಯನ್ನು ಮುನ್ನೆಡೆಸಿದರು. ಈ ಸಂಸ್ಥೆಯ ಸದಸ್ಯರನ್ನು ರಜಾಕಾರರು ಅಥವಾ ದೇವರ ಸೇವೆಗೆ ಮೀಸಲಾದ ಸ್ವಯಂ ಸೇವಕ ಎನ್ನಲಾಗುತ್ತಿತ್ತು.

ರಜ್ವಿಯ ಮುಖಂಡತ್ವದಲ್ಲಿ ಇಥ್ಥೆಹಾದ್ ಒಂದು ಪ್ಯಾರಾ ಮಿಲ್ಟ್ರಿ ಫ್ಯಾಸಿಸ್ಟ್ ಸಂಘಟನೆಯಾಗಿ ಮಾರ್ಪಟ್ಟಿತು. ಇದನ್ನು ಇಡೀ ದಖ್ಖನ್ನಿನ ಸಾರ್ವಭೌಮ ಶಕ್ತಿ ಎಂದು ರಜ್ವಿ ಘೋಷಿಸಿಕೊಂಡಿದ್ದ. ಹೈದರಾಬಾದ್ ನ್ನು ಭಾರತ ಒಕ್ಕೂಟದಲ್ಲಿ ವಿಲಿನಗೊಳಿಸುವುದನ್ನು ವಿರೋಧಿಸಿದ ರಜ್ವಿ ಆ ಭಾಗದ ಸ್ವಾತಂತ್ರ ಚಳುವಳಿಗಾರರ ಮೇಲೆ ದಾಳಿ ನಡೆಸಲು ಶಸ್ತ್ರಾಸ್ತ್ರ ಹಾಗು ಮದ್ದುಗುಂಡುಗಳನ್ನು ಪೂರೈಸಿತ್ತಿದ್ದ. ಹೈದರಾಬಾದ ಸಂಸ್ಥಾನದ ಹಳ್ಳಿ ಹಳ್ಳಿಗಳಲ್ಲಿ ರಜಾಕಾರರು ಮುಗ್ಧ ನಾಗರಿಕರು ಹಾಗು ಚಳುವಳಿಗಾರರ ಮೇಲೆ ಹಲ್ಲೆಗಳನ್ನು ಮಾಡುತ್ತಿದ್ದರು. ‘ಅಜಾದ್ ಹೈದರಾಬಾದ್’ ಗಾಗಿ ರಜಾಕಾರರು ಎಲ್ಲಾ ಬಗೆಯ ದುಸ್ಕೃತ್ಯಗಳನ್ನು ಮಾಡುತ್ತಿದ್ದರು. ಇಂತಹ ಅಮಾನುಷ ಕೃತ್ಯಗಳ ವಿರುದ್ಧ ಇಲ್ಲಿನ ಜನರು ದಂಗೆ ಎದ್ದರು. ಅಂದಿನ ಹೈದರಾಬಾದ್ ರಾಜ್ಯದ ಕಾಂಗ್ರೆಸ್ ಮುಖಂಡರು ನಿಜಾಮನ ವಿರುದ್ಧ ಮತ್ತು ರಜಾಕಾರರ ವಿರುದ್ಧ ಬಹುದೊಡ್ಡ ಚಳುವಳಿಯನ್ನು ಹುಟ್ಟುಹಾಕಿದರು. ರಜಾಕಾರರ ಪೈಶಾಚಿಕ ದಾಳಿಯನ್ನು ಸಮರ್ಥವಾಗಿ ಎದುರಿಸಲು ನಿರಾಶ್ರಿತರ ಶಿಬಿರಗಳನ್ನು ತೆರೆದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥೆಯ ದೊಡ್ಡಪ್ಪ ಅಪ್ಪ ಹಾಗು ಭಾಲ್ಕಿಯ ಚೆನ್ನಬಸವ ಪಟ್ಟದೇವರು ನಿರಾಶ್ರಿತ ಜನರಿಗೆ ಅನ್ನ ದಾಸೋಹದ ಸೇವೆ ಮಾಡುತ್ತಿದ್ದರು. ನಿಜಾಮನ ಕಪಿಮುಷ್ಟಿಯಿಂದ ವಿಮೋಚನೆ ಹೊಂದಲು ಚಳುವಳಿಗಾರರಿಗೆ ತರಬೇತಿ ನೀಡಲಾಗುತ್ತಿತ್ತು. ಸರದಾರ್ ಶರಣಗೌಡ ಇನಾಮದಾರ್ˌ ಬಸಪ್ಪ ಸಜ್ಜನಶೆಟ್ಟಿ ˌ ರೇವಣಸಿದ್ದಪ್ಪ ಕಾಂತˌ ವೀರೇಂದ್ರ ಪಾಟೀಲˌ ಚಂದ್ರಶೇಖರ ಪಾಟೀಲˌ ವಿದ್ಯಾದರ ಗುರೂಜಿˌ ವಿಶ್ವನಾಥ ರೆಡ್ಡಿ ಮುದ್ನಾಳˌ ವಿರೂಪಾಕ್ಷಪ್ಪ ಯಕ್ಕಳ್ಳಿ ˌ ಆರ್. ವಿ. ಬಿಡಪ್ˌ ಅಣ್ಣಾರಾವ್ ಗಣಮುಖಿˌ ಮುಂತಾದ ಈ ಭಾಗದ ಪ್ರಮುಖ ನಾಯಕರು ರಜಾಕಾರ ಮತ್ತು ನಿಜಾಮನ ವಿರುದ್ಧ ಹೈದರಾಬಾದ್ ಸಂಸ್ಥಾನದ ವಿಮೋಚನೆಯ ಚಳುವಳಿಯ ಮುಂಚೂಣಿಯಲ್ಲಿದ್ದರು. ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಸಂಘಟಿಸುತ್ತಾ ರಜಾಕಾರರನ್ನು ಎದುರಿಸುವ ಮತ್ತು ನಿಜಾಮನಿಂದ ಮುಕ್ತಿಹೊಂದುವ ಚಳುವಳಿಯ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಭಾರತದ ಒಕ್ಕೂಟದಲ್ಲಿ ಹೈದರಾಬಾದ ಸಂಸ್ಥಾನವನ್ನು ವಿಲಿನಗೊಳಿಸುವುದು ಈ ಜನರ ಕನಸಾಗಿತ್ತು.
ಚಳುವಳಿ ಇನ್ನೇನು ತೀವ್ರತೆ ಪಡೆಯುತ್ತಿದ್ದಂತೆ ಅಂದಿನ ಹೈದರಾಬಾದ್ ಪ್ರಾಂತ್ಯ ಕಾಂಗ್ರೆಸ್ ಅಧ್ಯಕ್ಷ ಹಾಗು ಆರ್ಯ ಸಮಾಜದ ಮುಖಂಡ ಸ್ವಾಮಿ ರಮಾನಂದ ತೀರ್ಥ ಅವರು ಈ ಚಳುಮಳಿಯ ಮುಖಂಡತ್ವವನ್ನು ವಹಿಸಿಕೊಳ್ಳುತ್ತಾರೆ. ರಮಾನಂದರಿಗೆ ಅವರ ಸಮುದಾಯದ ಮಾಧ್ಯಮಗಳು ಕೊಡುತ್ತಿದ್ದ ಪ್ರಚಾರದ ಭರಾಟೆಯಲ್ಲಿ ಆರಂಭದಿಂದ ಹಳ್ಳಿಹಳ್ಳಿಗಳಲ್ಲಿ ಚಳುವಳಿ ಸಂಘಟಿಸಿದ ಸ್ಥಳೀಯ ನಾಯಕರು ನಗಣ್ಯರಾದರು. ರಮಾನಂದರು ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ಮಾಡುವುದಕ್ಕಿಂತ ಹೆಚ್ಚಾಗಿ ಆರ್ಯ ಸಮಾಜದ ಸಂಘಟನೆಯ ಕಾರ್ಯ ಮಾಡಿದ್ದೆ ಹೆಚ್ಚು. ನಿಜಾಮನ ಅಧಿಕಾರದ ಹಪಾಹಪಿ ಮತ್ತು ಮೊಂಡುತನವು ಆಗ ಅಲ್ಲೊಂದು ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದು ನಿಜ. ಆದರೆ ಅದನ್ನು ಹಿಂದೂ-ಮುಸ್ಲಿಮ್ ಸಂಘರ್ಷ ಎನ್ನುವ ರೀತಿಯಲ್ಲಿ ಆರ್ಯ ಸಮಾಜದ ಹಿಂದುತ್ವವಾದಿಗಳು ಬಿಂಬಿಸುವಲ್ಲಿ ನಿರತರಾದರು. ನಿಜಾಮನಿಂದ ಮುಕ್ತಿ ಹೊಂದುವುದಕ್ಕಿಂತ ಈ ಸಂದರ್ಭವನ್ನು ಹಿಂದೂಗಳ ಸಂಘಟನೆಗೆ ಬಳಸಿಕೊಳ್ಳುವಲ್ಲಿ ಆರ್ಯ ಸಮಾಜ ಹೆಚ್ಚು ಕ್ರೀಯಾಶೀಲವಾಗಿತ್ತು.

