ಇವತ್ತಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ (ಪುಟ 5- ದಿನಾಂಕ 9-5-2021) ಒಂದು ಪೂರ್ಣ ಪುಟದ ಜಾಹೀರಾತು ಇದೆ. “ ಕನ್ನಡಿಗರನ್ನು ಕೊಲ್ಲುತ್ತಿರುವ ಮೋದಿ, ಷಾ”. ಕರ್ನಾಟಕ ಜನಶಕ್ತಿ ಹೆಸರಿನ ಸಂಘಟನೆಯ ಪ್ರಕಟಣೆ ಎಂದು ಭಾವಿಸಬಹುದು. ಈ ಜಾಹೀರಾತಿನ ಹಿಂದಿರುವ ಆಶಯಗಳು ಪ್ರಶ್ನಾತೀತ. ಇದು ಜನಪರ ಕಾಳಜಿ ಇರುವ ಯಾರೇ ಆದರೂ ಒಪ್ಪುವಂತಹುದೇ. ಆದರೆ ಸಮಾಜದ ಪರಿವರ್ತನೆಗಾಗಿ ಪಣತೊಟ್ಟ ಒಂದು ಸಂಘಟನೆಗೆ ತನ್ನ ಕಾರ್ಯಾಚರಣೆಯ ಕಾಲಘಟ್ಟದ ಪರಿವೆ ಇರಬೇಕು. ತನ್ನ ಪ್ರತಿಯೊಂದು ನಡೆಯ ಗುರಿ ಸ್ಪಷ್ಟವಾಗಿರಬೇಕು. ಎಲ್ಲಿಗೆ ತಲುಪಬೇಕು ಎನ್ನುವುದು ಪ್ರಥಮ ಆದ್ಯತೆಯಾದರೆ, ಹೇಗೆ ತಲುಪುವುದು ಎನ್ನುವುದು ಎರಡನೆಯ ಆದ್ಯತೆ. ಅಲ್ಲಿಗೆ ತಲುಪುವುದು ತಾರ್ಕಿಕ ಅಂತ್ಯ, ಅದು ಅಂತಿಮ ಧ್ಯೇಯ ಮತ್ತು ಆದ್ಯತೆ.
ಸಾಮಾಜಿಕ ಬದಲಾವಣೆ, ಸಮ ಸಮಾಜದ ನಿರ್ಮಾಣ ಮತ್ತು ಮಾನವೀಯ ಸಮಾಜವನ್ನು ಕಟ್ಟುವ ಮನಸುಗಳಿಗೆ ಗುರಿ ಸ್ಪಷ್ಟವಾಗಿರಬೇಕು. ಈ ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವವರೆಲ್ಲರೂ ಶತ್ರುಗಳೇ ಆಗಿರುವುದಿಲ್ಲ. ಮಿತ್ರರಾಗುವ ಸಾಧ್ಯತೆಗಳೂ ಇರುತ್ತವೆ. ಏಕೆಂದರೆ ನಾವು ಬದುಕುತ್ತಿರುವುದು ಒಂದು ಸಮಾಜದಲ್ಲಿ, ಇದು ಏಕಮುಖಿ ಸಮಾಜ ಅಲ್ಲ. ಸಮ ಸಮಾಜಕ್ಕಾಗಿ, ಮಾನವೀಯ ಸಮಾಜಕ್ಕಾಗಿ ಹೋರಾಡುವ ನಮಗೆ ನಮ್ಮ ಶತ್ರು ಯಾರು ಎಂದು ತಿಳಿದಿದ್ದರೆ ಸಾಕು. ಆ ಶತ್ರು ಒಂದು ಸಿದ್ಧಾಂತದಲ್ಲೋ, ರಾಜಕೀಯ ಪಕ್ಷದಲ್ಲೋ, ತಾತ್ವಿಕ ನೆಲೆಯಲ್ಲೋ ಅಡಗಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಅದರ ವಿರುದ್ಧ ಹೋರಾಡಲು ನಮ್ಮ ಬತ್ತಳಿಕೆಯಲ್ಲಿ ಅಸ್ತ್ರಗಳು ಎಷ್ಟಿವೆ ಎನ್ನುವುದಕ್ಕಿಂತಲೂ, ಹೇಗಿವೆ ಎಂದು ಯೋಚಿಸಿದರೆ ನಮ್ಮ ನಡಿಗೆ ಸರಾಗವಾಗುತ್ತದೆ.
