ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ದಳಪತಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನಟಿ ತ್ರಿಶಾ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ತ್ರಿಷಾ ಭಾಗವಹಿಸಿದ್ದರು. ಸಮಾರಂಭದ ಬಳಿಕ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನೀಲಿ ಬಣ್ಣದ ಸೀರೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡು, “The Love Is Always Louder” ಎಂಬ ಕ್ಯಾಪ್ಷನ್ ಹಾಕಿದ್ದರು. ಈ ಒಂದೇ ಸಾಲು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತ್ರಿಷಾ ಪೋಸ್ಟ್ಗೆ ಅಭಿಮಾನಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಇದು ಕೇವಲ ಪ್ರೇರಣಾದಾಯಕ ಸಂದೇಶ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ವಿಜಯ್ ಮತ್ತು ತ್ರಿಷಾ ನಡುವಿನ ಆಪ್ತತೆಯ ಬಗ್ಗೆ ಮತ್ತೆ ಚರ್ಚೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ವಿಜಯ್ ಅಥವಾ ತ್ರಿಷಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಪ್ರಮಾಣವಚನ ಸಮಾರಂಭದಲ್ಲಿ ತ್ರಿಷಾ, ವಿಜಯ್ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಕ್ಷಣಗಳೂ ವೈರಲ್ ಆಗಿವೆ. ವಿಶೇಷವಾಗಿ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಅವರ ಜೊತೆಗಿನ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ. ಇದೀಗ “ದಿ ಲವ್ ಇಸ್ ಆಲ್ವೇಸ್ ಲೌಡರ್” ಎಂಬ ಕ್ಯಾಪ್ಷನ್ ತಮಿಳು ಸಿನಿರಂಗ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಅದರ ಅರ್ಥ ಹುಡುಕುವಲ್ಲಿ ಬ್ಯುಸಿಯಾಗಿದ್ದಾರೆ.






