ಬೆಂಗಳೂರು:ಮಾ.26: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ಶುರು ಮಾಡಿದೆ. ಈ ರೀತಿಯ ಪ್ರಚಾರದಲ್ಲಿ ಮಾಜಿ ಸಚಿವ ಸಿಟಿ ರವಿ ಸುಳ್ಳುಗಳ ಮೇಲೆ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದ್ದಾರೆ. ಅವರು ಮಾತನಾಡುತ್ತಿರುವ ಮಾತುಗಳಲ್ಲಿ ಉರುಳಿಲ್ಲ ಅನ್ನೋದು ಪದೇ ಪದೇ ಸಾಬೀತು ಆಗುತ್ತಿದ್ದರೂ ಸಿಟಿ ರವಿ ಮಾತ್ರ ತಳಬುಡ ಇಲ್ಲದ ಮಾತುಗಳ ಮೂಲಕ ಬಿಟ್ಟಿ ಪ್ರಚಾರ ಪಡೆಯೋದನ್ನು ಮುಂದುವರಿಸಿದ್ದಾರೆ. ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಎಂಬುರಿಂದಲೇ ಟಿಪ್ಪು ಕೊಲೆ ನಡೀತು ಎಂದು ಅಬ್ಬರಿಸಿದ್ದ ರವಿ ಅದು ಸುಳ್ಳು ಎನ್ನುವುದನ್ನು ಜಗತ್ತಿನ ಮುಂದೆ ಬೆತ್ತಲಾದರೂ ಅದನ್ನು ಸತ್ಯ ಎಂದೇ ಹೇಳಿಕೊಂಡು ತಿರುಗುತ್ತಿದ್ದಾರೆ. ಯಡಿಯೂರಪ್ಪ ಮಗ ಅನ್ನೋ ಕಾರಣಕ್ಕೆ ವಿಜಯೇಂದ್ರಗೆ ಟಿಕೆಟ್ ಸಿಗಲ್ಲ, ಅಡುಗೆ ಮನೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ಆಗಲ್ಲ ಎಂದಿದ್ದರು. ಆ ಬಳಿಕ ಅಮಿತ್ ಷಾ ಉಪಹಾರ ಮಾಡುತ್ತಲೇ ಟಿಕೆಟ್ ವಿಚಾರದ ಚರ್ಚೆ ನಡೆದಿತ್ತು. ಆ ಮುಖಭಂಗ ಆದರೂ ಮತ್ತೆ ಮತ್ತೊಂದು ವಿಚಾರದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
ಡಿಕೆಶಿ ಹಾಗು ಡಿಕೆ ಸುರೇಶ್ ಬಗ್ಗೆ ಮಾನಹಾನಿ ಹೇಳಿಕೆ..!
ಮಂಗಳೂರಿನಲ್ಲಿ ಬ್ಲಾಸ್ ಆಗಿದ್ದ ಕುಕ್ಕರ್ ಬಾಂಬ್ ಹಾಕಿಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಶಾಲಾ ಮಕ್ಕಳನ್ನ ಗುರಿಯಾಗಿಸಿಕೊಂಡು ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಬಾಂಬ್ ಹಾಕಿಸ್ತಿದ್ರು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಬಾಂಬ್ ಇಟ್ಟವರನ್ನ ಕೆಪಿಸಿಸಿ ಅಧ್ಯಕ್ಷರು ನಮ್ಮ ಬ್ರದರ್ಸ್ ಅಂತ ಹೇಳಿದ್ದರು. ಅದೇ ಡಿಕೆಶಿ ಬ್ರದರ್ಸ್ ಕುಕ್ಕರ್ನಲ್ಲಿ ಬಾಂಬ್ ಇಡುವ ಸಂಚು ಮಾಡಿದ್ರು. ಆ ಸಂಚಿಗೆ ಶಕ್ತಿ ಬಂದಿದ್ದು ಕಾಂಗ್ರೆಸ್ನ ಓಲೈಕೆ ರಾಜಕಾರಣದಿಂದ ಎಂದಿದ್ದಾರೆ. ಆದರೆ ಬಿಜೆಪಿ ದೇಶ ವಿರೋಧಿಗಳಿಗೆ ಮಣೆ ಹಾಕುವ ಪಾರ್ಟಿ ಅಲ್ಲ. ಬಾಂಬ್ ಇಡುವರಿಗೆ ಬಿರಿಯಾನಿ ತಿನ್ನಿಸುವ ಪಾರ್ಟಿಯೂ ಅಲ್ಲ ಎಂದು ಪ್ರಧಾನಿ ಮೋದಿ ಭಾಗವಹಿಸಿದ್ದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯ ಸಮಾರೋಪ ಸಮಾವೇಶದ ಮಹಾಸಂಗಮ ವೇದಿಕೆಯಲ್ಲಿ ಬಡಾಯಿ ಕೊಚ್ಚಿಕೊಂಡಿದ್ದಾರೆ. ಬಾಂಬ್ ಇಡುವವರ ಮೇಲೆ ಸರ್ಜಿಕಲ್ ಸ್ಟ್ರೈಕ್ ಗುಜರಾತ್ ಮಾತ್ರ ಅಲ್ಲ, ಯುಪಿ ಮಾದರಿಯಲ್ಲಿ ಬುಲ್ಡೋಜರ್ ಚಲಾವಣೆ ಮಾಡಲು ನಮಗೆ ಬರುತ್ತೆ ಎಂಬುದನ್ನು ತೋರಿಸ್ತೀವಿ ಎಂದು ಗುಡುಗಿದ್ದಾರೆ.