ಇಷ್ಟು ಹೇಳಿ ಈ ಜಾಹೀರಾತಿಗೆ ಬರುತ್ತೇನೆ. ಈ ಜಾಹೀರಾತಿನ ಆಶಯದ ಬಗ್ಗೆ ಆಕ್ಷೇಪವಿಲ್ಲ. ಆದರೆ ಅಲ್ಲಿ ಬಳಸಲಾಗಿರುವ ಭಾಷೆ ಮತ್ತು ಮಾತಿನ ಧೋರಣೆಯನ್ನು ಪ್ರಗತಿಪರತೆಯೊಡನೆ ಸಮೀಕರಿಸಲು ಸಾಧ್ಯವಿಲ್ಲ. ನನ್ನ ಮಟ್ಟಿಗೆ ಹಾಗೆನಿಸುತ್ತದೆ. ಹಾಗಾಗಿ ಇದನ್ನು ಪ್ರಗತಿಪರ ಜಾಹೀರಾತು ಎಂದು ಭಾವಿಸಿದಲ್ಲಿ ನಾನು ಇದರೊಡನೆ ಇಲ್ಲ. ಜಾಹೀರಾತಿನೊಡನೆ ಇಲ್ಲ, ಆಶಯದೊಂದಿಗೆ ಇದ್ದೇನೆ ಎಂದು ಸ್ಪಷ್ಟೀಕರಿಸುತ್ತೇನೆ. ಇದು ನನ್ನೊಳಗಿನ ಅಂತಃಸಾಕ್ಷಿಗಾಗಿ ಹೇಳುತ್ತಿರುವ ಮಾತುಗಳಷ್ಟೇ. ಸಂಘಟನೆಯ ಅಥವಾ ಸಂಘಟಕರ ದೃಷ್ಟಿಯಿಂದ ನಾನು ನಗಣ್ಯನೇ ಇರಬಹುದು. ಆದರೂ ಹಲವು ಹೋರಾಟಗಳೊಡನೆ ಗುರುತಿಸಿಕೊಂಡು ಸಮ ಸಮಾಜದ ಆಶಯಗಳೊಡನೆ ಬರಹಗಾರನಾಗಿರುವ ನನ್ನ ನೈತಿಕ ಕರ್ತವ್ಯ ಇದೆಂದು ಭಾವಿಸುತ್ತೇನೆ.
ನನ್ನ ಆಕ್ಷೇಪ ಇರುವುದು ಈ ಜಾಹೀರಾತಿನಲ್ಲಿ ಬಳಸಿರುವ ಭಾಷೆಯ ಬಗ್ಗೆ. ನಾವು ಡಾ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸದೆ ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ಅಲ್ಲವೇ ? ಒಮ್ಮೆ ಅವರ ಬದುಕಿನತ್ತ ನೋಡಿ. ಗಾಂಧಿಯ ಹಠಮಾರಿತನದಿಂದ ತಮ್ಮ ಸಮುದಾಯದ ಹಿತಾಸಕ್ತಿಗಳಿಗೆ ಮಾರಕ ಎನಿಸಿದರೂ ತಮ್ಮ ಮನದಾಳದ ನೋವನ್ನು ನುಂಗಿ ತಮ್ಮ ನಿಲುವು ಬದಲಿಸಿದ ಮಹಾನ್ ಚೇತನ ಅಲ್ಲವೇ ? ನೆಹರೂ ಸಚಿವ ಸಂಪುಟದಿಂದ ಅವಮಾನಿತರಾಗಿ ರಾಜೀನಾಮೆ ಕೊಟ್ಟು ಹೊರಬಂದವರೂ ಹೌದು. ಅವರ ಭಾಷಣಗಳಲ್ಲಿ ಎಂದಾದರೂ ವ್ಯಕ್ತಿ ಗೌರವಕ್ಕೆ ಚ್ಯುತಿ ಬರುವಂತಹ ಮಾತುಗಳನ್ನು ಕಾಣಲು ಸಾಧ್ಯವೇ. ಗಾಂಧಿಯವರ ಬಗ್ಗೆ ಅವರಲ್ಲಿದ್ದ ಸಾತ್ವಿಕ ಸಿಟ್ಟು, ನೆಹರೂ ಅವರ ವಿರುದ್ಧ ಇದ್ದ ತಾತ್ವಿಕ ಆಕ್ರೋಶ ಇವೆಲ್ಲವನ್ನೂ ಅವರು ಹೊರಹಾಕಿದ್ದು ತಮ್ಮ ಬೌದ್ಧಿಕ ಪರಿಶ್ರಮದ ಮೂಲಕ. ಇಂದು ಈ ಪರಿಶ್ರಮದ ಫಲವನ್ನೇ ನಾವು ಅನುಸರಿಸುತ್ತಿದ್ದೇವೆ..
