ವಿಶೇಷ ಲೇಖನ : ನಾ ದಿವಾಕರ
ಪಶ್ಚಿಮ ಬಂಗಾಲ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಭಾರತದ ಅಧಿಕಾರ ರಾಜಕಾರಣಕ್ಕೆ ಹೊಸ ದಿಕ್ಕನ್ನು ತೋರಿವೆ. ಈ ಚುನಾವಣಾ ಫಲಿತಾಂಶಗಳು ತೆರೆದಿಟ್ಟಿರುವ ಮಾಯಾ ಪೆಟ್ಟಿಗೆಯಿಂದ ಹೊರಬರುವ ವಾಸ್ತವಗಳು ಮತ್ತು ಮಿಥ್ಯೆಗಳು 2029ರ ಲೋಕಸಭಾ ಚುನಾವಣೆಗಳಲ್ಲೂ ತಮ್ಮದೇ ಆದ ಪ್ರಭಾವ ಹೊಂದಿರುತ್ತವೆ. ಚುನಾವಣಾ ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಸಂಸದೀಯ ವ್ಯವಸ್ಥೆಯಲ್ಲಿ ಜನತೆಯ ಮತದಾನದ ಆದ್ಯತೆ ಮತ್ತು ಆಯ್ಕೆಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂದು ನಿರೀಕ್ಷಿಸಲಾಗುವುದಿಲ್ಲ. ಆದರೆ ಮತದಾರರ ಈ ಎರಡೂ ಅವಕಾಶಗಳನ್ನು ಸಮರ್ಪಕವಾಗಿ ಅರಿತು, ಕುಶಲತೆಯಿಂದ ನಿರ್ವಹಿಸುವುದು (Manipulate) ಹೇಗೆ ಎನ್ನುವ ಪ್ರಶ್ನೆಗೆ ಈ ಚುನಾವಣೆಗಳು ಹಲವು ನಕಾರಾತ್ಮಕ ಮಾರ್ಗದರ್ಶಿ ಸೂತ್ರಗಳನ್ನು ನೀಡಿವೆ.
ನವ ಭಾರತದ ಹೊಸ ಹಾದಿ
ಭಾರತದ ಪ್ರಜಾಪ್ರಭುತ್ವ ಒಂದು ರೀತಿಯಲ್ಲಿ ಮನ್ವಂತರದ ಹಾದಿಯಲ್ಲಿ ನಡೆದಿದೆ. ಹೊಸ ಆಲೋಚನಾ ವಿಧಾನಗಳಿಗೆ ಎಡೆಮಾಡಿಕೊಡುವ ವಿನೂತನ ಮಾದರಿಗಳನ್ನು ಚುನಾವಣೆಗಳಲ್ಲಿ ಬಿಂಬಿಸಲಾಗುತ್ತಿದೆ. ಪ್ರಧಾನವಾಗಿ ಕಾಣಬಹುದಾದ ಅಂಶಗಳೆಂದರೆ :
(i) ಚುನಾವಣಾ ವೆಚ್ಚ ಅಥವಾ ಹಣದ ಹರಿವು ಮೌಲ್ಯಮಾಪನದ ಮಾನದಂಡವಾಗಿ ಉಳಿದಿಲ್ಲ. (ii) ನಕಲಿ ಮತದಾನ, ರಿಗಿಂಗ್, ಮತಗಟ್ಟೆ ಕಳವು ಇವೆಲ್ಲವೂ ಹಳಸಲಾಗಿಹೋಗಿವೆ. (iii) ಮತದಾನ ಪ್ರಕ್ರಿಯೆಯನ್ನೇ ವಿರೂಪಗೊಳಿಸುವುದು ಸ್ವೀಕೃತವಾಗುತ್ತಿದೆ. (iv) ಎಲ್ಲ ಸಾಂವಿಧಾನಿಕ ಅಂಗಗಳು ಆಳುವ ಪಕ್ಷದ ಅಧೀನತೆಗೊಳಗಾಗುವ ಪ್ರವೃತ್ತಿಗೆ ಮಾನ್ಯತೆ ದೊರೆತಿದೆ. (v) ಸಂವಿಧಾನ ಉಲ್ಲಂಘನೆ ಪಕ್ಷಗಳ ಸೈದ್ದಾಂತಿಕ ಬುನಾದಿಯನ್ನು ಅಲುಗಾಡಿಸುವುದಿಲ್ಲ. (vi) ತತ್ವ ಸಿದ್ದಾಂತಗಳು ಅಧಿಕಾರಪೀಠದಲ್ಲಿ ವಿನಿಮಯ ಸರಕುಗಳಾಗಿವೆ. (vii) ಬಂಡವಾಳ-ಮಾರುಕಟ್ಟೆಗೆ ಚುನಾವಣಾ ರಾಜಕಾರಣದಲ್ಲಿ ಮುಕ್ತ ಪರವಾನಗಿ ನೀಡಲಾಗಿದೆ. (viii) ಪೌರತ್ವ ಹೊಂದಿರುವ ಜನತೆಯನ್ನು ಮತದಿಂದಲೇ ವಂಚಿಸುವ SIR , ನವ ಭಾರತದ ಅಡಿಗಲ್ಲು ಆಗಲಿದೆ.

