• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ದುಡಿಯುವ ಜನರು ಅಂಕಿಸಂಖ್ಯೆಗಳಿಂದಾಚೆಗೂ ಸರ್ಕಾರಗಳ ಸಾಧನೆಯನ್ನು ಗಮನಿಸುತ್ತಾರೆ

ಪ್ರತಿಧ್ವನಿ by ಪ್ರತಿಧ್ವನಿ
May 9, 2026
in ಅಂಕಣ
0
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ
Share on WhatsAppShare on FacebookShare on Telegram

ನಾ ದಿವಾಕರ
(ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ – ಲೇಖನದ ಮುಂದುವರೆದ ಭಾಗ)

ADVERTISEMENT

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳಲ್ಲಿ ನಿರೀಕ್ಷೆ, ಅಪೇಕ್ಷೆ ಮತ್ತು ಮಹತ್ವಾಕಾಂಕ್ಷೆಗಳ ಸಮ್ಮಿಲನವನ್ನು ಕಾಣಬಹುದು. ಕೇರಳದಲ್ಲಿ ಮರಳಿ ಅಧಿಕಾರಕ್ಕೆ ಬರುವ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ನಿರೀಕ್ಷೆಯಂತೆ ಗೆಲುವು ಸಾಧಿಸಿದೆ. ಪುದುಚೆರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಅಧಿಕಾರ ಉಳಿಸಿಕೊಳ್ಳುವ ಅಪೇಕ್ಷೆಯನ್ನು ಈಡೇರಿಸಿಕೊಂಡಿದೆ. ಈ ನಡುವೆ ಪಶ್ಚಿಮ ಬಂಗಾಲವನ್ನು ಹೇಗಾದರೂ ಮಾಡಿ ತನ್ನ ಹಿಂದುತ್ವ ರಾಜಕಾರಣದ ಕರ್ಮಭೂಮಿಯಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆ ಹೊಂದಿದ್ದ ಬಿಜೆಪಿ ಸಫಲವಾಗಿದೆ. ತಮಿಳುನಾಡಿನಲ್ಲಿ ಹೊಸ ಶಕ್ತಿಯಾಗಿ ಉದಯಿಸಿರುವ ಸಿನಿಮಾ ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ , ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿದೆ.
“ ಕಳೆದ ಹನ್ನೊಂದು ವರ್ಷಗಳಲ್ಲಿ ಬಿಜೆಪಿ ಅಧಿಕಾರದ ಸಂರಚನೆಯನ್ನು (Architecture of Power) ನಿರ್ಮಿಸಿಕೊಂಡಿದ್ದು, ಈಗ ʼ ಸ್ವಾಭಾವಿಕ ಆಳ್ವಿಕೆಯ ಪಕ್ಷ ʼ (Natural Party of governance) ಎಂಬ ಅಧಿಕಾರಯುತ ಸ್ಥಿತಿಯನ್ನು ಪಡೆದುಕೊಂಡಿದೆ.

ಕಾಂಗ್ರೆಸ್‌ ಸಹ ತನ್ನ ಪ್ರಾಬಲ್ಯದ ದಿನಗಳಲ್ಲಿ ಇದೇ ಸ್ವರೂಪವನ್ನು ಹೊಂದಿತ್ತು. ಈ ಅಧಿಕಾರಕ್ಕೆ ಬಳಕೆಯಾಗುವ ಸಾಧನಗಳ ಪೈಕಿ ಅನೌಪಚಾರಿಕ ರಾಜಕೀಯ ಮೈತ್ರಿಗಳೊಂದಿಗೆ, ಸಾರ್ವಜನಿಕ ಸಂಸ್ಥೆಗಳ ಮೇಲಿನ ನಿಯಂತ್ರಣವೂ ಮುಖ್ಯವಾಗುತ್ತದೆ. ಈ ನಿಯಂತ್ರಣದ ಮುಖಾಂತರವೇ ಬಿಜೆಪಿ ತನ್ನ ಪ್ರಯೋಜನಕ್ಕೆ ತಕ್ಕಹಾಗೆ ಪಕ್ಷವನ್ನು ರೂಪಿಸಿದೆ. ಈ ಪ್ರಕ್ರಿಯೆಯಲ್ಲೇ ವಿರೋಧ ಪಕ್ಷಗಳಲ್ಲಿ ವಿಭಜನೆ ಉಂಟುಮಾಡುವುದು ಮತ್ತು ಅಲ್ಲಿನ ನಾಯಕರನ್ನು ತನ್ನೆಡೆಗೆ ಸೆಳೆಯುವುದು ಅವ್ಯಾಹತವಾಗಿ ನಡೆದಿದೆ. ಈ ಪ್ರಯತ್ನಗಳ ಮೂಲಕವೇ ಬಿಜೆಪಿ ಹಿಂದುತ್ವದ ಸೈದ್ದಾಂತಿಕ ಬಿಗಿಮುಷ್ಠಿಯನ್ನು ಮತ್ತಷ್ಟು ಬಿಗಿಗೊಳಿಸಲು ಆಡಳಿತ ಯಂತ್ರವನ್ನೂ ಬಳಸಿಕೊಳ್ಳುತ್ತಿದೆ ” (ಅಸೀಂ ಅಲಿ A round of elections that signals structural dominance – ದ ಹಿಂದೂ 5 ಮೇ 2026)

