ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರು ಕರ್ನಾಟಕದವರೇ. ಶ್ರೀನಿವಾಸ್ ಬಿ.ವಿ. ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರು. ತೇಜಸ್ವಿ ಸೂರ್ಯ ಅಖಿಲ ಭಾರತ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು. ಶ್ರೀನಿವಾಸ್ ಅವರಿಗೆ ರಾಜಕೀಯ ಹಿನ್ನೆಲೆ ಇಲ್ಲ. ಕ್ರಿಕೆಟ್ ಆಟಗಾರನೆಂಬ‌ ಮಹದಾಸೆ ಹೊತ್ತು ಭದ್ರಾವತಿಯಿಂದ ಬೆಂಗಳೂರಿಗೆ ಬಂದರು.‌ ಸಣ್ಣ ಅಪಘಾತದಿಂದ ಕ್ರಿಕೆಟಿಗನಾಗುವ ದೊಡ್ಡ ಕನಸು ಚೂರಾದ ಬಳಿಕ ಕಾಂಗ್ರೆಸ್ ಸೇರಿದರು.‌ ಇನ್ನು ತೇಜಸ್ವಿ ಸೂರ್ಯ, ಇವರ ಚಿಕ್ಕಪ್ಪ ರವಿಸುಬ್ರಹ್ಮಣ್ಯ ಬಸವನಗುಡಿಯ ಶಾಸಕರು.‌ ಎಬಿವಿಪಿ ಮತ್ತು ಆರ್ ಎಸ್ ಎಸ್ ಹಿನ್ನೆಲೆ ಇದೆ. ಅದೃಷ್ಟ ಕುಲಾಯಿಸಿದರಿಂದಾಗಿ ಸಂಸದರೂ ಆದರು.‌ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೃಪಾಶೀರ್ವಾದಿಂದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಇಂಥ ಹಿನ್ನಲೆಯಿಂದ ಕರ್ನಾಟಕದಿಂದ ದೆಹಲಿ ತಲುಪಿರುವ ಈ ಯುವ ನಾಯಕರ ಕಾರ್ಯವೈಖರಿಯನ್ನು ತುಲನೆ ಮಾಡಲು ಇದು ಸಕಾಲ.‌ ಅದರಲ್ಲೂ ದೇಶಕ್ಕೆ ಕರೋನಾ ಎಂಬ ಕ್ರೂರಿ ಅಪ್ಪಳಿಸಿದ ಬಳಿಕ ಈ ಯುವ ನಾಯಕರು ಹೇಗೆ ಸ್ಪಂದಿಸಿದ್ದಾರೆ ಎಂಬುದಕ್ಕೆ ಕನ್ನಡಿ‌ ಹಿಡಿಯಲೇಬೇಕು.

ಇಚ್ಚಾಶಕ್ತಿಯೊಂದರ ಹೊರತು ಶ್ರೀನಿವಾಸ್ ಬಳಿ ಏನೂ ಇಲ್ಲ

ಶ್ರೀನಿವಾಸ್ ಕರೋನಾ ಕಷ್ಟಕಾಲದಲ್ಲಿ ನಿಜ‌ ಅರ್ಥದ ಆಪತ್ಪಬಾಂಧವನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕಿದ್ದಂತೆ ಲಾಕ್ಡೌನ್ ಘೋಷಿಸಿದ್ದರಿಂದ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯೊಂದರಲ್ಲೇ ಲಕ್ಷಾಂತರ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದು ಗೊತ್ತೆ ಇದೆ. ಆಗ ಎಲ್ಲರಿಗೂ ಮಿಗಿಲಾಗಿ ಅವರನ್ನು ಪೊರೆದದ್ದು ಶ್ರೀನಿವಾಸ್. ದೆಹಲಿಯ ಯುವ ಕಾಂಗ್ರೆಸ್ ಕಚೇರಿಯನ್ನು ಸಂಪೂರ್ಣವಾಗಿ ಅಡುಗೆ ಮನೆಯನ್ನಾಗಿ ಪರಿವರ್ತಿಸಿದರು. ತಿಂಗಳುಗಟ್ಟಲೆ ಹಸಿದವರಿಗೆ ಅನ್ನ-ನೀರು ಕೊಟ್ಟರು.

ದೆಹಲಿಯಲ್ಲಿ ಮಾತ್ರವಲ್ಲ, ದೇಶದ ಬೇರೆ ಬೇರೆ ಭಾಗಗಳಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ‘ಸೇವೆ’ಗೆ ಹಚ್ಚಿದರು‌. ಯಾರು, ಎಷ್ಟೇ ಹೊತ್ತಿನಲ್ಲಿ, ಎಂಥದೇ ಸಹಾಯ ಕೇಳಿದರೂ ಇಲ್ಲ ಎನ್ನದೆ ಸಹಕಾರ ನೀಡಿದರು. ಕರೋನಾ ಕಾಲದಲ್ಲಿ ಮಾತ್ರವಲ್ಲ, ಅಸ್ಸಾ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳಗಳಲ್ಲಿ ಪ್ರವಾಹ ಬಂದ ಮರುದಿನವೇ ಶ್ರೀನಿವಾಸ್ ಆಯಾ ರಾಜ್ಯಗಳಲ್ಲಿ ‌ಪ್ರತ್ಯಕ್ಷರಾದರು. ಸಂತ್ರಸ್ತರಿಗೆ ಊಟ, ವಸತಿ, ಔಷಧಿ ಮತ್ತಿತರ ಸೌಕರ್ಯ ಕಲ್ಪಿಸಿದರು. ದೆಹಲಿ ಚಳಿಯಲ್ಲಿ ರಾತ್ರೋರಾತ್ರಿ ಹೋಗಿ ರಗ್ಗು, ಬೆಡ್ ಶೀಟ್, ಮೊಫ್ಲರ್, ಬ್ರೆಡ್, ಬಿಸ್ಕೆಟ್ ಕೊಟ್ಟು ಬಂದರು.

ಈ ನಡುವೆ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಶುರುವಾಯಿತು. ಶ್ರೀನಿವಾಸ್ ದೆಹಲಿಯ ಮೂರು ಗಡಿಗಳಲ್ಲಿ ‘ಲಂಗರ್’ ಹಾಕಿದರು. ಅಲ್ಲಿ ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ರೊಟ್ಟಿಗಳನ್ನು ಮಾಡುವ ಮಿಷಿನ್ ಗಳನ್ನು ಪ್ರತಿಷ್ಠಾಪಿಸಿದರು‌. ನಾಲ್ಕೈದು ತಿಂಗಳು ಪ್ರತಿದಿನ ಕನಿಷ್ಟ 25 ಸಾವಿರ ಜನಕ್ಕೆ ಊಟ ನೀಡಿದರು. ಇಷ್ಟೆಲ್ಲಾ ಮಾಡುವಾಗ ಅವರು ಯುವ ಕಾಂಗ್ರೆಸ್ ಬ್ಯಾನರ್ ಕೂಡ ಹಾಕಿರಲಿಲ್ಲ.

ಇಂಥ ಶ್ರೀನಿವಾಸ್ ಅವರನ್ನು ರಾಷ್ಟ್ರೀಯ ಮಟ್ಟದ ಪತ್ರಕರ್ತರಿಗೆ ಯಾರೂ ಪರಿಚಯಿಸಿಲ್ಲ. ಇವರ ಕೆಲಸ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕರೋನಾದಂತಹ ಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ಫೋನ್ ಕರೆಗಳು ಬರುವುದು ಸಹಜ. ದೆಹಲಿ ಪತ್ರಕರ್ತರಿಗೆ ಬಂದ ಅಂಥ ಮುಕ್ಕಾಲುಭಾಗ ಕರೆಗಳು ಶ್ರೀನಿವಾಸ್ ಕಡೆಗೆ ಡೈವೋರ್ಟ್ ಆಗುತ್ತಿವೆ. ಶ್ರೀನಿವಾಸ್ ಸ್ಪಂಧಿಸುತ್ತಿದ್ದಾರೆ. ಇವರು ಸ್ಪಂಧಿಸುತ್ತಾರೆ ಎಂಬ ಕಾರಣಕ್ಕೆ ಕರೆಗಳ ಸಂಖ್ಯೆ ಜಾಸ್ತಿಯಾಗುತ್ತಿವೆ. ಶ್ರೀನಿವಾಸ್ ಈಗ ಯುವ ಕಾಂಗ್ರೆಸ್ ಕಚೇರಿಯಲ್ಲಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಿದ್ದಾರೆ. ಆಮ್ಲಜನಕ, ಬೆಡ್, ರೆಮ್ಡೆಸಿವಿರ್, ಐಸಿಯು, ವೆಂಟಿಲೇಟರ್, ಮಾತ್ರೆ-ಮತ್ತೊಂದು, ಕಡೆಗೆ ದುಡ್ಡಿಗಾಗಿ ಕರೆಗಳು ಬರುತ್ತಲೇ ಇವೆ. ಶ್ರೀನಿವಾಸ್ ಸ್ಪಂದಿಸುತ್ತಲೇ ಇದ್ದಾರೆ.  

ಶ್ರೀನಿವಾಸ್ ಅವರ ಕಾಂಗ್ರೆಸ್ ಪಕ್ಷ ಈಗ ಅಧಿಕಾರದಲ್ಲಿ ಇಲ್ಲ. ಶ್ರೀನಿವಾಸ್ ಬಳಿಯೂ ಯಾವ ಅಧಿಕಾರವೂ ಇಲ್ಲ. ಆದರೆ ಶ್ರೀನಿವಾಸ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಅವರದೇಯಾದ ‘ನೆಟ್ ವರ್ಕ್’ ಸೃಷ್ಟಿಸಿಕೊಂಡಿದ್ದಾರೆ. ಶ್ರೀನಿವಾಸ್ ಹೇಳಿದ ತಕ್ಷಣ ಎಂಥದೇ ಕೆಲಸಕ್ಕೂ ಹೆಗಲು ಕೊಡುವ ಶಿಷ್ಯಪಡೆಯೇ ರೂಪುಗೊಂಡಿದೆ. ಅಂಥ ನೆಟ್ ವರ್ಕ್ ಬಳಸಿಕೊಂಡು ಶ್ರೀನಿವಾಸ್ ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾರೆ.‌ ಅದಕ್ಕಿಂತ ಹೆಚ್ಚಾಗಿ ಶ್ರೀನಿವಾಸ್ ಅವರಿಗೆ ‘ಕೆಲಸ ಮಾಡಬೇಕು, ಕಷ್ಟಕ್ಕೆ ಸ್ಪಂದಿಸಬೇಕು’ ಎಂಬ ಇಚ್ಛಾಶಕ್ತಿ ಇದೆ. ಅದರಿಂದಾಗಿ ಶ್ರೀನಿವಾಸ್ ಮುಖದಲ್ಲಿ ದಣಿವು ಕಂಡುಬಂದಿಲ್ಲ. 

ಶ್ರೀನಿವಾಸ್ ವ್ಯಕ್ತಿತ್ವವನ್ನು ಓರೆಗಚ್ಚಲು ಇದೆಲ್ಲಕ್ಕಿಂತಲೂ ಮಿಗಿಲಾದ ಉದಾಹರಣೆಯೊಂದಿದೆ. ಇತ್ತೀಚೆಗೆ ಭಾರತದಲ್ಲಿರುವ ನ್ಯೂಜಿಲ್ಯಾಂಡ್ ರಾಯಭಾರಿ ಕಚೇರಿ  ಅಧಿಕಾರಿಗಳು ಆಮ್ಲಜನಕಕ್ಕಾಗಿ ಶ್ರೀನಿವಾಸ್ ಬಳಿ ಮನವಿ ಮಾಡಿಕೊಂಡಿದ್ದರು. ಶ್ರೀನಿವಾಸ್ ಆಮ್ಲಜನಕವನ್ನು ಪೂರೈಸಿದ್ದಾರೆ. ಸಾಮಾನ್ಯವಾಗಿ ರಾಯಭಾರ ಕಚೇರಿಗಳು ನೇರವಾಗಿ ಕೇಂದ್ರ ಸರ್ಕಾರಕ್ಕೆ, ವಿದೇಶಾಂಗ ಇಲಾಖೆಗೆ ಕೇಳುತ್ತವೆ. ಅಂಥ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುತ್ತದೆ. ಆದರೆ ನ್ಯೂಜಿಲ್ಯಾಂಡ್ ರಾಯಭಾರ ಕಚೇರಿ ಶ್ರೀನಿವಾಸ್ ಅವರ ಬಳಿ ಆಮ್ಲಜನಕ ಕೇಳಿದೆ ಎಂದರೆ ಅದಕ್ಕೆ ‌ಮೊದಲು ಅದು ಕೇಂದ್ರ ಸರ್ಕಾರವನ್ನು ಕೇಳಿದೆ, ಕೇಂದ್ರ  ಸರ್ಕಾರ ಮಾಡಲಾಗದ ಕೆಲಸವನ್ನು ಶ್ರೀನಿವಾಸ್ ಮಾಡಿದ್ದಾರೆ ಎಂದೇ ಅರ್ಥವಲ್ಲವೇ?

ಎಲ್ಲವೂ ಇದ್ದರೂ ಏನನ್ನೂ ಮಾಡದ ತೇಜಸ್ವಿ ಸೂರ್ಯ

ಇನ್ನೊಂದೆಡೆ ತೇಜಸ್ವಿ ಸೂರ್ಯ ಸ್ವತಃ ಸಂಸದರು. ಎಬಿವಿಪಿ, ಆರ್ ಎಸ್ ಎಸ್ ಸೇರಿದಂತೆ ಹಲವು ಸಂಘಟನೆಗಳು ಅವರ ಬೆನ್ನಿಗಿವೆ. ಮಾಧ್ಯಮಗಳು ಕೊಂಡಾಡುತ್ತಿವೆ. ತೇಜಸ್ವಿ ಸೂರ್ಯ ಅವರ ಇಂಗ್ಲಿಷ್ ಭಾಷಾ ಸಾಮರ್ಥ್ಯ ಕೂಡ ಚೆನ್ನಾಗಿದೆ. ಆದರೂ ಕರೋನಾ ಕಗ್ಗತ್ತಲ ಕಾಲದಲ್ಲಿ ಎಷ್ಟು ಜನಕ್ಕೆ ಬೆಳಕಾಗಿದ್ದಾರೆ ಎಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಲಭಿಸುತ್ತದೆ. ಶ್ರೀನಿವಾಸ್ ರೀತಿ ಬೀದಿಯಲ್ಲಿದ್ದವರಿಗೆ ಅವರ ಜಾತಿ, ಧರ್ಮ, ಊರು ಕೇಳದೆ ಸಹಾತ ಮಾಡುವುದು ಬೇಡ. ತಮ್ಮ ಪಕ್ಷಕ್ಕೆ ಓಟಾಕಿದವರಿಗೆ, ತಮ್ಮ ಸಂಘಟನೆಗಳನ್ನು ಬೆಳೆಸಿದವರಿಗಾದರೂ ಸಹಾಯ ಮಾಡಿದ್ದಾರೆಯೇ? ಅಂಥದೊಂದು ವರದಿ ಕೂಡ ಕಂಡುಬರಲಿಲ್ಲ.

ಕಷ್ಟ ಬರುವುದೇ ತಾನೇನು ಅಂತಾ ಸಾಬೀತು ಮಾಡಲು. ತೇಜಸ್ವಿ ಸೂರ್ಯ ಅಂಥದೊಂದು ಅವಕಾಶವನ್ನು ‌ಕಳೆದುಕೊಂಡರು. ಶ್ರೀನಿವಾಸ್ ರೀತಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದರೆ 10 ಪಟ್ಟು ಹೆಚ್ಚು ಕೆಲಸ ಮಾಡಬಹುದಿತ್ತು.‌ ಕೇಂದ್ರ ಸರ್ಕಾರ ಇವರದೇ ಇದ್ದ ಕಾರಣಕ್ಕೆ ಎಲ್ಲಾ ಕಡೆ ಓಡಾಡಿ, ಪಾದರಸದಂತೆ ಕೆಲಸ ಮಾಡುವ ಅವಕಾಶ ಇತ್ತು. ಬಹುತೇಕ ರಾಜ್ಯ ಸರ್ಕಾರಗಳು ಬಿಜೆಪಿ ಪಕ್ಷದವೇ ಆಗಿರುವ ಕಾರಣಕ್ಕೆ ಎಲ್ಲಾ ಕಡೆ ಕೆಂಪು ಹಾಸಿನ ಸ್ವಾಗತ ಸಿಗುತ್ತಿತ್ತು. ಜನಮಾನಸದಲ್ಲಿ ಮಾತ್ರವಲ್ಲ, ಪಕ್ಷದಲ್ಲೂ ಅತ್ಯುನ್ನತ ಸ್ಥಾನ ಹುಡುಕಿಕೊಂಡು ಬರುತ್ತಿತ್ತು. ಆದರೆ ಅದ್ಯಾಕೋ ಏನೋ ತೇಜಸ್ವಿ ಸೂರ್ಯ ಮನಸ್ಸು ಮಾಡಲೇ ಇಲ್ಲ. ಸಂಸದ ಸ್ಥಾನವನ್ನು ‘ಎಂಜಾಯ್’ ಮಾಡುವುದರಲ್ಲಿ ನಿರತರಾಗಿಬಿಟ್ಟರು.