ಒಂದು ಚುನಾಯಿತ ಸರ್ಕಾರವನ್ನು, ಆಡಳಿತಾರೂಢ ಪಕ್ಷವನ್ನು, ಈ ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳನ್ನು ಟೀಕಿಸುವ, ಖಂಡಿಸುವ, ನಿಂದಿಸುವ ಮತ್ತು ವಿಮರ್ಶಾತ್ಮಕವಾಗಿ ನೋಡುವ ಅಧಿಕಾರವನ್ನು ಸಂವಿಧಾನ ನಮಗೆ ನೀಡಿದೆ. ಅದನ್ನು ನಾವು ಎಲ್ಲ ವಿಪತ್ತುಗಳ ನಡುವೆಯೂ, ಭೀತಿಯ ವಾತಾವರಣದ ನಡುವೆಯೂ ಬಳಸುತ್ತಿದ್ದೇವೆ. ಆದರೆ ನಮ್ಮ ಟೀಕೆ, ವಿಮರ್ಶೆ, ನಿಂದನೆ ಇವೆಲ್ಲಕ್ಕೂ ಒಂದು ಸಾಂವಿಧಾನಿಕ ಚೌಕಟ್ಟು ಇರುವಂತೆಯೇ ನೈತಿಕ ಚೌಕಟ್ಟು ಸಹ ಇರಬೇಕಲ್ಲವೇ ? “ದುಷ್ಟ ಕೊಲೆಗಡುಕ ಮೋದಿ ”, ಕೇಡಿ ಮೋದಿ, ಲೋಫರ್ ಮೋದಿ, ಸೈಕೋ ಮೋದಿ, ಭ್ರಷ್ಟ ಯಡ್ಡಿ ಈ ಮಾತುಗಳು ದರ್ಶನ್, ಸುದೀಪ್, ಉಪೇಂದ್ರರ ಚಿತ್ರಗಳಿಗೆ ಸರಿಹೊಂದಬಹುದು. ಆದರೆ ಒಂದು ಜವಾಬ್ದಾರಿಯುತ ನಾಗರಿಕ ಸಂಘಟನೆಯಾಗಿ ನಮ್ಮ ಭಾಷಾ ಸೌಜನ್ಯದ ಬಗ್ಗೆ ನಮಗೆ ಪರಿಜ್ಞಾನ ಇರಬೇಕಲ್ಲವೇ. “ ಅಯೋಗ್ಯ ಜನರೇ ”ಎಂದು ಮತದಾರರನ್ನು ನಿಂದಿಸುವ ಮುನ್ನ ಈ ಜನರ ಅಯೋಗ್ಯತೆಗೆ ಕಾರಣ ಏನು ಎಂದೂ ಯೋಚಿಸಬೇಕಲ್ಲವೇ. ಅಂಬೇಡ್ಕರ್ ಈ ಅಪಾಯದ ಬಗ್ಗೆ 1954ರಲ್ಲೇ ಎಚ್ಚರಿಕೆ ನೀಡಿದ್ದರೂ ನಾವು ಗಮನಿಸಿದ್ದೇವೆಯೇ ? ಸಂಘಟನಾತ್ಮಕವಾಗಿ ಖಂಡಿತವಾಗಿಯೂ ಗಮನಿಸಿಲ್ಲ.
ಜಾಹೀರಾತಿನಲ್ಲಿ ಪ್ರಸ್ತಾಪಿಸಿರುವ ವಿಚಾರಗಳು, ಸಮಸ್ಯೆಗಳು ಮತ್ತು ಜನರ ಸಂಕಷ್ಟಗಳು ಎಲ್ಲವೂ ವಾಸ್ತವ. ಇದನ್ನು ಆಳುವವರಿಗೆ ಮನಮುಟ್ಟುವಂತೆ ತಿಳಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಆದರೆ ನರೇಂದ್ರ ಮೋದಿ ಆಗಲೀ, ಯಡಿಯೂರಪ್ಪ ಆಗಲೀ ನಾವೇ ಚುನಾಯಿಸಿರುವ ಪ್ರತಿನಿಧಿಗಳು. ಅವರ ಸ್ಥಾನಕ್ಕೆ ಸಾಂವಿಧಾನಿಕ ಘನತೆ ಗೌರವ ಇದೆ. ಅದನ್ನು ಉಳಿಸಿಕೊಳ್ಳದಂತೆ ಅವರೇ ವರ್ತಿಸಿದರೆ ಅದು ಅವರ ದೋಷ. ಆದರೆ ಆ ಸ್ಥಾನಕ್ಕೆ ಗೌರವ ಸಲ್ಲಿಸಬೇಕಾದ್ದು ಪ್ರಜ್ಞಾವಂತ ನಾಗರಿಕರಾದ ನಮ್ಮ ಕರ್ತವ್ಯ ಅಲ್ಲವೇ ? ದೇಶದ ಪ್ರಧಾನ ಮಂತ್ರಿಯನ್ನು ಹೀಗೆ ಹೀನ ಭಾಷೆಯಲ್ಲಿ ಸಂಬೋಧಿಸುವುದು ಸರ್ವಥಾ ಒಪ್ಪಲಾಗುವುದಿಲ್ಲ. ಸೈದ್ಧಾಂತಿಕವಾಗಿ ಅವರನ್ನು , ಅವರ ನೀತಿಗಳನ್ನು ವಿರೋಧಿಸೋಣ. ಆದರೆ ವ್ಯಕ್ತಿಯಾಗಿ ಅವರನ್ನು ಗೌರವಿಸೋಣ.
ಈ ಸಂಘಟನೆಯ ಪೂರ್ವಾಪರಗಳು ತಿಳಿದಿಲ್ಲ. ಆದರೆ ಜಾಹೀರಾತಿನ ಕೆಳಭಾಗದಲ್ಲಿ ಕರ್ನಾಟಕದ ಪರಂಪರೆಯನ್ನು ನೆನೆಯುತ್ತಾ ನಮೂದಿಸಲಾಗಿರುವ ಹೆಸರುಗಳನ್ನು ಒಮ್ಮೆ ಗಮನಿಸಿದರೆ, ಮೇಲಿನ ಜಾಹೀರಾತಿನಲ್ಲಿ ಬಳಸಿರುವ ಭಾಷೆ ಈ ಪರಂಪರೆಯನ್ನು ಪ್ರತಿನಿಧಿಸುತ್ತದೆಯೇ ಎಂಬ ಅನುಮಾನ ಮೂಡುತ್ತದೆ. ಸಂಘಟನೆಯ ಉದ್ದೇಶವಾದರೂ ಏನು ? ಕನ್ನಡ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದೇ ? ಇದುವರೆಗೂ ಈ ಪ್ರಯತ್ನ ನಡೆದಿಲ್ಲ. ಆರ್ಯ ದ್ರಾವಿಡ ಆಖ್ಯಾನ ಬಳಸಿ ಹೋರಾಟ ನಡೆಸುವುದೇ ? ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಕೊನೆಗೊಳಿಸಿ ಸಮ ಸಮಾಜ ಕಟ್ಟುವ ಉದ್ದೇಶ ಇದೆಯೇ ? ಇಡೀ ಜಾಹೀರಾತನ್ನು ಓದಿದರೆ ಇದಾವುದೂ ಸ್ಪಷ್ಟವಾಗುವುದಿಲ್ಲ. .
ಭಾವಚಿತ್ರಗಳನ್ನು ಬಳಸುವುದರಿಂದ ಹೋರಾಟಗಳು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಇಲ್ಲಿ ಕುವೆಂಪು ಅವರ ವಿಶ್ವಮಾನವತೆಯ ಪ್ರಸ್ತಾಪ ಇದೆ. ಅಂಬೇಡ್ಕರರ ಸಮ ಸಮಾಜದ ಕನಸು ಇದೆ. ಬಸವಣ್ಣನ ತತ್ವಗಳನ್ನು ಪ್ರತಿಪಾದಿಸಲಾಗಿದೆ. ಆದರೆ ಇಲ್ಲಿ ಬಳಸಲಾಗಿರುವ ಭಾಷೆ ಮತ್ತು ಅದರ ಹಿಂದೆ ಕಾಣುವ ಧೋರಣೆ ಇದಾವುದಕ್ಕೂ ಪೂರಕವಾಗಿ ತೋರುವುದಿಲ್ಲ. ನಮ್ಮ ಮೌಲ್ಯ ರಹಿತ ರಾಜಕಾರಣಿಗಳ ಪರಿಭಾಷೆಯ ಒಂದು ಛಾಯೆಯನ್ನು ಇಲ್ಲಿ ಕಾಣಬಹುದಷ್ಟೇ. ಇದನ್ನು ಪ್ರಗತಿಪರತೆ ಎಂದು ಬಿಂಬಿಸುವ ಪ್ರಯತ್ನ ಮಾಡಿದರೆ ಬಹುಶಃ ಗರಿಗೆದರುತ್ತಿರುವ ಜನಪರ ಚಳುವಳಿಗಳಿಗೂ ಮಾರಕವಾಗಿ ಪರಿಣಮಿಸಬಹುದು. ಮಾನ್ಯ ದ್ವಾರಕಾನಾಥ್ ಅವರು ತಮಗೂ ಈ ಜಾಹೀರಾತಿಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಅವರನ್ನು ಮಹಾಸಂಚಾಲಕರು ಎಂದು ಬಿಂಬಿಸಲಾಗಿದೆ.
ಇಂತಹ ಒಂದು ವಿಕೃತಿಯನ್ನು ಪ್ರಗತಿಪರತೆ ಹೆಸರಿನಲ್ಲಿ ಸಹಿಸಿಕೊಳ್ಳುವುದು ಕಷ್ಟ. ಹಲವು ಪ್ರಗತಿಪರರು ಇದನ್ನು ಹಂಚಿಕೊಳ್ಳುತ್ತಿರುವುದೂ ಉಂಟು. ಬಹುಶಃ ಆಶಯಗಳನ್ನು ಗಮನಿಸಿ ಇರಬಹುದು. ಇಲ್ಲಿ ಬಳಸಿರುವ ಭಾಷೆ ಮತ್ತು ತೋರಿರುವ ಧೋರಣೆಯನ್ನು ಅನುಮೋದಿಸಿ ಅಲ್ಲ ಎಂದು ಭಾವಿಸುತ್ತೇನೆ. ದಿಕ್ಕು ತಪ್ಪಿರುವ ಯುವ ಸಮುದಾಯಕ್ಕೆ ನಾವು ಸ್ಪಷ್ಟ ಮಾರ್ಗದರ್ಶನ ನೀಡಬೇಕಿದೆ. ಅಂಬೇಡ್ಕರ್ ಹಾಕಿದ ಮಾರ್ಗದಲ್ಲಿ ಕರೆದೊಯ್ಯಬೇಕಿದೆ. ಇಂತಹ ಜಾಹೀರಾತುಗಳು ಮುನ್ನಡೆಯ ಮಾರ್ಗದ ಮಗ್ಗುಲ ಮುಳ್ಳಾದರೂ ಅಚ್ಚರಿಯೇನಿಲ್ಲ. ಇದು ನನ್ನ ವೈಯ್ಯಕ್ತಿಕ, ವ್ಯಕ್ತಿಗತ ಅನಿಸಿಕೆಯಷ್ಟೆ. ಸಾರ್ವತ್ರಿಕ ಅಭಿಪ್ರಾಯವೇನಲ್ಲ