ಈ ನಡುವೆ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಖಚಿತವಾಗಲಿದೆ. ಈ ಮನ್ವಂತರದ ಆಯಾಮಗಳು ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬ ಪ್ರಶ್ನೆ ಮುಂದಿನ ಹತ್ತು ವರ್ಷಗಳ ಸಾರ್ವಜನಿಕ ಸಂಕಥನಗಳಲ್ಲಿ (Public Discourse) ಪ್ರಮುಖವಾಗಿರುತ್ತದೆ. ಆದರೆ ವರ್ತಮಾನದ ರಾಜಕಾರಣದಲ್ಲಿ ಮೇಲಿನ ಯಾವುದೇ ವ್ಯತ್ಯಯಗಳೂ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳನ್ನು ವಿಚಲಿತಗೊಳಿಸಿಲ್ಲ. ಚುನಾವಣೆಗಳ ಸೋಲಿಗೆ ಇದನ್ನೇ ಕಾರಣ ಎಂದು ಬಿಂಬಿಸಿ ತಮ್ಮ ಜನಸಾಂಗತ್ಯದ ಕೊರತೆಯನ್ನು ಮರೆಮಾಚುವ ತಂತ್ರದಲ್ಲಿ ಎಲ್ಲ ಪಕ್ಷಗಳೂ ತೊಡಗಿವೆ. ಈ ಅಸಾಂವಿಧಾನಿಕ ಬೆಳವಣಿಗೆಗಳು ಚುನಾವಣೆಗಳ ವಿಜಯಗಳ ಮೂಲಕವೇ ತಳಸಮಾಜದ ಮಾನ್ಯತೆ ಪಡೆದುಬಿಡುತ್ತವೆ. ಅಥವಾ ಜನಸಾಮಾನ್ಯರು ಇದಾವುದನ್ನೂ ಲೆಕ್ಕಿಸುವುದಿಲ್ಲ ಎಂಬ ದಾರ್ಷ್ಟ್ಯ ರಾಜಕೀಯ ಪಕ್ಷಗಳಲ್ಲಿ ದಟ್ಟವಾಗುತ್ತದೆ.
ಧೃವೀಕರಣ ಮತ್ತು ಪ್ರತ್ಯೇಕೀಕರಣ
SIR ಪ್ರಕ್ರಿಯೆ ನ್ಯಾಯಾಂಗದ ನಿರ್ಲಿಪ್ತತೆಯ ನಡುವೆ ನಿರಾತಂಕವಾಗಿ ಮುಂದುವರೆಯುತ್ತಿರುವಂತೆಯೇ, ನಾಗರಿಕ ಸಮಾಜದ ಸಂಘಟನೆಗಳು (Civil Society Organisations) ಈ ಅಸಾಂವಿಧಾನಿಕ ಕ್ರಮದ ವಿರುದ್ಧ ಜನರಲ್ಲಿ ಅರಿವು ಮೂಡಿಸುತ್ತಿವೆ. ನೂರಾರು ಸಂಘಟನೆಗಳು, ಹಿರಿಯ ನಾಯಕರು, ಬುದ್ಧಿಜೀವಿಗಳು ರಾಷ್ಟ್ರಪತಿಗಳಿಗೂ ಮನವಿ ಸಲ್ಲಿಸಿ, ಈ ಪ್ರಕ್ರಿಯೆಯನ್ನು ತಡೆಗಟ್ಟುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಬಹುಮುಖ್ಯವಾಗಿ ಆಗಲೇಬೇಕಿದ್ದ ದೇಶವ್ಯಾಪಿ ಬೃಹತ್ ಜನಾಂದೋಲನ ಸಾಧ್ಯವಾಗುತ್ತಿಲ್ಲ. 2019ರ ಸಿಎಎ/ಎನ್ಆರ್ಸಿ ನಂತರದಲ್ಲಿ ಯಾವುದೇ ಜನಾಂದೋಲನಗಳು ಕಾಣದಿರುವುದು ಆತಂಕಕಾರಿ ವಿಷಯವಲ್ಲವೇ ? ಈ ಆತಂಕ ಜನಸಾಮಾನ್ಯರಲ್ಲಿದೆ ಆದರೆ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿಲ್ಲ.
