• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸೀಮಿತ ಆಯ್ಕೆಗಳ ನಡುವೆ ಮತದಾರನ ಆದ್ಯತೆಗಳೂ ಸಹ ಪ್ರಭಾವಕ್ಕೊಳಗಾಗುತ್ತವೆ

ಪ್ರತಿಧ್ವನಿ by ಪ್ರತಿಧ್ವನಿ
May 11, 2026
in ಅಂಕಣ
0
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ
Share on WhatsAppShare on FacebookShare on Telegram

ನಾ ದಿವಾಕರ
( ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ – ಹಾಗೂ
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ
ಲೇಖನಗಳ ಮುಂದುವರೆದ ಭಾಗ )

ADVERTISEMENT

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಮತದಾರರ ನಿರ್ಣಯವೇ ಅಂತಿಮವೇನೋ ಹೌದು ಆದರೆ ಮತದಾರರ ಅಂತಿಮ ಆಯ್ಕೆಯ ಪ್ರಶ್ನೆ ಬಂದಾಗ ಭಾರತದ ಪ್ರಜಾತಂತ್ರ ವ್ಯವಸ್ಥೆ ಹೊಸ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪೂರ್ವ ಪ್ರಣಾಳಿಕೆಗಳ ಮುಖಾಂತರ ಜನತೆಗೆ ನೀಡುವ ಭರವಸೆ ಮತ್ತು ಆಶ್ವಾಸನೆಗಳೇ ಮತಗಟ್ಟೆಗಳಲ್ಲಿ ನಿರ್ಣಾಯಕವಾಗಿ ಬಿಂಬಿಸಲ್ಪಡುತ್ತಿದ್ದ ಕಾಲವೂ ಒಂದಿತ್ತು. ಬಹುಶಃ 2014ರ ನಂತರದ ಪೀಳಿಗೆಗೆ ʼ ಚುನಾವಣಾ ಪ್ರಣಾಳಿಕೆ ʼ ಎಂಬ ದಸ್ತಾವೇಜಿನ ಬಗೆಗೆ ಅಂದಾಜು ಸಹ ಇರಲು ಸಾಧ್ಯವಿಲ್ಲ.

ಔಪಚಾರಿಕವಾಗಿ ಹೊರಬರುವ ಪ್ರಣಾಳಿಕೆಗಳಲ್ಲಿರುವ ಭರವಸೆಗಳು ಹಾಳೆಗಳಲ್ಲೇ ಉಳಿಯವುದೇ ಹೆಚ್ಚು. ಇದಕ್ಕೆ ಪರ್ಯಾಯವಾಗಿ ಚುನಾವಣಾ ಭಾಷಣಗಳಲ್ಲಿ ನೀಡುವ ಆಶ್ವಾಸನೆಗಳು ಜನಸಾಮಾನ್ಯರನ್ನು ಸುಲಭವಾಗಿ ತಲುಪುತ್ತವೆ. ಸುದ್ದಿವಾಹಿನಿಗಳಾಗಲೀ, ರಾಜಕೀಯ ವಿಶ್ಲೇಷಕರಾಗಲೀ ಪಕ್ಷಗಳ ಪ್ರಣಾಳಿಕೆಗಳನ್ನು ಆಧರಿಸಿ ತಮ್ಮ ಅಭಿಪ್ರಾಯ ಉತ್ಪಾದಿಸುವ ಪರಂಪರೆಗೆ ಡಿಜಿಟಲ್‌ ಭಾರತ ವಿದಾಯ ಹೇಳಿದೆ.
ಚುನಾವಣೆಗಳು ಘೋಷಣೆಯಾದ ದಿನದಿಂದ ಮತದಾನದವರೆಗೂ ವಿದ್ಯುನ್ಮಾನ ಸಂವಹನ ಜಗತ್ತಿನಲ್ಲಿ ಉತ್ಪಾದಿಸಲಾಗುವ ಅಭಿಪ್ರಾಯ-ಅನಿಸಿಕೆಗಳು ರಾಜಕೀಯ ನಾಯಕರ/ಪಕ್ಷಗಳ ಜನಪ್ರಿಯತೆಯನ್ನೂ ಸಹ ಅಷ್ಟೇ ಪರಿಣಾಮಕಾರಿಯಾಗಿ ಉತ್ಪಾದಿಸಿ ವಿತರಿಸುವುದು 21ನೆ ಶತಮಾನದ ಬೆಳವಣಿಗೆ. ಇಲ್ಲಿ ಉಂಟಾಗುವ ಪ್ರಭಾವವನ್ನು ತಳಮಟ್ಟದವರೆಗೂ ಕೊಂಡೊಯ್ಯುವ ಕೆಲಸವನ್ನು ಸಾಮಾಜಿಕ ಮಾಧ್ಯಮಗಳು (Social Media), ಯು ಟ್ಯೂಬ್‌ಗಳು ಮಾಡುತ್ತವೆ. ಭ್ರಮಾಧೀನ ಮತದಾರರರು (Brainwashed Voters) ಎಂದು ವ್ಯಾಖ್ಯಾನಿಸಲಾಗುವ ಜನಸಾಮಾನ್ಯರ ನಡುವೆ ಈ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಕೆಲಸವನ್ನು ಕಾರ್ಪೋರೇಟ್‌ ಹಿತಾಸಕ್ತಿಗಳು ನಿರ್ವಹಿಸುತ್ತವೆ. ವರ್ತಮಾನದ ಚುನಾವಣೆಗಳಲ್ಲಿ ಹರಿಯುವ ಹಣದ ಹೊಳೆಯ ಮೂಲ ಈ ಮಾರುಕಟ್ಟೆಯಲ್ಲಿ ಗುರುತಿಸಬಹುದು.