ತೇಜಸ್ವಿ ಸೂರ್ಯ ಈ ಕಷ್ಟ ಕಾಲದಲ್ಲಿ ಕಾಣಿಸಿಕೊಂಡಿದ್ದು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣಾ ಪ್ರಚಾರದ ವೇಳೆ. ಅಲ್ಲೂ ಸುದ್ದಿಯಾಗಲೆಂದು ವಿವಾದದ ಹಿಂದೆ ಬಿದ್ದರು. ಪಶ್ಚಿಮ ಬಂಗಾಳದಲ್ಲಿ ಗಲಭೆ ಎಬ್ಬಿಸಲು ಹೋಗಿ ಮುಖಭಂಗ ಅನುಭವಿಸಿದರು. ತಮಿಳುನಾಡಿನಲ್ಲಿ ಪರಿಯಾರ್ ಬಗ್ಗೆ ಕೀಳಾಗಿ ಮಾತನಾಡಿ ‘ತಮ್ಮ ವ್ಯಕ್ತಿತ್ವ’ವನ್ನು ಮತ್ತೊಮ್ಮೆ ಬೆತ್ತಲೆಗೊಳಿಸಿಕೊಂಡರು.‌ ಈಗ ತೇಜಸ್ವಿ ಸೂರ್ಯ ‘ಬೆಡ್ ಬ್ಲಾಕಿಂಗ್’ ಧಂಧೆಗೆ ಕೋಮು ಮಸಿ ಬಳಿಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಬಿಎಂಪಿ ವಾರ್ ರೂಂನ 205 ಸಿಬ್ಬಂದಿಗಳ ಪೈಕಿ 17 ಮಂದಿ ಮುಸ್ಲೀಮರ ಹೆಸರನ್ನಷ್ಟೇ ಓದಿ ಹೇಳಿ ‘ಕೋಮು ವೈರಸ್’ ಎಂಬ ಕುಖ್ಯಾತಿ ಗಳಿಸಿಕೊಂಡಿದ್ದಾರೆ. ಬಿಜೆಪಿ ಶಾಸಕರೇ ಬೆಡ್ ಬ್ಲಾಕಿಂಗ್ ಧಂದೆಯ ಕಿಂಗ್ ಪಿನ್ ಎಂಬ ಸಂಗತಿಗಳು ಬೆಳಕಿಗೆ ಬರುತ್ತಿದ್ದಂತೆ ಸೂರ್ಯ ಸಂಪೂರ್ಣವಾಗಿ ಮುಳುಗಿಹೋಗಿದ್ದಾರೆ. ಒಂದೆಡೆ ಯಾವ ಅಧಿಕಾರವೂ ಇಲ್ಲದೆ ಶ್ರೀನಿವಾಸ್ ಭೇಷ್ ಎನಿಸಿಕೊಳ್ಳುತ್ತಿದ್ದರೆ ‘ಎಲ್ಲವೂ ಇರುವ’ ತೇಜಸ್ವಿ ಸೂರ್ಯ ‘ಡೈಪರ್’, ‘ಚೈಲ್ಡಿಸ್ಟ್’ ಎಂಬ ವಿಶೇಷಣಗಳನ್ನು ಅವಗಾಹಿಸಿಕೊಳ್ಳುತ್ತಿದ್ದಾರೆ. ನೀವೇ ನಿರ್ಧರಿಸಿ, ಆಪತ್ಬಾಂಧವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಇಬ್ಬರಲ್ಲಿ ಯಾರು ನಿಜವಾದ ಜನನಾಯಕ?

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...