ಹೈದರಾಬಾದ ಸಂಸ್ಥಾನದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿದ್ದ ಲಿಂಗಾಯತರು ಮತ್ತು ಅವರು ಆಚರಿಸುತ್ತಿದ್ದ ಅವೈದಿಕ ಸಂಸ್ಕೃತಿ ಸ್ವಾಮಿ ರಮಾನಂದರ ನೇತೃತ್ವದ ಆರ್ಯ ಸಮಾಜದ ನಾಯಕರ ಕಣ್ಣು ಕೆಂಪಾಗಿಸಿತ್ತು. ೧೨ ನೇ ಶತಮಾನದಿಂದ ಲಿಂಗಾಯತ ಸಂಸ್ಕೃತಿಯನ್ನು ನಾಶಮಾಡಲು ವೈದಿಕ ಶಕ್ತಿಗಳು ಸತತವಾಗಿ ಪ್ರಯತ್ನ ಪಟ್ಟಿದ್ದರೂ ಅವೈದಿಕ ಲಿಂಗಾಯತ ಸಂಸ್ಕೃತಿ ಅಘಾದವಾಗಿ ಬೆಳೆದು ನಿಂತಿದ್ದು ವೈದಿಕರಿಗೆ ನುಂಗಲಾರದ ತುತ್ತಾಗಿತ್ತು. ಅಂದಿನ ನಿಜಾಮ ಆಡಳಿತದಲ್ಲಿ ಬಹುತೇಕ ಮಾಲಿ ಪಾಟೀಲˌ ಪೋಲಿಸ್ ಪಾಟೀಲ ಮತ್ತು ಕೆಲವೆಡೆಗಳಲ್ಲಿ ಶಾನುಭೋಗರಾಗಿ ಲಿಂಗಾಯತರೇ ಅಂದಿನ ಆಡಳಿತದ ನಿರ್ವಾಹಕರಾಗಿದ್ದರೂ ಕೂಡ ನಿಜಾಮನ ಆಡಳಿತವು ಹಿಂದೂ ವಿರೊಧಿಯಾಗಿತ್ತು ಎಂದು ಬಿಂಬಿಸುವಲ್ಲಿ ಆರ್ಯ ಸಮಾಜದ ನಾಯಕರು ತೀವ್ರವಾಗಿ ಪ್ರಯತ್ನಿಸಿದರು. ನಿಜಾಮನ ವಿರುದ್ಧದ ಸ್ವಾತಂತ್ರ ಚಳುವಳಿಯನ್ನು ಆರ್ಯ ಸಮಾಜ ತನ್ನ ಸಂಘಟನೆಗೆ ಬಳಸಿಕೊಂಡಿತು. ಲಿಂಗಾಯತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಹುನ್ನಾರಗಳು ಆರ್ಯ ಸಮಾಜದವರು ವ್ಯವಸ್ತಿತವಾಗಿ ಮಾಡಿದರು.