ಸಂವಿಧಾನಕ್ಕೆ ವಿಮುಖವಾದ ಬೆಳವಣಿಗೆ
ಈ ವಿರೋಧಾಭಾಸಗಳ ನಡುವೆಯೇ ಐದು ರಾಜ್ಯಗಳ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ. SIR ಪ್ರಕ್ರಿಯೆಯಲ್ಲಿ ಈ ಹಕ್ಕನ್ನು ಕಳೆದುಕೊಂಡಿರುವ ಲಕ್ಷಾಂತರ ಜನರು ಈ ಹಕ್ಕು ಮರಳಿ ಪಡೆಯಲು ಹರಸಾಹಸ ಮಾಡಬೇಕಿದೆ. ಹಿಂದಿನ ಹಲವು ಚುನಾವಣೆಗಳಲ್ಲಿ ಮತ ಚಲಾಯಿಸಿರುವ ಈ ಮತವಂಚಿತ ಜನರು (Vote Deprived people) ತಮ್ಮ ವೈಯುಕ್ತಿಕ ಅಸ್ತಿತ್ವ ಮತ್ತು ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಸಂವಿಧಾನವನ್ನೇ ಆಶ್ರಯಿಸಬೇಕಿದೆ. ಈ ಮತವಂಚಿತ ಜನರ ಮತಗಳಿಂದಲೇ ಈ ಹಿಂದೆ ಚುನಾವಣೆಗಳಲ್ಲಿ ಆಯ್ಕೆಯಾಗಿದ್ದ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಸಾಂವಿಧಾನಿಕ ಮಾನ್ಯತೆ ಹೇಗೆ ಪಡೆಯಲು ಸಾಧ್ಯ ಎಂಬ ಜಟಿಲ ಪ್ರಶ್ನೆಗೆ ತಜ್ಞರು ಉತ್ತರ ಶೋಧಿಸಬೇಕಿದೆ. ಮತದಾನವನ್ನು ಕಡ್ಡಾಯ ಮಾಡುವ ಮೂಲಕ ಹೆಚ್ಚು ಜನರನ್ನು ಮತಗಟ್ಟೆಗೆ ಕರೆತರುವ ಆಶಯಗಳಿಂದ ಭಾರತದ ಪ್ರಜಾತಂತ್ರ ಈಗ ಮತವಂಚಿತರನ್ನು ಹೆಚ್ಚು ಮಾಡುವ ಕಡೆಗೆ ಹೊರಳುತ್ತಿರುವುದು ದುರಂತ.

ಪ್ರಸಕ್ತ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಲ ಮತ್ತು ತಮಿಳುನಾಡು ದೇಶದ ರಾಜಕೀಯ ನಕಾಶೆಗೆ ಹೊಸ ರೂಪ ಕೊಡುವಂತೆ ಕಾಣುತ್ತದೆ. ಈ ಎರಡು ರಾಜ್ಯಗಳಲ್ಲಿ ಉಂಟಾಗಿರುವ ಪಲ್ಲಟಗಳು ಎರಡು ನೆಲೆಗಳಲ್ಲಿ ಭವಿಷ್ಯದ ಸಾಮಾಜಿಕ-ರಾಜಕೀಯ ವಿದ್ಯಮಾನಗಳನ್ನು ಪ್ರಭಾವಿಸುತ್ತವೆ. ಮೊದಲನೆಯದು ತಮಿಳುನಾಡಿನಲ್ಲಿ ಉದಯಿಸಿದ ಸಿನಿಮಾ ನಟ ವಿಜಯ್‌ ಜೋಸೆಫ್‌ ನಾಯಕತ್ವದ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಅತಿ ದೊಡ್ಡ ಪಕ್ಷವಾಗಿ 108 ಸ್ಥಾನಗಳನ್ನು ಗಳಿಸಿದ್ದರೂ, ಬಹುಮತ ಸ್ಥಾಪಿಸಲು ಕಾಂಗ್ರೆಸ್‌, ಐಯುಎಂಎಲ್‌ ( ಮುಸ್ಲಿಂಲೀಗ್), ಸಿಪಿಐ , ಸಿಪಿಎಂ ಮತ್ತು ವಿಸಿಕೆಯಂತಹ ಸಣ್ಣ ಪಕ್ಷಗಳನ್ನು ಅವಲಂಬಿಸಿ ಸರ್ಕಾರ ರಚಿಸಿದೆ. ಶಾಸನಸಭೆಯಲ್ಲಿ ಸಾಬೀತುಪಡಿಸಬೇಕಾದ ಬಹುಮತವನ್ನು ಚುನಾಯಿತ ಪಕ್ಷಗಳು ರಾಜಭವನದ ಅಂಗಳದಲ್ಲೇ ಪ್ರದರ್ಶಿಸುವ ಒಂದು ವಿಕೃತ ವ್ಯವಸ್ಥೆ ಚಾಲ್ತಿಯಲ್ಲಿದ್ದು, ವಿಜಯ್‌ ಸಹ ಇದೇ ಸನ್ನಿವೇಶವನ್ನು ಎದುರಿಸಿ ಕೊನೆಗೂ ಗೆದ್ದಿದ್ದಾರೆ.

ದ್ರಾವಿಡ ಕೋಟೆಯಲ್ಲಿ ಹೊಸದನಿ
ದ್ರಾವಿಡ ಪಕ್ಷಗಳ ಭದ್ರಕೋಟೆ ಎನಿಸಿದ್ದ ತಮಿಳುನಾಡು ಈಗ ವಿಜಯ್‌ ಪ್ರವೇಶದಿಂದ ಭಗ್ನಗೊಂಡಿದೆ. ಟಿವಿಕೆ ದ್ರಾವಿಡ ಪಕ್ಷ ಎನಿಸಿಕೊಳ್ಳಲು ಯೋಗ್ಯವೇ ? ಇದು ಸ್ಪಷ್ಟವಾಗುವಂತಹ ಯಾವುದೇ ಲಕ್ಷಣಗಳು ವಿಜಯ್‌ ಅವರ ರಾಜಕೀಯ ಚಟುವಟಿಕೆಗಳಲ್ಲಿ ಕಾಣುವುದಿಲ್ಲ. ಬಹುಮತದ ಅಂಚಿನಲ್ಲಿರುವ ಟಿವಿಕೆ ಸರ್ಕಾರ ಇತ್ತ ಎಡ-ಅತ್ತ ಕಾಂಗ್ರೆಸ್‌ ಪಕ್ಷಗಳ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಟಿವಿಕೆ ಸರ್ಕಾರಕ್ಕೆ ಕೈಜೋಡಿಸಿರುವ ಪಕ್ಷಗಳಲ್ಲಿ ಐಯುಎಂಎಲ್-ಕಾಂಗ್ರೆಸ್‌ ಕೇರಳದಲ್ಲಿ ಎಡಪಕ್ಷಗಳ ನೇರ ಎದುರಾಳಿಗಳು ಎನ್ನುವುದನ್ನು ಗಮನಿಸುತ್ತಲೇ ಇರಬೇಕು. ಈ ಅನಿಶ್ಚಿತ ಅಥವಾ ಅತಂತ್ರ ಪರಿಸ್ಥಿತಿಯೇ ಬಿಜೆಪಿಯ ತಂತ್ರಗಾರಿಕೆಗಳಿಗೆ ಪ್ರಶಸ್ತ ಭೂಮಿಕೆ ಒದಗಿಸುತ್ತದೆ. ಶಾಸಕರ ಖರೀದಿ ಮತ್ತು ಪಕ್ಷಗಳ ವಿಭಜನೆ ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಅಪ್ರಸ್ತುತಗೊಳಿಸಿರುವ ಪರಿಸ್ಥಿತಿಯಲ್ಲಿ ವಿಜಯ್‌ ತಮ್ಮ ನಾವೆಯನ್ನು ಮುನ್ನಡೆಸಬೇಕಿದೆ.
ತಮಿಳುನಾಡಿನ ಈ ಬದಲಾವಣೆ ಮುಂಬರುವ ದಿನಗಳಲ್ಲಿ ಬಿಜೆಪಿಯ ಪರೋಕ್ಷ ಪ್ರವೇಶಕ್ಕೆ ಸುಲಭ ಮಾರ್ಗವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. ಸನಾತನ ಧರ್ಮ vs ದ್ರಾವಿಡ ಸಿದ್ದಾಂತದ ನಡುವಿನ ಸಂಘರ್ಷಕ್ಕೆ ತಾತ್ವಿಕ ನೆಲೆ ಇಲ್ಲದೆ ಕೇವಲ ರಾಜಕೀಯ ಛಾಯೆ ಇರುವುದರಿಂದ, ತತ್ವಹೀನ ಬೇಲಿ ಜಿಗಿತಗಳಿಗೆ ಡಿಎಂಕೆ, ಎಐಎಡಿಎಂಕೆ ಮತ್ತು ಟಿವಿಕೆ ಪಕ್ಷಗಳೂ ಸುಲಭ ತುತ್ತಾಗಬಹುದು. ವಿಜಯ್‌ ಜೋಸೆಫ್‌ ಅವರ ಮೂಲ ಧ್ಯೇಯ ರಾಜಕೀಯ ಅಧಿಕಾರವೇ ಆಗಿರುವುದರಿಂದ, ಟಿವಿಕೆ ಪಕ್ಷಕ್ಕೆ ಸೈದ್ದಾಂತಿಕ ತಳಹದಿ ಇಲ್ಲದಿರುವುದರಿಂದ, ಸಮಯ ಬಂದಾಗ ಯಾವ ದಿಕ್ಕಿನಲ್ಲಾದರೂ ಹೊರಳುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಸೆಕ್ಯುಲರಿಸಂ ಕೇವಲ ನಾಮಮಾತ್ರದ (Namesake) ರಾಜಕೀಯ ಸರಕು ಎನ್ನುವುದನ್ನು ಪಕ್ಕದ ಕರ್ನಾಟಕವೇ ನಿರೂಪಿಸಿದೆ. ಹಾಗೊಮ್ಮೆ ಸಂಭವಿಸಿದರೆ, ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳನ್ನು ಸೋಲಿಸುವ ಏಕೈಕ ಉದ್ದೇಶದಿಂದ ಬಿಜೆಪಿಗೆ ಅವಕಾಶ ಕಲ್ಪಿಸಿಕೊಟ್ಟ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಎದುರಿಸಿದ ಪರಿಸ್ಥಿತಿಯನ್ನೇ ದ್ರಾವಿಡ ಪಕ್ಷಗಳೂ, ಟಿವಿಕೆ ಪಕ್ಷವೂ ಕಾಣಬೇಕಾಗುತ್ತದೆ.

ನವೋದಯವೋ ಹಿಮ್ಮುಖ ನಡೆಯೋ ?
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ದೇಶದ ರಾಜಕಾರಣಕ್ಕೆ ಎರಡನೆ ಮಹತ್ವದ ತಿರುವು ನೀಡಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ ಚುನಾವಣೋತ್ತರ ಸಭೆಯೊಂದರಲ್ಲಿ, ಭವಾನಿಪುರ ಮತ್ತು ನಂದಿಗ್ರಾಮದ ತಮ್ಮ ಗೆಲುವಿಗೆ ಹಿಂದೂಗಳ ಮತವೇ ಕಾರಣವಾಗಿರುವುದರಿಂದ, ತಾವು ಹಿಂದೂಗಳಿಗಾಗಿ ಕೆಲಸ ಮಾಡುವುದಾಗಿ ಹೇಳಿರುವುದು ವರದಿಯಾಗಿದೆ. ತೃಣಮೂಲ ಪಕ್ಷದಲ್ಲಿದ್ದು, ಭ್ರಷ್ಟಾಚಾರದ ಆರೋಪ ಹೊತ್ತು, ಬಿಜೆಪಿಯಲ್ಲಿ ಶುದ್ಧೀಕರಣಗೊಂಡಿರುವ ಸುವೇಂದು ಅಧಿಕಾರಿ ಈಗ ಕಟ್ಟಾ ಹಿಂದುತ್ವವಾದಿಯಾಗಿದ್ದಾರೆ. (ಅಸ್ಸಾಂನ ಹಿಮಂತ್‌ ಬಿಸ್ವಾ ಅವರ ಪ್ರೇರಣೆಯಿಂದ). ಇದು ಬದಲಾಗುತ್ತಿರುವ ಭಾರತದ ದಿಕ್ಸೂಚಿಯಾಗಿ ಕಾಣುತ್ತದೆ. ಈಗಾಗಲೇ ಬಿಜೆಪಿಯ ಸುಳ್ಳಿನ ಕಾರ್ಖಾನೆಗಳು ತಮ್ಮ ಉತ್ಪಾದನಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಬಂಗಾಳದಿಂದ ಬಾಂಗ್ಲಾದೇಶಕ್ಕೆ ತಂಡೋಪತಂಡವಾಗಿ ವಾಪಸ್‌ ಹೋಗುತ್ತಿರುವ ಜನರ ಹಳೆಯ ಫೋಟೋಗಳನ್ನು ಹಂಚಿಕೊಳ್ಳಲಾರಂಭಿಸಿದೆ.

