ದಸರಾ ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಾಜ್ಯದ ವಿಜಯಪುರ ಮತ್ತು ಉಡುಪಿ ಜಿಲ್ಲೆಯ ಕಾಪು ಸೇರಿದಂತೆ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯನಿರತ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಕೇಸರಿ ಬಟ್ಟೆ ಧರಿಸಿ ಸಾಮೂಹಿಕ ಫೋಟೋ ತೆಗೆಸಿಕೊಂಡು ವೈರಲ್ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ವಿಧಾನಸಭಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಹಲವು ನಾಯಕರು ಮತ್ತು ಸಾರ್ವಜನಿಕರು ಈ ಬಗ್ಗೆ ಸಾಕಷ್ಟು ಆತಂಕ ಮತ್ತು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ “ಪೊಲೀಸರ ಕೈಗೆ ತ್ರಿಶೂಲ ಕೊಡಿ, ಹಿಂಸೆಯ ದೀಕ್ಷೆ ಕೊಡಿ” ಎಂದು ಸಿದ್ದರಾಮಯ್ಯ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಶ್ನಿಸುತ್ತಾ, “ಸಂವಿಧಾನದ ಪ್ರಕಾರ ರಾಜ್ಯದ ಆಡಳಿತ ನಡೆಸಲಾಗದಿದ್ದರೆ ರಾಜೀನಾಮೆ ಕೊಟ್ಟು ಹೊರಡಿ” ಎಂದು ಕಿಡಿಕಾರಿದ್ದಾರೆ.
ಸಹಜವಾಗೇ ಸಿದ್ದರಾಮಯ್ಯ ಅವರ ಈ ಪ್ರಶ್ನೆ ಬಿಜೆಪಿ ವಲಯದಲ್ಲಿ ಭಾರೀ ಪ್ರತಿಕ್ರಿಯೆಗಳನ್ನು ಹುಟ್ಟಿಸಿದೆ. ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಪ್ರತಿಪಕ್ಷ ನಾಯಕರ ಟೀಕೆಗೆ ಪ್ರತಿಕ್ರಿಯಿಸುತ್ತಾ, “ನಿಮಗೆ ಕೇಸರಿ ಕಂಡರೆ ಅಷ್ಟೇಕೆ ಭಯ. ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಇಂತಹ ಮಾತುಗಳನ್ನು ಯಾಕೆ ಆಡುತ್ತೀರಿ? ದೇಶದಲ್ಲಿ ಕೇಸರಿ ಬಣ್ಣವನ್ನು ನಿಷೇಧಿಸಲಾಗಿದೆಯೇ? ಪೊಲೀಸರು ಅಂತಹ ನಿಷೇಧಿತ ಬಣ್ಣದ ಬಟ್ಟೆ ತೊಟ್ಟಿದ್ದಾರೆಯೇ? ಕೇಸರಿ ಎಂಬುದು ತ್ಯಾಗದ ಸಂಕೇತ ಮತ್ತು ನಮ್ಮ ರಾಷ್ಟ್ರಧ್ವಜದ ಭಾಗ. ಬಿಳಿ ಟೋಪಿ, ಬಿಳಿ ಕುರ್ತಾದ ಬಗ್ಗೆ ಮಾತನಾಡದ ಸಿದ್ದರಾಮಯ್ಯ, ಕೇಸರಿ ಬಟ್ಟೆ ಬಗ್ಗೆ ಮಾತ್ರ ಯಾಕೆ ಅಷ್ಟೊಂದು ಮಾತನಾಡುತ್ತಾರೆ? ಹಾಗೆ ನೋಡಿದರೆ, ಹಲವು ಪೊಲೀಸರು ತಮ್ಮ ಕರ್ತವ್ಯದ ನಡುವೆಯೇ ನಮಾಜ್ ಮಾಡುತ್ತಾರೆ. ನಾವು ಅದನ್ನು ಗೌರವಿಂದಲೇ ಕಾಣುವುದಿಲ್ಲವೆ? ಪೊಲೀಸರ ಖಾಸಗೀ ಬದುಕನ್ನು ಗೌರವಿಸಬೇಕಲ್ಲವೆ? ಪೂಜೆಯ ದಿನ ಸಾಂಪ್ರದಾಯಿಕ ಉಡುಪಿನಲ್ಲಿರುವುದು ನಮ್ಮ ಸಂಸ್ಕೃತಿ” ಎಂದು ಪೊಲೀಸರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವರಸೆಯಲ್ಲಿ ಬಿಜೆಪಿಯ ಹಲವು ನಾಯಕರು ಕೂಡ ಕೇಸರಿ ಬಣ್ಣದ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗೆ ಯಾಕೆ ಅಷ್ಟೊಂದು ಭಯ? ಯಾಕೆ ಬೇರೆ ಬಣ್ಣದ ಬಟ್ಟೆಗಳ ವಿಷಯದಲ್ಲಿ ಇಲ್ಲದ ಆತಂಕ ಅವರಿಗೆ ಈ ವಿಷಯದಲ್ಲಿದೆ ಎಂದು ಪ್ರಶ್ನಿಸುತ್ತಾ, ಪೊಲೀಸರ ಕೇಸರೀಕರಣವನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ, ವಾಸ್ತವವಾಗಿ ಪೊಲೀಸ್ ಎಂಬುದು ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂವಿಧಾನದ ಚೌಕಟ್ಟಿನಡಿಯಲ್ಲಿ ಕಾಯಬೇಕಾದ ಒಂದು ರಕ್ಷಣಾ ವ್ಯವಸ್ಥೆ. ಅದು ಸಂವಿಧಾನಕ್ಕೆ ಮತ್ತು ಸಂವಿಧಾನದಡಿಯಲ್ಲಿ ರಚನೆಯಾಗಿರುವ ದೇಶದ ಕಾನೂನುಗಳಿಗೆ ಅಧೀನವಾಗಿರಬೇಕು ಮತ್ತು ತಾನು ಮತ-ಧರ್ಮ, ಜಾತಿ-ಪಂಥ, ಜನಾಂಗ-ಕೋಮುಗಳನ್ನು ಮೀರಿ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯನ್ನು ಎತ್ತಿ ಹಿಡಿಯುತ್ತೇನೆ ಎಂಬುದನ್ನು ಪ್ರತಿ ಹಂತದಲ್ಲಿ ಖಾತರಿಪಡಿಸಬೇಕು. ಪೊಲೀಸ್ ನೀತಿ ಸಂಹಿತೆಯಲ್ಲಿ ಕೂಡ ಇದನ್ನೇ ಹೇಳಲಾಗಿದೆ. ಪೊಲೀಸರು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ಮತ-ಧರ್ಮ ಅನುಸರಿಸಿದರೂ ಕರ್ತವ್ಯದಲ್ಲಿ ಯಾವುದೇ ಮತಧರ್ಮದ ಪಕ್ಷಪಾತಿಯಾಗಿರಕೂಡದು. ಧರ್ಮ, ಜಾತಿ, ಭಾಷೆ ಮುಂತಾದ ವಿಷಯಗಳಲ್ಲಿ ಕರ್ತವ್ಯನಿರತ ಪೊಲೀಸರು ನಿರ್ಲಿಪ್ತರಾಗಿರಬೇಕು” ಎನ್ನುತ್ತದೆ ಪೊಲೀಸ್ ನೀತಿ ಸಂಹಿತೆ.
ಅಂದರೆ ಗೃಹ ಸಚಿವರಿಗೆ ಪೊಲೀಸ್ ನೀತಿ ಸಂಹಿತೆಯ ಈ ಪ್ರಾಥಮಿಕ ಪಾಠಗಳನ್ನು ಮನನ ಮಾಡಿಸಬೇಕಿದೆ. ಅವರು ಹೇಳುವಂತೆ ಸಾರ್ವಜನಿಕವಾಗಿ ದೇಶದಲ್ಲಿ ಯಾವುದೇ ಬಣ್ಣದ ನಿಷೇಧವಿಲ್ಲ, ಅಥವಾ ವ್ಯಕ್ತಿಗಳಾಗಿ ವೈಯಕ್ತಿಕ ಬದುಕಿನಲ್ಲಿ ಪೊಲೀಸರೂ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿ, ನೌಕರರಿಗೆ ಅವರವರ ನಂಬಿಕೆಯ ಧರ್ಮ-ನಂಬಿಕೆಗಳ ವಿಷಯದಲ್ಲಿ ಯಾವ ನಿರ್ಬಂಧವೂ ಇಲ್ಲ. ಆದರೆ, ಕರ್ತವ್ಯದ ಅವಧಿಯಲ್ಲಿ ಸರ್ಕಾರಿ ನೌಕರರು ತಮ್ಮ ಧರ್ಮ, ಮತ, ಭಾಷೆಗಳನ್ನು ಮೀರಿ, ಸಾರ್ವಜನಿಕ ಸೇವಕರಾಗಿ ತಮ್ಮಲ್ಲಿ ಸೇವೆ ಕೋರಿ ಬರುವ ಪ್ರತಿ ನಾಗರೀಕನನ್ನೂ ಸಮಾನವಾಗಿ ಕಾಣಬೇಕಾಗುತ್ತದೆ. ಅದರಲ್ಲೂ, ಜಾತಿ, ಮತ, ಕೋಮು ಎನ್ನದೆ ಎಲ್ಲ ನಾಗರಿಕರು ನ್ಯಾಯ ಅರಸಿ, ರಕ್ಷಣೆ ಕೋರಿ ಬರುವ ಪೊಲೀಸ್ ಠಾಣೆಯಲ್ಲಿ ಒಂದು ಧರ್ಮ, ಒಂದು ಜಾತಿ, ಒಂದು ಕೋಮಿನ ಪ್ರತಿನಿಧಿಗಳಂತೆ ಪೊಲೀಸರೇ ಕಾಣಿಸಿಕೊಂಡರೆ, ಹಾಗೆ ನ್ಯಾಯ ಮತ್ತು ರಕ್ಷಣೆ ಕೋರಿ ಬರುವವರಿಗೆ ಯಾವ ನ್ಯಾಯದ, ಯಾವ ರಕ್ಷಣೆಯ ಖಾತರಿ ನೀಡುವಿರಿ ? ಎಂಬುದು ಪ್ರಶ್ನೆ.
ಪೊಲೀಸರು ಮನುಷ್ಯರಲ್ಲವೆ? ಅವರಿಗೂ ದೇವರು, ಧರ್ಮ ಇಲ್ಲವೇ? ಅವರಿಗೂ ಭಾವನೆಗಳಿಲ್ಲವೆ? ಎಂಬ ಮಾತುಗಳೂ ಕೇಳಿಬಂದಿವೆ. ಆದರೆ, ಹಾಗೆ ಮಾತನಾಡುವವರು ನೆನಪಿಡಬೇಕಾದ ಅಂಶವೆಂದರೆ; ಪೊಲೀಸರು ಸೇರಿದಂತೆ ಯಾವುದೇ ಸಮವಸ್ತ್ರಧಾರಿ ಸಿಬ್ಬಂದಿ ತನ್ನ ಮನೆಯಲ್ಲಿ ಮತ್ತು ಕರ್ತವ್ಯದ ಹೊರತಾಗಿ ಸಾರ್ವಜನಿಕವಾಗಿ ಆತನ/ಆಕೆಯ ನಂಬಿಕೆ, ಧರ್ಮ, ದೇವರ ಪಾಲನೆಗೆ ಯಾರ ಆಕ್ಷೇಪವೂ ಇಲ್ಲ. ಬದಲಾಗಿ ಕರ್ತವ್ಯದ ವೇಳೆ, ಕರ್ತವ್ಯದ ಸ್ಥಳದಲ್ಲಿ, ಕಚೇರಿಯಲ್ಲಿ ಅಂತಹ ವ್ಯಕ್ತಿಗತ ನಂಬಿಕೆಗಳು ಅವರ ವೈಯಕ್ತಿಕ ನಂಬಿಕೆಯಾಗಿ, ನಡೆಯಾಗಿ ಉಳಿಯುವುದಿಲ್ಲ; ಅವು ಅವರು ಪ್ರತಿನಿಧಿಸುವ ಅಧಿಕೃತ ವ್ಯವಸ್ಥೆಯ ಅಭಿವ್ಯಕ್ತಿಯ ಸ್ವರೂಪ ಪಡೆಯುತ್ತವೆ ಮತ್ತು ಹಾಗೆ ಒಂದು ಪೊಲೀಸ್, ಅರಣ್ಯ ಮುಂತಾದ ಸಮವಸ್ತ್ರ ವ್ಯವಸ್ಥೆಯಲ್ಲಿ ವೈಯಕ್ತಿಕ ನಂಬಿಕೆ ಮತ್ತು ನಡವಳಿಕೆಗಳು, ಆಚರಣೆ ಮತ್ತು ರೀತಿರಿವಾಜುಗಳು ಬೇರೆಯದೇ ಅರ್ಥ ನೀಡುತ್ತವೆ.
ಒಂದು ಪೊಲೀಸ್ ಠಾಣೆಗೆ ನ್ಯಾಯ ಅಥವಾ ರಕ್ಷಣೆ ಕೋರಿ ಹೋಗುವ ಯಾವುದೇ ವ್ಯಕ್ತಿ, ಅಲ್ಲಿ ಧರ್ಮ, ಜಾತಿ, ಭಾಷೆಯ ಕಾರಣಕ್ಕೆ ತನಗೆ ರಕ್ಷಣೆ ಅಥವಾ ನ್ಯಾಯ ಸಿಗುತ್ತದೆ ಎಂದು ಹೋಗುವುದಿಲ್ಲ. ಬದಲಾಗಿ ದೇಶದ ಸಂವಿಧಾನ ಮತ್ತು ಅದರಡಿಯ ಕಾನೂನುಗಳಿಂದಾಗಿ ತನಗೆ ಸಿಗಬೇಕಾದ ನ್ಯಾಯ- ರಕ್ಷಣೆ ಸಿಗುತ್ತದೆ ಎಂದು ಹೋಗುತ್ತಾನೆ. ಒಬ್ಬ ಅಲ್ಪಸಂಖ್ಯಾತ ಧರ್ಮದ ಅಥವಾ ಮತಧರ್ಮಗಳಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಹಾಗೆ ಹೋದಾಗ, ಅಲ್ಲಿ ರಾಜಾರೋಷವಾಗಿ ಒಂದು ಬಹುಸಂಖ್ಯಾತ ಧರ್ಮಾಚರಣೆ, ಧರ್ಮಾನುಯಾಯಿ ಸಿಬ್ಬಂದಿಗಳು ಘೋಷಿತ ರೀತಿಯಲ್ಲಿ ತಮ್ಮನ್ನು ತಾವು ಒಂದು ನಿರ್ದಿಷ್ಟ ಧರ್ಮ, ಮತದ ಕಟ್ಟಾ ಅನುಯಾಯಿಗಳು ಎಂದು ತೋರಿಸಿಕೊಂಡರೆ, ಆತನ ಮನಸ್ಸಿನಲ್ಲಿ ಯಾವ ವಿಶ್ವಾಸ ಉಳಿಯಬಲ್ಲದು? ಹಾಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯಬೇಕಾದ ಅಧಿಕೃತ ಸರ್ಕಾರಿ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾ ಹೋದರೆ, ಅಂತಿಮವಾಗಿ ಅದರ ಪರಿಣಾಮಗಳು ಏನಾಗಬಹುದು? ಎಂಬುದನ್ನು ಗೃಹ ಸಚಿವರು ಯೋಚಿಸಿ ಇಂತಹ ಹೇಳಿಕೆ ನೀಡಿದ್ದಾರೆಯೇ?
ಅಂತಿಮವಾಗಿ ಕಾಪು ಮತ್ತು ವಿಜಯಪುರದಲ್ಲಿ ಕೇಸರಿ ದಿರಿಸು ತೊಟ್ಟು ಆಯುಧ ಪೂಜೆ ಮಾಡಿ ಗ್ರೂಫ್ ಫೋಟೋ ತೆಗೆಸಿಕೊಂಡಿರುವ ಪೊಲೀಸರು, ನಾಳೆ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಒಂದು ಕೋಮು ಗಲಭೆ ನಡೆದರೆ, ಒಂದು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂಘರ್ಷ, ವ್ಯಾಜ್ಯ, ನ್ಯಾಯದ ಪ್ರಶ್ನೆ ಎದುರಾದರೆ; ಆಗ ಈ ಕೇಸರಿಪ್ರಿಯ ಕಟ್ಟರ್ ಹಿಂದುತ್ವವಾದಿ ಪೊಲೀಸರು ಎಷ್ಟು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಾರೆ? ಆ ಘಟನೆ ಒಂದು ಬಹುಸಂಖ್ಯಾತ ಹಿಂದೂ ಮತ್ತು ಮತ್ತೊಂದು ಅಲ್ಪಸಂಖ್ಯಾತ ಸಮುದಾಯದ ನಡುವಿನ ಕೋಮು ಘರ್ಷಣೆಯಾಗಿದ್ದರೆ, ಇವರು ನಿಜವಾಗಿಯೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆ ಕೂಡ ಏಳುತ್ತದೆ. ಆದರೆ, ಹಾಗೆ ನಡೆದುಕೊಳ್ಳುತ್ತಾರೆಯೋ ಅಥವಾ ಇಲ್ಲವೋ ಎಂಬುದಕ್ಕಿಂತ ಮುಖ್ಯವಾದುದು ಅಂತಹ ಒಂದು ಸಂದರ್ಭದಲ್ಲಿ ಈ ಪೊಲೀಸರು ಹೇಗೆ ನಡೆದುಕೊಂಡರೂ ಅವರ ನಡವಳಿಕೆಗೆ ಅಂತಿಮವಾಗಿ ಸಾರ್ವಜನಿಕರ ಕಣ್ಣಲ್ಲಿ ಇದೇ ಕೇಸರಿ ದಿರಿಸಿನ ಬಣ್ಣವೇ ಮೆತ್ತಿಕೊಳ್ಳುವುದಿಲ್ಲವೆ?
ಸದ್ಯಕ್ಕೆ ರಾಜ್ಯದಲ್ಲಿ ಕೇಸರಿಕರಣದಲ್ಲಿ ನಂಬಿಕೆ ಇರುವ ಹಿಂದುತ್ವವಾದಿ ಬಿಜೆಪಿ ಅಧಿಕಾರದಲ್ಲಿದೆ. ಈ ಪೊಲೀಸರ ನಡೆಗೆ ಸ್ವತಃ ಗೃಹ ಸಚಿವರಿಂದ ಹಿಡಿದು ಆಳುವ ಪಕ್ಷದ ಆಶೀರ್ವಾದ, ಸಮರ್ಥನೆಗಳೂ ಇವೆ. ಆದರೆ, ಈ ಸರ್ಕಾರ ಶಾಶ್ವತವೇ? ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಜನಸಾಮಾನ್ಯರ ಗೌರವಿಸುವಂತೆ ನೋಡಿಕೋಳ್ಳಬೇಕಾದ ಮತ್ತು ಅಂತಹ ಗೌರವ ಹುಟ್ಟುವಂತೆ ವಿಶ್ವಾಸ ಉಳಿಸಿಕೊಳ್ಳಬೇಕಾದ ಪೊಲೀಸ್ ವ್ಯವಸ್ಥೆ ಶಾಶ್ವತವೇ? ಎಂಬುದನ್ನು ವಿವೇಚಿಸಿದರೆ ಬಹುಶಃ ಪೊಲೀಸರು ಎಸಗಿದ ಕೃತ್ಯದ ಪರಿಣಾಮ ಎಷ್ಟು ಅನಾಹುತಕಾರಿ ಎಂಬುದು ಅರಿವಾಗಬಹುದು. ಆದರೆ, ಸಂವಿಧಾನ ಬದಲಾಯಿಸಲೆಂದೇ ನಾವು ಬಂದಿರುವುದು ಎಂಬುದನ್ನೇ ಘೋಷವಾಕ್ಯ ಮಾಡಿಕೊಂಡವರಿಗೆ ಇಂತಹ ನಡೆಗಳು ಅನಾಹುತಕಾರಿ ಎನಿಸುವುದು ಸಾಧ್ಯವಿಲ್ಲ.. ಅಲ್ಲವೆ?