ಹೈದರಾಬಾದ ಸಂಸ್ಥಾನದಿಂದ ವಿಮೋಚನೆಗೊಳ್ಳುವ ಮತ್ತು ಭಾರತದಲ್ಲಿ ವಿಲಿನಗೊಳ್ಳುವ ಈ ಮಹತ್ವದ ಚಳುವಳಿಯನ್ನು ಸಂಘಟಿಸಿದವರು ಬಹುತೇಕ ಲಿಂಗಾಯತ ನಾಯಕರೆ ಆಗಿದ್ದರು ಹಾಗು ಆ ಚಳುವಳಿಗೆ ಬೇಕಾಗಿದ್ದ ಎಲ್ಲಾ ಬಗೆಯ ಸಂಪನ್ಮೂಲಗಳನ್ನು ಕೂಡ ಲಿಂಗಾಯತರೆ ಕ್ರೂಢೀಕರಿಸಿದ್ದರು. ಆದರೆˌ ದುರಾದೃಷ್ಟವೆಂಬಂತೆ ಸ್ವಾಮಿ ರಮಾನಂದ ತೀರ್ಥರು ಈ ಚಳುವಳಿಯ ನಾಯಕರೆನ್ನಿಸಿಕೊಂಡರು ಮತ್ತು ವಿಮೋಚನೆಯ ಪಿತಾಮಹರೆಂದು ಬಿಂಬಿಸಲ್ಪಟ್ಟರು. ಇದಷ್ಟೆ ಆಗಿದ್ದರೆ ಲಿಂಗಾಯತರಿಗೆ ಯಾವುದೇ ಮತ್ಸರವಿರಲಿಲ್ಲ. ಆದರೆ ರಮಾನಂದ ತೀರ್ಥರ ನೇತೃತ್ವದ ಆರ್ಯ ಸಮಾಜ ಲಿಂಗಾಯತ ಸಂಸ್ಕೃತಿಯ ನಾಶಕ್ಕೆ ಮಾಡಿದ ಪ್ರಯತ್ನವು ಆ ಭಾಗದ ಲಿಂಗಾಯತ ನಾಯಕರಲ್ಲಿ ಆತಂಕವನ್ನು ಹುಟ್ಟಿಸಿತ್ತು. ಲಿಂಗಾಯತರು ಪ್ರತಿದಿನ ತಮ್ಮ ಹಣೆಯ ಮೇಲೆ ವಿಭೂತಿ ಧರಿಸುವುದನ್ನು ˌ ಮತ್ತು ಕೊರಳಲ್ಲಿ ಇಷ್ಟಲಿಂಗ ಧರಿಸುವುದನ್ನು ಆರ್ಯ ಸಮಾಜದವರು ತೀವ್ರವಾಗಿ ಆಕ್ಷೇಪಿಸುತ್ತಿದ್ದರು. ಅದಕ್ಕಾಗಿ ಲಿಂಗಾಯತ ನಾಯಕರ ಅಸ್ಮಿತೆಗೆ ಪೆಟ್ಟಾಗಿ ಅವರಲ್ಲಿ ದೊಡ್ಡ ಮಟ್ಟದ ಅಸಮಾಧಾನ ಹೊಗೆಯಾಡಿತ್ತು.
ಆರ್ಯ ಸಮಾಜದ ಈ ನಡೆಯಿಂದ ನಿಜಾಮ್ ವಿರುದ್ಧದ ಚಳುವಳಿಯಲ್ಲಿ ಭಿನ್ನಮತ ತಲೆದೋರಿತು. ಲಿಂಗಾಯತರು ತಮ್ಮ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಆ ಭಾಗದಲ್ಲಿ ವಿಭೂತಿ ಧಾರಣೆ ಮತ್ತು ಇಷ್ಟಲಿಂಗ ಧಾರಣೆಯ ಅಭಿಯಾನವನ್ನೆ ಆರಂಭಿಸಬೇಕಾಯಿತು. ಹೈದರಾಬಾದ್ ವಿಮೋಚನಾ ಚಳುವಳಿಯನ್ನು ಪ್ರೋತ್ಸಾಹಿಸಿ ಭಾಷಣ ಮಾಡಲು ಚಳುವಳಿಯ ಮುಂಚೂಣಿ ಲಿಂಗಾಯತ ನಾಯಕರುˌ ಕರ್ನಾಟಕದ ಗಾಂಧಿ ಹಾಗು ರಾಷ್ಟ್ರಧರ್ಮ ದೃಷ್ಟಾರರೆಂದು ಖ್ಯಾತರಾಗಿದ್ದ ಹರ್ಡೇಕರ್ ಮಂಜಪ್ಪನವರನ್ನು ಕಲಬುರಗಿ ಮುಂತಾದ ಜಿಲ್ಲೆಗಳಿಗೆ ಕರೆಸಿದರು. ಅವೈದಿಕ ಲಿಂಗಾಯತ ಸಂಸ್ಕೃತಿಯನ್ನು ರಕ್ಷಿಸಿಕೊಂಡೆ ನಿಜಾಮನ ವಿರುದ್ಧ ಚಳುವಳಿ ಕಟ್ಟುವ ಲಿಂಗಾಯತ ಚಳುವಳಿಗಾರರಿಗೆ ಹರ್ಡೇಕರ್ ಮಂಜಪ್ಪನವರ ಲಿಂಗಾಯತ ರಾಷ್ಟ್ರೀಯವಾದದ ಭಾಷಣ ಬಲವಾದ ಪ್ರೇರಣೆ ನೀಡಿತು. ಲಿಂಗಾಯತ ಚಳುವಳಿಗಾರರ ಈ ಗಟ್ಟಿ ನಿರ್ಧಾರದಿಂದ ಆರ್ಯ ಸಮಾಜದ ನಾಯಕರು ಮೆತ್ತಗಾದರು ಮತ್ತು ಲಿಂಗಾಯತ ಸಂಸ್ಕೃತಿ ನಾಶಗೊಳಿಸುವ ತಮ್ಮ ಹುನ್ನಾರದಿಂದ ಹಿಂದೆ ಸರಿದರು.
