
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ಅವ್ಯವಹಾರ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಬಳಿಕ ಅಕ್ರಮ ಹಣ ವರ್ಗಾವಣೆಯನ್ನು ಅಂದಿನ ಸಚಿವ ನಾಗೇಂದ್ರ ಒಪ್ಪಿಕೊಂಡಿದ್ದರು. ಆ ಬಳಿಕ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಅಕ್ರಮ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನಿಖೆ ನಡೆಸಲು SIT ರಚನೆ ಮಾಡಿ ಆದೇಶ ಹೊರಡಿಸಿದ್ರು. ಇದೀಗ SIT ಬೆನ್ನಲ್ಲೇ ಜಾರಿ ನಿರ್ದೇಶನಾಲಯ (Enforcement Directorate) ಎಂಟ್ರಿಯಾಗಿದೆ. ಬೆಂಗಳೂರು, ಬಳ್ಳಾರಿ, ರಾಯಚೂರು ಸೇರಿದ ರಾಜ್ಯದ ವಿವಿಧ ಭಾಗಗಳಲ್ಲಿ 18 ಕಡೆ ED ದಾಳಿ ಮಾಡಿದೆ.
ಮಾಜಿ ಸಚಿವ ಬಿ. ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಮನೆ, ವಾಲ್ಮೀಕಿ ನಿಗಮದ ಕಚೇರಿ, ಬ್ಯಾಂಕ್ ಅಧಿಕಾರಿಗಳ ಮನೆಗಳಲ್ಲೂ ಶೋಧ ನಡೆದಿದೆ. ಬೆಂಗಳೂರಿನ BEL ಬಳಿ ಇರುವ ಬಿ. ನಾಗೇಂದ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ಇನ್ನು ಬಳ್ಳಾರಿಯ ನೆಹರೂ ಕಾಲೋನಿಯಲ್ಲಿರುವ ನಾಗೇಂದ್ರ ಮನೆ ಮೇಲೂ ದಾಳಿ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿ ಮನೆಯಲ್ಲಿ ನಾಗೇಂದ್ರ ವಿಚಾರಣೆ ನಡೆದಿದ್ದು, ತಡರಾತ್ರಿವರೆಗೂ ವಿಚಾರಣೆ ಮಾಡಲಾಗಿದೆ. ನಾಗೇಂದ್ರ ಮನೆಯಲ್ಲಿದ್ದ ಕಡತಗಳ ಪರಿಶೀಲನೆ ನಡೆದಿದೆ. ನಾಗೇಂದ್ರ PA ಹರೀಶ್ ವಿಚಾರಣೆ ಮಾಡಲಾಗಿದೆ. ಮತ್ತಿಕೆರೆ ICICI ಬ್ಯಾಂಕ್‌ನಲ್ಲೂ ಪರಿಶೀಲನೆ ನಡೆಸಿದ್ದು, ಶಾಂತಿನಗರ ಇಡಿ ಕಚೇರಿಗೆ ಕರೆತಂದು ವಿಚಾರಣೆ ಮಾಡಲಾಗಿದೆ.
ರಾಯಚೂರಿನ ಶಾಸಕ ಬಸನಗೌಡ ದದ್ದಲ್ ಮನೆ, ಬೆಂಗಳೂರಿನ ಯಲಹಂಕದಲ್ಲಿರೋ ದದ್ದಲ್ ಮನೆಗಳ ಮೇಲೂ ದಾಳಿ ಆಗಿದೆ. ದದ್ದಲ್ ಮನೆಯಲ್ಲಿದ್ದ ಕುಟುಂಬಸ್ಥರ ಮೊಬೈಲ್ ವಶ ಪಡೆದು ದದ್ದಲ್ ಅಳಿಯ ಚನ್ನಬಸವನನ್ನು ವಿಚಾರಣೆ ಮಾಡಿದ್ದಾರೆ. ದದ್ದಲ್ ನಿವಾಸಕ್ಕೆ ಪ್ರಿಂಟರ್ ತಂದಿದ್ದು, ಹಣ ಸಿಕ್ಕಿದ್ಯಾ ಅನ್ನೋ ಅನುಮಾನ ಮೂಡಿಸಿದೆ. ಇನ್ನು ಇಡಿ ಅಧಿಕಾರಿಗಳು, ಕೋಟಿ ಕೋಟಿ ಹಣ ವರ್ಗಾವಣೆ ಸಂಬಂಧ ಬ್ಯಾಂಕ್ ಪಾಸ್ ಬುಕ್ ಪರಿಶೀಲನೆ ಮಾಡಿದ್ದಾರೆ. ವಾಲ್ಮೀಕಿ ಬೋರ್ಡ್ MD ಪದ್ಮನಾಭ ಮನೆ, ವಾಲ್ಮೀಕಿ ಬೋರ್ಡ್ ಲೆಕ್ಕಾಧಿಕಾರಿ ಪರಶುರಾಂ ಮನೆ, ಯೂನಿಯನ್ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ದೀಪಾ ಮನೆ, UBI ಬ್ರಾಂಚ್ ಹೆಡ್ ಸುಚಿಸ್ಮಿತ ಅವರ ಕೋರಮಂಗಲ ಮನೆ ಹಾಗೂ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಕೃಷ್ಣಮೂರ್ತಿ ಮನೆ ಮೇಲೂ ED ದಾಳಿ ಆಗಿದೆ.
ವಸಂತನಗರದಲ್ಲಿರುವ ST ಬೋರ್ಡ್ ಕಚೇರಿ ಮೇಲೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ಬಳಿಕ ಕೆಲವು ಮಹತ್ವದ ದಾಖಲೆಗಳನ್ನು ED ವಶಕ್ಕೆ ಪಡೆದಿದೆ ಎನ್ನಲಾಗಿದೆ. ನಿಗಮದ ಪ್ರಭಾರ MD ರಾಜ್‌ಕುಮಾರ್ ಹಾಗೂ ಸಿಬ್ಬಂದಿ ವಿಚಾರಣೆಯನ್ನೂ ಮಾಡಲಾಗಿದೆ. ಇಷ್ಟೆಲ್ಲದರ ಮಧ್ಯೆಯೇ MD ಪದ್ಮನಾಭ್ ಅವರ ಮತ್ತೊಂದು ಕಳ್ಳಾಟ ಬಯಲಾಗಿದೆ. FD ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದೂ ಪತ್ತೆಯಾಗಿದೆ.
FD ಹೆಸರಿನಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. 187 ಕೋಟಿ ಪೈಕಿ 50 ಕೋಟಿ ವರ್ಗಾವಣೆ ಆಗಿದೆ. ಎಂಜಿ ರಸ್ತೆಯ UBI ಬ್ಯಾಂಕ್‌ನ ಅಕೌಂಟ್‌ನಲ್ಲಿ FD ಮಾಡಲಾಗಿದೆ. ಮಾರ್ಚ್ 30, 2024ರಿಂದ 12 ತಿಂಗಳ ಅವಧಿಗೆ FD ಮಾಡಲಾಗಿದೆ. FD ಇರಿಸಿದ ದಿನವೇ 40 ಕೋಟಿ ಹಣವನ್ನು ಹೈದ್ರಾಬಾದ್‌ನ RBL ಬ್ಯಾಂಕ್ ಖಾತೆಗೆ ಓವರ್ ಡ್ರಾಫ್ಟ್ ಮಾಡಲಾಗಿದೆ. ನಿರ್ದೇಶಕರು, ಅಧ್ಯಕ್ಷರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ. ಎಲ್ಲಾ ನಿಯಮ ಗಾಳಿಗೆ ತೂರಿ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ತನಿಖೆ ನಡೆಸುತ್ತಿದ್ದ SIT, ರಿಮ್ಯಾಂಡ್ ಕಾಪಿ ಹೊರಬಿದ್ದಿದ್ದು, ಸಾಕಷ್ಟು ಸತ್ಯಗಳು ಬಹಿರಂಗವಾಗಿವೆ. ಮಾರ್ಚ್ ಮೊದಲ ವಾರದಲ್ಲಿ ಮೌರ್ಯ ಹೋಟೆಲ್ ಜಂಕ್ಷನ್ ಬಳಿ ಹಣ ವರ್ಗಾವಣೆ ಆಗಿದೆ. ನೆಕ್ಕುಂಟಿ ನಾಗರಾಜ್, ನಾಗೇಶ್ವರರಾವ್, ಸತ್ಯನಾರಾಯಣ ವರ್ಮಾರಿಂದ ಹಣ ಹಸ್ತಾಂತರ ಆಗಿದೆ. ಸೂಟ್‌ಕೇಸ್, ಗೋಣಿಚೀಲದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಪಾರ್ಕ್, ಮಾಲ್, ಸ್ಲಂ ಬೋರ್ಡ್ ಬಳಿಯೂ ಹಣ ವರ್ಗಾವಣೆ ಆಗಿದೆ. ಗೋಣಿಚೀಲದಲ್ಲೂ ಲಕ್ಷ ಲಕ್ಷ ಹಣ ಸಾಗಾಟ ಆಗಿದೆ. ನಿಗಮದ MD ಪದ್ಮನಾಭ ಬಳಿ ಸಿಕ್ಕಿದ್ದು 3.67 ಕೋಟಿ. ಟ್ರಾವೆಲ್ ಕಿಂಗ್ ಸೂಟ್ಕೇಸ್ನಲ್ಲಿ 1.08 ಕೋಟಿ, VIP ಪಾಚಿ ಸೂಟ್ಕೇಸ್ನಲ್ಲಿ 1.49 ಕೋಟಿ, ಕ್ಯಾರಿ ಹ್ಯಾಂಡ್ ಬ್ಯಾಗ್ನಲ್ಲಿ 50 ಲಕ್ಷ, ಸಿಮೆಂಟ್ ಚೀಲದಲ್ಲಿ 55.47ಲಕ್ಷ ಪತ್ತೆಯಾಗಿದೆ. ಸ್ನೇಹಿತನ ಕಾರಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಪಾರ್ಕ್ನಲ್ಲಿ 90 ಲಕ್ಷ ಹಣ ಕೊಟ್ಟಿರುವ ಅಂಶ SIT ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖವಾಗಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಈವರೆಗೆ 11 ಮಂದಿ ಅರೆಸ್ಟ್ ಆಗಿದ್ದಾರೆ. ಹೈದರಾಬಾದ್ನಲ್ಲಿ ಐವರನ್ನ ಬಂಧಿಸಿದೆ ಎಸ್ಐಟಿ ಟೀಂ. FFCCSL ಅಧ್ಯಕ್ಷ ಸತ್ಯನಾರಾಯಣ, ಸತ್ಯನಾರಾಯಣ ವರ್ಮಾ, ಚಂದ್ರಮೋಹನ್, ಶ್ರೀನಿವಾಸ್, ಮಧ್ಯವರ್ತಿ ಜಗದೀಶ್, ವಾಲ್ಮೀಕಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ. ಜೆ. ಪದ್ಮನಾಭ್, ನಿಗಮದ ಹಿಂದಿನ ಲೆಕ್ಕಾಧಿಕಾರಿ ಪರಶುರಾಮ್ ದುರುಗಣ್ಣವರ, ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಮಾಜಿ ಸಚಿವ ಬಿ.ನಾಗೇಂದ್ರ ಸಂಬಂಧಿ ನಾಗೇಶ್ವರ ರಾವ್, ಸತ್ಯನಾರಾಯಣ ವರ್ಮಾ ಸಹಚರ ಸಾಯಿ ತೇಜ, ತೇಜ ತಮ್ಮಯ್ಯ ಎಂಬುವರ ಬಂಧನವಾಗಿದೆ.
ಈಗಾಗಲೇ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ SITಯಿಂದ ತನಿಖೆ ನಡೆಯುತ್ತಿದ್ದು, ಸಿಬಿಐನಲ್ಲೂ FIR ದಾಖಲಾಗಿದೆ. ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ನಂಟಿರುವ ಅನುಮಾನ ಬಂದ ಬಳಸಿ CBI ತಂಡ EDಗೆ ಮಾಹಿತಿ ನೀಡಿತ್ತು. CBI ನೀಡಿದ ಮಾಹಿತಿ ಅನ್ವಯ ED ಟೀಂ ಅಖಾಡಕ್ಕೆ ಇಳಿದಿದ್ದು ದಾಳಿ ಮಾಡಿ ತನಿಖೆ ಮಾಡುತ್ತಿದೆ. ಆದರೆ ಈ ಕೇಸ್‌ನಲ್ಲಿ ಮೂರು SSS ಗಳಿವೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಹೀಗಾಗಿ ಮುಂದಿನ ದಿನಗಳಲ್ಲಿ ವಾಲ್ಮೀಕಿ ಉರುಳು ಯಾರ ಕೊರಳಿಗೆ ಸುತ್ತಿಕೊಳ್ಳುತ್ತದೆ ಅನ್ನೋದು ಸದ್ಯಕ್ಕಿರುವ ಕುತೂಹಲ.
ಕೃಷ್ಣಮಣಿ