ಬಿಜೆಪಿಯನ್ನು ಶಿಸ್ತುಬದ್ಧ ಪಕ್ಷ. ಸಂಘ ಪರಿವಾರದಲ್ಲಿ ಶಿಸ್ತು ಕಲಿಸಿರುತ್ತಾರೆ. ಪ್ರತಿಯೊಬ್ಬ ನಾಯಕನು ಕಾರ್ಯಕರ್ತನ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಬಿಜೆಪಿಯಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎನ್ನುವ ಮಾತು ಸದಾಕಾಲ ಚರ್ಚೆಯಲ್ಲಿರುವ ಮಾತು. ಆದರೆ ಚೈತ್ರಾ ಕುಂದಾಪುರ ಬಂಧನದ ಬಳಿಕ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿದ್ದು, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು ಅನ್ನೋ ಬಗ್ಗೆ ಸರ್ವೇ ಮಾಡುವುದು ಮಾಮೂಲು. ಆದರೆ ಸರ್ವೇ ಮಾಡುವವರನ್ನೇ ಹಣ ಕೊಟ್ಟು ಕೊಂಡುಕೊಂಡಿದ್ರಾ..? ಅನ್ನೋ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಇದೂ ಒಂದು ಬಿಜೆಪಿ ಸೋಲಿಗೆ ಕಾರಣ ಆಗಿರಬಹುದು ಎಂದು ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುವಂತಾಗಿದೆ.

ಸೋಷಿಯಲ್ ಮೀಡಿಯಾ ವಿಭಾಗದವರ ಮೂಲಕ ಪ್ರಭಾವ..!
ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ತನಿಖೆ ಶುರುವಾದ ಬಳಿಕ ಒಂದೊಂದು ವಿಚಾರ ಬೆಳಕಿಗೆ ಬರುತ್ತಿದ್ದು, ಗೋವಿಂದ ಬಾಬು ಪೂಜಾರಿ ಸ್ನೇಹಿತ ಎಂದು ಬಿಜೆಪಿ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಶೃತಿ ಎಂಬುವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಎಲೆಕ್ಷನ್ ಸರ್ವೇ ನಡೆಸುವವರನ್ನು ಸಂಪರ್ಕ ಮಾಡಿ ಗೋವಿಂದ ಬಾಬು ಪರ ಸರ್ವೇ ಮಾಡಿಸಲು ಪ್ರಯತ್ನ ಮಾಡಲಾಗಿದೆ ಎನ್ನುವುದು ಬಯಲಾಗಿದೆ. ಸರ್ವೇ ನಡೆಸುವ ಟೀಮ್ ಬಗ್ಗೆ ಹೇಳಲ್ಲ, ನೀವು ನನ್ನನ್ನ ಕಣ್ಮುಚ್ಚಿ ನಂಬಬಹುದು ಎಂದಿದ್ದಾರೆ ಶೃತಿ. ಸರ್ವೇ ಟೀಮ್‌ನಲ್ಲಿ ಬಿಜೆಪಿ ಹೈಕಮಾಂಡ್‌ಗೆ ಹತ್ತಿರ ಇರೋರು ಇರ್ತಾರಾ? ಮೇಡಂ ಎಂದು ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಆಕೆ ಹೌದು, ಅದಕ್ಕೆ ನಾನು ನಿಮಗೆ ಪುಷ್ ಮಾಡ್ತಿರೋದು. ಇದೇ ಟೀಂ ಬಿಜೆಪಿಗೂ ಸರ್ವೇ ಮಾಡೋದು. ಆ ಟೀಂನಲ್ಲಿರೋ ಕೆಲವರನ್ನ ನಾನು ಹೈಜಾಕ್ ಮಾಡಿದೀನಿ. ಅಂದ್ರೆ, ನನ್ ಫ್ರೆಂಡ್ಸ್ ಇದಾರೆ, ಅವರ ಜೊತೆ ನಾನು ಮಾತನಾಡ್ತೀನಿ. ಇದ್ರಲ್ಲಿ ನಂದೇನೂ ಇಲ್ಲ. ಮತ್ತೊಮ್ಮೆ ಸರ್ವೇ ಮಾಡೋದೂ ಅವ್ರೇ ಎಂದಿದ್ದಾರೆ. ಇದರ ಜೊತೆಗೆ ಕೊನೆಯಲ್ಲಿ ಎಷ್ಟು ಕೊಡೋಕ್ಕೆ ಹೇಳಿದಾರೆ ಸರ್ ? ಸರ್, ಏನಾದ್ರೂ ಹೇಳಿದ್ರಾ ನಿಮಗೆ ಎಂದು ಶೃತಿ ಪ್ರಶ್ನಿಸಿದ್ದಾರೆ. ಅದಕ್ಕೆ 3 ಕೊಡೋಕ್ಕೆ ಹೇಳಿದ್ರು ಅಂದಿದ್ದಾರೆ. ಅದು ಅಡ್ವಾನ್ಸ್ ಅಂತ ಸರ್ ಹೇಳಿದ್ರು, ಹಾಫ್ ಆಫ್ದ ಪೇಮೆಂಟ್ ಎಂದಿದ್ದಾರೆ. ಅಲ್ಲಿಗೆ ಸರ್ವೇ ಟೀಂ ಡೀಲ್ ಆಗಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

ಕೊಪ್ಪಳದಲ್ಲೂ ಇದೇ ರೀತಿ BJP ಹೆಸರಲ್ಲಿ ವಂಚನೆ ಆಗಿದೆ..!
ಕೊಪ್ಪಳದಲ್ಲೂ ಚೈತ್ರಾ ಕುಂದಾಪುರ ಟೀಂ ಮಾಡಿರುವ ವಂಚನೆ ರೀತಿಯಲ್ಲೇ ಮೋಸ ಮಾಡಲಾಗಿದೆ. ಕೊಪ್ಪಳದ ಬಿಜೆಪಿ ಮುಖಂಡನಿಗೆ ವಂಚನೆ ಆಗಿದ್ದು, ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಜಿ. ತಿಮ್ಮಾರಡ್ಡಿ ಗಿಲ್ಲೆಸಗೂರು ಎಂಬುವವರಿಗೆ ವಂಚನೆ ಮಾಡಲಾಗಿದೆ. ತಿಮ್ಮಾರಡ್ಡಿ ಪತ್ನಿ ಗಾಯತ್ರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಪ್ರಯತ್ನ ಮಾಡಿದ್ದರು. ಕನಕಗಿರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರಡ್ಡಿ ಅವರನ್ನು ಸಂಪರ್ಕಿಸಿದ ವಂಚಕರು, ಅಮಿತ್ ಷಾ ನಮಗೆ ಗೊತ್ತು ಎಂದು ಹೇಳಿಕೊಂಡ ವಿಶಾಲ್ ನಾಗ ತಂಡ 21 ಲಕ್ಷ ಪಡೆದಿದ್ದರು ಎನ್ನಲಾಗಿದೆ. ಬೆಂಗಳೂರಿನ ಸ್ನೇಹಿತರಾದ ಜೀತು ಎಂಬುವವರ ಮೂಲಕ ದೆಹಲಿಯ ವಿಶಾಲ್ ನಾಗ್ ಪರಿಚಯ ಆಯ್ತು. ಆತ ತಾನು ಬಿಜೆಪಿ ಸೆಂಟ್ರಲ್ ಸರ್ವೇ ಚೀಫ್ ಎಂದು ಪರಿಚಯ ಮಾಡಿಕೊಂಡು ವಂಚಿಸಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ಹೆಸರು ಹೇಳಿಕೊಂಡು ಇಷ್ಟೊಂದು ದೂರು, ಬಿಜೆಪಿ ಮೌನ..!?
ಚೈತ್ರಾ ಕುಂದಾಪುರ ಡೀಲಿಂಗ್ನಲ್ಲೂ ಅಂದಿನ ಸಚಿವರಾಗಿದ್ದ ಸುನಿಲ್ ಕುಮಾರ್ ಹೆಸರು ಉಲ್ಲೇಖ ಆಗಿರುವ ಆಡಿಯೋ ವೈರಲ್ ಆಗಿದೆ. ಇನ್ನು ಕೊಪ್ಪಳದಲ್ಲೂ ಹೈಕಮಾಂಡ್ ನಾಯಕರ ಹೆಸರು ಹೇಳಿಕೊಂಡು ವಂಚನೆ ಮಾಡಲಾಗಿದೆ. ಅಂದರೆ ಬಿಜೆಪಿ ನಾಯಕರೇ ಟಿಕೆಟ್ ಆಕಾಂಕ್ಷಿಗಳನ್ನು ಸಂಪರ್ಕ ಮಾಡಿ ಹಣ ಮಾಡುವ ದಂಧೆ ಮಾಡಿದ್ದಾರೆ ಎನ್ನುವ ಅರ್ಥ ಬರುತ್ತಿದೆ. ಕೇವಲ ಬಾಯಿ ಮಾತಿನಲ್ಲಿ ಬಿಜೆಪಿಯಲ್ಲಿ ಸೀಟ್ಗಳ ಮಾರಾಟ ಮಾಡಲ್ಲ ಎನ್ನುವ ಹೇಳಿಕೆ ಮಾತ್ರ ಸಾಕಾಗುವುದಿಲ್ಲ. ಒಂದು ವೇಳೆ ಬಿಜೆಪಿ ಹೆಸರಿನಲ್ಲಿ ನಡೆದಿರುವ ಡೀಲ್ಗಳ ಬಗ್ಗೆ ವಿಶೇಷ ತನಿಖೆ ಮಾಡಬೇಕು. ಆ ಬಗ್ಗೆ ಅಮಾಯಕರಿಂದ ಹಣ ವಂಚಿಸಿದವರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು ಎಂದು ಸ್ವತಃ ಬಿಜೆಪಿ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಬೇಕು. ಇಲ್ಲದಿದ್ರೆ ಬಿಜೆಪಿ ಟಿಕೆಟ್ ಕೊಡಿಸುವ ನಾಟಕ ಮಾಡ ಹಣ ಮಾಡಿಕೊಂಡಿದೆ ಎನ್ನುವ ಆರೋಪ ಶತಸಿದ್ಧ. ಇನ್ನು ಇದೇ ರೀತಿ ಎಷ್ಟು ಕಡೆ ಅನ್ಯಾಯವಾಗಿದ್ಯೋ..? ಇದೇ ಕಾರಣಕ್ಕೆ ಬಿಜೆಪಿ ಸೋಲನ್ನಪ್ಪುವಂತಾಯ್ತಾ ಅನ್ನೋ ಅನುಮಾನ ಜನರದ್ದಾಗಿದೆ.
ಕೃಷ್ಣಮಣಿ