ಭಾರತ ಒಕ್ಕೂಟದ ಇತಿಹಾಸದಲ್ಲಿ ವಿವಿಧ ಸಂಸ್ಥಾನಗಳ ವಿಲೀನ ಪ್ರಕ್ರೀಯೆಯಲ್ಲಿ ಪೋಲೀಸ್ ಕಾರ್ಯಾಚರಣೆಯು ಒಂದು ಐತಿಹಾಸಿಕ ಘಟನೆಯಾಗಿದೆ. ಅಂದಿನ ಉಪಪ್ರಧಾನಿ ಹಾಗು ಗೃಹ ಸಚಿವರಾಗಿದ್ದ ಸರದಾರ್ ಪಟೇಲರು ೧೩-೦೯-೧೯೪೮ ರಂದು ತೆಗೆದುಕೊಂಡು ಕಠಿಣ ನಿರ್ಧಾರದಿಂದ ನಿಜಾಮ ಸಂಸ್ಥಾನದ ಮೇಲೆ ಪೋಲೀಸ್ ಆಕ್ಷನ್ ಘೋಷಿಸಿ ಅಂದೇ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಯಿತು. ೧೭ನೇ ಸೆಪ್ಟೆಂಬರ್ ೧೯೪೮ ರಂದು ನಿಜಾಮ್ ನೇಮಿಸಿದ್ದ ಲಿಯಾಕ್ ಅಲಿ ಸಚಿವ ಸಂಪುಟವು ತನ್ನ ರಾಜೀನಾಮೆ ನೀಡಿತು. ಸೆಪ್ಟಂಬರ್ ೧೮ˌ ೧೯೪೮ರ ಸಂಜೆ ಐದು ಗಂಟೆಗೆ ಹೈದರಾಬಾದ್ ಪಡೆಗಳ ದಂಡನಾಯಕ ಜನರಲ್ ಎಲ್ ಎಡ್ರೋಸ್ ಅವರು ಭಾರತೀಯ ಪಡೆಗಳಿಗೆ ಶರಣಾದರು. ಸಂಸ್ಥಾನವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಒಪ್ಪಂದಕ್ಕೆ ನಿಜಾಮನು ಅಂದೇ ಸಹಿ ಹಾಕಿದನು. ಅದರ ಮಾರನೇ ದಿನ ಕಾಸಿಂ ರಜ್ವಿಯ ಬಂಧನವಾಯಿತು. ಸೆಪ್ಟೆಂಬರ್ ೧೮ ರಂದು ತಾಂತ್ರಿಕವಾಗಿ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ಅಧಿಕೃತವಾಗಿ ವಿಲೀನಗೊಂಡಿತು.
ಅದರ ಸ್ಮರಣಾರ್ಥವಾಗಿ ಹೈದರಾಬಾದ ಕರ್ನಾಟಕ ವಿಮೋಚನಾ ದಿನವನ್ನು ಆಚರಿಸಬೇಕೆಂಬ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ೧೯೯೬ ರಿಂದ ಕಲಬುರಗಿ ವಿಭಾಗದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೧೮ ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಆಚರಣೆ ಆರಂಭಗೊಂಡಿತು. ಎರಡು-ಮೂರು ವರ್ಷಗಳ ನಂತರ ಅದನ್ನು ಸೆಪ್ಟಂಬರ್ ೧೮ ರಂದು ಆಚರಿಸುವಂತೆ ಸರಕಾರಿ ಆದೇಶವಾಯಿತು. ಈ ದಿನಾಂಕ ತಿರುಚುವಿಕೆಯ ಹಿಂದೆ ಯಾವ ಕಾಣದ ಕೈಗಳಿದ್ದವೊ ಏನೊ. ಸೆಪ್ಟಂಬರ್ ೧೮ ರ ಬದಲಿಗೆ ೧೭ ರಂದು ವಿಮೋಚನಾ ದಿನ ಆಚರಿಸಬೇಕೆಂದು ಅಂದಿನ ಜೆ ಎಚ್ ಪಟೇಲ್ ಸರಕಾರ ಅಧಿಕೃತ ಆದೇಶ ಹೊರಡಿಸಿತು. ಅದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದರೂ ಯಾವ ಉಪಯೋನವೂ ಆಗಲಿಲ್ಲ. ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟದಲ್ಲಿ ವಿಲೀನವಾಗುವ ಒಡಂಬಡಿಕೆಗೆ ಅಧಿಕೃತವಾಗಿ ಸಹಿ ಹಾಕಿದ್ದು ಸೆಪ್ಟಂಬರ್ ೧೮, ೧೯೪೮ ರಂದು. ಆದರೆ ಸೆಪ್ಟಂಬರ್ ೧೮ ಅನ್ನು ಬದಲಾಯಿಸಿ ೧೭ ರಂದು ಆಚರಿಸುವಂತೆ ಮಾಡಿದ ಶಕ್ತಿಗಳು ಯಾವುವು ಎನ್ನುವುದು ನಿಘೂಡ ಸಂಗತಿಯೇನಲ್ಲ.

ಅಂದಿನ ಚಳುವಳಿಯ ಮುಂಚೂಣಿ ಮುಖಂಡರು ಹಾಗು ಆರ್ಯ ಸಮಾಜದ ನಾಯಕರಾಗಿದ್ದ ಸ್ವಾಮಿ ರಮಾನಂದ ತೀರ್ಥರನ್ನು ಅಂದಿನ ನಿಜಾಮ ಸರಕಾರ ಬಂಧನಕ್ಕೊಳಪಡಿಸಿತ್ತು. ಸೆಪ್ಟಂಬರ್ ೧೭ˌ ೧೯೪೮ ರಂದು ನಿಜಾಮ ನೇಮಿಸಿದ ಸಂಪುಟವು ರಾಜಿನಾಮೆ ನೀಡಿದ ದಿನವೆ ರಮಾನಂದ ತೀರ್ಥರು ಬಿಡುಗಡೆಯಾದರು. ಸಂಸ್ಥಾನದ ವಿಲೀನ ಹಾಗು ರಮಾನಂದ ತೀರ್ಥರ ಬಿಡುಗಡೆಯ ವಿಜಯೋತ್ಸವವನ್ನು ಸೆಪ್ಟಂಬರ್ ೧೭ ರಂದು ಆರ್ಯ ಸಮಾಜದ ನಾಯಕರು ಉಳಿದ ಚಳುವಳಿಯ ನಾಯಕರೊಂದಿಗೆ ಸೇರಿ ಆಚರಿಸಿದರು. ಆರ್ಯ ಸಮಾಜದವರಿಗೆ ಸಂಸ್ಥಾನದ ವಿಲೀನಕ್ಕಿಂತ ರಮಾನಂದ ತೀರ್ಥರ ಬಿಡುಗಡೆಯ ದಿನವು ಬಹಳ ಮಹತ್ವದ್ದಾಗಿತ್ತು. ಸೆಪ್ಟಂಬರ್ ೧೮ ರಂದು ಆಚರಿಸುತ್ತಿದ್ದ ವಿಮೋಚನಾ ದಿನಾಚರಣೆಯನ್ನು ಸೆಪ್ಟಂಬರ್ ೧೭ ರಂದು ಆಚರಿಸುವಂತೆ ಅಂದಿನ ಜೆ ಎಚ್ ಪಟೇಲ್ ಸರಕಾರದಿಂದ ಆದೇಶ ಮಾಡಿಸುವಲ್ಲಿ ಆ ಭಾಗದ ಕೆವಲು ಕಾಂಗ್ರೆಸ್ ಮುಖಂಡರು ರಾಜ್ಯದ ಇನ್ನಿತರ ನಾಯಕರೊಂದಿಗೆ ಸೇರಿ ಪ್ರಯತ್ನಿಸಿ ಯಶಸ್ವಿಯಾದರು. ದಿನಾಂಕ ಬದಲಾಯಿಸಿದ್ದರ ಹಿಂದಿನ ಉದ್ದೇಶ ನೀವೆಲ್ಲ ಊಹಿಸಬಹುದಾಗಿದೆ.
ಕಲಬುರಗಿ ಭಾಗದ ಅಂದಿನ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ದಿಗಂಬರರಾವ್ ಕಳ್ಮಣಕರ್ ಮತ್ತು ರಾಜ್ಯದ ಇನ್ನೊಬ್ಬ ನಾಯಕ ಹಾರನಹಳ್ಳಿ ರಾಮಸ್ವಾಮಿಯವರು ಈ ವಿಷಯದಲ್ಲಿ ವಿಶೇಷ ಕಾಳಜಿಯನ್ನು ವಹಿಸಿ ಆ ವಿಭಾಗದ ಉಳಿದ ಕೆಲವು ನಾಯಕರ ಮನವೊಲಿಸಿ ವಿಮೋಚನಾ ದಿನಾಚರಣೆ ಸೆಪ್ಟಂಬರ್ ೧೮ ರ ಬದಲಿಗೆ ೧೭ ರಂದು ಆಚರಿವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೈದರಾಬಾದ್ ಕರ್ನಾಟಕ ವಿಮೋಚನೆಗೆ ರಕ್ತ ಹರಿಸಿದ ಅನೇಕ ಹುತಾತ್ಮರು ಮತ್ತು ಚಳುವಳಿಯನ್ನು ಸಂಘಟಿಸಿದ ಸರದಾರ್ ಶರಣಗೌಡ ಇನಾಮದಾರ್ ಮುಂತಾದವರು ಹೆನ್ನೆಲೆಗೆ ಸರಿದು ಆರ್ಯ ಸಮಾಜದ ಮುಖಂಡ ಸ್ವಾಮಿ ರಮಾನಂದ ತೀರ್ಥ ಅವರು ವಿಮೋಚನಾ ದಿನದ ಪಿತಾಮಹರಾಗಿ ಬಿಂಬಿಸಲ್ಪಟ್ಟರು. ಮಹಾರಾಷ್ಟ್ರದ ನಾಂದೇಡ್ ನಲ್ಲಿರುವ ಮರಾಠವಾಡಾ ವಿಶ್ವವಿದ್ಯಾಲಯಕ್ಕೆ ಅವರ ಹೆಸರಿಡಲಾಯಿತು. ಲಿಂಗಾಯತ ಹಾಗು ಬಹುಜನ ಸಮಾಜಕ್ಕೆ ಸೇರಿದ ಉಳಿದ ಹೋರಾಟಗಾರರ ಹೆಸರುಗಳು ನಗಣ್ಯವಾದವು.
೧೯೨೯ ರಲ್ಲಿ ಪೂರ್ವೋತ್ತರ ರಾಜ್ಯಗಳಾದ ಬಂಗಾಳ ಮತ್ತು ಆಸ್ಸಾಮ್ ಏಕೀಕರಣಕ್ಕಾಗಿ ಅಂದಿನ ಬ್ರಿಟೀಷ್ ಸರಕಾರ ನೇಮಿಸಿದ್ದ ಸೈಮನ್ ಆಯೋಗದ ಎದುರಿಗೆ ಬೇಡಿಕೆ ಇಟ್ಟು ಯಶಸ್ವಿಯಾಗಿದ್ದವು. ಅದೇ ಸಂದರ್ಭದಲ್ಲಿ ಸೈಮನ್ ಆಯೋಗದ ಎದುರಿಗೆ ಕರ್ನಾಟಕದ ಏಕೀಕರಣಕ್ಕೆ ಮನವಿ ಸಲ್ಲಿಸಲು ಬ್ರಾಹ್ಮಣೇತರ ಚಳುವಳಿಯ ನಾಯಕರಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಆಲೂರು ವೆಂಕಟರಾಯರಿಗೆ ಸಲಹೆ ನೀಡಿದ್ದರು. ಆದರೆ ಸರ್ ಸಾಹೇಬರ ಸಲಹೆಯನ್ನು ವೆಂಕಟರಾಯರು ನಿರಾಕರಿದರು. ೧೯೫೨-೫೩ ರಲ್ಲಿ ಅಂದಿನ ಧಾರವಾಡ ಜಿಲ್ಲೆಯ ಅದರಗುಂಚಿಯಲ್ಲಿ ಶಂಕರಗೌಡರು ಏಕೀಕರಣಕ್ಕಾಗಿ ೨೩ ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹ ಆಚರಿಸಿದರು. ವೆಂಕಟರಾಯರು ಶಂಕರಗೌಡರನ್ನು ಬೆಂಬಲಿಸಲಿಲ್ಲ. ೧೯೫೬ ರಲ್ಲಿ ರಾಜ್ಯ ಏಕೀಕರಣಗೊಂಡಿತು. ಮಾಮೂಲಿನಂತೆ ಆಲೂರು ವೆಂಕಟರಾಯರು ಕನ್ನಡದ ಕುಲಪುರೋಹಿತ ಗೌರವಕ್ಕೆ ಪಾತ್ರರಾದರು. ಈ ಸಂಗತಿಯು ಪಾಟೀಲ ಪುಟ್ಟಪ್ಪನವರು ತಮ್ಮ ‘ಸರ್ ಸಾಹೇಬರು’ ಕೃತಿಯಲ್ಲಿ ದಾಖಲಿಸಿದ್ದಾರೆ.

