ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿಶ್ವದ ನಾಯಕರಿಗೆಲ್ಲಾ ನಾಯಕ, ವಿಶ್ವಗುರು ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಮೋದಿ ಅಭಿಮಾನಿಗಳು ಅದನ್ನೇ ನಿಜವೆಂದೇ ನಂಬಿ ʼವಿಶ್ವಗುರುʼವಿನ ಭಜನೆಯಲ್ಲಿ ತೊಡಗಿದ್ದಾರೆ. ಆದರೆ, ವಿಶ್ವಗುರು ಮೋದಿಯ ಸಾಧಾರಣ ಸಲಹೆಯನ್ನು ಸ್ವತಃ ಅವರ ಸಂಪುಟದ ಸಹೋದ್ಯೋಗಿಗಳು, ಸಚಿವರೇ ಮಾಡುತ್ತಿಲ್ಲ ಎನ್ನುವುದು ವಾಸ್ತವ.
2020 ರಲ್ಲಿ ಇಡೀ ವಿಶ್ವಕ್ಕೆ ಬಂದೆರಗಿದ ಅನಾಹುತಕಾರಿ ಕರೋನಾದಿಂದ ಭಾರತ ದೇಶವೂ ಹೊರತಾಗಿರಲಿಲ್ಲ. ದೀರ್ಘಾವದಿ ಲಾಕ್ಡೌನ್ಗಳು, ವೀಕೆಂಡ್ ಕರ್ಫ್ಯೂಗಳ ಹೊರತಾಗಿಯೂ ಭಾರತಕ್ಕಾದ ನಷ್ಟ ಅಷ್ಟಿಷ್ಟಲ್ಲ. ಕರೋನಾ ತೀವ್ರತೆ ಕಡಿಮೆಯಾಗಿದ್ದರೂ ಅದರ ನೆರಳಿನಿಂದ ಇನ್ನೂ ಜನರು ಹೊರ ಬಂದಿಲ್ಲ. ಹಾಗಾಗಿಯೇ ಇಂದಿಗೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಮೊದಲಾದ ನಿಯಮಗಳು ಇನ್ನೂ ಚಾಲ್ತಿಯಲ್ಲಿದೆ.
ಮೊದಮೊದಲು ಮಾಸ್ಕ್ ಧರಿಸುವಿಕೆಗೆ ಹೊಂದಿಕೊಳ್ಳಲು ಜನರು ಕಷ್ಟಪಟ್ಟರಾದರೂ ಸದ್ಯ ಬಹುತೇಕ ನಗರ ಭಾಗಗಳಲ್ಲಿ, ಪಟ್ಟಣಗಳಲ್ಲಿ ಮಾಸ್ಕ್ ಧರಿಸಿರಿಯೇ ಜನರು ಹೊರಬರುತ್ತಿದ್ದಾರೆ. ಅತೀವ ಜನಸಂದಣಿಯಿರುವ ಕಡೆಗಳಲ್ಲಿ ಮಾಸ್ಕ್ ಧರಿಸಿ ಎಚ್ಚರಿಕೆ ಪಾಲಿಸುತ್ತಿದ್ದಾರೆ. ಭಾರತದ ಪ್ರಧಾನಿ ಮೋದಿಯವರೂ ಮಾಸ್ಕ್ ಧರಿಸುವಂತೆ ಹಾಗೂ ಕೋವಿಡ್ ಪ್ರೋಟೋಕಾಲ್ ಪಾಲಿಸುವಂತೆ ಭಾರತದ ಜನರಿಗೆ ಮನವಿ ಸಲ್ಲಿಸಿದ್ದರು. ಮಾಸ್ಕ್ ಧರಿಸುವಿಕೆಯನ್ನು ಕಾಲಿನ ರಕ್ಷಣೆಗೆ ಶೂ ಧರಿಸುವಷ್ಟೇ ಸಹಜವಾಗಿ ಧರಿಸಿಕೊಂಡು ಅಭ್ಯಾಸ ಮಾಡಿಕೊಳ್ಳಿ ಎಂದು ಪ್ರಧಾನಿ ಮನವಿ ಸಲ್ಲಿಸಿದ್ದರು.
ಶತಕೋಟಿ ಲಸಿಕೆಯ ಮೈಲಿಗಲ್ಲು ತಲುಪಿದ ಸಂಧರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, “ನಾವು ಮನೆಯಿಂದ ಹೊರಗೆ ಕಾಲಿಡುವಾಗ ಹೇಗೆ ಪಾದರಕ್ಷೆಗಳನ್ನು ಧರಿಸುತ್ತೇವೋ ಅಷ್ಟೇ ಸಹಜವಾಗಿ, ಮಾಸ್ಕ್ ಕೂಡಾ ಧರಿಸಬೇಕು” ಎಂದು ಮನವಿ ಮಾಡಿದ್ದರು. ಈ ಹಿಂದೆ ಹಲವು ಬಾರಿ ಈ ರೀತಿಯ ಮನವಿ ಸಲ್ಲಿಸಿದ್ದರೂ ಸ್ವತಃ ಮೋದಿ ಸಂಪುಟದ ಸಚಿವರೇ ಈ ಮನವಿಯನ್ನು ತಿರಸ್ಕರಿಸುವ ಹಲವು ಘಟನೆಗಳು ನಡೆದಿದೆ. ಇಂತಹ ಕನಿಷ್ಟ 10 ಸಂಧರ್ಭಗಳು ಇಲ್ಲಿದೆ.
- ರಕ್ಷಣಾ ಸಚಿವ ರಾಜನಾಥ್ ಸಿಂಗ್
ಅಕ್ಟೋಬರ್ 25 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯಲ್ಲಿ ನಡೆದ ರಾಯಭಾರಿಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕುರಿತು ರಾಜ್ನಾಥ್ ಸಿಂಗ್ ಟ್ವೀಟ್ ಮಾಡಿರುವ ಫೋಟೋಗಳಲ್ಲಿ ಅವರು ಮಾಸ್ಕ್ ಧರಿಸದೇ ಇರುವುದು ಕಂಡು ಬರುತ್ತದೆ. ಆ ಫೊಟೋಗಳಲ್ಲಿ ಅವರೊಬ್ಬರೇ ಮಾಸ್ಕ್ ಧರಿಸದ ವ್ಯಕ್ತಿ ಆಗಿದ್ದರು ಅನ್ನುವುದು ವಿಶೇಷ.
- ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಕಾಶ್ಮೀರ ಪ್ರವಾಸದುದ್ದಕ್ಕೂ ಕಣಿವೆ ರಾಜ್ಯದಲ್ಲಿ ಸಮವಸ್ತ್ರಧಾರಿ ಸಿಬ್ಬಂದಿ ಮತ್ತು ನಾಗರಿಕರೊಂದಿಗೆ ಬಹಳ ನಿಕಟವಾಗಿ ಸಂವಹನ ನಡೆಸಿದ್ದಾರೆ. ಬಿಎಸ್ಎಫ್ ಬಂಕರ್ನಲ್ಲಿದ್ದ ಸಮಯದುದ್ದಕ್ಕೂ ಹಾಗೂ ಖೀರ್ ಭವಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ಮತ್ತು ವಿವಿಧ ನಾಗರಿಕರ ಸಮೂಹದೊಂದಿಗೆ ಸಂವಾದ ನಡೆಸಬೇಕಾದರೆ ಅಮಿತ್ ಶಾ ಮಾಸ್ಕ್ ಧರಿಸದೆಯೇ ಪಾಲ್ಗೊಂಡಿದ್ದಾರೆ. ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡಾ ಮಾಸ್ಕ್ ಧರಿಸದೆ ಇದ್ದರು.

- ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ.ಎಲ್. ಮುರುಗನ್
ಅಕ್ಟೋಬರ್ 22 ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿರುವ ವೈಎಸ್ಆರ್ ಹೆಲ್ತ್ ಕ್ಲಿನಿಕ್ನಲ್ಲಿರುವ ಲಸಿಕೆ ಕೇಂದ್ರಕ್ಕೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾದ ಡಾ.ಎಲ್. ಮುರುಗನ್ ಅವರು ಭೇಟಿ ನೀಡಿದರು. ಹಲವಾರು ಅಧಿಕೃತ ಫೋಟೋಗಳಲ್ಲಿ, ಜನರೊಂದಿಗೆ ಇರುವಾಗಲೂ ಮುರುಗನ್ ಮಾಸ್ಕ್ ಇಲ್ಲದೆ ಇರುವುದು ಕಂಡು ಬರುತ್ತದೆ.

- ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಕ್ಟೋಬರ್ 20 ರಂದು ಉತ್ತರಾಖಂಡದ ಪಕ್ಕದಲ್ಲಿರುವ ಉತ್ತರ ಪ್ರದೇಶದ ರಾಂಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಅವರು ಪ್ರವಾಹ ಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಅವರ ಕಛೇರಿ ಬಿಡುಗಡೆಗೊಳಿಸಿರುವ ಫೋಟೋಗಳಲ್ಲಿ ಅವರು ಮಾಸ್ಕ್ ರಹಿತವಾಗಿ ತೆಪ್ಪವನ್ನು ಸವಾರಿ ಮಾಡುವುದನ್ನು ಹಾಗೂ ಸಂತ್ರಸ್ತರಿಗೆ ಸಾಮಾಗ್ರಿ ವಿತರಿಸುವುದು ಕಂಡುಬರುತ್ತದೆ.

- ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಅಕ್ಟೋಬರ್ 20 ರಂದು ತಮ್ಮ ಉಸ್ತುವಾರಿಯಲ್ಲಿ ಒಂಬತ್ತು ಇಲಾಖೆಗಳು/ಸಚಿವಾಲಯಗಳಲ್ಲಿ ಭಾರತ ಸರ್ಕಾರದಲ್ಲಿ ಬಾಕಿ ಇರುವವರ ವಿಲೇವಾರಿಗಾಗಿ ಅಕ್ಟೋಬರ್ 2 ರಂದು ಪ್ರಾರಂಭಿಸಲಾದ ವಿಶೇಷ ಅಭಿಯಾನದ ಪ್ರಗತಿಯನ್ನು ಪರಿಶೀಲಿಸಿದರು. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಹಾಕಿದ ಫೋಟೋಗಳು ಪೌರಕಾರ್ಮಿಕರಿಂದ ತುಂಬಿರುವ ಕೋಣೆಯಲ್ಲಿ ಮಾಸ್ಕ್ ಇಲ್ಲದೆ ಸಚಿವರಿರುವುದನ್ನು ತೋರಿಸುತ್ತದೆ.
- ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್
ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಅಕ್ಟೋಬರ್ 18 ರಂದು ಬೆಂಗಳೂರಿನ ಸಿಡಿಎಸಿ ಕೇಂದ್ರಕ್ಕೆ ಭೇಟಿ ನೀಡಿ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ.

- ಸಚಿವೆ ದರ್ಶನ ವಿಕ್ರಮ್ ಜರ್ದೋಶ್
ಕೈಮಗ್ಗ ತಜ್ಞರ ಸಮಿತಿಯ ನಿಯೋಗವು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ವಿಕ್ರಮ್ ಜರ್ದೋಶ್ ಅವರನ್ನು ಅಕ್ಟೋಬರ್ 18 ರಂದು ಅವರ ಕಚೇರಿಯಲ್ಲಿ ಭೇಟಿ ಮಾಡಿತು. ಸಭೆಯ ಅಧಿಕೃತ ಫೋಟೋದಲ್ಲಿ ಸಚಿವೆ ಮಾಸ್ಕ್ ಧರಿಸದಿರುವುದು ಕಾಣಬಹುದು.

- ಮನ್ಸುಖ್ ಮಾಂಡವಿಯಾ ಮತ್ತು ಹರ್ದೀಪ್ ಸಿಂಗ್ ಪುರಿ
ಅಕ್ಟೋಬರ್ 16 ರಂದು, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಂ, ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತದ ವ್ಯಾಕ್ಸಿನೇಷನ್ ಡ್ರೈವ್ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಪಾಲ್ಗೊಂಡರು.

- ದೇವುಸಿನ್ಹ ಚೌಹಾಣ್
ಅಕ್ಟೋಬರ್ 14 ರಂದು ಟೆಲಿಕಾಂ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳಿಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯ ಬಿಡುಗಡೆ ಸಮಾರಂಭದಲ್ಲಿ ಸಂವಹನ ರಾಜ್ಯ ಸಚಿವ ದೇವುಸಿನ್ಹ್ ಚೌಹಾಣ್ ಉಪಸ್ಥಿತರಿದ್ದರು. ಪಿಐಬಿ ಹೊರತಂದ ಈವೆಂಟ್ನ ಅಧಿಕೃತ ಫೋಟೋಗಳು ಸಚಿವರು ಮತ್ತು ಇತರ ಅನೇಕರು ಮಾಸ್ಕ್ ಧರಿಸದಿರುವುದನ್ನು ತೋರಿಸುತ್ತವೆ.

- ಅನುರಾಗ್ ಠಾಕೂರ್,
ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಅಕ್ಟೋಬರ್ 12 ರಂದು ಭೇಟಿಯಾದರು. ಬಿಡುಗಡೆಯಾದ ಫೋಟೋಗಳಲ್ಲಿ ಮಾಸ್ಕ್ ಧರಿಸಿರಲಿಲ್ಲ.

Subscribe to our channels on YouTube & Twitter
ಮೂಲ – ದಿ ಪ್ರಿಂಟ್