ಪಶ್ಚಿಮ ಬಂಗಾಲದಲ್ಲಿ ಚುನಾವಣೆ ಮತ್ತು ಮತಗಳಿಕೆಯ ದೃಷ್ಟಿಯಿಂದ ಅವಸಾನದ ಹಂತಕ್ಕೆ ತಲುಪಿರುವ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ತಮ್ಮ ರಾಜಕೀಯ ಪುನರುಜ್ಜೀವನಕ್ಕಾಗಿ ಹೊಸ ಮಾರ್ಗಗಳನ್ನು ಶೋಧಿಸಬೇಕಿದೆ. ಸ್ವಾತಂತ್ರ್ಯಪೂರ್ವ ಭಾರತದ ಚರಿತ್ರೆಯಲ್ಲಿ ಭಾರತೀಯ ಸಾಂಸ್ಕೃತಿಕ ನೆಲೆಗಳನ್ನು, ಬೌದ್ಧಿಕ ವಾತಾವರಣವನ್ನು ಉತ್ತುಂಗಕ್ಕೇರಿಸಿದ ಹಾಗೂ ಭಾರತದ ನವೋದಯಕ್ಕೆ (Indian Renaisance) ಪ್ರಶಸ್ತ ಭೂಮಿಕೆ ಒದಗಿಸಿದ್ದ ಬಂಗಾಲ ಇಂದು ಏಕಸಂಸ್ಕೃತಿಯನ್ನು ಪ್ರತಿಪಾದಿಸುವ ಹಿಂದುತ್ವ ರಾಜಕಾರಣಕ್ಕೆ ತೆರೆದುಕೊಂಡಿದೆ. 25 ವರ್ಷಗಳ ಕಾಂಗ್ರೆಸ್‌, 35 ವರ್ಷಗಳ ಎಡಪಕ್ಷಗಳ ಹಾಗೂ 15 ವರ್ಷಗಳ ತೃಣಮೂಲ ಕಾಂಗ್ರೆಸ್‌ ಆಳ್ವಿಕೆಯಲ್ಲಿ ಪಶ್ಚಿಮ ಬಂಗಾಲ ಎಂತಹುದೇ ಕೋಮುಗಲಭೆ, ಗೂಂಡಾಗಿರಿ ಸಂಸ್ಕೃತಿ ಮತ್ತು ಮತೀಯವಾದಿ ಸಂಘರ್ಷಗಳನ್ನು ಕಂಡಿದ್ದರೂ, ಮೂಲತಃ ಬಂಗಾಲದ ನೆಲದಲ್ಲಿ ಬೇರುಬಿಟ್ಟಿರುವ ಬಹುತ್ವ ಸಂಸ್ಕೃತಿ ಇಂದಿಗೂ ಗಟ್ಟಿಯಾಗಿದೆ. ವಿಶ್ವಕವಿ ಠಾಗೋರ್‌ ಇಂದಿಗೂ ಗೌರವಾನ್ವಿತರಾಗಿದ್ದಾರೆ.

ಆದರೆ ಠಾಗೋರ್‌ ಅವರ ವಿಶ್ವಮಾನವ ತತ್ವ-ಆಶಯ ಬಂಗಾಲದ ನೆಲದಲ್ಲೇ ಅಪ್ರಸ್ತುತವಾಗುವ ಲಕ್ಷಣಗಳು ಕಾಣುತ್ತಿವೆ. ಸರ್ಕಾರ ರಚನೆಯಾಗುವ ಮುನ್ನವೇ ನಡೆದಂತಹ ಗಲಭೆಗಳು ಈ ಎಲ್ಲ ಸುಭದ್ರ ಚೌಕಟ್ಟುಗಳೆಲ್ಲವನ್ನೂ ನಾಶಗೊಳಿಸುವ ಸೂಚನೆ ನೀಡಿವೆ. ಪ್ರತಿಮೆ, ಮಾರುಕಟ್ಟೆ, ಸ್ಥಾವರಗಳು, ವೃತ್ತಗಳು, ರಸ್ತೆಯ ಹೆಸರುಗಳು , ಕೊನೆಗೆ ಅಂಗಡಿಯ ಬೋರ್ಡುಗಳೂ ಸಹ ತಮ್ಮ ಚಾರಿತ್ರಿಕ ಸೌಂದರ್ಯವನ್ನು ಕಳೆದುಕೊಂಡು ವಿರೂಪವಾಗುವ, ರೂಪಾಂತರಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ. ಸಮನ್ವಯದ ಬಂಗಾಲ ದ್ವೇಷಾಸೂಯೆಗಳ ತಾಣವಾಗುವ ಆತಂಕಗಳೂ ಎಲ್ಲರನ್ನೂ ಕಾಡುತ್ತಿವೆ. ಈ ಮನ್ವಂತರದ ಕಾರಣಕರ್ತರನ್ನು ಶೋಧಿಸುವುದಕ್ಕಿಂತಲೂ ಮುಖ್ಯವಾಗಿ ಗುರುತಿಸಬೇಕಿರುವುದು, ಇಂತಹ ಪರಿಸ್ಥಿತಿಗೆ ಪೂರಕವಾದ ವಾತಾವರಣಕ್ಕೆ ಅವಕಾಶ ಕಲ್ಪಿಸಿದ So called ಸೆಕ್ಯುಲರ್‌ ರಾಜಕೀಯ ಪಕ್ಷಗಳ ನೀತಿಗಳನ್ನು ಅಥವಾ ಇದನ್ನು ತಡೆಗಟ್ಟಲಾಗದ ಈ ಪಕ್ಷಗಳ ವೈಫಲ್ಯಗಳನ್ನು.
ಮತದಾನದ ಲಕ್ಷಣ ಮತ್ತು ಹೊಸದಿಕ್ಕು
ತನ್ನ ಮೊದಲ ಚುನಾವಣೆಯಲ್ಲೇ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಅತಿಹೆಚ್ಚು ನಗರೀಕರಣಕ್ಕೊಳಗಾಗಿರುವ ಪ್ರದೇಶಗಳಲ್ಲಿ 46.5 % ಮತ್ತು ಸಾಧಾರಣ ನಗರೀಕರಣದ ಪ್ರದೇಶಗಳಲ್ಲಿ 38.7 % ಮತಗಳನ್ನು ಗಳಿಸಿದೆ. ಇದೇ ಮತದಾನದ ಲಕ್ಷಣವನ್ನು ಗ್ರಾಮೀಣ ಪ್ರದೇಶಗಳಲ್ಲೂ ಗುರುತಿಸಬಹುದು. ಸುಧಾರಿತ ಗ್ರಾಮಗಳಲ್ಲಿ 31.4 % ಹಾಗೂ ಹಿಂದುಳಿದ ಗ್ರಾಮಗಳಲ್ಲಿ 30.5 % ಮತಗಳನ್ನು ಗಳಿಸಿದೆ. ಈ ಅಂಕಿಸಂಖ್ಯೆಗಳು ಹೇಳುವುದೇನೆಂದರೆ, ಜನಸಾಮಾನ್ಯರ-ಕೆಳಮಧ್ಯಮ-ಮಧ್ಯಮ ವರ್ಗಗಳ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಸಾಮಾಜಿಕ ಸಮಸ್ಯೆಗಳು ಒಂದೇ ತೆರನಾಗಿವೆ. ಇತಿಹಾಸದಲ್ಲೇ ಅತಿಹೆಚ್ಚು ಮತದಾನವನ್ನು ದಾಖಲಿಸಿರುವ 2026ರ ಚುನಾವಣೆಗಳಲ್ಲಿ ತಮಿಳುನಾಡಿನ 83.57 % ಪುರುಷರು, 85.76 % ಮಹಿಳೆಯರು, 60.49 % ಅನ್ಯಲಿಂಗಿಗಳು ಮತ ಚಲಾಯಿಸಿದ್ದಾರೆ.

ಮತದಾರರ ನಡುವೆ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವ ಜನಾಂಗದ ಮಹತ್ವವನ್ನು ನಾವು ಇಲ್ಲಿ ಗ್ರಹಿಸಬಹುದು. ತಮಿಳುನಾಡಿನ ಯುವ ಸಮೂಹ ಲಿಂಗಭೇದವಿಲ್ಲದೆ, ಪ್ರಾದೇಶಿಕ ಅಥವಾ ಪ್ರಾಂತೀಯ ವ್ಯತ್ಯಾಸಗಳಿಲ್ಲದೆ ಟಿವಿಕೆ ಪಕ್ಷಕ್ಕೆ ಮತ ನೀಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇದು ನವ ಉದಾರವಾದದ ಆರ್ಥಿಕತೆ ಮತ್ತು ಹಿಂದುತ್ವ ರಾಜಕಾರಣದ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುತ್ತಿರುವ ಒಳಬಿರುಕುಗಳ ನೇರ ಪರಿಣಾಮವಾಗಿ ಕಾಣುತ್ತದೆ. ಗ್ಯಾರಂಟಿ ಯೋಜನೆಗಳು ಎಷ್ಟೇ ಆಕರ್ಷಣೀಯವಾದರೂ ಈ ಬಿರುಕುಗಳನ್ನು ಮುಚ್ಚುವುದಿಲ್ಲ ಬದಲಾಗಿ ಮಾರುಕಟ್ಟೆ ಆರ್ಥಿಕತೆ ಅಸಮಾನತೆಯ ಅಂತರಗಳನ್ನು ಹಿಗ್ಗಿಸುತ್ತಲೇ ಇರುತ್ತದೆ. ಇಲ್ಲಿ ಉದ್ಭವಿಸುವ ಸಾಮಾನ್ಯ ಕೆಳಸ್ತರದ ಜನರ ಹಾಗೂ ಯುವ ಜನಾಂಗದ ನಾಡಿಮಿಡಿತವನ್ನು ಗ್ರಹಿಸುವುದರಲ್ಲಿ ವಿಜಯ್‌ ಯಶಸ್ವಿಯಾಗಿದ್ದಾರೆ.
ಯಾವುದೇ ಆರ್ಥಿಕ-ತಾತ್ವಿಕ ಸಿದ್ದಾಂತದ ತಳಹದಿ ಇಲ್ಲದ ಟಿವಿಕೆ ಪಕ್ಷ ರಾಜಕೀಯವಾಗಿ ಪರ್ಯಾಯವೊಂದನ್ನು ಜನರ ಮುಂದಿಡುವುದು ಊಹಿಸಲಸಾಧ್ಯ. ಆದರೆ ಕಾಂಗ್ರೆಸ್‌, ಡಿಎಂಕೆ ಮತ್ತು ಎಡಪಕ್ಷಗಳಿಗೆ ಈ ಬದ್ದತೆ ಇರಬೇಕಿತ್ತು. ಈಗ ಸ್ಥಾಪಿಸಲಾಗಿರುವ ಸಮ್ಮಿಶ್ರ ಸರ್ಕಾರ ಬಿಂಬಿಸುವ ಪರ್ಯಾಯ ರಾಜಕಾರಣಕ್ಕಿಂತಲೂ ಜನಸಾಮಾನ್ಯರಿಗೆ ಬೇಕಿರುವುದು ರಾಜಕೀಯ ಪರ್ಯಾಯ ಎಂಬ ವಾಸ್ತವವನ್ನು ಗ್ರಹಿಸುವಲ್ಲಿ ಮುಖ್ಯವಾಹಿನಿಯ ಪಕ್ಷಗಳು ಸೋತಿವೆ. ಈ ವೈಫಲ್ಯದ ಪರಿಣಾಮವೇ ಒಬ್ಬ ಅನನುಭವಿ ನಾಯಕ, ಸಿದ್ಧಾಂತದ ಅಡಿಪಾಯ ಇಲ್ಲದ ಪಕ್ಷ, ವಿರೋಧಾಭಾಸಗಳನ್ನು ಹೊತ್ತ ಸಮ್ಮಿಶ್ರ ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದೆ. ವಿಜಯ್‌ ಅವರ ಗೆಲುವು ಪ್ರಜಾಸತ್ತೆಯ ದೃಷ್ಟಿಯಿಂದ ಸ್ವಾಗತಾರ್ಹವಾದರೂ, ಭಾರತ ಸಾಗುತ್ತಿರುವ ವಿಕೃತ ಹೊರಳು ದಾರಿಯಲ್ಲಿ ಇದು ಉದ್ದೇಶಿತ ಗುರಿ ತಲುಪುವ ಮುನ್ನವೇ ಅವಸಾನ ಹೊಂದುವ ಆತಂಕವನ್ನು ನಿರ್ಲಕ್ಷಿಸಲಾಗುವುದಿಲ್ಲ.

ಭದ್ರಕೋಟೆಯ ಬಾಬು – ಹಿಂದುತ್ವದ ಒಡ್ಡೋಲಗ
ತಮಿಳುನಾಡಿನಲ್ಲಿ ದ್ರಾವಿಡ ಕೋಟೆಯನ್ನು ಭೇದಿಸಿದ ಟಿವಿಕೆ ಮತ್ತು ಬಂಗಾಲದಲ್ಲಿ ಪರಿಭಾವಿತ ಸೆಕ್ಯುಲರ್‌ (Deemed to be Secular) ಕೋಟೆಯನ್ನು ಭಂಗಗೊಳಿಸಿದ ಬಿಜೆಪಿ, ಎಲ್ಲ ಸ್ತರಗಳಲ್ಲೂ ಜನಮನ್ನಣೆಯನ್ನು ಗಳಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಇನ್ನೂ ಕೆಲಕಾಲ ಕಾಡುತ್ತದೆ. ಈ ಜನಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ SIR ಪ್ರಕ್ರಿಯೆಯನ್ನೂ ಮೀರಿದ ಕೆಲವು ಕಾರಣಗಳು ಗೋಚರಿಸುತ್ತವೆ. SIR ಒಂದನ್ನೇ ದೂಷಿಸುತ್ತಾ ಕೂರುವುದು ಆತ್ಮವಂಚನೆಯಾಗುತ್ತದೆ. ಎರಡೂ ಸರ್ಕಾರಗಳ ಆಡಳಿತ ವೈಫಲ್ಯ ಮತ್ತು ಇಡೀ ದೇಶವೇ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಈ ರಾಜ್ಯಗಳ ಚುನಾವಣೆಗಳನ್ನೂ ಪ್ರಭಾವಿಸಿರುವುದು ವಾಸ್ತವ. 35 ವರ್ಷಗಳ ಎಡಪಂಥೀಯ ಆಳ್ವಿಕೆಯಲ್ಲಿದ್ದ ಯುವ ಸಮೂಹ ಈಗ ವಯಸ್ಕ ಸಮಾಜವಾಗಿದೆ. ಅವರ ಮುಂದಿನ ಪೀಳಿಗೆಯನ್ನು ಸಂಪರ್ಕಿಸಿ ಸೈದ್ಧಾಂತಿಕ ಅರಿವು ಮೂಡಿಸುವಲ್ಲಿ ಎಡಪಕ್ಷಗಳು ಸೋತಿರುವುದು ಪ್ರತಿ ಚುನಾವಣೆಯಲ್ಲೂ ಸ್ಪಷ್ಟವಾಗುತ್ತಿದೆ.