ಹೈದರಾಬಾದ್ ಸಂಸ್ಥಾನ ಭಾರತ ಒಕ್ಕೂಟದಲ್ಲಿ ೧೮ ನೇ ಸೆಷ್ಟಂಬರ್ˌ ೧೯೪೮ ರಂದು ಅಧಿಕೃತವಾಗಿ ವಿಲೀನಗೊಂಡಿದ್ದರೂ ಅದನ್ನು ರಮಾನಂದತೀರ್ಥರ ಬಿಡುಗಡೆಯ ದಿನವಾದ ಸೆಪ್ಟಂಬರ್ ೧೭ ರಂದು ಆಚರಿಸುವಂತೆ ಸರಕಾರಿ ಆದೇಶ ತರಲಾಯಿತು. ಸಾಲದಕ್ಕೆ ವಿಮೋಚನೆ ಮುಖ್ಯ ರೂವಾರಿಗಳಾದ್ದ ಲಿಂಗಾಯತ ನಾಯಕರನ್ನು ಕಡೆಗಣಿಸಿ ರಮಾನಂದತೀರ್ಥರನ್ನು ಮೆರೆಸಲಾಯಿತು. ದೇಶದ ಸ್ವಾತಂತ್ರ ˌ ಏಕೀಕರಣ ಮುಂತಾದ ಎಲ್ಲದರಲ್ಲೂ ಲಿಂಗಾಯತರು ಮತ್ತು ಇತರ ಬಹುಜನ ವರ್ಗದ ಕೊಡುಗೆ ಅನುಪಮವಾಗಿದ್ದಾಗ್ಯೂ ಅವರನ್ನು ಇತಿಹಾಸದ ಪುಟಗಳಲ್ಲಿ ಕಡೆಗಣಿಸಲಾಯಿತು. ಬೆಳಗಾವಿ ಜಿಲ್ಲೆಯ ಸಂಪಗಾವಿಯ ಚೆನ್ನಪ್ಪ ವಾಲಿಯವರು ವೀರ ಸ್ವಾತಂತ್ರ ಸೇನಾನಿಯಾಗಿದ್ದರೂ ಬೆಳಗಾವಿ ಜಿಲ್ಲೆಯ ಸ್ವತಂತ್ರ ಹೋರಾಟಗಾರರು ಪುಸ್ತಕದಲ್ಲಿ ಅವರನ್ನು ಅಲಕ್ಷಿಸಲಾಯಿತು. ಲಿಂಗಾಯತರು ಮತ್ತು ಇತರ ಬಹುಜನರು ಕಟ್ಟಿದ ಚಳುವಳಿಗಳನ್ನು ಹೈಜಾಕ್ ಮಾಡಿ ಇತಿಹಾಸದಲ್ಲಿ ಕೆಲವರು ಮಹತ್ವದ ಸ್ಥಾನಗಳನ್ನು ಪಡೆದದ್ದು ಬೇಸರದ ಸಂಗತಿಯಾಗಿದೆ.
~ಡಾ. ಜೆ ಎಸ್ ಪಾಟೀಲ.