ಪ್ರಜಾಸತ್ತೆಯ ದುರ್ಬಲ ಅಡಿಪಾಯ
ಪಶ್ಚಿಮ ಬಂಗಾಲದ ಚುನಾವಣೆಗಳಲ್ಲಿ ಈ ಪ್ರಕ್ರಿಯೆಯ ಮತ್ತೊಂದು ಆಯಾಮವನ್ನು ಕಾಣಬಹುದು. ಜಾರಿ ನಿರ್ದೇಶನಾಲಯ (ED), ಸಿಬಿಐ ಮತ್ತಿತರ ಸಂಸ್ಥೆಗಳನ್ನು ಬಳಸಿಕೊಳ್ಳುವುದೇ ಅಲ್ಲದೆ, ಚುನಾವಣೆಗಳಿಗೂ ಮುನ್ನ ಅಭೂತಪೂರ್ವ ರೀತಿಯಲ್ಲಿ ರಾಜ್ಯಾದ್ಯಂತ ಅರೆ ಸೇನಾ ಪಡೆಗಳನ್ನು ನಿಯೋಜಿಸುವ ಮೂಲಕ ಕೇಂದ್ರ ಸರ್ಕಾರ ರಾಜ್ಯದ ರಾಜಕೀಯ ನಕಾಶೆಯನ್ನೇ ಬದಲಾಯಿಸಿತ್ತು. ಏತನ್ಮಧ್ಯೆ ಚುನಾವಣಾ ಆಯೋಗವು SIR ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ತೃಣಮೂಲ ಕಾಂಗ್ರೆಸ್‌ ಪಕ್ಷದ ಬಹುಪಾಲು ಬೆಂಬಲಿಗರನ್ನು, ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು, ಮತದಾರ ಪಟ್ಟಿಯಿಂದ ಹೊರಹಾಕಿದೆ. ಈ ಪ್ರಕ್ರಿಯೆ ಫಲಿತಾಂಶಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದನ್ನು ಕಾದುನೋಡಬೇಕಿದೆ. ಅನಧಿಕೃತ ವರದಿಗಳ ಅನುಸಾರ ತೃಣಮೂಲ ಕಾಂಗ್ರೆಸ್‌ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗುತ್ತಿದೆ.

ಈ ತಾಂತ್ರಿಕ ಪ್ರಶ್ನೆಗಳನ್ನು ದಾಟಿ ಐದು ರಾಜ್ಯಗಳ ಫಲಿತಾಂಶಗಳನ್ನು ಗಮನಿಸಿದಾಗ, ಕೇರಳ, ಪಶ್ಚಿಮ ಬಂಗಾಲ ಮತ್ತು ತಮಿಳುನಾಡಿನ ಮತದಾರರು ಬದಲಾವಣೆ ಬಯಸಿರುವುದು ಸ್ಪಷ್ಟವಾಗುತ್ತದೆ. ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಗೆಲ್ಲಲೇಬೇಕಿತ್ತು ಎನ್ನಲು ಸೂಕ್ತ ಸಕಾರಾತ್ಮಕ ಕಾರಣಗಳೇ ಕಾಣುವುದಿಲ್ಲ. 15 ವರ್ಷಗಳ ತೃಣಮೂಲ ಆಳ್ವಿಕೆಯಲ್ಲಿ ಮಮತಾ ಸಂಪುಟದ ಅನೇಕ ಸಚಿವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ. ಶಾಲಾ ಸೇವೆಯ ಸಮಿತಿಯಲ್ಲಿ ನಡೆದ ಉದ್ಯೋಗಕ್ಕಾಗಿ ಲಂಚ ಹಗರಣದ ಪರಿಣಾಮವಾಗಿ 26 ಸಾವಿರ ಶಿಕ್ಷಕರು ನೌಕರಿ ಕಳೆದುಕೊಳ್ಳುವಂತಾಗಿತ್ತು. ನೇರ ನಗದು ಪಾವತಿಯ ಹಲವು ಯೋಜನೆಗಳ ಹೊರತಾಗಿಯೂ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ಸಮನಾಗಿ ತುಟ್ಟಿ ಭತ್ಯೆಯನ್ನು (DA) ಮಮತಾ ಸರ್ಕಾರ ನೀಡಲಿಲ್ಲ.

ಮೂಲತಃ ಕಾಂಗ್ರೆಸ್‌ ವಿರೋಧಿ ಧೋರಣೆಯಿಂದ ಪರ್ಯಾಯ ರಾಜಕಾರಣವನ್ನು ಕಟ್ಟುವ ಎಲ್ಲ ಪಕ್ಷಗಳೂ ಒಂದಲ್ಲಾ ಒಂದು ರೀತಿಯಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿವೆ. ಕರ್ನಾಟಕದ ಜೆಡಿಎಸ್‌ ಸಹ ಒಂದು ಉದಾಹರಣೆ. ಈ ದೃಷ್ಟಿಯಿಂದ ಮಮತಾ ಬ್ಯಾನರ್ಜಿ ಸಹ ದೋಷಮುಕ್ತರಲ್ಲ. 2011ರ ಚುನಾವಣೆಗಳಲ್ಲಿ ಎಡಪಕ್ಷಗಳ ವಿರೋಧಿ ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಎಸ್‌ಯುಸಿಐ(ಸಿ) ಮೈತ್ರಿಯೊಂದಿಗೆ ಬಹುಮತ ಗಳಿಸಿದ ತೃಣಮೂಲ ಕಾಂಗ್ರೆಸ್‌ , ಆನಂತರದ ಎರಡು ಚುನಾವಣೆಗಳಲ್ಲಿ ಸ್ವತಃ ಬಹುಮತ ಗಳಿಸಿ ಸರ್ಕಾರ ರಚಿಸಿತ್ತು. ಈ ಅವಧಿಯಲ್ಲಿ ಟಿಎಂಸಿ ಎದುರಾಳಿಯಾಗಿ ಕಂಡಿದ್ದು ಎಡಪಕ್ಷಗಳು ಮತ್ತು ಕಾಂಗ್ರೆಸ್.‌ ಈ ಪ್ರತ್ಯೇಕತೆಯ ಮನೋಭಾವವೇ ಮಮತಾ ಅವರನ್ನು INDIA ಒಕ್ಕೂಟದಿಂದಲೂ ದೂರ ಸರಿಯುವಂತೆ ಮಾಡಿತ್ತು.

ನಿರಂಕುಶಾಧಿಕಾರದ ಸುಳಿಯಲ್ಲಿ
ತಮ್ಮ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವೀಯ-ಸಾಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಅವಕಾಶ ಇದ್ದರೂ ಸಹ ಮಮತಾ ತಮ್ಮ ನಿರಂಕುಶಾಧಿಕಾರದ ನೀತಿಗಳಿಂದ ಎಲ್ಲವನ್ನೂ ಮಣ್ಣುಪಾಲು ಮಾಡಿದ್ದರು. ಬಿಜೆಪಿಯನ್ನೂ ಮೀರುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ವಿರೋಧಿಗಳನ್ನು ಭಿನ್ಮಮತೀಯರನ್ನು ದಮನಿಸುವ ನೀತಿಯನ್ನು ಅನುಸರಿಸಿದ್ದು ವಾಸ್ತವ. ಕೆಲವು ಘಟನೆಗಳನ್ನು ಉಲ್ಲೇಖಿಸಬಹುದಾದರೆ, 2012ರಲ್ಲಿ ಜಾಧವಪುರ್‌ ವಿಶ್ವವಿದ್ಯಾಲಯದ ಅಂಬಿಕೇಶ್‌ ಮಹಾಪಾತ್ರ , ಮಮತಾ ಅವರನ್ನು ವಿಡಂಬನೆ ಮಾಡುವ ವ್ಯಂಗ್ಯಚಿತ್ರವನ್ನು ಇ ಮೇಲ್‌ ಮೂಲಕ ಕಳುಹಿಸಿದ್ದಕ್ಕಾಗಿ ಬಂಧಿಸಲಾಗಿತ್ತು. 11 ವರ್ಷಗಳ ನಂತರ ಮಹಾಪಾತ್ರ ದೋಷಮುಕ್ತರಾಗಿದ್ದರು. 2022ರಲ್ಲಿ 29 ವರ್ಷದ ಯು ಟ್ಯೂಬರ್‌ ತುಹಿರ್‌ ಮೊಂಡಲ್‌ ಅವರನ್ನು ಮಮತಾ ಅವರ ಭಾಷಣಗಳನ್ನು ತಿರುಚಿ ಪ್ರಸಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದೇ ವರ್ಷದ ಜೂನ್‌ನಲ್ಲಿ ಮತ್ತೋರ್ವ ಯು ಟ್ಯೂಬರ್‌ ರೊಡ್ಡೂರ್‌ ರಾಯ್‌ ಅವರ ಫೇಸ್ ಬುಕ್‌ ಹೇಳಿಕೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