ಪಶ್ಚಿಮ ಬಂಗಾಲದಲ್ಲಿ ಹಿಂದುತ್ವ ರಾಜಕಾರಣಕ್ಕೆ ಗಟ್ಟಿ ಬೇರುಗಳಿವೆ. ಈ ಬೇರುಗಳ ಸತ್ವ ಇರುವುದು ಮುಸ್ಲಿಂ ದ್ವೇಷದಲ್ಲಿ, ನಿರ್ದಿಷ್ಟವಾಗಿ ಬಾಂಗ್ಲಾ ಮುಸ್ಲಿಮರ ಮೇಲಿನ ದ್ವೇಷದಲ್ಲಿ. ಅಲ್ಲಿನ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಯುವ ಜನಾಂಗವನ್ನು ಅತಿಹೆಚ್ಚು ಸೆಳೆಯುವ ಮತ್ತು ಒಳಗೊಳ್ಳುವ ದುರ್ಗಾಪೂಜೆ ಮತ್ತು ಅದರ ಸುತ್ತಲಿನ ಸಾಂಸ್ಕೃತಿಕ ಆಚರಣೆಗಳು ಹಿಂದುತ್ವ ರಾಜಕಾರಣಕ್ಕೆ ಗಟ್ಟಿ ತಳಪಾಯವನ್ನು ಒದಗಿಸಿದೆ. ತನ್ನ ಸೆಕ್ಯುಲರ್‌ ಆಳ್ವಿಕೆಯಲ್ಲಿ ಎಡರಂಗ ಸರ್ಕಾರಗಳು ಈ ಸಾಂಸ್ಕೃತಿಕ ಅಲೆಯನ್ನು ತಡೆಗಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ನಂಬಿಕೆ, ಆಚರಣೆಗಳು ತಳಸಮಾಜದ ದುಡಿಯುವ ವರ್ಗಗಳನ್ನೂ ಆವರಿಸಿದಾಗ, ಆ ಸಮುದಾಯಗಳ ಸಾಂಸ್ಕೃತಿಕ ನಾಡಿಮಿಡಿತವನ್ನು ಅರಿತು, ಆರ್ಥಿಕ ನೆಲೆಯಲ್ಲಿ ವೈಚಾರಿಕ ಮಾರ್ಕ್ಸ್‌ವಾದವನ್ನು ಕಾಮ್ರೇಡ್‌ಗಳ ನಡುವೆ ಬಿತ್ತುವ ಪ್ರಯತ್ನಗಳು ಬಹುಶಃ ನಡೆದಿಲ್ಲ.

ಹಾಗಾಗಿ ತಳಮಟ್ಟದಲ್ಲಿ ಕ್ರಿಯಾಶೀಲವಾಗಿದ್ದ ಈ ಗುಂಪುಗಳೇ ಹಿಂದುತ್ವ ರಾಜಕಾರಣಕ್ಕೆ ಮತ್ತು ಮುಸ್ಲಿಂ ದ್ವೇಷದ ನಿರೂಪಣೆಗಳಿಗೆ (Narratives) ಆಹಾರವಾಗಿವೆ. ತೃಣಮೂಲ ಕಾಂಗ್ರೆಸ್‌ ಸಹ ತನ್ನ ಮತಬ್ಯಾಂಕುಗಳಾಗಿ ಈ ಸಮಾಜಗಳನ್ನೇ ಅವಲಂಬಿಸುವುದು ರಾಜಕೀಯ ಅನಿವಾರ್ಯತೆಯಾಗಿತ್ತು. ಇಲ್ಲಿ ಸೃಷ್ಟಿಯಾದಂತಹ ಗಲಭೆಕೋರ ಮನಸ್ಥಿತಿ, ದಾಳಿಕೋರ ಮನೋಭಾವ ಮತ್ತು ಅಸಹಿಷ್ಣುತೆಗಳನ್ನು ನಿಗ್ರಹಿಸುವ ಅಥವಾ ನಿಯಂತ್ರಿಸುವ ಯಾವುದೇ ಪ್ರಯತ್ನವನ್ನು ಎಡಪಕ್ಷಗಳಾಗಲೀ, ತೃಣಮೂಲ ಆಗಲೀ ಮಾಡಲಿಲ್ಲ. ಈ ಯುವ-ವಯಸ್ಕ ಸಮಾಜಗಳನ್ನು ಮತ್ತು ವಿಶೇಷವಾಗಿ ಮಹಿಳಾ ಸಮೂಹಗಳನ್ನು ತನ್ನ ಹಿಂದುತ್ವ ಸಿದ್ದಾಂತದ ಮೂಲಕ, ಬಾಂಗ್ಲಾವಿರೋಧಿ ನೆಲೆಯಲ್ಲಿ ಧೃವೀಕರಿಸುವುದು ಬಿಜೆಪಿಗೆ ಕಷ್ಟವಾಗಿಲ್ಲ. ಹಾಗಾಗಿಯೇ ಇಂದು ಪಶ್ಚಿಮ ಬಂಗಾಲ ಸ್ಪಷ್ಟವಾಗಿ ಗೆರೆ ಎಳೆಯಬಹುದಾದ ಧೃವೀಕರಣಕ್ಕೆ ಒಳಗಾಗಿದೆ.

ಈ ಚುನಾವಣೆಗಳಲ್ಲಿ ಪಶ್ಚಿಮಬಂಗಾಲ ದಾಖಲೆ ಮತದಾನವನ್ನು ಕಂಡಿದೆ. 91.78 % ಮತದಾರರು ಮತ ಚಲಾಯಿಸಿದ್ದಾರೆ. 90.92 % ಪುರುಷರು, 92.69 % ಮಹಿಳೆಯರು, 56.79 % ಅನ್ಯಲಿಂಗಿಗಳು ಮತ ಚಲಾಯಿಸಿರುವುದು ಒಂದು ಮಗ್ಗುಲಿನಿಂದ ಜನರಲ್ಲಿ ಮತ ಪ್ರಜ್ಞೆ ಹೆಚ್ಚಾಗಿರುವುದನ್ನು ಸೂಚಿಸಿದರೆ, ಮತ್ತೊಂದು ಬದಿಯಿಂದ ನೋಡಿದಾಗ. SIR ಪ್ರಕ್ರಿಯೆಯಲ್ಲಿ ಹೊರಹಾಕಲ್ಪಟ್ಟ ಮತದಾರರ ಪ್ರಮಾಣವೂ ಹೆಚ್ಚು ಜನರನ್ನು ಮತಗಟ್ಟೆಗೆ ಕರೆದೊಯ್ದಿದೆ. ಮತದಾನದ ಮೂಲಕ ತಮ್ಮ ಪೌರತ್ವವನ್ನು ಸಾಕ್ಷೀಕರಿಸುವ ಜನಸಾಮಾನ್ಯರ ಆತಂಕವನ್ನೂ ಇಲ್ಲಿ ಗುರುತಿಸಬಹುದು. ತಮಿಳುನಾಡಿನಂತೆ ಇಲ್ಲಿಯೂ ಸಹ ನಗರ ಮತ್ತು ಗ್ರಾಮೀಣ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಒಲವು ತೋರಿರುವುದು ಕಾಣುತ್ತದೆ. ಮುಸ್ಲಿಂ ಬಾಹುಳ್ಯ ಪ್ರದೇಶಗಳನ್ನು ಹೊರತುಪಡಿಸಿದರೆ ಬಿಜೆಪಿ ಹಿಂದೂಗಳ ಭದ್ರಕೋಟೆಯಾಗಿ ಹೊರಹೊಮ್ಮಿರುವುದನ್ನು ಅಂಕಿಸಂಖ್ಯೆಗಳು ನಿರೂಪಿಸುತ್ತವೆ.

ಸಾಧಾರಣ ನಗರೀಕರಣಕ್ಕೊಳಗಾದ ನಗರಗಳಲ್ಲಿ 43.83 %, ಅತಿಹೆಚ್ಚು ನಗರೀಕೃತ ಪ್ರದೇಶಗಳಲ್ಲಿ 47.92 % ಮತಗಳಿಸಿರುವ ಬಿಜೆಪಿ ಗ್ರಾಮೀಣ ಪ್ರದೇಶಗಳಲ್ಲೂ ಸಹ ಹೆಚ್ಚಿನ ಮತ ಗಳಿಸಿದೆ. ಸುಧಾರಿತ ಗ್ರಾಮಗಳಲ್ಲಿ 45.09 % ಮತ್ತು ಅತಿ ಹಿಂದುಳಿದ ಗ್ರಾಮಗಳಲ್ಲಿ 46.16 % ಮತಗಳಿಸಿದೆ. ತೃಣಮೂಲ ಕಾಂಗ್ರೆಸ್‌ ತನ್ನ 15 ವರ್ಷಗಳ ಆಳ್ವಿಕೆಯಲ್ಲಿ ಕೈಗಾರಿಕಾ ಅಭಿವೃದ್ಧಿಯ ಮೂಲಕ ಉದ್ಯೋಗಗಳನ್ನು ಸೃಷ್ಟಿಸದೆ ಇರುವುದು, ಮಾರುಕಟ್ಟೆ ಆರ್ಥಿಕತೆಯ ಪ್ರಹಾರದಿಂದ ತಳಸಮಾಜದ ಶ್ರಮಿಕರಿಗೆ ರಕ್ಷಣೆ ನೀಡದಿರುವುದು, ಅಸಮಾನತೆಗಳನ್ನು ಹೆಚ್ಚಿಸಿರುವುದೇ ಅಲ್ಲದೆ, ಅಸಮಾಧಾನಗೊಂಡಿರುವ ಜನಸಮುದಾಯಗಳನ್ನು ಕಾನೂನು ಬಾಹಿರ-ಹಿಂಸಾತ್ಮಕ ಚಟುವಟಿಕೆಗಳಿಗೂ ಪ್ರಚೋದಿಸಿದೆ. ಈ ಸಮಾಜಗಳ ಒಂದು ವರ್ಗವನ್ನು ಚುನಾವಣೋತ್ತರ ಗಲಭೆಗಳಲ್ಲಿ ಗುರುತಿಸಬಹುದು. ಮುಸ್ಲಿಂ ದ್ವೇಷ ಈ ಅತೃಪ್ತ ಮನಸ್ಸುಗಳಿಗೆ ನಿರ್ಣಾಯಕ ಇಂಧನವಾಗಿ ಪರಿಣಮಿಸಿರುವುದನ್ನು ಸೂಕ್ಷ್ಮವಾಗಿ ಗಮನಿಸಿ, ಈ ಪ್ರಕ್ರಿಯೆಯ ಆಳ ಮತ್ತು ವ್ಯಾಪ್ತಿಯನ್ನು ಶೋಧಿಸಬೇಕಿದೆ.

ಪರ್ಯಾಯದ ಶೋಧ –ಸ್ಪಷ್ಟ ದಾರಿಯ ಕೊರತೆ
ಈ ಎರಡೂ ರಾಜ್ಯಗಳಲ್ಲಿ ಪರ್ಯಾಯ ರಾಜಕೀಯ ಶಕ್ತಿ ಇರಲಿಲ್ಲವೇ ? ಖಂಡಿತವಾಗಿಯೂ ಇತ್ತು ಆದರೆ ಈ ಪರ್ಯಾಯದ ಅಂಗಳವನ್ನು ಆಕ್ರಮಿಸಿರುವ ಕಾಂಗ್ರೆಸ್‌, ತೃಣಮೂಲ, ಎಡಪಕ್ಷಗಳು ಮತ್ತು ದ್ರಾವಿಡ ಪಕ್ಷಗಳಿಗೆ ಪರ್ಯಾಯ ಚಿಂತನೆಗಳಾಗಲೀ, ರಾಜಕೀಯ ಮಾರ್ಗಗಳಾಗಲೀ ಇರಲಿಲ್ಲ. ಸಿದ್ಧಮಾದರಿಗಳಿಂದಾಚೆಗೆ ಯೋಚಿಸಲಾಗದ ಸ್ಥಿತಿಯಲ್ಲಿರುವ ಸ್ಥಾಪಿತ ರಾಜಕೀಯ ಪಕ್ಷಗಳು ಪ್ರಭುತ್ವ ಅಧಿಕಾರದಿಂದಾಚೆಗೂ (State Power) ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ಸೂಕ್ಷ್ಮಗಳ ಬಗ್ಗೆ ಗಂಭೀರ ಆಲೋಚನೆ ಮಾಡಿಯೇ ಇಲ್ಲ. ಈ ಚುನಾವಣೆಗಳಲ್ಲಿ ಸಿಪಿಐ 0.16 % , ಸಿಪಿಎಂ 4.45 %, ಸಿಪಿಐ ಎಂಎಲ್‌ ಲಿಬರೇಷನ್‌ 0.07 % ಮತಗಳನ್ನು ಗಳಿಸಿರುವುದನ್ನು ಗಮನಿಸಿದಾಗ, ಮಾರ್ಕ್ಸ್‌ವಾದ-ಲೆನಿನ್‌ ವಾದ ಪ್ರತಿಪಾದಿಸುವ ಶ್ರಮಜೀವಿಗಳು ಎಲ್ಲಿ ಹೋಗಿದ್ದಾರೆ ಎಂದು ಅಚ್ಚರಿಯಾಗುತ್ತದೆ. ಈ ಶ್ರಮಜೀವಿಗಳ ಸಂಖ್ಯೆ ಮತ್ತು ಹರವು ಇನ್ನೂ ಹೆಚ್ಚಾಗಿದ್ದರೂ, ಪ್ರಾತಿನಿಧಿಕವಾಗಿ ಅಲ್ಲಿ ಹಿಂದುತ್ವ ಪ್ರದಾನವಾಗಿ ಕಾಣುತ್ತಿದೆ. ಈ ದ್ವಂದ್ವವನ್ನು ವ್ಯಾಖ್ಯಾನಿಸುವುದಾದರೂ ಹೇಗೆ ?

50 ವರ್ಷಗಳ ಚರಿತ್ರೆಯಲ್ಲಿ ದುಡಿಯುವ ವರ್ಗಗಳನ್ನು ನಿರಂತರವಾಗಿ ಪ್ರತಿನಿಧಿಸುತ್ತಾ ಬರುತ್ತಿರುವ ಕೆಂಬಾವುಟ, ತಳಮಟ್ಟದಲ್ಲಿ ಏಕೆ ಕೇವಲ ಬಳಸಿ ಪಕ್ಕಕ್ಕಿಡಬಹುದಾದ ಒಂದು ಸಾಂದರ್ಭಿಕ ವಸ್ತ್ರವಾಗಿ ಕಾಣಲ್ಪಡುತ್ತಿದೆ ? 35 ವರ್ಷಗಳ ಎಡರಂಗದ ಆಳ್ವಿಕೆಯ ಹೊರತಾಗಿಯೂ ಹಿರಿಯ-ಕಿರಿಯ ತಲೆಮಾರಿನ ದುಡಿಯುವ ವರ್ಗಗಳು ಎಡಪಕ್ಷಗಳಿಗೆ ವಿಮುಖವಾಗಲು ಕಾರಣವೇನು ? ಈ ಎರಡು ಪ್ರಶ್ನೆಗಳಿಗೆ ಉತ್ತರ ಶೋಧಿಸುತ್ತಲೇ SIR, ಹಿಂದುತ್ವ ಇತ್ಯಾದಿಗಳನ್ನು ವಿಮರ್ಶೆಗೊಳಪಡಿಸಬೇಕಿದೆ. ಎಡಪಕ್ಷಗಳ ವಿಶಾಲ ಐಕ್ಯತೆ (Broader unity of the left ) ಸಮಾಧಾನಕರವಾಗಿ ಕಂಡರೂ ಈ ಕಲ್ಪನೆಯ ಸೂಕ್ತ ವ್ಯಾಖ್ಯಾನ ಇಲ್ಲದಿರುವುದರಿಂದ ಇದು ಮತ್ತೊಂದು ಚುನಾವಣಾ ಪ್ರೇರಿತ ವಾಕ್ಚಾತುರ್ಯದಂತೆ̈ (Rhetoric) ಕಾಣುತ್ತದೆ. ಈ ಚುನಾವಣೆಗಳು ನಿರ್ಣಾಯಕವಾಗಿ ಕಾಣುವುದು ಎರಡು ಕಾರಣಗಳಿಂದ. ಮೊದಲನೆಯದು ಹಿಂದುತ್ವದ ವ್ಯಾಪ್ತಿಯ ಹೆಚ್ಚಳ, ಎರಡನೆಯದು ಪರ್ಯಾಯದ ಆಲೋಚನೆಗಳ ತೀವ್ರತೆ.
ಈ ಎರಡು ಜಟಿಲ ಪ್ರಶ್ನೆಗಳನ್ನಿಟ್ಟುಕೊಂಡೇ ಸಂವಿಧಾನ ಪ್ರಜಾಪ್ರಭುತ್ವದ ಭವಿಷ್ಯದ ಬಗೆಗೆ ರಾಷ್ಟ್ರವ್ಯಾಪಿ ಚರ್ಚೆಗೆ ಮುಂದಾಗಬೇಕಿದೆ.
-೦-೦-೦-೦-

Tags: #ElectionAnalysis#PoliticalAwareness#PoliticalOpinion#PublicChoice#VoterBehavior#VoterPreference#VotingPatternDemocracyElection2026KannadaArticle
Previous Post

‘ದಿ ಲವ್ ಇಸ್ ಆಲ್ವೇಸ್ ಲೌಡರ್’… ವಿಜಯ್ ಪ್ರಮಾಣವಚನದ ಬಳಿಕ ತ್ರಿಷಾ ಪೋಸ್ಟ್ ವೈರಲ್!

Next Post

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

Related Posts

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ
ಅಂಕಣ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

by ಪ್ರತಿಧ್ವನಿ
May 9, 2026
0

ನಾ ದಿವಾಕರ (ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ – ಲೇಖನದ ಮುಂದುವರೆದ ಭಾಗ) ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳಲ್ಲಿ ನಿರೀಕ್ಷೆ, ಅಪೇಕ್ಷೆ ಮತ್ತು ಮಹತ್ವಾಕಾಂಕ್ಷೆಗಳ ಸಮ್ಮಿಲನವನ್ನು...

Read moreDetails
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

May 4, 2026
2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

May 3, 2026
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ

ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ

May 3, 2026
Next Post
ವಿಜಯ್ ಬೆಂಬಲದ ವಿಚಾರಕ್ಕೆ ಎಐಎಡಿಎಂಕೆಯಲ್ಲಿ ಬಿರುಕು..? ಎಡಪ್ಪಾಡಿ ವಿರುದ್ಧವೇ ಎದ್ದ ಬಂಡಾಯ!

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada