ಬೆಂಗಳೂರು : ರಾಜ್ಯದಲ್ಲಿ ನೂತನ ಸರ್ಕಾರ ರಚನೆಯ ಸಿದ್ಧತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬುಧವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಸಂಪುಟ ರಚನೆಯ ಕಸರತ್ತು ಮುಂದುವರೆದಿದೆ.

ಹೀಗಾಗಿ ಸಚಿವಾಕಾಂಕ್ಷಿ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ನಮಗೂ ಸಂಪುಟದಲ್ಲಿ ಸ್ಥಾನ ನೀಡುವಂತೆ ಪಕ್ಷದ ವರಿಷ್ಠ ನಾಯಕರ ಬಳಿ ಬೇಡಿಕೆ ಇಡುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರು ತಮ್ಮ ಸಂಪುಟದ ವಿಚಾರದಲ್ಲಿ ಚೌಕಟ್ಟು ರೂಪಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಹಿರಿಯ, ಅನುಭವಿ ಹಾಗೂ ಯುವಕರಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ. ಜಾತಿವಾರು, ಸಮುದಾಯವಾರು ಸಮಾನತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಇದನ್ನೂ ಓದಿ : ಚೆಲುವಣ್ಣ ಇನ್ಮುಂದೆ ದೇವೇಗೌಡರ ಮನೆ ಸುದ್ದಿ ಮಾತಾಡಿದ್ರೆ ನಾಲಿಗೆ ಕಟ್ ಮಾಡ್ತೀವಿ..! : ಸುರೇಶ್ ಗೌಡ ವಾರ್ನಿಂಗ್..
ಸದ್ಯ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಂಪುಟ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಸಚಿವರಾಗುವ ಶಾಸಕರು ಯಾರು ಯಾರು ಎನ್ನುವುದೇ ಕುತೂಹಲ ಮೂಡಿಸಿದೆ. ಇನ್ನೊಂದೆಡೆ ಮಂತ್ರಿ ಸ್ಥಾನಕ್ಕೆ ಶಾಸಕರು ಭರ್ಜರಿ ಲಾಬಿ ನಡೆಸಿದ್ದಾರೆ. ಸಂಪುಟದಲ್ಲಿ ಇಬ್ಬರೂ ನಾಯಕರು ತಮ್ಮ ಪ್ರಾಬಲ್ಯ ಮೆರೆಯುವ ದಿಶೆಯಲ್ಲಿ ಆಪ್ತರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ.
ನಿಕಟಪೂರ್ವ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ತಮ್ಮದೇ ಆದ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿ ವರಿಷ್ಠರ ಕೈಗೆ ನೀಡಿದ್ದಾರೆ. ಮುಖ್ಯವಾಗಿ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಭೈರತಿ ಸುರೇಶ್, ಬಸವರಾಜ್ ರಾಯರೆಡ್ಡಿ, ಎ.ಎಸ್. ಪೊನ್ನಣ್ಣ, ಪುಟ್ಟರಂಗಶೆಟ್ಟಿ, ಕೆ. ವೆಂಕಟೇಶ್, ಡಾ. ಹೆಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್, ಡಾ.ಜಿ. ಪರಮೇಶ್ವರ್, ಕೃಷ್ಣ ಭೈರೇಗೌಡ, ಸತೀಶ್ ಜಾರಕಿಹೊಳಿ, ಯು.ಟಿ. ಖಾದರ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್ ಹಾಗೂ ಎಂ.ಬಿ. ಪಾಟೀಲ್ ಅಥವಾ ಈಶ್ವರ್ ಖಂಡ್ರೆ ಹೆಸರುಗಳಿರುವ ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಿಶೀಲಿಸಲಿದ್ದಾರೆ.
ಇನ್ನೂ ಪಟ್ಟಿಯನ್ನು ಅವಲೋಕಿಸಿ ಪಕ್ಷದ ಮಾನದಂಡಗಳ ಪ್ರಕಾರ ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಅಸಮಾನತೆಯನ್ನು ಗಮನಿಸಿ ಅಂತಿಮಗೊಳಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತೆಯಾದರೆ ಇಂದು ಮಧ್ಯರಾತ್ರಿಯೇ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ಕೂಡ ತಮ್ಮದೇ ಆದ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹೈಕಮಾಂಡ್ ನಾಯಕರ ಕೈಗೆ ನೀಡಿದ್ದಾರೆ. ಅದನ್ನೂ ಅವಲೋಕಿಸಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ತೀರ್ಮಾನಿಸಲಿದ್ದಾರೆ ಎಂಬುವುದು ಮೂಲಗಳ ಮಾಹಿತಿಯಾಗಿದೆ.