ಪಶ್ಚಿಮ ಬಂಗಾಲದ ಯುವ ಜನಾಂಗದ ಅಸಮಾಧಾನಕ್ಕೆ ಮೂಲ ಕಾರಣವಾಗಿರುವುದು ನಿರುದ್ಯೋಗದ ಹೆಚ್ಚಳ. ಕೈಗಾರಿಕೀಕರಣ ಮತ್ತು ಹೊಸ ಉದ್ಯೋಗ ಸೃಷ್ಟಿಸುವುದರಲ್ಲಿ ಮಮತಾ ಸರ್ಕಾರದ ಸಾಧನೆ ಕಳಪೆಯಾಗಿದ್ದು ತತ್ಪರಿಣಾಮವಾಗಿ ನಗರ ಪ್ರದೇಶಗಳ ನಿರುದ್ಯೋಗಿ ಯುವ ಜನಾಂಗ , ಮಧ್ಯಮ ವರ್ಗಗಳು ಸರ್ಕಾರದ ವಿರುದ್ಧ ಮತ ಚಲಾಯಿಸಿವೆ. ಪಶ್ಚಿಮ ಬಂಗಾಲದಲ್ಲಿ ರಾಜಕೀಯ ಪರಂಪರೆಯೇ ಆಗಿರುವ ಸಾರ್ವಜನಿಕ ಗೂಂಡಾಗಿರಿ ಮತ್ತು ಆಳುವ ಪಕ್ಷಗಳ ಪುಂಡಾಟದ ಗುಂಪುಗಳ ಹಾವಳಿ ಮಮತಾ ಆಳ್ವಿಕೆಯಲ್ಲೂ ಮುಂದುವರೆದಿದ್ದು, ಇದರ ಫಲವನ್ನು ಪಕ್ಷ ಈಗ ಅನುಭವಿಸಬೇಕಿದೆ. ಕೇಂದ್ರ ಸರ್ಕಾರದ ಹುನ್ನಾರಗಳನ್ನು ಖಂಡಿಸುವಾಗ, ಮಮತಾ ಆಳ್ವಿಕೆಯ ಈ ನಕಾರಾತ್ಮಕ ಅಂಶಗಳನ್ನು ಮರೆಮಾಚಲಾಗುವುದಿಲ್ಲ. SIR ಒಂದನ್ನೇ ದೃಷ್ಟಿಸುತ್ತಾ ಇದ್ದರೆ, ಆತ್ಮಾವಲೋಕನದ ಹಾದಿ ಮುಚ್ಚಿಹೋಗುತ್ತದೆ. ಇದನ್ನು ರಾಜಕೀಯ ವಿಶ್ಲೇಷಕರೂ ಗಮನಿಸಬೇಕು.

ಸೈದ್ದಾಂತಿಕ ರಾಜಕಾರಣದ ಹಿನ್ನಡೆ
ಕೇರಳದಲ್ಲಿ ಎಡಪಕ್ಷಗಳ ಆಳ್ವಿಕೆ ಇದ್ದರೂ ಸಹ ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳಿಗೇನೂ ಕೊರತೆ ಇರಲಿಲ್ಲ ಎಂದು ವರದಿಗಳು ಹೇಳುತ್ತವೆ. ಹತ್ತು ವರ್ಷಗಳ ಕಾಲ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಆಡಳಿತ ನಡೆಸಿದ್ದರೂ ರಾಜ್ಯದಲ್ಲಿ ಹಣಕಾಸು ಒತ್ತಡ ತೀವ್ರವಾಗಿತ್ತು, ಯುವ ಜನಾಂಗದ ನಿರುದ್ಯೋಗ ಶೇಕಡಾ 25ರಷ್ಟಾಗಿತ್ತು. ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು. ಇತ್ತೀಚಿನ ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಕೇರಳದಲ್ಲೂ ಸಹ ಪ್ರಭಾವ ಬೀರಿತ್ತು. ಕೊಲ್ಲಿ ರಾಷ್ಟ್ರಗಳಿಂದ ಬರುವ ಆದಾಯವನ್ನೇ ಅವಲಂಬಿಸುವ ಕುಟುಂಬಗಳ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿತ್ತು. ಬಹುಶಃ ರಾಜ್ಯ ಸರ್ಕಾರ ಈ ಆತಂಕಗಳನ್ನು ನಿವಾರಿಸುವಲ್ಲಿ ವಿಫಲವಾಗಿರುವುದು ಚುನಾವಣೆಗಳಲ್ಲಿ ಪ್ರಭಾವ ಬೀರಿದೆ.

ತಮಿಳುನಾಡಿನಲ್ಲಿ ಮೊಟ್ಟಮೊದಲ ಬಾರಿ ದ್ರಾವಿಡ ಪಕ್ಷಗಳಿಗೆ (ಡಿಎಂಕೆ-ಎಐಎಡಿಎಂಕೆ) ಪರ್ಯಾಯ ಪಕ್ಷವೊಂದು ಉದಯಿಸಿದ್ದು, ಮೊದಲ ಹೆಜ್ಜೆಯಲ್ಲೇ ಯಶಸ್ಸನ್ನೂ ಗಳಿಸಿದೆ. ಎಂಜಿಆರ್‌ (ಎಂ.ಜಿ. ರಾಮಚಂದ್ರನ್)‌ ಅವರ ನಂತರ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಿರುವ ಮೊದಲ ಸಿನಿಮಾ ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ವಿಟಿಕೆ) ಚುನಾವಣಾ ವಿಶ್ಲೇಷಕರನ್ನೂ, ರಾಜಕೀಯ ತಜ್ಞರನ್ನೂ ಚಕಿತಗೊಳಿಸುವ ರೀತಿಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಇಬ್ಬರ ನಡುವೆ ಸಾಮ್ಯ ಎಂದರೆ , ಅವರ ಸಮಕಾಲೀನರಿಗೆ ಹೋಲಿಸಿದರೆ ಇಬ್ಬರೂ ಪ್ರಬುದ್ಧ ನಟರೇನೂ ಅಲ್ಲ. ಇಬ್ಬರೂ ಸಹ ಸಕಾಲಿಕವಾಗಿ ತಳಸಮಾಜದಲ್ಲಿ ಮಡುಗಟ್ಟಿರುವ ಸಾಮಾನ್ಯ ಜನರ ಹಾಗೂ ನಗರದ ಮಧ್ಯಮ ವರ್ಗಗಳ ನಾಡಿಮಿಡಿತವನ್ನು ಗ್ರಹಿಸುವುದರಲ್ಲಿ ಸಫಲರಾಗಿದ್ದಾರೆ. ವ್ಯತ್ಯಾಸವೇನಾದರೂ ಕಂಡರೆ ಅದು ಸೈದ್ದಾಂತಿಕ ಅಡಿಪಾಯದಲ್ಲಿ ಗುರುತಿಸಬಹುದು..

ಎಂಜಿಆರ್‌ ದ್ರಾವಿಡ ಪರಂಪರೆಯನ್ನು ಅನುಸರಿಸಿಕೊಂಡು ಬೆಳೆದ ಜನ ನಾಯಕ. ಆಗಿನ ದ್ರಾವಿಡ ರಾಜಕಾರಣದಲ್ಲಿ ಅಣ್ಣಾ ದೊರೈ ಅವರ ನಾಯಕತ್ವದಲ್ಲೇ ಬೆಳೆದ ಎಂಜಿಆರ್‌ ತಮ್ಮ ಸಿನಿಮಾಗಳಲ್ಲಿ ಪರದೆಯ ಮೇಲೆ ಬಿಂಬಿಸುತ್ತಿದ್ದ ಜನಾನುರಾಗಿ-ಸಮಾಜಮುಖಿ ವ್ಯಕ್ತಿಯನ್ನೇ ನಿಜ ಜೀವನದಲ್ಲೂ ತಮ್ಮೊಳಗೆ ಅಳವಡಿಸಿಕೊಂಡಿದ್ದರು. “ ನಿಮ್ಮ ಕಷ್ಟ ಸುಖಗಳನ್ನು ಅರ್ಥಮಾಡಿಕೊಳ್ಳುವ ನಾಯಕ ಇಲ್ಲಿದ್ದಾನೆ ”ಎಂಬ ಆಶ್ವಾಸನೆ ನೀಡುವ ಮತ್ತು “ ನಿಮ್ಮ ಸುಖ ಸಂಕಟಗಳಲ್ಲಿ ನಿಮ್ಮೊಡನೆ ನಾನಿದ್ದೇನೆ ” ಎಂದು ಭರವಸೆ ಮೂಡಿಸುವ ಪರದೆಯ ಮೇಲಿನ ಹೀರೋ, ತಮಿಳುನಾಡಿನ ರಾಜಕಾರಣದಲ್ಲಿ ಎಂಜಿಆರ್‌ ರೂಪದಲ್ಲಿ ಕಾಣಿಸಲಾರಂಭಿಸಿತ್ತು.ಅವರ ನಟನಾ ಸಾಮರ್ಥ್ಯಕ್ಕಿಂತಲೂ ತಳಮಟ್ಟದ ಶೋಷಿತ ದುಡಿಯುವ ವರ್ಗಗಳನ್ನು ತಲುಪುವ ಮಾದರಿ ಎಂಜಿಆರ್‌ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತ್ತು. ಇಡೀ ಡಿಎಂಕೆ-ಅಣ್ಣಾ ಡಿಎಂಕೆ ಆಳ್ವಿಕೆಯಲ್ಲಿ ಪೆರಿಯಾರ್‌ ಅವರ ಛಾಯೆ ಕಂಡರೂ ಸಹ, ಅದು ಬ್ರಾಹ್ಮಣಶಾಹಿ-ಸನಾತನ ಧರ್ಮ ವಿರೋಧಿ ನೆಲೆಯಲ್ಲಿತ್ತೇ ಹೊರತು, ಪೆರಿಯಾರ್‌ ಅವರ ನಾಸ್ತಿಕತೆಯ ಚಿಂತನೆಗಳು ಗಣನೆಗೇ ಬರದಿರುವುದು ವಿಮರ್ಶೆಗೊಳಗಾಗಬೇಕಾದ ಅಂಶ.

1973ರ ದಿಂಡಿಗುಲ್‌ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಕೆ ಮಾಯಾ ತೇವರ್‌ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ಮೊದಲ ಗೆಲುವು ಸಾಧಿಸುವ ಹೊತ್ತಿನಲ್ಲಿ ಎಂಜಿಆರ್‌ ಅವರ ಎಡಿಎಂಕೆ ಪಕ್ಷದ ಭರವಸೆಗಳ ಪೈಕಿ ಎಲ್ಲ ಮಹಿಳೆಯರಿಗೆ ಪ್ಲಾಸ್ಟಿಕ್‌ ಬಿಂದಿಗೆ ನೀಡುವುದೂ ಒಂದಾಗಿತ್ತು ಎಂದು ಹೇಳಲಾಗುತ್ತದೆ. ಆಗ ಪ್ಲಾಸ್ಟಿಕ್‌ ಬಿಂದಿಗೆಗಳು ಇನ್ನೂ ಭಾರತದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ. ಒಂದು ಹಡಗು ತುಂಬ ಸಿಂಗಾಪೂರ್‌ನಿಂದ ತರಿಸಿ ಹಂಚಿದ್ದರೆಂದೂ ಪ್ರತೀತಿ ಇದೆ. ಇಲ್ಲಿ ಗಮನಿಸಬೇಕಿರುವುದು ಎಂಜಿಆರ್‌ ಮಹಿಳೆಯರಿಗೆ ನಲ್ಲಿ ನೀರನ್ನಾಗಲೀ, ನೀರಿನ ಸುಲಭ ಲಭ್ಯತೆಯನ್ನಾಗಲೀ ಭರವಸೆ ಕೊಡಲಿಲ್ಲ, ಬದಲಾಗಿ ದೂರದಿಂದ ನೀರು ಹೊತ್ತು ತರುವ ಮಹಿಳೆಯರಿಗೆ ಆ ಭಾರವನ್ನು ತುಸು ಕಡಿಮೆ ಮಾಡುವ ಆಶ್ವಾಸನೆ ನೀಡಿದ್ದರು. ರಾಜಕೀಯ ಚಾಣಾಕ್ಷತನಕ್ಕೆ ಇದೊಂದು ಉದಾಹರಣೆ.
ಒಂದು ಹಂತದವರೆಗೆ ವಿಜಯ್‌ ಜೋಸೆಫ್‌ ಅವರೂ ತಮ್ಮ ಬಹುತೇಕ ಚಿತ್ರಗಳಲ್ಲಿ ಬಿಂಬಿಸಿರುವುದು ಇದೇ ಹೀರೋ ಇಮೇಜನ್ನೇ. ಆದರೆ ಈವರೆಗೂ ಕಂಡಂತೆ ವಿಜಯ್‌ ಅವರ ರಾಜಕೀಯ ಚಟುವಟಿಕೆಯಲ್ಲಿ ಯಾವುದೇ ನಿರ್ದಿಷ್ಟ ಸಿದ್ಧಾಂತದ ಸುಳಿವಿಲ್ಲ. ತಮಿಳುನಾಡಿನ ರಾಜಕಾರಣಿಗಳಿಗೆ ಅನಿವಾರ್ಯವಾಗಿರುವ ಪೆರಿಯಾರ್‌ ಬಿಟ್ಟರೆ ಉಳಿದಂತೆ ವಿಟಿಕೆ ಪಕ್ಷಕ್ಕೆ ಸೈದ್ಧಾಂತಿಕ ಸ್ಪಷ್ಟ ನೆಲೆ ಇಲ್ಲದಿರುವುದು ವಿಜಯ್‌ ಅವರ ಪ್ರಚಾರ ವೈಖರಿಯಿಂದಲೇ ಸ್ಪಷ್ಟವಾಗಿತ್ತು. ನವ ಭಾರತದ ನೂತನ ಮಾದರಿಯಾಗಿರುವ, ಜನಕಲ್ಯಾಣ ಯೋಜನೆಗಳು ಅಥವಾ ಗ್ಯಾರಂಟಿಗಳು ವಿಜಯ್‌ ಅವರಿಗೂ ಸಹ ಜನಬೆಂಬಲವನ್ನು ಗಳಿಸಿವೆ. ವಿಜಯ್‌ ಅವರ ಪಕ್ಷದ ಭರವಸೆಗಳನ್ನು ಗಮನಿಸಿದರೆ, ರಾಜ್ಯದ ಶೇಕಡಾ 50ರಷ್ಟು ಆದಾಯ ಈ ಗ್ಯಾರಂಟಿಗಳಿಗೆ ಖರ್ಚಾಗುತ್ತದೆ. ಆದರೂ ತಳಸಮಾಜದ ಜನತೆಗೆ ಸುಸ್ಥಿರ ಬದುಕು ಕಲ್ಪಿಸುವ ಸಮಾಜವಾದದ ಕಲ್ಪನೆಯಾಗಲೀ , ಸಮತಾವಾದ ಆಗಲೀ, ಎಲ್ಲರನ್ನೂ ಒಳಗೊಳ್ಳುವ ತಾತ್ವಿಕ ಚಿಂತನೆಗಳನ್ನಾಗಲೀ ವಿಜಯ್‌ ಅವರ ಪ್ರಚಾರಗಳಲ್ಲಿ ಗುರುತಿಸಲಾಗುವುದಿಲ್ಲ.
ಸಮಾನತೆಯ ಕಲ್ಪನೆ ಸಾಪೇಕ್ಷವಾದಾಗ
ವಿಜಯ್‌ ಅವರ ಜಾಣ್ಮೆಯನ್ನು ಕಾಣಬೇಕಿರುವುದು ಜನಸಾಮಾನ್ಯರ ನಾಡಿಮಿಡಿತವನ್ನು ಸರಿಯಾಗಿ ಅರಿತಿರುವ ಹಾಗೆಯೇ ವರ್ತಮಾನದ ರಾಜಕೀಯ ಚಿಂತನೆಯನ್ನೂ ಗ್ರಹಿಸಿರುವುದು. ಜನರ ಮೂಲಭೂತ ಜೀವನಾವಶ್ಯಗಳಿಗಿಂತಲೂ ಹೆಚ್ಚಾಗಿ , ಸುಭದ್ರ ಭವಿಷ್ಯಕ್ಕಿಂತಲೂ ಮಿಗಿಲಾಗಿ, ಈ ಹೊತ್ತಿನ ಸಮಸ್ಯೆಗಳನ್ನು ನಿವಾರಿಸುವ ಭರವಸೆ ಎಲ್ಲ ವರ್ಗಗಳ ಜನರನ್ನೂ ಆಕರ್ಷಿಸುತ್ತಿರುವುದು ಎಲ್ಲ ಚುನಾವಣೆಗಳಲ್ಲೂ ಕಾಣುತ್ತಿದೆ. ಯಾವ ಪಕ್ಷವೂ ಬಡತನ, ಹಸಿವು, ನಿರ್ವಸತಿ, ಉತ್ತಮ ಶಿಕ್ಷಣ-ಆರೋಗ್ಯ ಈ ಸಮಸ್ಯೆಗಳನ್ನು ಆದ್ಯತೆಯಾಗಿ ಜನರ ಮುಂದಿಡುತ್ತಿಲ್ಲ. ಬದಲಾಗಿ ಇವೆಲ್ಲವನ್ನೂ ತಾತ್ಕಾಲಿಕವಾಗಿ ಮರೆಸುವಂತಹ ʼ ಜನಕಲ್ಯಾಣ ಯೋಜನೆ ʼ (Welfare Schemes) ಗಳನ್ನು ಗ್ಯಾರಂಟಿಗಳ ರೂಪದಲ್ಲಿ, ನೇರ ನಗದು ಪಾವತಿಯ ರೂಪದಲ್ಲಿ ಪ್ರಸ್ತುತಪಡಿಸುತ್ತಿವೆ. ಬಿಜೆಪಿ ಇದನ್ನು ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಗಳಲ್ಲಿ ಪ್ರಯೋಗಿಸಿ, ಯಶಸ್ವಿಯಾಗುತ್ತಿದೆ. ವಿಜಯ್‌ ಈ ಸೂತ್ರವನ್ನೇ ಗಟ್ಟಿಯಾಗಿ ಅವಲಂಬಿಸಿದ್ದಾರೆ.

ಪರ್ಯಾಯ ಶಕ್ತಿಯಾಗಿ ವಿಜಯ್‌ ಅವರ ಟಿವಿಕೆ, ಹಿಂದುತ್ವದ ವಿಸ್ತರಣೆಯಾಗಿ ಬಿಜೆಪಿ, ಪುನರುಜ್ಜೀವನದ ದೃಷ್ಟಿಯಿಂದ ಕಾಂಗ್ರೆಸ್‌ ಮೂರು ರಾಜ್ಯಗಳಲ್ಲಿ ಅಧಿಕಾರ ಗಳಿಸುತ್ತಿರುವುದರೊಂದಿಗೇ ಅಸ್ಸಾಂನಲ್ಲಿ ಅಕ್ರಮ ವಲಸಿಗರ (Illegal immigrants) ಹೆಸರಿನಲ್ಲಿ ಬಾಂಗ್ಲಾ ಮುಸ್ಲಿಮರನ್ನೂ (ಬಂಗಾಳಿ ಮಾತನಾಡುವ ಮುಸ್ಲಿಂ ಜನತೆ) ತಮ್ಮ ಮತದ್ವೇಷ ರಾಜಕಾರಣದ ಪ್ರಧಾನ ಗುರಿಯಾಗಿಟ್ಟುಕೊಂಡಿರುವ ಹಿಮಂತ್‌ ಬಿಸ್ವಾಸ್‌ ಶರ್ಮ ಅವರ ಸರ್ಕಾರ ಮರಳಿ ಗೆಲುವು ಸಾಧಿಸಿರುವುದು ಆತಂಕಕಾರಿ ವಿಷಯವಾಗಿದೆ. ಈ ಐದೂ ಚುನಾವಣೆಗಳಲ್ಲಿ ಗಮನಿಸಬಹುದಾದ ಸಮಾನ ಎಳೆ ಎಂದರೆ ಕೋಮುವಾದ (Communalism) ಮತ್ತು ಜಾತ್ಯತೀತತೆ (Secularism) ಸಾರ್ವಜನಿಕ-ಚುನಾವಣಾ ಸಂಕಥನದ ಭಾಗವಾಗಿರಲಿಲ್ಲ.
ಅದರರ್ಥ ಈ ಎರಡೂ ವಿದ್ಯಮಾನಗಳನ್ನು ಅಲಕ್ಷಿಸಲಾಗಿದೆ ಎಂದೇನಲ್ಲ, ಬದಲಾಗಿ ಸಮುದಾಯಗಳನ್ನು, ಕೆಲವು ವಲಯಗಳನ್ನು ದಾಟಿ ಇಡೀ ಸಮಾಜಗಳನ್ನು ಪತ್ಯೇಕಿಸುವ, ದೂರೀಕರಿಸುವ ಮತ್ತು ʼಅನ್ಯʼ ಗೊಳಿಸುವ (Othering) ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದು ಭಾರತದ ವಿರೋಧ ಪಕ್ಷಗಳನ್ನು ಗಂಭೀರ ಚಿಂತನೆಗೆ ಹಚ್ಚಬೇಕಿದೆ. INDIA ಒಕ್ಕೂಟವನ್ನು ಬಲಪಡಿಸುವ ದಾರಿಗಳು ಇನ್ನೂ ಸಂಕೀರ್ಣವಾಗಿವೆ. ವಿಜಯ್‌ ಅವರ ಟಿವಿಕೆ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಪ್ರಾಂತೀಯ ಅಧಿಕಾರದಿಂದಾಚೆಗೆ ಯೋಚಿಸದಿರುವ ಕಾರಣ, ರಾಷ್ಟ್ರಮಟ್ಟದಲ್ಲಿ ಪ್ರಜಾಪ್ರಭುತ್ವ-ಸಂವಿಧಾನವನ್ನು ಬಲಪಡಿಸುವ ಜವಾಬ್ದಾರಿ ಹೆಚ್ಚಿನದಾಗಿ ಎಡಪಕ್ಷಗಳ ಮೇಲಿದೆ. ಇದನ್ನು ನಿಭಾಯಿಸಲು ಏನು ಮಾಡಬೇಕು ? ಆಲೋಚನೆ ಮಾಡಬೇಕಿದೆ.
( ಪರ್ಯಾಯದ ಶೋಧದಲ್ಲಿ ಮತದಾನದ ಲಕ್ಷಣ, ಮತದಾರರ ಆಯ್ಕೆಗಳು – ಮುಂದಿನ ಭಾಗದಲ್ಲಿ)
-೦-೦-೦-೦-

Tags: #DevelopmentPolitics#EconomicReality#GovernmentAchievements#KannadaNews#KarnatakaPolitics#SocialIssuesgovernancePeopleVoicePoliticalAnalysisPublicOpinion
Previous Post

“ದಾದಾ ರಾಜಕೀಯಕ್ಕೆ ಬಂದಿದ್ದರೆ ಇಂದು ಸಿಎಂ ಆಗುತ್ತಿದ್ರಾ?”: ಸೌರವ್ ಗಂಗೂಲಿ ಕುರಿತು ಮತ್ತೆ ಚರ್ಚೆ!

Next Post

ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

Related Posts

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ
ಅಂಕಣ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

by ಪ್ರತಿಧ್ವನಿ
May 11, 2026
0

ನಾ ದಿವಾಕರ ( ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ – ಹಾಗೂ ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ ಲೇಖನಗಳ ಮುಂದುವರೆದ ಭಾಗ ) ಸಂಸದೀಯ...

Read moreDetails
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

May 4, 2026
2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

2026ರ ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಳಂಬ: ಆಡಳಿತ, ಆರ್ಥಿಕತೆ ಮತ್ತು ಅಭಿವೃದ್ಧಿಯ ಪರಿಣಾಮಗಳು

May 3, 2026
ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ

ಚಿಗುರುವ ಪ್ರತಿಭೆಗಳ ಸುಂದರ ಅನಾವರಣ – ನೀರಗನ್ನಡಿ

May 3, 2026
Next Post
ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada