ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ

ಬಿಬಿಎಂಪಿ ಬೆಡ್‌ ಬುಕಿಂಗ್‌ ಹಗರಣಕ್ಕೆ ಕೋಮು ಆಯಾಮ ನೀಡಿದ ತೇಜಸ್ವಿ ಸೂರ್ಯನನ್ನ ಶಾಸಕ ಝಮೀರ್‌ ಅಹ್ಮದ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋವಿಡ್ ವಾರ್ ರೂಮಿನಲ್ಲಿ 205 ಜನ ಕೆಲಸ ಮಾಡ್ತಾರೆ, ಅವರಲ್ಲಿ 17 ಮುಸ್ಲಿಮರ ಹೆಸರುಗಳನ್ನು ಮಾತ್ರ ಎತ್ತಿಹೇಳಿ, ಇಡೀ ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ಸೋಂಕಿತರ ಮಾರಣ ಹೋಮವನ್ನೇ ಬೇರೆಡೆಗೆ ತಿರುಗಿಸಲು ಯತ್ನಿಸಿದ್ದೀರಲ್ಲ..ಛೀ, ಎಂಥಾ ಹೀನ ಮನಸ್ಥಿತಿ ನಿಮ್ಮದು ಎಂದು ಝಮೀರ್‌ ಅಹ್ಮದ್‌ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೊರೊನಾ ಇಂದ ಮೃತಪಟ್ಟ 558 ಶವಗಳನ್ನು ನನ್ನದೇ ಟೀಮಿನ ಮುಸ್ಲಿಂ ಯುವಕರ ತಂಡ ಮೃತರ ಧಾರ್ಮಿಕ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸಿತ್ತು. ಆಗ ನೀವೆಲ್ಲಿದ್ದಿರಿ? ಹುಟ್ಟು ಸಾವಿಗೆ ಧರ್ಮವಿಲ್ಲ ಅಂತಾರೆ, ಅದರಲ್ಲೂ ನಿಮ್ಮ ಹೊಲಸು ರಾಜಕೀಯ ಮಾಡುತ್ತೀರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂದೆ, ತಾಯಿ ಸತ್ತಾಗ ಸ್ವಂತ ಮಕ್ಕಳೂ ಶವಸಂಸ್ಕಾರ ಮಾಡಲು ಮುಂದೆ ಬಂದಿಲ್ಲ, ಆಗ ಮಗನಾಗಿ, ತಮ್ಮನಾಗಿ, ಅಣ್ಣನಾಗಿ ಮುಂದೆ ನಿಂತು ಶವಸಂಸ್ಕಾರ ಮಾಡಿದವರು ನೀವೇ ಹೇಳುವ ಪಂಚರ್ ಹಾಕುವ ಮಂದಿ. ಪಂಚರ್ ಹಾಕುವವರಲ್ಲಿ ಇರುವ ಮನುಷ್ಯತ್ವ ನಿಮ್ಮಲ್ಲಿ ಇಲ್ಲವಲ್ಲ. ಎಲ್ಲರ ಗಾಡಿಯೂ ಒಂದಿನ ಪಂಚರ್ ಆಗುತ್ತೆ, ಹಾಗೆ ನಿಮ್ಮ ಗಾಡಿಯೂ ಆಗಬಹುದು. ಮತ್ತೆ ನಿಮ್ಮ ಗಾಡಿ ಮುಂದೆ ಸಾಗಬೇಕು ಅಂದ್ರೆ ಅದೇ ಪಂಚರ್ ಹಾಕುವವನ ಅಂಗಡಿಗೇ ಹೋಗಬೇಕು. ಹೊಟ್ಟೆಪಾಡಿಗೆ ಮಾಡುವ ಉದ್ಯೋಗವನ್ನು ಹಂಗಿಸಿದಾಗಲೇ ನಿಮ್ಮ ಮನಸ್ಥಿತಿ ಎಂಥದ್ದು ಎಂಬ ಅರಿವು ನಮಗಾಗಿತ್ತು ಎಂದು ಝಮೀರ್‌ ಹೇಳಿದ್ದಾರೆ.

ಸೌದಿ ಅರೇಬಿಯಾ, ಖತಾರ್, ಯು.ಎ.ಈ ಮುಂತಾದ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಆಕ್ಸಿಜನ್ ಕಳುಹಿಸಿಕೊಟ್ಟಿವೆ. ಆ ದೇಶಗಳೇನಾದ್ರೂ ನಾವು ಕಳುಹಿಸಿದ ಆಕ್ಸಿಜನ್ ಅನ್ನು ಭಾರತದ ಮುಸ್ಲೀಮರಿಗೆ ಮಾತ್ರ ಕೊಡಿ ಎಂದು ಹೇಳಿದ್ದಾವಾ? ಜಗತ್ತು ಭಾರತವನ್ನು ಮಾನವೀಯತೆಯ ಕಣ್ಣಿನಿಂದ ನೋಡ್ತಿದೆ, ನೀವ್ಯಾಕೆ ಭಾರತೀಯರನ್ನೇ ದ್ವೇಷಿಸುತ್ತೀರ? ಯಾರೂ ನಾವು ಇದೇ ಧರ್ಮದಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿ ಹುಟ್ಟುವುದಿಲ್ಲ. ಧರ್ಮ ನಮ್ಮ ವೈಯಕ್ತಿಕ ಆಚರಣೆಗೆ ಸೀಮಿತ. ರಾಜಕೀಯ ಮತ್ತು ಧರ್ಮವನ್ನು ಒಟ್ಟು ಮಾಡಬೇಡಿ.  ಸಾಧ್ಯವಾದ್ರೆ ಸತ್ಯ, ಧರ್ಮದ ಹಾದಿಯಲ್ಲಿ ರಾಜಕೀಯ ಮಾಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ ಎಂದು ಝಮೀರ್‌ ಅಹ್ಮದ್‌ ಆಗ್ರಹಿಸಿದ್ದಾರೆ.

ನಿಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಯನಗರ, ಚಿಕ್ಕಪೇಟೆ, ಬಸವನಗುಡಿಯ ಜನ ಆಕ್ಸಿಜನ್, ರೆಮ್ಡಿಸಿವರ್ ಗಾಗಿ ನನಗೆ ಕರೆ ಮಾಡುತ್ತಾರೆ. ನಾನು ಅವರಿಗೆ ಸಹಾಯ ಮಾಡ್ತಾ ಇದ್ದೀನಿ. ನೀವು ಅವರ ಕರೆ ಸ್ವೀಕರಿಸಲ್ಲವಂತೆ ಯಾಕೆ? ಹೊರಗೆ ಬಂದ್ರೆ ಕೊರೊನಾ ಬರುತ್ತೆ ಎಂದು ಭಯವೇ ಎಂದು ಅವರು ಪ್ರಶ್ನಿಸಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...