ಬೆಂಗಳೂರು:
ನಗರದಲ್ಲಿ ಸಿನಿಮಾವನ್ನೇ ಹೋಲಿಸುವಂತಹ ಬ್ಯಾಂಕ್ ಚಿನ್ನಾಭರಣ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಕಿರಣ್ ಎಂಬಾತ, ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣವನ್ನು ಹಂತ ಹಂತವಾಗಿ ಕದ್ದಿರುವುದು ಬಹಿರಂಗವಾಗಿದೆ.ಮಾಹಿತಿಯ ಪ್ರಕಾರ, ಸುಮಾರು 24 ಮಂದಿ ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನಾಭರಣಗಳಲ್ಲಿ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಾಣೆಯಾಗಿದೆ. ಆರೋಪಿಯು ಮ್ಯಾನೇಜರ್ ಗೈರುಹಾಜರಿದ್ದ ಸಮಯವನ್ನು ದುರುಪಯೋಗಪಡಿಸಿಕೊಂಡು ಲಾಕರ್‌ಗಳಿಂದ ನಿಧಾನವಾಗಿ ಚಿನ್ನ ತೆಗೆದು ಕಳ್ಳತನ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಈ ಕೃತ್ಯವನ್ನು ದೀರ್ಘಕಾಲದಿಂದ ಯೋಜಿತವಾಗಿ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.ಇನ್ನೊಂದು ಆಘಾತಕಾರಿ ಅಂಶವೆಂದರೆ, ಕಳ್ಳತನ ಮಾಡಿದ ಚಿನ್ನವನ್ನು ಕಿರಣ್ ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿಕೊಂಡು ವೈಭವ ಜೀವನ ನಡೆಸುತ್ತಿದ್ದಾನೆ ಎಂಬ ಆರೋಪವೂ ಕೇಳಿಬರುತ್ತಿದೆ. ಗ್ರಾಹಕರು ತಮ್ಮ ಅಡಮಾನ ಚಿನ್ನವನ್ನು ಮರುಪಡೆಯಲು ಬ್ಯಾಂಕ್‌ಗೆ ಬಂದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಬಳಿಕ ಲಾಕರ್‌ಗಳ ಪರಿಶೀಲನೆ ವೇಳೆ ದೊಡ್ಡ ಪ್ರಮಾಣದ ಚಿನ್ನ ಕಣ್ಮರೆಯಾಗಿರುವುದು ದೃಢಪಟ್ಟಿದೆ.
ಈ ಪ್ರಕರಣ ಸಂಬಂಧ ಫೆಬ್ರವರಿ 5ರಂದು ಬ್ಯಾಂಕ್ ಮ್ಯಾನೇಜರ್ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕಿರಣ್ ಅನ್ನು ಬಂಧಿಸಿದರೂ, ಕೆಲವೇ ದಿನಗಳಲ್ಲಿ ಜಾಮೀನು ಮೇಲೆ ಹೊರಬಂದಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟು 2 ಕಿಲೋಗ್ರಾಂಗಿಂತ ಹೆಚ್ಚು ಚಿನ್ನ ಕಳ್ಳತನವಾಗಿದ್ದು, ಇದರಲ್ಲಿ ಸುಮಾರು 4 ಕೋಟಿ ರೂಪಾಯಿ ಮೌಲ್ಯವಿದೆ ಎಂದು ಅಂದಾಜಿಸಲಾಗಿದೆ. ಆದರೆ ಆರೋಪಿಯಿಂದ ವಶಪಡಿಸಿಕೊಂಡಿರುವುದು ಕೇವಲ 1 ಕಿಲೋಗ್ರಾಂ ಚಿನ್ನ ಮಾತ್ರ. ಉಳಿದ ಚಿನ್ನದ ಪತ್ತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿರುವುದು ತನಿಖೆಯ ಮೇಲೆ ಅನುಮಾನ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ಅಳಲು ತೋಡಿಕೊಂಡಿದ್ದಾರೆ. ಚಿನ್ನ ಕಳೆದುಕೊಂಡಿದ್ದರೂ ಬ್ಯಾಂಕ್ ಅಧಿಕಾರಿಗಳು ಬಡ್ಡಿ ಪಾವತಿಸಲು ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ. ಜೊತೆಗೆ, ಪೊಲೀಸ್ ತನಿಖೆ ಸಮರ್ಪಕವಾಗಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಘಟನೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದ್ದು, ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.






