ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 6ನೇ ಹಂತದ ಮತದಾನ ಇಂದು ನಡೆಯುತ್ತಿದೆ. ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಶೇ 8.69ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ಪರ್ಧಿಸುತ್ತಿರುವ ಗೋರಖ್ಪುರ ಸೇರಿದಂತೆ ಇಂದು 57 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಗೋರಖ್ಪುರದಲ್ಲಿ ಮತಚಲಾಯಿಸಿ ಮಾತನಾಡಿದ ಯೋಗಿ, ಹೊಸ ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಜನರು ತಪ್ಪದೆ ಮತಚಲಾಯಿಸಬೇಕು ಎಂದು ಮನವಿ ಮಾಡಿದರು.
ಗೋರಖ್ಪುರ ಸೇರಿದಂತೆ ಅಂಬೇಡ್ಕರ್ನಗರ, ಬಲರಾಮ್ಪುರ, ಸಿದ್ದಾರ್ಥನಗರ, ಕಬೀರ್ನಗರ, ಮಹಾರಾಜ್ಗಂಜ್, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಾರ್ಚ್ 7ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ಕ್ಕೆ ಪಲಿತಾಂಶ ಪ್ರಕಟವಾಗಲಿದೆ.