ಸಿ.ಟಿ ರವಿ ಮೇಲೆ ಕಾನೂನು ಕ್ರಮಕ್ಕೆ ಡಿಕೆಶಿ ಸಿದ್ದತೆ..!
ಡಿಕೆ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟಿದ್ದು ಎಂಬ ಸಿ.ಟಿ ರವಿ ಹೇಳಿಕೆ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದು, ಸಿಟಿ ರವಿ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಸಿಟಿ ರವಿ ವಿರುದ್ದ ಮಾನನಷ್ಟ ಮೊಕದ್ದಮೆಯನ್ನೂ ಹೂಡಲು ಸಿದ್ದತೆ ಮಾಡಿಕೊಂಡಿದ್ದು, ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಡಿಕೆಶಿ ಬ್ರದರ್ ಕುಕ್ಕರ್ನಲ್ಲಿ ಬಾಂಬ್ ಇಟ್ಟಿದ್ರು ಎಂದಿದ್ದ ಹೇಳಿಕೆ ಆಧಾರದಲ್ಲಿ ಕಾನೂನು ಸಮರ ಸಾರಲು ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ಇತ್ತೀಚಿಗೆ ಮಾನನಷ್ಟ ಪ್ರಕರಣದಲ್ಲಿ ಕೋರ್ಟ್ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಲೋಕಸಭೆಯಲ್ಲಿ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹ ಮಾಡಿ ಆದೇಶ ಹೊರಡಿಸಿತ್ತು. ವಿರೋಧ ಪಕ್ಷಗಳ ನಾಯಕರು ಪಕ್ಷಾತೀತವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಇದೀಗ ಸಿ.ಟಿ ರವಿ ಮಾತು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವ ಸಾಧ್ಯತೆ ಉಂಟು ಮಾಡಿದೆ.
ಡಿಕೆಶಿ ಬ್ರದರ್ಸ್ ಬಗ್ಗೆ ಸಿ.ಟಿ ರವಿ ಮಾತಿನ ಅರ್ಥ ಏನು..?
ಡಿ.ಕೆ ಶಿವಕುಮಾರ್ ಬಾಂಬ್ ಇಟ್ಟಿದ್ದ ವ್ಯಕ್ತಿಯನ್ನು ಎಲ್ಲರೂ ನಮ್ಮ ಬ್ರದರ್ಸ್ ಎಂದಿದ್ದರು. ಬ್ರದರ್ಸ್ ಎಂದ ಮೇಲೆ ಡಿಕೆಶಿ ಬ್ರದರ್ಸ್ ಬಾಂಬ್ ಇಟ್ಟಿದ್ದು ಎಂದು ಹೇಳುವುದನ್ನು ಬಾಂಬ್ ಇಡುವ ಕೆಲಸವನ್ನು ಡಿಕೆಶಿ ಬ್ರದರ್ಸ್ ಮಾಡಿದ್ರು ಎಂದಿದ್ದಾರೆ. ಡಿಕೆಶಿ ಬ್ರದರ್ಸ್ ಅಂದ್ರೆ ಡಿ.ಕೆ ಶಿವಕುಮಾರ್ ಹಾಗು ಡಿ.ಕೆ ಸುರೇಶ್ ಎನ್ನುವುದು ಮಾತಿನ ಅರ್ಥ. ಶಾಲಾ ಮಕ್ಕಳನ್ನು ಗುರಿಯಾಗಿಸಿ ಈ ಕೃತ್ಯ ನಡೆದಿತ್ತು ಎಂದು ಹಸಿ ಸುಳ್ಳನ್ನು ಮೋದಿ ಭಾಗಿಯಾಗುವ ಕಾರ್ಯಕ್ರಮಲ್ಲೇ ಹೇಳಿದ್ದರು. ಉರಿಗೌಡ ನಂಜೇಗೌಡ ಎನ್ನುವುದನ್ನು ಮಂಡ್ಯದಲ್ಲಿ ಅಮಿತ್ ಷಾ ಕಾರ್ಯಕ್ರಮದಲ್ಲೇ ಹೇಳಿದ್ದು. ಆ ಬಳಿಕ ಮಾಧ್ಯಮದವರು ಪ್ರಶ್ನೆಯನ್ನೇ ಕೇಳದಿದ್ದರೂ ಯಡಿಯೂರಪ್ಪ ಬಗ್ಗೆ ಮಾತನಾಡಿದ್ದರು. ಲಿಂಗಾಯತರ ಮತಗಳು ಬೇಕಿಲ್ಲ ಎಂದು ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದೀಗ ಡಿಕೆಶಿ ಬ್ರದರ್ಸ್ ಕುಕ್ಕರ್ ಬಾಂಬ್ ಇಟ್ಟರು ಎಂದಿದ್ದಾರೆ. ಒಂದು ರೀತಿಯಲ್ಲಿ ಸಿ.ಟಿ ರವಿ ಹುಚ್ಚುತನದ ಪರಮಾವಧಿ ತಲುಪಿದಂತಾಗಿದೆ ಎಂದು ರಾಜಕೀಯ ವಲಯ ಚರ್ಚೆ ಶುರು ಮಾಡಿದೆ.