ದೇಶಾದ್ಯಂತ ಹಿಂದೂ-ಮುಸ್ಲಿಂ ಕೋಮು ಧೃವೀಕರಣ ಬಹುಮಟ್ಟಿಗೆ ಪರಿಪೂರ್ಣವಾಗಿರುವ ಸಂದರ್ಭದಲ್ಲಿ ಚುನಾವಣಾ ಸಂಕಥನಗಳು (Electoral Discourses) ಈಗ ತಳಮಟ್ಟದ ಸಮಾಜದಲ್ಲಿ ನೇರವಾಗಿಯೇ ಕಾಣಬಹುದಾದ ಜೀವನೋಪಾಯದ ಸುತ್ತ ಹರಡಿಕೊಂಡಿರುತ್ತವೆ. ನಗರಗಳಲ್ಲಿ ಮತ್ತು ಹಳ್ಳಿಗಳಲ್ಲಿ ತಂತ್ರಜ್ಞಾನದ ಸಂವಹನ ಮಾಧ್ಯಮಗಳು ಪ್ರತಿ ಮೂಲೆಯನ್ನೂ ತಲುಪಿರುವುದರಿಂದ, ಶೇಕಡಾ 95ರಷ್ಟು ಜನರಿಗೆ ದೇಶದ ಆಗುಹೋಗುಗಳು ತಲುಪುತ್ತಲೇ ಇರುತ್ತವೆ. ಈ ಸಂವಹನದ ಹಾದಿಗಳನ್ನು ಸಮರ್ಪಕವಾಗಿ ಬಳಸಿಕೊಂಡು, ತಲುಪಬೇಕಾದ ಜನರನ್ನು ಸಕಾಲಕ್ಕೆ ತಲುಪುವುದು ಎಲ್ಲ ರಾಜಕೀಯ ಪಕ್ಷಗಳ ಆದ್ಯತೆಯಾಗಬೇಕಾಗುತ್ತದೆ. ಇದನ್ನು Race to the Bottom ಅಥವಾ ತಳಸ್ತರದೆಡೆಗೆ ಓಟ ಎಂದು ಬಣ್ಣಿಸಬಹುದು.

ಈ ಓಟದಲ್ಲಿ ಗೆಲುವು ಸಾಧಿಸುವುದು ಸುಲಭ. ಆದರೆ ಗುರಿ ತಲುಪಿದ ಮೇಲೆ ಅಲ್ಲಿ ಕಾಣಬಹುದಾದ ನೆಲದ ವಾಸ್ತವಗಳನ್ನು (Ground Realities) ರಾಜಕೀಯ ಪಕ್ಷಗಳು ಹೇಗೆ ಅರ್ಥಮಾಡಿಕೊಳ್ಳಬೇಕು ? ಸಂವಿಧಾನ ರಕ್ಷಣೆಯ ಬಗ್ಗೆ ಮಾತನಾಡುವ ಅಥವಾ ಸಂವಿಧಾನವನ್ನು ಆರಾಧಿಸುವ ಯಾವುದೇ ವ್ಯಕ್ತಿ/ಪಕ್ಷ/ಗುಂಪಿಗೆ ಇಲ್ಲಿ ಬಡತನ, ಹಸಿವು, ನಿರ್ವಸತಿ, ಅಸಮರ್ಪಕ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು, ಮೂಲ ಸೌಕರ್ಯಗಳ ಕೊರತೆ, ನಿರುದ್ಯೋಗ, ಜಾತಿ-ಲಿಂಗ ತಾರತಮ್ಯ ಮತ್ತು ಬಲಾಢ್ಯ ಸಮುದಾಯಗಳ ಆಧಿಪತ್ಯ ಕಾಣಿಸಬೇಕು. ಹೀಗೆ ಕಾಣಿಸುವುದೇ ಆದಲ್ಲಿ ಅಂತಹ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಸಮ ಸಮಾಜ, ಲಿಂಗ ಸಮಾನತೆ, ಜಾತಿ ವಿನಾಶ ಮತ್ತು ಆರ್ಥಿಕ ಸಮಾನತೆ ಪ್ರಧಾನ ಅಂಶಗಳಾಗಿರಬೇಕು.
ಆದ್ಯತೆ ಮತ್ತು ಆಯ್ಕೆಗಳ ತಾಕಲಾಟ
ಈ ಆಶಯಗಳನ್ನು ವ್ಯಕ್ತಪಡಿಸುವುದು ಒಂದು ಆಯಾಮ. ಮತ್ತೊಂದೆಡೆ ಈ ಸಾಂವಿಧಾನಿಕ ಆಶಯಗಳನ್ನು ಈಡೇರಿಸಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು ಎಂಬ ಅರಿವೂ ಈ ಪಕ್ಷಗಳಿಗೆ ಇರಬೇಕು. ಅಲ್ಲಿ ʼಮನುವಾದʼಒಂದೇ ಕಾಣುವುದಿಲ್ಲ ಅಥವಾ ಫ್ಯಾಸಿಸಂ ಲಕ್ಷಣಗಳು ಮೇಲ್ನೋಟಕ್ಕೆ ಕಾಣುವುದೇ ಇಲ್ಲ. ಅಲ್ಲಿ ಢಾಳಾಗಿ ಗೋಚರಿಸುವುದು ಬಂಡವಾಳದ ಪ್ರಾಬಲ್ಯ, ಮಾರುಕಟ್ಟೆಯ ಹಿಡಿತ, ಶ್ರೀಮಂತಿಕೆಯ ದರ್ಪ, ಮೇಲ್ಜಾತಿ-ಮೇಲ್ವರ್ಗದ ಅಹಂಕಾರ ಮತ್ತು ಇವೆಲ್ಲವನ್ನೂ ತನ್ನೊಳಗಿಟ್ಟುಕೊಂಡೇ ಕೈಯ್ಯಲ್ಲಿ ಸಂವಿಧಾನದ ಶೃತಿ ಹಿಡಿದು ಮತ ಯಾಚಿಸುವ ರಾಜಕೀಯ ವಾತಾವರಣ (Political Atmosphere) . ಇವೆಲ್ಲವನ್ನೂ ನಿರ್ದೆಶಿಸುವ, ನಿಯಂತ್ರಿಸುವ ಒಂದು ದೊಡ್ಡ ಶಕ್ತಿ ದೇಶದ/ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿದಿರುತ್ತದೆ. ಅಥವಾ ಸ್ಟೇಟ್ ಎನ್ನಲಾಗುವ ಪ್ರಭುತ್ವ ಇವೆಲ್ಲವನ್ನೂ ತನ್ನದಾಗಿಸಿಕೊಂಡು, ಸಾಂವಿಧಾನಿಕ ವಿಧಿಯ ಅನುಸಾರವೇ ರಕ್ಷಾ ಕವಚಗಳನ್ನು ನಿರ್ಮಿಸಿರುತ್ತದೆ.
ಈ ಪ್ರಭುತ್ವದ ಆಲೋಚನಾ ಕ್ರಮಗಳಿಂದಾಚೆಗೆ ಯೋಚಿಸುವ ಒಂದು ರಾಜಕೀಯ ಚಿಂತನೆ ಇದ್ದರೆ ಮಾತ್ರ ಅಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಯಾಗಿರಲು ಸಾಧ್ಯ. ಆದರೆ ನಮ್ಮಲ್ಲೇನಾಗುತ್ತಿದೆ ? ಚುನಾವಣೆಯ ಗೆಲುವನ್ನೇ ಪ್ರಜಾಪ್ರಭುತ್ವದ ಗೆಲುವು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿಯೇ ಎಲ್ಲ ರಾಜಕೀಯ ಪಕ್ಷಗಳ ಗುರಿ ತಳಸಮಾಜದ ವಂಚಿತ ಜನರನ್ನು ಸಂತೈಸುವುದು ಅಥವಾ ಸಂತೃಪ್ತಿಪಡಿಸುವುದೇ ಆಗಿರುತ್ತದೆ. ಕೇವಲ ಹತ್ತು ವರ್ಷಗಳ ಹಿಂದೆ ತಳಸಮಾಜದ ಅವಕಾಶವಂಚಿತ ಜನರಿಗೆ ಸರ್ಕಾರಗಳು ಭರವಸೆ ನೀಡುವ ʼ ಉಚಿತ ʼ ಎನ್ನಲಾಗುವ ಪಡಿತರ, ಸಂಚಾರ, ಸವಲತ್ತುಗಳು ಇವೆಲ್ಲವನ್ನೂ ʼ ರೇವ್ಡಿ ʼ (ಕುರುಕಲು ತಿಂಡಿ ಎಂದರ್ಥ) ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿ ಸಹ ಈಗ ಇದೇ ಮಾದರಿಯನ್ನು ಅನುಸರಿಸುತ್ತಿದೆ. ಈಗ ನೇರ ನಗದು ಪಾವತಿಗೆ ಡಿಜಿಟಲ್ ಆಯಾಮವನ್ನೂ ನೀಡಲಾಗಿದೆ.
ರಾತ್ರೊರಾತ್ರಿ ಮಹಿಳೆಯರ, ಬಡವರ ಖಾತೆ ಜಮಾ ಆಗುವ ಸಾವಿರಾರು ರೂಗಳು, ಕೆಲವು ವರ್ಷಗಳ ಹಿಂದಿನ ಹಣ-ಹೆಂಡ-ಸೀರೆ ಇತ್ಯಾದಿಗಳ ಮಾದರಿಯನ್ನು ಹಿಂದಕ್ಕೆ ತಳ್ಳಿವೆ. ಹಣ ಹಂಚಿ ಮತ ಖರೀದಿಸುವುದನ್ನು ಈಗ ʼ ನೇರ ನಗದು ಪಾವತಿ ʼ ಎಂಬ ಡಿಜಿಟಲ್ ಪರಿಭಾಷೆಯ ಮೂಲಕ ಆಕರ್ಷಣೀಯವಾಗಿಸಲಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಸ್ಟಾಲಿನ್ ಚುನಾವಣೆ ಘೋಷಣೆಯಾಗುವ ಮುನ್ನವೇ ಇದಕ್ಕೆ ನಾಂದಿ ಹಾಡಿದ್ದರು. ಈಗ ಟಿವಿಕೆ ಪಕ್ಷದ ವಿಜಯ್ ಸಹ ಇದೇ ಹಾದಿ ಹಿಡಿದಿದ್ದಾರೆ. ಹೆಚ್ಚು ಹಣ ಆಫರ್ ಮಾಡುವ ಮತ್ತು ಹೆಚ್ಚು ಸವಲತ್ತುಗಳನ್ನು ಘೋಷಿಸುವ ಪಕ್ಷ ಸಹಜವಾಗಿ ಜನಾನುರಾಗಿಯಾಗಿ ಕಾಣುತ್ತದೆ. ಬಿಹಾರದಿಂದ ತಮಿಳುನಾಡು ಕರ್ನಾಟಕದವರೆಗೂ ಹರಡಿರುವ ಪ್ರವೃತ್ತಿ ಇದು.
ಮಿಥ್ಯೆ ಮತ್ತು ವಾಸ್ತವಗಳ ನಡುವೆ
ಶೈಕ್ಷಣಿಕ, ಜಾತೀಯ, ಧಾರ್ಮಿಕ, ಸಾಮುದಾಯಿಕ ಅಥವಾ ಲಿಂಗತ್ವ ಭೇದಭಾವ ಇಲ್ಲದೆ ಸಮಾಜದಲ್ಲಿ ಈ ʼಗ್ಯಾರಂಟಿʼ ಯೋಜನೆಗಳು ರಾಜಕೀಯವಾಗಿ ನಿರ್ಣಾಯಕ ಸ್ಥಾನ ಪಡೆದುಕೊಂಡಿರುವುದು ನೆಲದ ವಾಸ್ತವಗಳನ್ನು (Ground Realities) ವಿವಿಧ ಆಯಾಮಗಳಲ್ಲಿ ಸ್ಪಷ್ಟಪಡಿಸುತ್ತದೆ. ಮೊದಲನೆಯದು ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ತತ್ವ-ಸಿದ್ಧಾಂತಗಳ ಭೂಮಿಕೆ ಅನಿವಾರ್ಯವಲ್ಲ (ಉದಾಹರಣೆ ; ಟಿವಿಕೆ , ಆಮ್ ಆ̧ದ್ಮಿ ಜೆಡಿಎಸ್ ಇತ್ಯಾದಿ)̤ ಎರಡನೆಯದು ಕಾಂಗ್ರೆಸ್-ಬಿಜೆಪಿಯಂತಹ ತತ್ವಾಧಾರಿತ ಪಕ್ಷಗಳಿಗೂ ತಮ್ಮ ಮೂಲ ಸಿದ್ಧಾಂತ ಅನವಶ್ಯಕವಾಗಿ ಕಾಣತೊಡಗುತ್ತದೆ. (ಉದಾಹರಣೆಗೆ ಬಿಹಾರದಲ್ಲಿ ಬಿಜೆಪಿ ಪ್ರಚಾರದಲ್ಲಿ ಹಿಂದುತ್ವ ಪ್ರಧಾನವಾಗಿರಲಿಲ್ಲ ). ಮೂರನೆಯದು ಕೆಳ ಮಧ್ಯಮ ವರ್ಗಗಳಿಗೆ, ತಳಸಮಾಜದ ದುಡಿಯುವ ವರ್ಗಗಳಿಗೆ ಹಾಗೂ ಬಡಜನತೆಗೆ ಈ ʼ ಗ್ಯಾರಂಟಿʼ ಸವಲತ್ತುಗಳೇ ಜೀವನೋಪಾಯದ ಸುಧಾರಣಾ ಸಾಧನಗಳಾಗಿ ಕಾಣುತ್ತವೆ. ನಾಲ್ಕನೆಯ ಬಹುಮುಖ್ಯ ಅಂಶ ಎಂದರೆ ಈ ವಂಚಿತ ಜನಸಾಮಾನ್ಯರನ್ನು ಕಡು ಬಡತನ (Abject Poverty) ಕಾಡುತ್ತಿರುವುದು ಖಚಿತವಾಗಿ ಕಾಣುತ್ತದೆ.
1960-70ರ ಬಡತನ ನಿರ್ಮೂಲನೆಯಿಂದ 1990-2000ದ ಬಡತನ ನಿವಾರಣೆಯನ್ನು ಹಾದು ಈಗ ಭಾರತ ಬಡತನ ನಿರ್ವಹಣೆಯ ಹಂತಕ್ಕೆ ಬಂದು ತಲುಪಿದೆ. ದೇಶದಲ್ಲಿ ಈ ಬಡತನ ಇಲ್ಲ ಎಂದಾದರೆ ಕೇಂದ್ರ ಸರ್ಕಾರ 80 ಕೋಟಿ ಜನರಿಗೆ (ಶೇಕಡಾ 55 ರಿಂದ 60) ಪ್ರತಿ ತಿಂಗಳೂ ಉಚಿತ ಪಡಿತರ ನೀಡುತ್ತಿರಲಿಲ್ಲ. ಅಥವಾ ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ , ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ ಹೀಗೆ ಬಹುತೇಕ ರಾಜ್ಯಗಳಲ್ಲಿ ʼ ನೇರ ನಗದು ʼ ಪಾವತಿಸುವ ವ್ಯವಸ್ಥೆ ಅಧಿಕೃತ ಸಮ್ಮತಿ ಪಡೆಯುತ್ತಿರಲಿಲ್ಲ. ತಳಸಮಾಜದ ಉತ್ಪಾದಕೀಯ ಶಕ್ತಿಗಳಿಗೆ ಉತ್ಪಾದನೆಯ ಮಾರ್ಗಗಳನ್ನು ಕಲ್ಪಿಸಲು ಸಾಧ್ಯವಾಗದ ವ್ಯವಸ್ಥೆ ಮಾತ್ರ ಹೀಗೆ ಪರ್ಯಾಯ ಸಂತೈಸುವಿಕೆಯ ಮಾರ್ಗವನ್ನು ಅನುಸರಿಸುತ್ತದೆ. ವಿಚಿತ್ರ ಎಂದರೆ ಇದನ್ನು ಓಲೈಕೆ ಎಂದು ಯಾವುದೇ ರಾಜಕೀಯ ಸಂಕಥನದಲ್ಲೂ (Political Discourse) ವ್ಯಾಖ್ಯಾನಿಸುವುದಿಲ್ಲ. ಏಕೆಂದರೆ ಆಳುವ ವರ್ಗಗಳನ್ನು ಪ್ರತಿನಿಧಿಸುವ ಎಲ್ಲ ಪಕ್ಷಗಳಿಗೂ ಇದು ಅಪ್ಯಾಯಮಾನವಾಗುತ್ತದೆ.

ಇದಕ್ಕೆ ಕಾರಣ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಅವಕಾಶ ವಂಚಿತ ಜನಸಮುದಾಯಗಳಿಗೆ, ಶೋಷಿತರಿಗೆ ಹಾಗೂ ಅಂಚಿನಲ್ಲಿರುವವರಿಗೆ ಸುಸ್ಥಿರ ಬದುಕು, ಸುಭದ್ರ ಭವಿಷ್ಯ ಕಲ್ಪಿಸುವಂತಹ ಆರ್ಥಿಕ ನೀತಿಗಳು, ಎಡಪಕ್ಷಗಳನ್ನು ಹೊರತುಪಡಿಸಿ, ಯಾವ ಪಕ್ಷಗಳಿಗೂ ಆದ್ಯತೆಯಾಗಿ ಉಳಿದಿಲ್ಲ. ಕಾರ್ಪೋರೇಟ್ ಮಾರುಕಟ್ಟೆ ನಿರ್ದೇಶಿಸುವ ಆರ್ಥಿಕ ನೀತಿಗಳನ್ನೇ ಎಲ್ಲ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳೂ ಅನುಸರಿಸುವುದರಿಂದ ಈ ಸಮಾನ ಎಳೆಯೇ ಇಡೀ ರಾಜಕೀಯ ಸಂಕಥನವನ್ನು ನಿಯಂತ್ರಿಸುತ್ತದೆ. ಇದರ ಅತ್ಯುತ್ತಮ ನಿದರ್ಶನವನ್ನು , ಸಂವಿಧಾನವನ್ನು ಸದಾ ಜಪಿಸುವ ಕರ್ನಾಟಕ ಸರ್ಕಾರದ ನೀತಿಗಳಲ್ಲಿ ಗುರುತಿಸಬಹುದು. ಶಿಕ್ಷಣದ ಕಾರ್ಪೋರೇಟೀಕರಣಕ್ಕೆ ಎಡೆಮಾಡಿಕೊಡುವ ಕೆಪಿಎಸ್ ಮಾಗ್ನೆಟ್ ಶಾಲೆ, ಕೃಷಿ ಭೂ ಸ್ವಾಧೀನ ನೀತಿಗಳು ಒಂದು ಜ್ವಲಂತ ನಿದರ್ಶನ.
ಸಮಾನತೆಯ ಕನಸು- ವಾಸ್ತವ
ಸಮಾಜವಾದ ʼದ ಉದಾತ್ತ ಕಲ್ಪನೆ ಗ್ರಾಂಥಿಕವಾಗಿರುವಂತೆಯೇ ʼ ಸಂವಿಧಾನ ʼವೂ ಸಹ ಆಶಯಗಳ ನೆಲೆಯಲ್ಲಿ ಗ್ರಾಂಥಿಕವಾಗಿಯೇ ಉಳಿದಿದೆ. ಸಂವಿಧಾನ ಅಪಾಯದಲ್ಲಿದೆ ಎಂಬ ಆತಂಕ ವ್ಯಕ್ತಪಡಿಸುವ ರಾಜಕೀಯ ಪಕ್ಷಗಳೂ ಸಹ ಬಹುತ್ವ-ಜಾತಿ ಆಧಾರಿತ ಸವಲತ್ತುಗಳು ಮತ್ತು ಕೋಮುವಾದವನ್ನು ದಾಟಿ, ಅಪಾಯವನ್ನು ಗುರುತಿಸಲು ಮುಂದಾಗುವುದಿಲ್ಲ. ಸಂವಿಧಾನದ ಮೂಲ ಆಶಯ-ಅಡಿಪಾಯವೇ ಸಮಾನತೆ ಮತ್ತು ಸಮ-ಸಮಾಜ. ಈ ಸಮಾನತೆಯೇ ಪ್ರಜಾಪ್ರಭುತ್ವದ ಅಡಿಗಲ್ಲು. ಬಡತನ, ನಿರ್ವಸತಿ ಮತ್ತು ಶಿಕ್ಷಣ-ಆರೋಗ್ಯದ ಕಾರ್ಪೋರೇಟೀಕರಣ ನೀತಿಗಳು ಈ ಅಡಿಗಲ್ಲುಗಳನ್ನೇ ಹಂತಹಂತವಾಗಿ ತೆಗೆದುಹಾಕುವ ಆಡಳಿತ ಮಾದರಿಗಳು. ಸಮಾನತೆಯನ್ನು ಶಾಶ್ವತ ಭ್ರಮೆಯಾಗಿಸಲು ಈ ಮಾದರಿಗಳೇ ಬಂಡವಾಳ.
ಈ ಮಾದರಿಯನ್ನು ತಾತ್ವಿಕವಾಗಿ ವಿರೋಧಿಸುವ ಮತ್ತು ಪರ್ಯಾಯವನ್ನು ಜನರ ಮುಂದಿಡುವ ರಾಷ್ಟ್ರೀಯ-ಪ್ರಾದೇಶಿಕ ಪಕ್ಷ ಯಾವುದಿದೆ ? ಎಡಪಕ್ಷಗಳನ್ನೂ ಸೇರಿದಂತೆ ಎಲ್ಲ ಪಕ್ಷಗಳೂ ಪರ್ಯಾಯ ರಾಜಕಾರಣದ (Alernative Politics) ಬಗ್ಗೆ ಮಾತನಾಡುತ್ತವೆ. ಆದರೆ ರಾಜಕೀಯ ಪರ್ಯಾಯ (Political Alternative) ಚರ್ಚೆಯ ವಿಷಯವಾಗುವುದಿಲ್ಲ. ಇದು ಮುನ್ನಲೆಗೆ ಬರಬೇಕಾದರೆ ಏಕೀಕರಣದ ಭಾವ ಮೂಡಬೇಕು. ವಿರೋಧ ಪಕ್ಷಗಳು, ಅಂದರೆ ಬಿಜೆಪಿ/ಎನ್ಡಿಎ ಹೊರತಾದ ಪಕ್ಷಗಳು ಒಂದುಗೂಡಬೇಕು, ಎಡಪಕ್ಷಗಳು ಒಂದಾಗಬೇಕು. ಎಡಪಕ್ಷಗಳ ಸಾಂದರ್ಭಿಕ ಒಂದುಗೂಡುವಿಕೆ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಪರಿಹಾರವಾಗಲಾರದು. ಎಲ್ಲ ಪಕ್ಷಗಳೂ ತಮ್ಮ ತಾತ್ವಿಕ ಪ್ರತ್ಯೇಕತಾವಾದ (Sectrarianism) ಮಡಿವಂತಿಕೆ/ಪ್ರತಿಷ್ಠೆಯನ್ನು ಬದಿಗಿಟ್ಟು ಒಂದಾಗುವ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕು. ನಾವು ಅನುಸರಿಸುವ ಮಾರ್ಗ ಅಥವಾ ನಮ್ಮ ಆಲೋಚನಾ ಮಾರ್ಗವೇ (Line of Thinking) ಶ್ರೇಷ್ಠ ಎಂದು ಬೀಗುವ ಕಾಲ ಎಡಪಕ್ಷಗಳ ಪಾಲಿಗೆ ಕಳೆದುಹೋಗಿದೆ.

ಪ್ರಜಾತಂತ್ರದ ಉಳಿವು
ಭಾರತದ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಸಂವಿಧಾನ ಆಚರಣಾತ್ಮಕವಾಗಿ ಸುರಕ್ಷಿತವಾಗಿರಬೇಕಾದರೆ ನಮ್ಮ ಆಲೋಚನಾ ಮಾರ್ಗಗಳು ಬದಲಾಗಬೇಕು. ಮಾರ್ಕ್ಸ್, ಅಂಬೇಡ್ಕರ್, ಗಾಂಧಿ, ಲೋಹಿಯಾ ಇತ್ಯಾದಿ ಸೈದ್ಧಾಂತಿಕ ಮಾರ್ಗಗಳ ಪುನರ್ ವಿಮರ್ಶೆಯಾಗಬೇಕು. ಎಡಪಂಥೀಯ ಪಕ್ಷಗಳಿಗೆ ಈವರೆಗೆ ಅನುಸರಿಸಿಕೊಂಡು ಬಂದ ಮಾರ್ಕ್ಸ್ವಾದವನ್ನು ಮರುಭೇಟಿ ಮಾಡುವುದು (Re-visiting) ಅನಿವಾರ್ಯ. ಅಂಬೇಡ್ಕರ್ವಾದಿಗಳಿಗೆ ಅವರ ಮರುವಿಮರ್ಶೆ ಅಗತ್ಯ. ಗಾಂಧಿ ಮಾರ್ಗಿಗಳಿಗೆ ಆಲೋಚನೆಗಳನ್ನು ಸಮಕಾಲೀನಗೊಳಿಸುವುದು (Contemporarise ) ಅಗತ್ಯ. ಈ ಮರುಚಿಂತನೆಯ ಹಾದಿಯಲ್ಲಿ ನಮಗೆ ರಾಜಕೀಯ ಪರ್ಯಾಯದ ಸುಳಿವು ದೊರೆಯಲು ಸಾಧ್ಯ. ಆಗ ಮಾತ್ರ ಪ್ರಜಾಪ್ರಭುತ್ವವನ್ನು ಚುನಾವಣೆಗಳಿಂದಾಚೆಗೂ ನಿರ್ವಚಿಸಲು ಸಾಧ್ಯ.
ಇಲ್ಲವಾದರೆ ಬಂಡವಾಳ ಮತ್ತು ಮಾರುಕಟ್ಟೆಯ ನಿರ್ದೇಶನದಲ್ಲಿ ತತ್ವಹೀನ ರಾಜಕೀಯವೇ ಭವಿಷ್ಯ ಭಾರತದ ಬುನಾದಿಯಾಗುತ್ತದೆ. ಇದು ಕೋಮು ಧೃವೀಕರಣ ಮತ್ತು ಮತೀಯ ಆಳ್ವಿಕೆಗೆ ಪ್ರಶಸ್ತ ಭೂಮಿಕೆಯಾಗಿ ಪರಿಣಮಿಸುತ್ತದೆ. ಈ ಸುಳಿವನ್ನು ಸ್ಪಷ್ಟವಾಗಿ ನೀಡಿರುವ, ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಪರಾಮರ್ಶಿಸುವ ಮುನ್ನ ಈ ಆಲೋಚನೆಗಳನ್ನು ಸಾರ್ವಜನಿಕ-ರಾಜಕೀಯ ಸಂಕಥನಗಳಲ್ಲಿ ಅಳವಡಿಸುವುದು ನಮ್ಮ ಆದ್ಯತೆಯಾಗಬೇಕು.
( ಮುಂದಿನ ಭಾಗದಲ್ಲಿ ಪಂಚರಾಜ್ಯ ಚುನಾವಣಾ ಫಲಿತಾಂಶಗಳ ವಿಶ್ಲೇಷಣೆ )






